ಅಲಂಕೃತಾ ಶ್ರೀವಾಸ್ತವ, ಹಂಸಲ್ ಮೆಹ್ತಾ, ಧೃವ್ ಸೆಹಗಲ್, ವಿಶಾಲ್ ಬಾರಧ್ವಾಜ್, ಶೋನಾಲಿ ಬೋಸ್ ಮತ್ತು ನೂಪುರ್ ಆಸ್ತಾನಾ ಈ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಲವಲವಿಕೆಯಿಂದ ನೋಡಿಸಿಕೊಂಡು ಹೋಗುವ ಈ ಸರಣಿ ನೋಡಲು ಖುಷಿಯಾಗುತ್ತದೆ. ‘Modern Love Mumbai’ ಸರಣಿ ಅಮೇಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಪ್ರೇಮವನ್ನು ಕುರಿತ ಕತೆಗಳು, ಕವಿತೆಗಳು, ನಾಟಕ, ಸಿನಿಮಾಗಳು ಯಾರಿಗೆ ಇಷ್ಟವಾಗುವುದಿಲ್ಲ? ಅದನ್ನೇ ಥೀಮ್ ಆಗಿಟ್ಟುಕೊಂಡು ಅನೇಕ ಸರಣಿಗಳು ಬಂದಿವೆ. ಪ್ರೈಮ್ನಲ್ಲಿ ಈಗ ಪ್ರಸಾರವಾಗುತ್ತಿರುವ ಈ ಸರಣಿ, ಈ ಮೊದಲು ಇಂಗ್ಲಿಷ್ನಲ್ಲಿ ಇದೇ ಹೆಸರಿನಲ್ಲಿ ಬಂದಿದ್ದ ಸರಣಿಯಿಂದ ಸ್ಪೂರ್ತಿ ಹೊಂದಿರುವುದು ಎಂದು ನಿರ್ಮಾಪಕರು ಹೇಳುತ್ತಾರೆ. ಆದರೆ ಇದು ನಡೆಯುವುದು ಇಲ್ಲಿನ ಮಣ್ಣಿನಲ್ಲಿ, ಮುಂಬೈನಲ್ಲಿ. ’ಮುಂಬೈನಲ್ಲಿ’ ಎಂದು ಒತ್ತಿ ಹೇಳಲು ಕಾರಣವಿದೆ. ಈ ಸರಣಿಯ ಆತ್ಮದಲ್ಲಿ ಮುಂಬೈ ಇದೆ. ಈ ಎಲ್ಲಾ ಕಥೆಗಳಲ್ಲೂ ಮುಂಬೈ ಒಂದಲ್ಲ ಒಂದು ರೀತಿಯಲ್ಲಿ ಪಾತ್ರವಾಗಿದೆ. ಕೆಲವು ಕಥೆಗಳಲ್ಲಿ ಗಾಢವಾಗಿ, ಇನ್ನೂ ಕೆಲವು ಕಥೆಗಳಲ್ಲಿ ಹಿನ್ನೆಲೆಯಾಗಿ. ಮುಂಬೈನ ಜೀವನಪ್ರೀತಿ, ಗೆದ್ದೇ ಗೆಲ್ಲುವೆ ಒಂದು ದಿನ ಎನ್ನುವ ಛಲ ಇಲ್ಲಿ ಕಾಣಿಸುತ್ತದೆ. ಕಥೆಗಳ ಗುಚ್ಛವೊಂದು ಹೀಗೆ ಸರಣಿಯಾದಾಗ ಅದರಲ್ಲಿ 2-3 ಚೆನ್ನಾಗಿರುತ್ತದೆ, ಕೆಲವೊಮ್ಮೆ ಒಂದು ಕಡೆಯಿಂದ ಎಲ್ಲಾ ಕಥೆಗಳೂ ಬೇಕಾರ್ ಆಗಿರುತ್ತವೆ. ಆದರೆ ಈ ಸರಣಿಯಲ್ಲಿ ಕೆಲವು ಹೆಚ್ಚು ಇಷ್ಟ, ಕೆಲವು ಸ್ವಲ್ಪ ಕಡಿಮೆ ಇಷ್ಟ ಆಗಬಹುದಾದರೂ ಎಲ್ಲಾ ಕಥೆಗಳೂ ಚೆನ್ನಾಗಿವೆ. ಒಂದೊಂದು ಒಂದೊಂದು ಕಾರಣಕ್ಕೆ ಇಷ್ಟವಾಗುತ್ತದೆ.
ಒಟ್ಟು ಆರು ಕಥೆಗಳಿರುವ ಈ ಸರಣಿಯ ಮೊದಲ ಕಥೆ ’ರಾತ್ ರಾಣಿ’ ನನಗೆ ಅತ್ಯಂತ ಇಷ್ಟವಾಯಿತು. ಕಾಶ್ಮೀರದ ಕಣಿವೆಯಿಂದ ಬಂದ ಹುಡುಗಿ ಲಾಲಿ. ಅವಳೇ ಹೇಳುವ ಪ್ರಕಾರ, ಅವಳು ’ಲೋವರ್ ಕಾಸ್ಟ್’ ಹುಡುಗನನ್ನು ಪ್ರೀತಿಸಿದ್ದನ್ನು ಅವರಪ್ಪ ಒಪ್ಪಿಕೊಳ್ಳುವುದಿಲ್ಲ. ಆ ಹುಡುಗನಿಗಾಗಿ, ಅವನೊಂದಿಗೆ ತನ್ನೂರನ್ನು ಬಿಟ್ಟುಬಂದು ಮುಂಬೈನಲ್ಲಿ ನೆಲಸಿರುವ ಈ ಹುಡುಗಿ ಚುಟುಚುಟು ಪಟಾಕಿ, ಓಡಾಡುವ ಸುರುಸುರು ಬತ್ತಿ, ಹೂ ಕುಂಡ. ಗಂಡ ಸೆಕ್ಯುರಿಟಿಯಾಗಿ ಕೆಲಸ ಮಾಡುವ ಕಟ್ಟಡದ ಒಂದು ಮನೆಯಲ್ಲಿ ಇವಳು ಕೆಲಸ ಮಾಡುತ್ತಿರುತ್ತಾಳೆ. ಗಂಡನೊಂದಿಗೆ ಐಸ್ಕ್ರೀಂ ತಿನ್ನುವುದು ಇವಳ ಅತಿ ದೊಡ್ಡ ಖುಷಿ. ಗಂಡ ಮುರುಕಲು ಸೈಕಲ್ ಬಿಟ್ಟು ’ಸ್ಕೂಟರ್’ ತೆಗೆದುಕೊಂಡ ಎನ್ನುವುದೇ ಹೆಮ್ಮ ಇವಳಿಗೆ!
ಇವಳ ಅಪಾರ ಜೀವಂತಿಕೆಯೇ ಕಣ್ಣು ಕುಕ್ಕಿತೇನೋ ಎನ್ನುವ ಹಾಗೆ ಒಂದು ದಿನ ಇದ್ದಕ್ಕಿದ್ದಂತೆ ಗಂಡ ಮನೆಬಿಟ್ಟು ಹೋಗಿಬಿಡುತ್ತಾನೆ. ಹುಡುಗಿ ಅಳುತ್ತಾಳೆ, ಚೀರುತ್ತಾಳೆ, ಕೂಗಾಡುತ್ತಾಳೆ, ಶಾರೂಕ್ ಖಾನ್ ಮನೆ ಹತ್ತಿರ ’ಪ್ರೈಂ ಲೊಕಾಲಿಟಿ’ಯ ಜೋಪಡಿಗಾಗಿ ಬರುವ ಸಂಬಳದ ಮುಕ್ಕಾಲುಭಾಗ ಹೋಗುತ್ತಿದೆ. ಬಸ್/ಟ್ರೇನಿಗೆ ಹಣವಿಲ್ಲದೆ ಮುರುಕಲು ಸೈಕಲ್ ತೆಗೆದುಕೊಂಡು ಕೆಲಸಕ್ಕೆ ಹೊರಡುತ್ತಾಳೆ. ಸೈಕಲ್ನಲ್ಲಿ ಫ್ಲೈ ಓವರ್ ಹತ್ತುವುದು ಸುಲಭವಲ್ಲ. ಇಳಿದು ಸೈಕಲ್ ತಳ್ಳುತ್ತಾಳೆ. ರಾತ್ರಿ ದಣಿದು ಮನೆಗೆ ಬಂದರೆ ಸೂರು ಕುಸಿದಿದೆ, ಹುಡುಗಿ ಸೋಲುವುದಿಲ್ಲ. ಅದೇ ಫ್ಲೈಓವರ್, ಅದೇ ಹೆಣಗಾಟ… ಮತ್ತೆ ಮತ್ತೆ ಗಂಡನಿಗೆ ಫೋನ್. ಅವನು ಸರಿಯಾಗಿ ಮಾತನಾಡುವುದೂ ಇಲ್ಲ. ’ನನಗೆ ಬೋರ್ ಆಗಿದೆ’ ಇಷ್ಟೇ ಅವನು ಹೇಳುವುದು. ಕಡೆಗೊಂದು ದಿನ ಅವಳು ಸೈಕಲ್ನಲ್ಲೇ ಫ್ಲೈ ಓವರ್ ದಾಟಿಬಿಡುತ್ತಾಳೆ. ಗಂಡ ಎಲ್ಲಿ ಕೆಲಸ ಮಾಡುತ್ತಾನೆ ಎಂದು ಹುಡುಕಿ ತೆಗೆಯುತ್ತಾಳೆ. ಅಲ್ಲಿ ಹೋದವಳು ’ನಿನ್ನ ಜತೆಗೆ ಒಂದು ಕಡೆಯ ಐಸ್ಕ್ರೀಂ ತಿನ್ನಲು ಬಂದೆ ಎನ್ನುತ್ತಾಳೆ. ಗಂಡನಿಗೆ ಈಗ ಗಾಬರಿ ಆಗುತ್ತದೆ! ’ಅಲ್ಲಾ ನಾನು ನನಗೆ ಸಮಾಧಾನವಾದ ದಿನ ಮನೆಗೆ ಬರುತ್ತೇನೆ’ ಎಂದು ರಾಗ ಎಳೆಯುತ್ತಾನೆ. ಇವಳು ಹೇಳುವುದು ಒಂದೇ ಮಾತು, ’ನಾನು ಫ್ಲೈಓವರ್ ಕ್ರಾಸ್ ಮಾಡಿ ಆಯಿತು ಲುತ್ಫಿ..’ ಕಥೆ ಇನ್ನೂ ಇದೆ. ಆದರೆ ಇದೊಂದು ವಾಕ್ಯವೇ ಒಂದು ರೀತಿಯಲ್ಲಿ ಇಡೀ ಕಥೆಯಾಗುತ್ತದೆ. ದ್ವಿಚಕ್ರ ವಾಹನಗಳಿಗೆ ಪ್ರವೇಶವಿಲ್ಲ ಎನ್ನುವ ಸೀಲಿಂಕ್ ಅನ್ನು ತನ್ನ ಮುರುಕು ಸೈಕಲ್ಲಿನಲ್ಲಿ ದಾಟುವ ಲಾಲಿ, ಅದರ ಮೂಲಕ ಎಲ್ಲಾ ’ಕೂಡದು’ಗಳನ್ನೂ ಒಡೆದು ಹಾಕುತ್ತಾಳೆ. ಇದರಲ್ಲಿ ನಟಿಸಿರುವ ಫಾತಿಮಾ ಇಡೀ ಕಥೆಯ ನಾಯಕಿ, ನಾಯಕ, ಸಂಗೀತ, ಛಾಯಾಗ್ರಾಹಣ ಎಲ್ಲಾ!
ಎರಡನೆಯ ಕಥೆ ’ಬಾಯಿ’ ಹೇಳಲಿಕ್ಕೆ ಸಲಿಂಗ ಸಂಬಂಧದ ಕಥೆ, ಆದರೆ ಅದರಲ್ಲಿರುವ ಇಸ್ಲಾಂ ಧರ್ಮದ ಅಜ್ಜಿ ಬಾಯಿಯ ಪಾತ್ರ ಅದಕ್ಕೂ ಮಿಗಿಲು. ಒಮ್ಮೆ ಹಿಂದು ಮುಸ್ಲಿಂ ಗಲಭೆಯಾಗಿರುತ್ತದೆ. ಬೀದಿಬೀದಿಗಳಲ್ಲಿ ಜನ ಅದುವರೆವಿಗೂ ವರ್ಷಾಂತರಗಳಿಂದ ತಮ್ಮೊಂದಿಗೆ ಇದ್ದವರನ್ನು ಮನುಷ್ಯರು ಎಂದು ನೋಡದೆ ಕೊಚ್ಚಿ ಹಾಕುತ್ತಿದ್ದಾರೆ. ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರುವ ಟ್ಯಾಕ್ಸಿ ಡ್ರೈವರ್ ಹೆಗೋ ಪಾಡು ಪಟ್ಟು ಮಕ್ಕಳನ್ನು ಮನೆ ಸೇರಿಸುತ್ತಾನೆ. ಹೆದರಿ ಗುಬ್ಬಚ್ಚಿಗಳಂತಾಗಿದ್ದ ಮಕ್ಕಳೆಲ್ಲಾ ಓಡಿ ಅಜ್ಜಿಯ ಮಡಿಲಿನಲ್ಲಿ ಮುದುರಿಕೊಳ್ಳುತ್ತವೆ. ಗಲಭೆಕೋರರು ಬಂದು ಲಕಿ ಮಂಜಿಲ್ ಮನೆಯ ಬಾಗಿಲು ತಟ್ಟತೊಡಗುತ್ತಾರೆ. ಹೆಂಗಸರು, ಮಕ್ಕಳು ಕಂಗಾಲು. ಕಡೆಗೆ ಈ ಅಜ್ಜಿ ’ನಾನು ಅವರ ಜೊತೆ ಮಾತನಾಡುತ್ತೇನೆ’ ಎಂದು ಎದ್ದು ಹೋಗುತ್ತಾಳೆ. ಅವಳೇನೋ ಹೇಳುತ್ತಿರುತ್ತಾಳೆ. ಒಬ್ಬ ಪುಟಾಣಿ ಬಗ್ಗಿ ನೋಡುತ್ತಾನೆ. ಆ ಗಲಭೆಕೋರರು ಹೊರಟು ಹೋಗುತ್ತಾರೆ. ಮುಂದೆ ಆ ಅಜ್ಜಿಗೆ ವಯಸ್ಸಾಗಿ, ಆಕೆಯನ್ನು ನೋಡಲು ಬಂದಾಗ ಈ ಹುಡುಗ, ಈಗ ಗೋವಾದಲ್ಲಿ ಒಬ್ಬ ಶೆಫ್ ಜೊತೆ ಸಹ-ವಾಸದಲ್ಲಿರುವವ ಅಜ್ಜಿಯನ್ನು ಕೇಳುತ್ತಾನೆ, ’ಆವತ್ತು ನೀನು ಅವರಿಗೆ ಹೇಳಿದ್ದಾದರೂ ಏನು?’ ಅಜ್ಜಿ ತಣ್ಣಗೆ ಉತ್ತರಿಸುತ್ತಾಳೆ, ’ನಾನವರಿಗೆ ಹಣ ಕೊಟ್ಟೆ… ಹೀಗೆ ದ್ವೇಷ ಹರಡುವವರು ಹಣದ ಮಾತು ಮಾತ್ರ ಕೇಳುತ್ತಾರೆ…’ ಆ ಹುಡುಗ ಹೀಗೆ ಸಲಿಂಗ ಸಂಬಂಧದಲ್ಲಿದ್ದೇನೆ ಎಂದು ಸುತ್ತಿಬಳಸಿ ಹೇಳಿದಾಗಲೂ ಅಜ್ಜಿ ಅದನ್ನು ತಣ್ಣಗೇ ಸ್ವೀಕರಿಸುತ್ತಾಳೆ. ಆ ಹುಡುಗರಿಬ್ಬರ ಸಂಬಂಧ ಮತ್ತು ಒಂದು ಹಾಡು ಎರಡೂ ಸೊಗಸಾಗಿದೆ.
ತನ್ನ ಊರನ್ನು, ತನ್ನ ಸಂಸ್ಕೃತಿಯನ್ನು ಬಿಟ್ಟು ಬಂದ ಮೊದಲ ತಲೆಮಾರಿನವರಲ್ಲಿ ಅದನ್ನು ಕುರಿತು ವರ್ಣಿಸಲಾಗದ ನಿಷ್ಠೆಯೂ ಇರುತ್ತದೆ. ತಾವು ದಾಟಿಬಂದ ಅಂತರಗಂಗೆಯಲ್ಲಿ ಮಕ್ಕಳು ಮಿಂದು ಪುನೀತರಾಗಬೇಕು ಎಂದು ಬಯಸುತ್ತಾರೆ. ಆದರೆ ಮಕ್ಕಳಿಗೆ ಈಗ ಇರುವ ಊರು, ಇಲ್ಲಿನ ಜನ, ಇಲ್ಲಿನ ಸಂಸ್ಕೃತಿಯೇ ಸ್ವಂತ… ಮಳೆಗಾಲದ ಒಂದು ರಾತ್ರಿ ಚೈನಾದಿಂದ ಬಂದು ಮುಂಬೈನಲ್ಲಿ ನೆಲೆಸಿರುವ ಒಬ್ಬ ತಾಯಿ, ತನ್ನ ದೈವ ಡ್ರ್ಯಾಗನ್ ಎದುರು ಒಂದು ಪ್ರತಿಜ್ಞೆ ಮಾಡುತ್ತಾಳೆ! ತನ್ನ ಮಗ ಆ ವೆಜಿಟೇರಿಯನ್ ಮಾಟಗಾತಿಯನ್ನು ಬಿಟ್ಟು ಬರುವವರೆಗೂ ಹಿಂದಿ ಮಾತನಾಡುವುದಿಲ್ಲ ಎನ್ನುವುದೇ ಆ ಶಪಥ! ಆದರೆ ಅವಳ ಮಗ ಮತ್ತು ಆ ವೆಜಿಟೇರಿಯನ್ ಹುಡುಗಿ ಪ್ರೇಮದಲ್ಲಿದ್ದಾರೆ, ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ’ಬಾಂಬೆ ಡ್ರ್ಯಾಗನ್’ ಎನ್ನುವ ಈ ಇಡೀ ಚಿತ್ರದ ಜೀವಾಳ ಅಮ್ಮನ ಪಾತ್ರಧಾರಿ. ಮಗನನ್ನು ಬಿಟ್ಟುಕೊಡಲಾಗದೆ ಸಕಲೆಂಟು ಎಮೋಶನಲ್ ಡ್ರಾಮ ಮಾಡುವ ಈ ಅಮ್ಮ ಕಡೆಗೆ ಮಗನ ಸುಖ ಅಲ್ಲೇ ಇದೆ ಎಂದು ಗೊತ್ತಾದಾಗ ಆ ಹುಡುಗಿಯನ್ನು ಮನಸ್ಸಿನೊಳಗೆ ಬಿಟ್ಟುಕೊಳ್ಳುತ್ತಾಳೆ. ಈ ಕಥೆಯಲ್ಲಿ ನಾಸಿರುದ್ದೀನ್ ಶಾ ಸಹ ಒಂದು ಪುಟ್ಟ ಪಾತ್ರದಲ್ಲಿ ಮಾಡಿದ್ದಾರೆ.
ವಯಸ್ಕ ಹೆಣ್ಣು ಮತ್ತು ಅವಳಿಗಿಂತ ಕಡಿಮೆ ವಯಸ್ಸಿನ ಗಂಡಿನ ನಡುವಿನ ಪ್ರೇಮವಾಗಲಿ, ಸಂಬಂಧವಾಗಲಿ ಹಾಸ್ಯಕ್ಕೆ ಒಳಗಾಗುವುದೇ ಹೆಚ್ಚು. ಇಲ್ಲಿರುವ ’ಮೈ ಬ್ಯೂಟಿಫುಲ್ ರಿಂಕಲ್ಸ್’ ಕಥೆ ಆ ಸಂಬಂಧದ ಸಾಧ್ಯತೆಗಳನ್ನು, ಸಂಕೀರ್ಣತೆಗಳನ್ನು ಹುದುಕದೇ ಸುಮ್ಮನೆ ಸ್ಪರ್ಶಿಸಿ ಮುಂದೆ ಸಾಗಿಬಿಡುತ್ತದೆ. ಅದಕ್ಕೆ ಬದಲಾಗಿ ಕಥೆಯನ್ನು ಸಂಗಾತಿಯನ್ನು ಕಳೆದುಕೊಂಡ ಇಳಿವಯಸ್ಸಿನ ಹೆಣ್ಣೊಬ್ಬಳ ಏಕಾಕಿತನದ, ಕಹಿಯ ಕಥೆಯಾಗಿ ಮಾತ್ರ ನೋಡುತ್ತದೆ. ಈ ಕಥೆಯಲ್ಲಿ ಸಾರಿಕಾ ಅಭಿನಯ ಚೆನ್ನಾಗಿದೆಯಾದರೂ ಎರಡು ಮುಖ್ಯ ಪಾತ್ರಗಳ ನಡುವಣ ಕೆಮಿಸ್ಟ್ರಿ ಹಾಸ್ಯಾಸ್ಪದವಾಗಿದೆ. ಇಡೀ ಸರಣಿಯಲ್ಲಿ ಸ್ವಲ್ಪ ಸಪ್ಪೆ ಎನ್ನಬಹುದಾದ ಕಥೆ ಇದು.
‘ಐ ಲವ್ ಥಾಣೆ’ – ಬದುಕಿಗೆ, ಜೊತೆಗೆ ಸಿಗುವ ಅಪರಿಮಿತ ಆಯ್ಕೆಯ ಕಾರಣಕ್ಕೇ ಅದು ಕೇವಲ ಮೇಲುಮೇಲಿನ ಹುಡುಕಾಟ ಮತ್ತು ಹಪಾಹಪಿಯಾಗಿ ಬದಲಾಗಿಬಿಡುವುದೆ? ಲ್ಯಾಂಡ್ ಸ್ಕೇಪ್ ಆರ್ಕಿಟೆಕ್ಟ್ ಹುಡುಗಿಯೊಬ್ಬಳಿಗೆ, ಗ್ರಾಹಕರೆಲ್ಲಾ ನಿರ್ವಹಣೆ ಸುಲಭ ಎಂದು ಕೇಳುವ ಪ್ಲಾಸ್ಟಿಕ್ ಗಿಡಗಳು ಹೇವರಿಕೆ ಹುಟ್ಟಿಸಿರುತ್ತದೆ. ನಿಜವಾದ ಗಿಡಗಳ ಸ್ಪರ್ಶಕ್ಕಾಗಿ ತಹತಹಿಸುತ್ತಿರುತ್ತಾಳೆ. ಅವಳ ಫೇಸ್ ಬುಕ್, ಇನ್ಸ್ಟಾ ಮತ್ತು ಟಿಂಡರ್ ಮೂಲಕ ಸಿಗುವ ಹುಡುಗರೂ ಅದಕ್ಕೆ ಭಿನ್ನವಾಗಿಯೇನೂ ಇರುವುದಿಲ್ಲ. ಒಬ್ಬ ಇವಳ ಡೇಟ್ ನಂತರ ಇನ್ನೊಂದು ಡೇಟ್ ಯೋಜನೆ ಹಾಕಿದ್ದರೆ, ಇನ್ನೊಬ್ಬ ’ಇಲ್ಲ, ನಾನೂ ಬ್ರಾಡ್ ಮೈಂಡೆಂಡ್, ಆದರೆ 2 ಮಗ್ ಬಿಯರ್ ಕುಡಿಯುವ ಹುಡುಗಿಯಾದರೆ ಓಕೆ, 3 ನೆಯದು ಬೇಕೆನ್ನುವವಳು ಸೆಟ್ ಆಗುವುದಿಲ್ಲ’ ಎನ್ನುತ್ತಾನೆ. ಮತ್ತೊಬ್ಬನು, ಈಗೇನು ಸಿಗೋಣ ಅಂದೆಯಲ್ಲಾ, ಜೊತೆಗೆ ಊಟ ಮಾಡಿದ್ದೇವೆ, ಅರ್ಧ ಗಂಟೆ ಮನೆಗೆ ಬಂದು ಹೋಗು’! ಅನ್ನುತ್ತಾನೆ. ಮುಂಬೈ ಹೊರಭಾಗದ ಥಾಣೆಯಲ್ಲಿ ಹುಟ್ಟಿ ಬೆಳೆದು, ಈಗ ನಗರಕ್ಕೆ ಶಿಫ್ಟ್ ಆಗಿರುವ ಈ ಹುಡುಗಿಗೆ ಅಲ್ಲಿನ ಸರ್ಕಾರಿ ಕಚೇರಿಗಾಗಿ ಒಂದು ಉದ್ಯಾನ ಮಾಡುವ ಪ್ರಾಜೆಕ್ಟ್ ಸಿಗುತ್ತದೆ. ಈಗಲಾದರೂ ನಿಜವಾದ ಗಿಡಮರಗಳ ಜೊತೆ ಕೆಲಸ ಮಾಡಬಹುದು ಎಂದು ಅವಳು ಹಿಗ್ಗುತ್ತಾಳೆ. ಅಲ್ಲಿ ಇವಳಿಗೆ ಕೋಆರ್ಡಿನೇಟರ್ ಆಗಿ ಸಿಗುವ ಹುಡುಗ ಶಾಲೆಯಲ್ಲಿ ಇವಳ ಜೂನಿಯರ್ ಆಗಿರುತ್ತಾನೆ. ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸದ ಈ ಹುಡುಗ ಅವಳಿಗೆ ಅವಳು ಹಂಬಲಿಸುತ್ತಿರುವ ಸಹಜತೆಯ ಮೂರ್ತರೂಪ. ಇವಳ ಗೆಳತಿ ಒಬ್ಬಳಿದ್ದಾಳೆ, ವಿಚ್ಚೇದನ ಪಡೆದು, ಹಠಾತ್ತಾಗಿ ದೊರೆತಿರುವುದು ಸ್ವಾತಂತ್ರ್ಯವೋ, ಬಿಡುಗಡೆಯೋ, ಒಂಟಿತನವೋ ಎನ್ನುವ ಗೊಂದಲದಲ್ಲಿರುವವಳು. ಅವಳು ಒಂದು ಮಾತು ಹೇಳುತ್ತಾಳೆ, ‘To Live Life Through Love’ – ಅತ್ಯಂತ ಮೋಹಕವೂ, ಅಪಾಯಕಾರಿಯೂ ಆಗಿ ಕಂಡುಬರುವ ಈ ವಾಕ್ಯ… ಹಾಗೆ ಬದುಕನ್ನು ಕೇವಲ ಪ್ರೇಮದ ಮೂಲಕ ಮಾತ್ರ ಬದುಕುವ ಹೆದರಿಕೆಯೇ ನಮ್ಮನ್ನು ಇದೇ ಸರಣಿಯ `’ಮೈ ಬ್ಯೂಟಿಫುಲ್ ರಿಂಕಲ್ಸ್’ ಕಥೆಯ ನಾಯಕಿ ಸಾರಿಕಾಳ ಹಾಗೆ ಸಿನಿಕ್ ಆಗಿಸಿಬಿಡುತ್ತದಾ?
ಸರಣಿಯ ಕಡೆಯ ಕಥೆ ‘ಕಟಿಂಗ್ ಚಾಯ್’. ಕಥಾ ನಾಯಕಿಯಾಗಿ ಅಭಿನಯಿಸಿರುವ ಚಿತ್ರಾಂಗದ ಸಿಂಗ್ ಮತ್ತು ಆಕೆಯ ಪತಿಯಾಗಿ ಅಭಿನಯಿಸಿರುವ ಅರ್ಶದ್ ವಾರ್ಸಿ, ಇಬ್ಬರದೂ ನಿರಾಯಾಸ ನಟನೆ. ವಾರ್ಸಿಯನ್ನಂತೂ ಎಲ್ಲಿ ಹೋಗಿಬಿಟ್ಟೆ ಮಾರಾಯ ನೀನು ಎಂದು ಕೇಳಬೇಕೆನ್ನಿಸುತ್ತದೆ. ಒಂದು ಸಣ್ಣ ಕಥೆಯನ್ನು ಬರೆದು ಪ್ರಕಟಿಸಿರುವ ಹುಡುಗಿ, ಹೋಟೆಲಿಯರ್ ಒಬ್ಬನ ಪ್ರೇಮದಲ್ಲಿ ಬಿದ್ದು ಮದುವೆಯಾಗಿದ್ದಾಳೆ. ಒಂದು ಕಾದಂಬರಿ ಬರೆಯಬೇಕು ಎನ್ನುವುದು ಅವಳ ಯಜ್ಞ. ಸಂಸಾರ, ಮಕ್ಕಳು, ಅಡಿಗೆ, ಗಂಡ ಇವುಗಳ ನಡುವೆ ಬರವಣಿಗೆಗೆ ಸಮಯ ಸಿಗುತ್ತಿಲ್ಲ ಎನ್ನುವ ಹಳಹಳಿ ಅವಳಿಗೆ. ಒಂದು ಸಂಜೆ ವೀಟಿ ಸ್ಟೇಶನ್ನಲ್ಲಿ ಗಂಡನಿಗಾಗಿ ಕಾಯುತ್ತಾ, ಅವಳ ಬದುಕಿನ ಪುಟಗಳನ್ನೆಲ್ಲಾ ತಿರುವಿ ಹಾಕುತ್ತಾಳೆ. ತನ್ನ ಆಯ್ಕೆಗಳು, ಅಕಸ್ಮಾತ್ ಅದು ಬದಲಾಗಿದ್ದಿದ್ದರೆ ತನ್ನ ಜೀವನ ಇನ್ನೇನೋ ಆಗಬಹುದಿತ್ತೆ ಎನ್ನುವ ಹುಡುಕಾಟ, ತಾನು ಬರೆಯಲಾಗದೆ ಇರುವುದಕ್ಕೆ ತನ್ನ ಜವಾಬ್ದಾರಿಗಳೆಷ್ಟು ಕಾರಣ, ತಾನೆಷ್ಟು ಕಾರಣ ಎನ್ನುವ ಪ್ರಶ್ನೆ… ಇದರ ನಿರೂಪಣೆ, ಮತ್ತು ಅದಕ್ಕೆ ಸರಿಯಾಗಿ ಹೊಂದುವ rap ಈ ಕಥೆಯನ್ನು ನೋಡುವಂತಾಗಿಸುತ್ತದೆ. ಬೆಳಗಿನ ಗಡಿಬಿಡಿಯಲ್ಲಿ, ಮಗಳ ಊಟದ ಡಬ್ಬಿ, ಮಗನಿಗೆ ಸೋಪು, ಗಂಡನ ಟೈ ಹುಡುಕಿಕೊಡುತ್ತಾ, ’ನನಗೆ ಸಾಕಾಗಿಹೋಗಿದೆ’ ಎಂದು ಅವಳು ಹೇಳಿದಾಗ, ಗಂಡ ‘But you love me!’ ಎನ್ನುತ್ತಾನೆ. ಅತ್ಯಂತ ಪ್ರಾಮಾಣಿಕವಾಗಿ ಅವಳು, ‘ಹೂ ಪ್ರತಿ ವರ್ಷ ಸ್ವಲ್ಪ ಕಡಿಮೆ!’ ಎಂದು ಹೇಳುವ ರೀತಿ ಅನೇಕ ಹೆಂಡತಿಯರ ಮಾತೂ ಹೌದು! ಕಥೆಯ ಕೊನೆ ಆಗುವುದು ಮರೀನ್ ಡ್ರೈವ್ನಲ್ಲಿ. ಅದು ಅತ್ಯಂತ ಲವಲವಿಕೆಯಿಂದ ಕೂಡಿದೆ.
ಅಲಂಕೃತಾ ಶ್ರೀವಾಸ್ತವ, ಹಂಸಲ್ ಮೆಹ್ತಾ, ಧೃವ್ ಸೆಹಗಲ್, ವಿಶಾಲ್ ಬಾರಧ್ವಾಜ್, ಶೋನಾಲಿ ಬೋಸ್ ಮತ್ತು ನೂಪುರ್ ಆಸ್ತಾನಾ ಈ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಲವಲವಿಕೆಯಿಂದ ನೋಡಿಸಿಕೊಂಡು ಹೋಗುವ ಈ ಸರಣಿ ನೋಡಲು ಖುಷಿಯಾಗುತ್ತದೆ. ಇದರ ಹಿಂದೆಯೇ ಮಾಡರ್ನ್ ಲವ್ ಚೆನ್ನೈ ಮತ್ತು ಹೈದರಬಾದ್ ಸರಣಿಗಳು ಸಹ ಬರಲಿವೆ. ಅವುಗಳ ಬಗ್ಗೆ ನನಗೆ ತುಂಬಾ ಕುತೂಹಲ ಇದೆ. ಆ ಕಥೆಗಳು ಆ ಮಹಾನಗರಗಳ ಆತ್ಮವನ್ನೂ ಹೀಗೆಯೇ ಹಿಡಿದಿಡಬಹುದೆ? ಅದಿರಲಿ, ಈ ಸರಣಿಯಲ್ಲಿ ಬೆಂಗಳೂರು ಯಾಕಿಲ್ಲ?! ಇಲ್ಲಿ ಪ್ರೇಮಕಥೆಗಳು ಘಟಿಸುವುದಿಲ್ಲವೆ?!