ಪ್ರಗ್ಬಲ್ ದಾಸ್ ನಿರ್ದೇಶನದ ‘ಮಡ್ಡಿ’ ಸಿನಿಮಾ ನೇರವಾಗಿ OTTಯಲ್ಲಿ ಸ್ಟ್ರೀಮ್ ಆಗಲಿದೆ ಎನ್ನುವ ಸುದ್ದಿಯಿತ್ತು. ನಿರ್ಮಾಪಕರು ನಿರ್ಧಾರ ಬದಲಿಸಿದ್ದು ಚಿತ್ರ ಇದೇ ಡಿಸೆಂಬರ್‌ 10ಕ್ಕೆ ಥಿಯೇಟರ್‌ಗಳಲ್ಲೇ ಬಿಡುಗಡೆಯಾಗಲಿದೆ. ಖ್ಯಾತ ಯುವ ತಂತ್ರಜ್ಞರ ಬಳಗ ಕೆಲಸ ಮಾಡಿದ್ದು, ಆರು ಭಾಷೆಗಳಲ್ಲಿ ಸಿನಿಮಾ ಥಿಯೆಟರ್‌ಗೆ ಬರುತ್ತಿದೆ.

“ಸುಮಾರು ಐದು ವರ್ಷಗಳ ಶ್ರಮವಿದು. ಸಾಕಷ್ಟು ಅಧ್ಯಯನ, ತಯಾರಿಯೊಂದಿಗೆ ಸಿನಿಮಾ ಮಾಡಿದ್ದೇವೆ. ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರಕ್ಕೆ ಬೇಡಿಕೆ ಬಂದಿತ್ತು. ನಾವು ಕೂಡ ಈ ಬಗ್ಗೆ ಗಂಭೀರವಾಗಿ ಯೋಚಿಸಿದ್ದೆವು. ಆದರೆ ದೊಡ್ಡ ಪರದೆ ಮೇಲೆ ನೋಡಿದರೇ ನಮ್ಮ ಸಿನಿಮಾ ಎಫೆಕ್ಟೀವ್‌. ಹಾಗಾಗಿ ಥಿಯೇಟರ್‌ನಲ್ಲೇ ಡಿಸೆಂಬರ್‌ 10ರಂದು ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ” ಎಂದಿದ್ದಾರೆ ‘ಮಡ್ಡಿ’ ಸಿನಿಮಾ ನಿರ್ದೇಶಕ ಡಾ. ಪ್ರಗ್ಬಲ್ ದಾಸ್. ಈ ಚಿತ್ರದ ಕಲಾವಿದರೆಲ್ಲ ಯಾವುದೇ ಡ್ಯೂಪ್ ಬಳಸದೆ ಹಲವು ಶೈಲಿಯ ಮಡ್​ ರೇಸ್​ನಲ್ಲಿ ಪರಿಣಿತಿ ಪಡೆದಿದ್ದಾರೆ. ಒಟ್ಟು 13 ಕ್ಯಾಮರಾಗಳನ್ನು ಶೂಟಿಂಗ್‌ನಲ್ಲ ಬಳಕೆ ಮಾಡಿಕೊಳ್ಳಲಾಗಿದೆಯಂತೆ. ಎರಡು ತಂಡಗಳ ನಡುವಿನ ಸ್ಪರ್ಧೆಯನ್ನು ನಿರ್ದೇಶಕರು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಅಡ್ವೆಂಚರಸ್​ ತಿರುವುಗಳ ಮಿಶ್ರಣವಿದು ಎನ್ನುತ್ತಾರವರು.

ಅನುಭವಿ ತಂತ್ರಜ್ಞರ ಜೊತೆ ಸೇರಿ ಅಂತಾರಾಷ್ಟ್ರೀಯ  ಮಟ್ಟದಲ್ಲಿ ಸಿದ್ಧವಾದ ಪ್ರಯತ್ನ ಎನ್ನುವುದು ಅವರ ವಿಶ್ವಾಸದ ನುಡಿ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಪಿಕೆ7 ಪ್ರೊಡಕ್ಷನ್ಸ್ ಹೌಸ್ ಅಡಿ ಪ್ರೇಮ್ ಕೃಷ್ಣ ದಾಸ್ ಚಿತ್ರ ನಿರ್ಮಿಸಿದ್ದಾರೆ. ಚಿತ್ರದ ಮೊದಲ ಟೀಸರ್ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ‘ರಾಕ್ಷಸನ್’ ಸಿನಿಮಾ ಖ್ಯಾತಿಯ ಸ್ಯಾನ್​ ಲೋಕೇಶ್​ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ‘ಕೆಜಿಎಫ್’ ಸಿನಿಮಾ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಲಿವುಡ್​ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ ರತೀಶ್​ ಈ ಸಿನಿಮಾಕ್ಕೆ ಕ್ಯಾಮರಾಮನ್. ಕಲರಿಸ್ಟ್​ ಆಗಿ ರಂಗ ಕೆಲಸ ಮಾಡಿದ್ದಾರೆ.

ಈ ಹಿಂದೆ ಚಿತ್ರದ ಮೋಷನ್ ಪೋಸ್ಟರ್ ಅನ್ನು ಕಾಲಿವುಡ್ ನಟ ವಿಜಯ್ ಸೇತುಪತಿ, ಕನ್ನಡದಲ್ಲಿ ಶ್ರೀಮುರಳಿ, ಬಾಲಿವುಡ್ ನಟ ಅರ್ಜುನ್ ಕಪೂರ್ ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಹಲವು ಭಾಷೆಗಳ ಟೀಸರ್​ ಅನ್ನು ಶಿವರಾಜಕುಮಾರ್, ಫಹಾದ್ ಪಾಸಿಲ್, ಉನ್ನಿ ಮುಕುಂದನ್, ಅಪರ್ಣ ಬಾಲಮುರಳಿ ಸೇರಿ ಹಲವು ಸ್ಟಾರ್ ನಟರು ಬಿಡುಗಡೆ ಮಾಡಿದ್ದರು. ನೈಜ ಅರಣ್ಯ ಪ್ರದೇಶದಲ್ಲಿ ಇಡೀ ಸಿನಿಮಾದ ಶೂಟಿಂಗ್ ಆಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಸಿನಿಮಾ ಮೂಡಿಬಂದಿದೆ. ಬಹುತೇಕ ಹೊಸಬರೇ ಸಿನಿಮಾದಲ್ಲಿ ನಟಿಸಿದ್ದಾರೆ. ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರೀಶ್ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ತಾರಾಗಣದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here