‘ಮಳ್ಳಿ ಪೆಳ್ಳಿ’ ತೆಲುಗು ಸಿನಿಮಾದ ಯಶಸ್ಸಿನ ನಂತರ ಕನ್ನಡ ಅವತರಣಿಕೆ ‘ಮತ್ತೆ ಮದುವೆ’ ಬಿಡುಗಡೆ ಮಾಡುತ್ತಿದ್ದಾರೆ ನರೇಶ್ ಮತ್ತು ಪವಿತ್ರಾ ಲೋಕೇಶ್. ಇದು ಅವರ ನಿಜ ಬದುಕಿನ ಕತೆ ಎಂದೇ ಸುದ್ದಿಯಾಗಿತ್ತು. ಜೂನ್ 9ರಂದು ಸಿನಿಮಾ ತೆರೆಕಾಣುತ್ತಿದೆ.
ಕಳೆದ ತಿಂಗಳು ಕೊನೆಯ ವಾರ ನರೇಶ್ ಮತ್ತು ಪವಿತ್ರಾ ಲೋಕೇಶ್ ಅಭಿನಯದ ‘ಮಳ್ಳಿ ಪೆಳ್ಳಿ’ ಸಿನಿಮಾ ತೆರೆಕಂಡಿತ್ತು. ಇದೀಗ ಕನ್ನಡ ವರ್ಷನ್ ‘ಮತ್ತೆ ಮದುವೆ’ ಜೂನ್ 9ಕ್ಕೆ ತೆರೆಕಾಣಲಿದೆ. ತೆಲುಗಿನಲ್ಲಿ ಚಿತ್ರ ಯಶಸ್ವಿಯಾಗಿದೆ ಎನ್ನುವ ಖುಷಿಯಲ್ಲಿದ್ದಾರೆ ನಟ, ನಿರ್ಮಾಪಕ ನರೇಶ್. ‘ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದೆ. ಒಳ್ಳೆಯ ಕಂಟೆಂಟ್ ಇರುವ, ಸದ್ಯ ಸಮಾಜದಲ್ಲಿ ಗಂಡ – ಹೆಂಡತಿ ಸಂಬಂಧಗಳ ಕುರಿತ ಕಥಾಹಂದರ ಹೊಂದಿದೆ. ಈ ಸಿನಿಮಾ ನೋಡಿದವರೆಲ್ಲ ಚೆನ್ನಾಗಿದೆ ಎಂದು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈಗ ಕನ್ನಡದಲ್ಲಿ ಮತ್ತೆ ಮದುವೆ ಸಿನಿಮಾ ಬಿಡುಗಡೆ ಆಗುತ್ತಿದೆ’ ಎನ್ನುತ್ತಾರವರು. ತೆಲುಗು ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡುವ ಪ್ರಕ್ರಿಯೆಯಲ್ಲಿ ಹೆಸರು ಮಾಡಿರುವ ವರದರಾಜ್ ಚಿಕ್ಕಬಳ್ಳಾಪುರ ಅವರು ‘ಮತ್ತೆ ಮದುವೆ’ಗೆ ಕೆಲಸ ಮಾಡಿದ್ದಾರೆ. ಅವರ ಸಹಾಯದಿಂದ ಸ್ವತಃ ತಾವೇ ಕನ್ನಡದಲ್ಲಿ ಡಬ್ ಮಾಡಿರುವುದಾಗಿ ನರೇಶ್ ಹೇಳುತ್ತಾರೆ.
ನಟಿ ಪವಿತ್ರಾ ಲೋಕೇಶ್, ‘ವಿಜಯ್ ಕೃಷ್ಣ ಮೂವೀಸ್‌ನಡಿ ಒಳ್ಳೆಯ ಸಿನಿಮಾಗಳು ಬಂದಿವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಸಿನಿಮಾಗಳನ್ನು ನಿರ್ಮಿಸುವ ಪರಿಪಾಠ ಮುಂದುವರೆಸಬೇಕೆನ್ನುವ ಹಾದಿಯಲ್ಲಿ ನಾವು ನಡೆದಿದ್ದೇವೆ. ಮತ್ತೆ ಮದುವೆ ಕಥೆಯನ್ನು ಎಂ ಎಸ್ ರಾಜು ಅವರು ತಂದಾಗ ಕನ್ನಡದಲ್ಲಿಯೂ ಮಾಡಬೇಕು ಎಂದು ತೀರ್ಮಾನ ಮಾಡಿದೆವು. ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಒಟ್ಟಿಗೆ ಸಿನಿಮಾ ತೆರೆಗೆ ತರಬೇಕೆಂದರೆ ಪ್ರಚಾರಕ್ಕೆ ಕಷ್ಟವಾಗುತ್ತಿತ್ತು. ಹಾಗಾಗಿ ಈಗ ಕನ್ನಡದಲ್ಲಿ ಬಿಡುಗಡೆ ಮಾಡಲಾಗುತ್ತಿದೆ’ ಎನ್ನುತ್ತಾರೆ. ಎಂ ಎಸ್ ರಾಜು ಕಥೆ ಬರೆದು ನಿರ್ದೇಶಿಸರುವ ಚಿತ್ರವಿದು. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.