ಜೀತು ಜೋಸೆಫ್ ನಿರ್ದೇಶನದ ‘ನೆರು’ ಮಲಯಾಳಂ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮೋಹನ್ ಲಾಲ್, ಪ್ರಿಯಾಮಣಿ, ಸಿದ್ದಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕೋರ್ಟ್ ರೂಂ ಡ್ರಾಮಾ ಸಿನಿಮಾ ಇದೇ ಡಿಸೆಂಬರ್ 21ರಂದು ತೆರೆಕಾಣಲಿದೆ.
ಮೋಹನ್‌ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ನೆರು’ ಮಲಯಾಳಂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಕೋರ್ಟ್ ಡ್ರಾಮಾವನ್ನು ಜೀತು ಜೋಸೆಫ್ ಚಿತ್ರಕಥೆ ಬರೆದು, ನಿರ್ದೇಶಿಸಿದ್ದು, ಸಂತಿ ಮಾಯಾದೇವಿ ಬರವಣಿಗೆಯಲ್ಲಿ ಕೈಜೋಡಿಸಿದ್ದಾರೆ. ಟ್ರೇಲರ್‌ನಲ್ಲಿ ಮೋಹನ್‌ಲಾಲ್ ಅವರು ವಿಜಯ್ ಮೋಹನ್ ಹೆಸರಿನ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಪ್ರಕರಣಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ‘ನಾನು ವಿಚಾರಣೆಗಳಿಗೆ ಹಾಜರಾಗಿ ಹಲವು ವರ್ಷಗಳಾಗಿವೆ. ನನಗೆ ಪ್ರಾಕ್ಟೀಸ್ ತಪ್ಪಿ ಹೋಗಿದೆ. ಕೇಸನ್ನು ನಿಭಾಯಿಸುವಷ್ಟು ಆತ್ಮವಿಶ್ವಾಸ ನನಗಿಲ್ಲ’ ಎಂದು ವಿಜಯ್‌ಮೋಹನ್ ಹೇಳುತ್ತಾರೆ. ಆದರೆ ನ್ಯಾಯದ ಪರವಾಗಿ ಹೋರಾಡುವುದು ತನ್ನ ಕರ್ತವ್ಯವೆಂದು ತಿಳಿಯುವ ವಿಜಯ್ ಮೋಹನ್ ಕೇಸನ್ನು ತೆಗೆದುಕೊಳ್ಳುತ್ತಾರೆ.
ಚಿತ್ರದಲ್ಲಿ ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಸಿದ್ದಿಕ್, ಮೋಹನ್ ಲಾಲ್ ಅವರ ಪ್ರತಿವಾದಿ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಸಂತಿ, ಜಗದೀಶ್, ಗಣೇಶ್ ಕುಮಾರ್, ನಂದು, ಅದಿತಿ ರವಿ ಮತ್ತು ಹರಿಕೃಷ್ಣನ್ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸತೀಶ್ ಕುರುಪ್ ಛಾಯಾಗ್ರಹಣ, ವಿಷ್ಣು ಶ್ಯಾಮ್ ಹಾಡುಗಳು ಮತ್ತು ಸಂಗೀತ ಸಂಯೋಜನೆ ಚಿತ್ರಕ್ಕಿದೆ. ವಿ ಎಸ್ ವಿನಾಯಕ್ ಸಂಕಲನ ನಿಭಾಯಿಸಿದ್ದಾರೆ. Aashirvad Cinemas ಬ್ಯಾನರ್ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಇದೇ ಡಿಸೆಂಬರ್ 21ರಂದು ತೆರೆಕಾಣಲಿದೆ.