ಜನಪ್ರಿಯ ‘ಮಾಶಾ ಆಂಡ್‌ ದಿ ಬೇರ್‍’ ಕಾರ್ಟೂನ್‌ ಸರಣಿಯ ಮಾಶಾ, ಬೇರ್‌ ಹಾಗೂ ಇತರೆ ಪಾತ್ರಗಳ ಲೈವ್‌ ಶೋ ಮುಂಬೈನಲ್ಲಿ ನಡೆದಿದೆ. ಭಾರತದಲ್ಲಿದು ಮೊದಲ ಪ್ರಯೋಗ. ಮುಂದಿನ ತಿಂಗಳೂ ಫೆಬ್ರವರಿ 10, 11ರಂದು ‘ಮಾಶಾ ಆಂಡ್‌ ದಿ ಬೇರ್’ ತಂಡ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನ ಮಾಶಾ, ಬೇರ್ ಅಭಿಮಾನಿಗಳಿಗಾಗಿ ಎರಡು ದಿನ ಹಲವು ಪ್ರದರ್ಶನಗಳು ನಡೆಯಲಿವೆ.

‘ಮಾಶಾ ಆಂಡ್‌ ದಿ ಬೇರ್‍’ ಜನಪ್ರಿಯ ಕಾರ್ಟೂನ್‌ ಸರಣಿ. ಪುಟ್ಟ ಮಕ್ಕಳಿಗೆಲ್ಲ ಚಿರಪರಿಚಿತವಾಗಿರುವ ಮಾಶಾ ಮತ್ತು ಬೇರ್‍ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು, ಅವರ ಮುಂದೆ ಲೈವ್ ಪ್ರದರ್ಶನ ನೀಡಲು ಇದೇ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಮಾಶಾ ಆಂಡ್‌ ದಿ ಬೇರ್ ಮೋಡಿ ಮಾಡಲು ಸಜ್ಜುಗೊಂಡಿರುವುದು ವಿಶೇಷ. ಜನಪ್ರಿಯ ಕಾರ್ಟೂನ್‌ ಸಿರೀಸ್‌ ‘ಮಾಶಾ ಆಂಡ್‌ ದಿನ ಬೇರ್‍’ ಅನ್ನು ರಂಗವೇದಿಕೆಗೆ ಅಳವಡಿಸಿ ಭಾರತದ ಪ್ರಮುಖ ನಗರಗಳಲ್ಲಿ ಪ್ರದರ್ಶನ ಮಾಡಲು ಎಲ್ಲ ಸಿದ್ಧತೆಗಳು ನಡೆದಿವೆ. ಈ ಬಾರಿ ತಮ್ಮ ಅಭಿಮಾನಿ ಚಿಣ್ಣರ ಎದುರು ನೇರವಾಗಿ ಕಾಣಿಸಿಕೊಳ್ಳಲಿರುವ ಅವರು, ಪತ್ತೇದಾರಿ ಕಥೆಯೊಂದನ್ನು ರಂಗದ ಮೇಲೆ ಪ್ರಸ್ತುತಪಡಿಸಲಿದ್ದಾರೆ. ವಯಕಾಮ್18 ಲೈವ್ ನಿರ್ಮಾಣ ಮಾಡಿರುವ, ಎಸ್‌ಎಸ್‌ಬಿಸಿ ಇಂಡಿಯಾ ಪ್ರಸ್ತುತಪಡಿಸುತ್ತಿರುವ ಈ ಲೈವ್‌ ಶೋ ಪ್ರವಾಸ, ಕಳೆದ ವಾರ ಡಿಸೆಂಬರ್ 23ರಂದು ಮುಂಬೈನಲ್ಲಿ ಪ್ರಾರಂಭಗೊಂಡಿದೆ. ದೆಹಲಿ, ಹೈದರಾಬಾದ್‌ ಮತ್ತು ಬೆಂಗಳೂರುಗಳಲ್ಲಿಯೂ ಪ್ರದರ್ಶನ ನೀಡಿ ಮತ್ತೆ ಮುಂಬೈನಲ್ಲಿಯೇ ಈ ಲೈವ್‌ ಶೋ ಟೂರ್ ಕೊನೆಗೊಳ್ಳಲಿದೆ.

‘A very detective story’ ಎನ್ನುವುದು ಈ ಶೋಗೆ ನೀಡಿರುವ ಅಡಿಟಿಪ್ಪಣಿ. ಈ ಲೈವ್‌ ಶೋನಲ್ಲಿ ಮಾಶಾ ಮತ್ತು ಬೇರ್ ಸೇರಿಕೊಂಡು ಮನೆಯಲ್ಲಿ ಕಳೆದುಹೋಗಿರುವ ವಸ್ತುವೊಂದನ್ನು ಹುಡುಕುವ ಪತ್ತೇದಾರಿ ಕೆಲಸ ಮಾಡಲಿದ್ದಾರೆ. ಪತ್ತೇದಾರಿ ಕತೆಯಲ್ಲಿ ಸಾಕಷ್ಟು ರೋಚಕತೆ, ಕುತೂಹಲ, ಫನ್‌ ಎಲ್ಲವೂ ಇರಲಿದೆ. ಅಷ್ಟೇ ಅಲ್ಲ, ತಮ್ಮ ಪತ್ತೇಧಾರಿಕೆಯಲ್ಲಿ ಮಾಶಾ ಮತ್ತು ಬೇರ್ ಪ್ರೇಕ್ಷಕರ ಎದುರು ಕೂತಿರುವವರ ಸಹಾಯವನ್ನೂ ಪಡೆಯಲಿದ್ದಾರೆ! ಅಂದರೆ ಪ್ರೇಕ್ಷಕನೂ ಈ ಶೋದ ಪಾತ್ರಧಾರಿ ಆಗಿರುತ್ತಾನೆ? ಪ್ರೇಕ್ಷಕರ ಜೊತೆ ಮಾತಾಡುತ್ತ, ಅವರನ್ನು ನಗಿಸುತ್ತ, ಅವರಲ್ಲಿ ಕುತೂಹಲ ಕೆರಳಿಸುತ್ತ ಸಾಗುವ ಹಾಗೆಯೇ ಇಡೀ ಶೋ ವಿನ್ಯಾಸಗೊಳಿಸಲಾಗಿದೆ. ವಿಶಾಲ್ ಅಸ್ರಾಣಿ ಈ ಶೋ ನಿರ್ದೇಶಿಸಿದ್ದಾರೆ.

ಮಾಶಾ ಮತ್ತು ಬೇರ್‍ ಮಕ್ಕಳೊಟ್ಟಿಗೆ ಹಿರಿಯರಿಗೂ ಪರಿಚಿತವಾಗಿರುವ ಕಾರ್ಟೂನ್‌ ಕ್ಯಾರೆಕ್ಟರ್‌ಗಳು. ಶೋನಲ್ಲಿ ಬರೀ ಆ ಎರಡು ಪಾತ್ರಗಳು ಮಾತ್ರವಲ್ಲ. ಸೀರೀಸ್‌ನಲ್ಲಿ ಕಾಣುವ, ಪ್ರೊಫೆಸರ್ ನಾನ್‌ಬೆಲೆವಿಯಸ್‌, ರೋಸಿ, ಪಾಂಡಾ, ಸ್ಲೈ ಫಾಕ್ಸ್‌ ಮತ್ತು ಸಿಲ್ಲಿ ಫಾಕ್ಸ್ ಸೇರಿದಂತೆ ಇನ್ನೂ ಹಲವು ಪಾತ್ರಗಳು ಭಾಗವಾಗಿರುತ್ತವೆ. ಲೈವ್ ಶೋ ಈಗಾಗಲೇ ಕಳೆದ ವಾರ ಡಿಸೆಂಬರ್ 23ರಂದು ಮುಂಬೈನಲ್ಲಿ ಆರಂಭಗೊಂಡಿದೆ. 2024 ಜನವರಿ 20 ಮತ್ತು 21ರಂದು ದೆಹಲಿಯಲ್ಲಿ ಎರಡು ದಿನಗಳ ಶೋಗಳನ್ನು ಆಯೋಜಿಸಲಾಗಿದೆ. ಫೆಬ್ರುವರಿ 3 ಮತ್ತು 4ರಂದು ಹೈದರಾಬಾದ್‌ನಲ್ಲಿ ಪ್ರದರ್ಶನ ನಡೆಯಲಿದೆ. ಫೆಬ್ರುವರಿ 10, 11ರಂದು ‘ಮಾಶಾ ಆಂಡ್‌ ದಿ ಬೇರ್’ ತಂಡ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನ ಮಾಶಾ, ಬೇರ್ ಅಭಿಮಾನಿಗಳಿಗಾಗಿ ಎರಡು ದಿನ ಹಲವು ಪ್ರದರ್ಶನಗಳು ನಡೆಯಲಿವೆ. ಕಳೆದ ವರ್ಷ, ‘ಪೆಪ್ಪಾ ಪಿಗ್‌ ಲೈವ್‌ ಶೋ’ ಕೂಡ ಇದೇ ರೀತಿ ಭಾರತದ ಬೇರೆ ಬೇರೆ ನಗರಗಳಲ್ಲಿ ಲೈವ್‌ ಪ್ರದರ್ಶನಗಳನ್ನು ನೀಡಿ ಯಶಸ್ವಿಯಾಗಿತ್ತು. ಅದೇ ದಾರಿಯಲ್ಲಿ ಈಗ ಮಾಶಾ ಆಂಡ್‌ ದಿ ಬೇರ್ ಕೂಡ ನಡೆಯುತ್ತಿದ್ದು, ಅಭಿಮಾನಿಗಳಿಗೆ ‘ಲೈವ್‌’ ಮನರಂಜನೆ ನೀಡಲು ಸಜ್ಜಾಗಿದೆ.

LEAVE A REPLY

Connect with

Please enter your comment!
Please enter your name here