ಮಾರಿ ಸೆಲ್ವರಾಜ್ ನಿರ್ದೇಶನದ ‘ಮಾಮಣ್ಣನ್’ ಟ್ರೈಲರ್ ಬಿಡುಗಡೆಯಾಗಿದೆ. ಇಲ್ಲಿ ಸೆಲ್ವರಾಜ್ ಮತ್ತೊಮ್ಮೆ ವರ್ಗ ಸಂಘರ್ಷದ ಕತೆ ಹೇಳಲು ಹೊರಟಿದ್ದಾರೆ. ವಡಿವೇಲು, ಫಹಾದ್ ಫಾಸಿಲ್, ಕೀರ್ತಿ ಸುರೇಶ್ ಮತ್ತು ಉದಯನಿಧಿ ಸ್ಟಾಲಿನ್ ಪಾತ್ರಗಳು ಇಂಟೆನ್ಸ್ ಆಗಿವೆ.
‘ನಾನು ಅದೇ ಹಾಡು ಹಾಡುತ್ತಿರಬಹುದು, ನಾನು ಬದುಕಿರುವವರೆಗೂ ಅದೇ ಹಾಡನ್ನು ಹಾಡುತ್ತಿರುತ್ತೇನೆ’ ಎನ್ನುವ ಸಾಲಿನೊಂದಿಗೆ ‘ಮಾಮಣ್ಣನ್’ ತಮಿಳು ಸಿನಿಮಾದ ಟ್ರೈಲರ್ ಶುರುವಾಗುತ್ತದೆ. ಈ ಮಾತನ್ನು ಹೇಳುವುದು ವಡಿವೇಲು ಪಾತ್ರ. ನಿರ್ದೇಶಕ ಮಾರಿ ಸೆಲ್ವರಾಜ್ ಅವರ ಬಗ್ಗೆ ವಿಮರ್ಶಕರು, ‘ಜಾತಿ ಕುರಿತ ಸಿನಿಮಾಗಳನ್ನೇ ಮಾಡುತ್ತಾರೆ’ ಎಂದು ಟೀಕೆ ಮಾಡುವುದಿದೆ. ಈ ಟೀಕೆಗಳಿಗೆ ಉತ್ತರಿಸುವಂತೆ ನಿರ್ದೇಶಕ ಸೆಲ್ವರಾಜ್ ಅವರು ವಡಿವೇಲು ಪಾತ್ರದ ಮೂಲಕ ಮೇಲಿನ ಸಾಲುಗಳನ್ನು ಹೇಳಿಸುತ್ತಾರೆ! ತಾವು ಅದೇ ರೀತಿಯ ಸಿನಿಮಾಗಳನ್ನು ಮಾಡುತ್ತಲೇ ಇರುತ್ತೇನೆ ಎನ್ನುವ ಸಂದೇಶ ದಾಟಿಸುತ್ತಾರೆ.
ವಡಿವೇಲು ಮತ್ತು ಉದಯನಿಧಿ ಸ್ಟಾಲಿನ್ ವಿಶಾಲವಾದ ಬಂಡೆಯ ಮೇಲೆ ನಿಂತು ನಗರವನ್ನು ದಿಟ್ಟಿಸುತ್ತಿರುವ ಸೀನ್‌ನೊಂದಿಗೆ ಟ್ರೈಲರ್ ಓಪನ್ ಆಗುತ್ತದೆ. ಮುಂದಿನ ಸನ್ನಿವೇಶ ಬಂದೂಕಿನಿಂದ ಗುಂಡು ಹಾರಿಸುವ ಫಹಾದ್ ಫಾಸಿಲ್ ಅವರದ್ದು. ಅದು ನೆಗೆಟಿವ್ ಶೇಡ್ ಪಾತ್ರ ಎನ್ನುವುದು ಗೊತ್ತಾಗುತ್ತದೆ. ಫಹಾದ್ ಲುಕ್, ಕಾಸ್ಟ್ಯೂಮ್‌ನಿಂದ ಆತ ಮೇಲ್ವರ್ಗದ ವ್ಯಕ್ತಿ ಎನ್ನುವುದು ತಿಳಿದು ಬರುತ್ತದೆ. ನಿಧಾನವಾಗಿ ಎರಡು ರಾಜಕೀಯ ಪಕ್ಷಗಳ ನಡುವಿನ ಕತೆ ತೆರೆದುಕೊಳ್ಳುತ್ತದೆ. ವಡಿವೇಲು ಮತ್ತು ಉದಯನಿಧಿ ಒಂದು ಪಕ್ಷದವರಾದರೆ ಫಹಾದ್ ಪ್ರತಿನಿಧಿಸುವುದು ಮತ್ತೊಂದು ಪಕ್ಷ. ‘ಕರ್ಣನ್’ ಚಿತ್ರದಲ್ಲಿ ಇರುವಂತೆ ನಿರ್ದೇಶಕ ಸೆಲ್ವರಾಜ್ ಇಲ್ಲಿಯೂ ಉಪಮೆಗಳನ್ನು ಬಳಕೆ ಮಾಡಿದ್ದಾರೆ. ಟ್ರೈಲರ್ ಉದ್ದಕ್ಕೂ ಓಡುವ ನಾಯಿಗಳ ಗುಂಪು ಕಾಣಿಸುತ್ತದೆ. ಎ ಆರ್ ರೆಹಮಾನ್ ಸಂಗೀತ ಸಂಯೋಜನೆಯ ಸಿನಿಮಾ ಜೂನ್ 29ರಂದು ತೆರೆಕಾಣಲಿದೆ.