ಭಾರತದ ಮೊದಲ ಮಡ್‌ ರೇಸ್‌ ಸಿನಿಮಾ ಎನ್ನುವ ಖ್ಯಾತಿಯ ʼಮಡ್ಡಿʼ ಸಿನಿಮಾ ಡಿಸೆಂಬರ್‌ 10ರಂದು ತೆರೆಕಾಣಲಿದೆ. ಡಾ.ಪ್ರಗ್ಬಲ್‌ ನಿರ್ದೇಶನದ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

“ಸಂಗೀತ ನಿರ್ದೇಶಕ ಹಾಗೂ ಸಂಕಲನಕಾರ ಗಂಡ – ಹೆಂಡತಿ ಇದ್ದ ಹಾಗೆ. ಅವರಿಬ್ಬರ ನಡುವಿನ ಹೊಂದಾಣಿಕೆ ಮುಖ್ಯ. ʼಮಡ್ಡಿʼ ಮೂರು ರಾಜ್ಯಗಳ ಸಿನಿಮಾ ಎನ್ನಬಹುದು! ಏಕೆಂದರೆ ನಾನು ಕರ್ನಾಟಕದವನು, ನಿರ್ದೇಶಕರು ಕೇರಳದವರು ಹಾಗೂ ಸಂಕಲನಕಾರರು ತಮಿಳುನಾಡಿನವರು. ಚಿತ್ರದ ಟ್ರೈಲರ್‌ ಇರುವ ಹಾಗೆ ಇಡೀ ಚಿತ್ರ ಕೂಡ ಇರುತ್ತದೆ” ಎನ್ನುತ್ತಾರೆ ಸಂಗೀತ ನಿರ್ದೇಶಕ ರವಿ ಬಸ್ರೂರ್. ಅವರು ಸಂಗೀತ ಸಂಯೋಜಿಸಿರುವ ಮಹತ್ವಾಕಾಂಕ್ಷೆಯ ʼಮಡ್ಡಿʼ ಸಿನಿಮಾ ಡಿಸೆಂಬರ್‌ 10ರಂದು ತೆರೆಕಾಣುತ್ತಿದೆ. ಭಾರತದ ಮೊದಲ ಮಡ್ ರೇಸ್ ಸಿನಿಮಾ ಎನ್ನುವ ಹೆಗ್ಗಳಿಕೆ ಈ ಪ್ರಯೋಗಕ್ಕಿದೆ. ಕನ್ನಡ, ಮಲೆಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿರುವುದು ವಿಶೇಷ.

ʼಮಡ್ಡಿʼ ಸಿನಿಮಾ ಸಂಗೀತ ಸಂಯೋಜನೆಗೆ ಸುಮಾರು ಎರಡು ವರ್ಷಗಳ ಸುದೀರ್ಘ ಅವಧಿ ತೆಗೆದುಕೊಂಡಿದ್ದಾರೆ ರವಿ ಬಸ್ರೂರು. “ನನಗೆ ಛಾಯಾಗ್ರಹಕ ರತೀಶ್ ಅವರು ಫೋನ್ ಮಾಡಿ ಈ‌ ರೀತಿಯ ಚಿತ್ರವೊಂದು ತಯಾರಾಗುತ್ತಿದೆ. ನೀವೇ ಸಂಗೀತ ಮಾಡಬೇಕೆಂದು ಕೇಳಿದರು. ಸ್ವಲ್ಪ ಬ್ಯುಸಿ ಇದ್ದುದರಿಂದ ನಾನು ಏನೂ ಹೇಳಿರಲಿಲ್ಲ. ಕೆಲವು ದಿನಗಳ ನಂತರ ನಾನು ಚಿತ್ರೀಕರಣ ನಡೆಯುವ ಸ್ಥಳಕ್ಕೆ ತೆರಳಿದೆ. ಅಲ್ಲಿ ನಿರ್ದೇಶಕರು ಸೇರಿದಂತೆ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕಾರ್ಯನಿರ್ವಹಿಸುತ್ತಿದ್ದ ಶೈಲಿ ನೋಡಿ ಬೆರಗಾದೆ. ಅಬ್ಬಾ ಲಕ್ಷಾಂತರ ಮೌಲ್ಯದ ವಾಹನಗಳು ನನ್ನ ಕಣ್ಣ ಮುಂದೆ ಪ್ರಪಾತಕ್ಕೆ ಬೀಳುತ್ತಿದ್ದವು. ಚಿಕ್ಕ ಬಜೆಟ್ ನ ಸಿನಿಮಾ ಎಂದು ಆರಂಭವಾಗಿ, ಚಿತ್ರೀಕರಣ ಸಾಗುತಾ ಅಪಾರವೆಚ್ಚದ ಅದ್ಧೂರಿ ಸಿನಿಮಾವಾಗಿ ʼಮಡ್ಡಿʼ ನಿರ್ಮಾಣವಾಗಿದೆ” ಎಂದು ಸಿನಿಮಾ ತಯಾರಾದ ಸಾಹಸದ ಬಗ್ಗೆ ಹೇಳುತ್ತಾರೆ ರವಿ ಬಸ್ರೂರು.

ಮ್ಯಾನೇಜ್ಮೆಂಟ್‌ʼನಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುವ ಡಾ.ಪ್ರಗ್ಬಲ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. “ನನ್ನ ನಿರ್ದೇಶನದಲ್ಲಿ ಇದು ಮೊದಲ ಚಿತ್ರ. ಮಡ್ ರೇಸ್ ಕಥೆಯಿಟ್ಟುಕೊಂಡು ಭಾರತದಲ್ಲಿ ತಯಾರಾಗಿರುವ ಚೊಚ್ಚಲ ಚಿತ್ರವಿದು. ಈ ಚಿತ್ರ‌ ನಿರ್ಮಾಣಕ್ಕೆ ಐದು ವರ್ಷಗಳ ಸಮಯ ಹಿಡಿದಿದೆ. ಒಂದು ವರ್ಷ ಲೊಕೇಶನ್ ಹುಡುಕಾಟ ಮಾಡಿ, ಕೊನೆಗೆ ತಮಿಳುನಾಡು ಹಾಗೂ ‌ಕೇರಳ ಗಡಿ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ನಿರ್ಮಾಣವಾಗಿರುವ ಸಿನಿಮಾ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ರವಿ ಅವರು ಬರೀ ಸಂಗೀತಕ್ಕಷ್ಚೇ ಸೀಮಿತವಾಗದೆ, ನನ್ನ ಬೆನ್ನ ಹಿಂದೆ ನಿಂತು, ನನಗೆ ಮಾರ್ಗದರ್ಶನ ಮಾಡಿದ್ದಾರೆ. ನೂತನ ಕಲಾವಿದರ ಹಾಗೂ ನುರಿತ ತಂತ್ರಜ್ಞರ ಸಮಾಗಮದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಮೂಡಿಬಂದಿದೆ” ಎನ್ನುತ್ತಾರೆ ಚಿತ್ರದ ನಿರ್ದೇಶಕ ಡಾ.ಪ್ರಗ್ಬಲ್. ಪ್ರೇಮಕೃಷ್ಣ ದಾಸ್ ನಿರ್ಮಿಸಿರುವ ಚಿತ್ರಕ್ಕೆ ನಿರ್ದೇಶಕ ಪ್ರಗ್ಬಲ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ರತೀಶ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಹಾಗೂ ರನ್ ರವಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಯುವನ್ ಕೃಷ್ಣ, ರಿಧಾನ್ ಕೃಷ್ಣ, ಅಮಿತ್ ಶಿವದಾಸ್, ಅನುಶಾ ಸುರೇಶ್, ರೆಂಜಿ ಪಣಿಕರ್, ಹರೀಶ್ ಪೆರಾಡಿ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here