ಚಂದು ಮೊಂಡೇಟಿ ನಿರ್ದೇಶನದಲ್ಲಿ ನಾಗಚೈತನ್ಯ ನಟಿಸಲಿರುವ ನೂತನ ತೆಲುಗು ಸಿನಿಮಾ ಘೋಷಣೆಯಾಗಿದೆ. ಇದು PAN ಇಂಡಿಯಾ ಸಿನಿಮಾ ಆಗಲಿದೆ ಎಂದಿದ್ದಾರೆ ನಿರ್ದೇಶಕರು. ಪಾತ್ರದ ತಯಾರಿಗಾಗಿ ನಟ ನಾಗಚೈತನ್ಯ ಶ್ರೀಕಾಕುಳಂ ಹಳ್ಳಿಗೆ ಭೇಟಿ ನೀಡಿ ಮೀನುಗಾರರ ಕುಟುಂಬಗಳ ಜೊತೆ ಕಾಲ ಕಳೆದಿದ್ದಾರೆ.
ನಾಗಚೈತನ್ಯ ನಟನೆಯ ನೂತನ ತೆಲುಗು ಸಿನಿಮಾ ಘೋಷಣೆಯಾಗಿದೆ. ಇದು ಅವರ 23ನೇ ಸಿನಿಮಾ. ಶೀರ್ಷಿಕೆ ಇನ್ನೂ ನಗದಿಯಾಗಿಲ್ಲ. ಸದ್ಯಕ್ಕೆ NC23 ಎಂದು ಸಿನಿಮಾ ಶುರುವಾಗಲಿದೆ. ಸೂಪರ್‌ಹಿಟ್ ‘ಕಾರ್ತಿಕೇಯ 2’ ತೆಲುಗು ಸಿನಿಮಾ ಖ್ಯಾತಿಯ ಚಂದು ಮೊಂಡೇಟಿ ಸಾರಥ್ಯದಲ್ಲಿ ನಾಗಚೈತನ್ಯ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾದ ಪಾತ್ರದ ತಯಾರಿಗೆಂದು ನಾಗಚೈತನ್ಯ ಶ್ರೀಕಾಕುಳಂ ಬಳಿ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟಿದ್ದಾರೆ. ಮೀನುಗಾರರ ಸಂಸ್ಕೃತಿ, ನೆಲ, ಭಾಷೆ, ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳುವುದು ಈ ಭೇಟಿಯ ಉದ್ದೇಶ. ಇದು ನೈಜ ಘಟನೆಯೊಂದನ್ನು ಆಧರಿಸಿದ ಕತೆ ಎನ್ನಲಾಗಿದೆ. ನಾಗಚೈತನ್ಯ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸೂಚನೆ ಸಿಗುತ್ತದೆ. ಅವರು ಶ್ರೀಕಾಕುಳಂ ಭೇಟಿಯ ವೀಡಿಯೋವನ್ನು twitter ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
#NC23Expedition had a great experience meeting the fishermen and their families in Srikakulam … hearing out their experiences , understanding their land was a great start to building my character for #NC23
— chaitanya akkineni (@chay_akkineni) August 8, 2023
Shoot begins soon 🎬@chandoomondeti #BunnyVas @GeethaArts… pic.twitter.com/QyEUGZTobJ
ತಮ್ಮ ನೂತನ ಸಿನಿಮಾ ಬಗ್ಗೆ ಮಾತನಾಡುವ ನಾಗಚೈತನ್ಯ, ‘ಚಂದು ಅವರು 6 ತಿಂಗಳ ಹಿಂದೆ ಕಥೆ ಹೇಳಿದ್ದರು. ನಾನು ತುಂಬಾ ಉತ್ಸುಕನಾಗಿದ್ದೇನೆ. ನೈಜ ಘಟನೆಗಳನ್ನು ಆಧರಿಸಿ ಅವರು ಕಥೆ ಮಾಡಿದ್ದಾರೆ. ಕತೆ ತುಂಬಾ ಸ್ಫೂರ್ತಿದಾಯಕವಾಗಿದೆ. ಮೀನುಗಾರರ ಜೀವನಶೈಲಿ, ಅವರ ಭಾಷೆ ಮತ್ತು ಹಳ್ಳಿಯ ಸೊಬಗನ್ನು ತಿಳಿಯಲು ಇಲ್ಲಿಗೆ ಬಂದಿದ್ದೇವೆ. ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ’ ಎನ್ನುತ್ತಾರೆ. ನಿರ್ದೇಶಕ ಚಂದೂ ಮೊಂಡೇಟಿ ಅವರು ಕಳೆದೆರೆಡು ವರ್ಷಗಳಿಂದ ಚಿತ್ರಕಥೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದೀಗ ಚಿತ್ರಕಥೆ ಸಿದ್ಧವಾಗಿದ್ದು, ನಾಗಚೈತನ್ಯ ಅವರಿಗೂ ಸ್ಕ್ರಿಪ್ಟ್ ತುಂಬಾ ಇಷ್ಟವಾಗಿದೆ. ಇದೇ ತಿಂಗಳು ಸಿನಿಮಾ ಶುರುವಾಗಲಿದೆ.