ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾದ ಆಡಿಯೋ ಹಕ್ಕುಗಳು ದಾಖಲೆ ಮೊತ್ತಕ್ಕೆ ಬಿಕರಿಯಾಗಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರವನ್ನು ಎ ಪಿ ಅರ್ಜುನ್ ನಿರ್ದೇಶಿಸಿದ್ದಾರೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ನಲ್ಲಿದ್ದು, ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.
ಧ್ರುವ ಸರ್ಜಾ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ‘ಮಾರ್ಟಿನ್’ Pan India ಚಿತ್ರದ ಆಡಿಯೋ ಹಕ್ಕುಗಳು ದಾಖಲೆ ಮೊತ್ತಕ್ಕೆ ಅಂದರೆ ಒಂಬತ್ತು ಕೋಟಿ ರೂಪಾಯಿಗೆ ಮಾರಾಟವಾಗಿದ್ದು, ಜನಪ್ರಿಯ ಆಡಿಯೋ ಸಂಸ್ಥೆಯಾದ ‘ಸರಿಗಮ’ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ‘ನನಗೆ ತಿಳಿದ ಹಾಗೆ ಯಾವುದೇ ಚಿತ್ರದ ಆಡಿಯೋ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲ. ನಮ್ಮ ಚಿತ್ರದ ಆಡಿಯೋ ಹಕ್ಕು ಈ ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ತುಂಬಾ ಖುಷಿ ತಂದಿದೆ. ಮಣಿ ಶರ್ಮ ಅವರ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಬಹುತೇಕ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿರುವುದರಿಂದ ಎಲ್ಲಾ ಕೆಲಸಗಳು ಬಿರುಸಿನಿಂದ ಸಾಗಿವೆ’ ಎಂದು ನಿರ್ಮಾಪಕ ಉದಯ್ ಕೆ ಮೆಹ್ತಾ ತಿಳಿಸಿದ್ದಾರೆ.
ಎ ಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು Vasavi Enterprise ಬ್ಯಾನರ್ ಅಡಿಯಲ್ಲಿ ಉದಯ್ ಕೆ ಮೆಹ್ತಾ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ ಹಾಗೂ ಕೆ ಎಂ ಪ್ರಕಾಶ್ ಸಂಕಲನವಿದೆ. ಚಲನಚಿತ್ರದಲ್ಲಿ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.