ನಾಗಶೇಖರ್ ನಟಿಸಿ, ನಿರ್ದೇಶಿಸಿರುವ ‘ನವೆಂಬರ್ ಮಳೆಯಲ್ ನಾನುಂ ಅವಳುಂ’ ತಮಿಳು ಸಿನಿಮಾಗೆ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಹಿರಿಯ ನಟ ಡೆಲ್ಲಿ ಗಣೇಶ್ ಮತ್ತು ಸುಮನ್ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಸಂಜು ವೆಡ್ಸ್ ಗೀತಾ’, ‘ಮೈನಾ’ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ಇದೀಗ ಕಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅವರು ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ‘ನವೆಂಬರ್ ಮಳೆಯಲ್ ನಾನುಂ ಅವಳುಂ’ ಚಿತ್ರದ ಶೂಟಿಂಗ್ ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ನಡೆಯುತ್ತಿದ್ದು, ಸಿನಿಮಾ ಕುರಿತು ಅವರು ಮಾಹಿತಿ ನೀಡಿದ ಅವರು, “ಇದು ಮಳೆಗಾಲದಲ್ಲಿ ನಡೆಯೋ ಪ್ರೇಮಕಥೆ. ತಮಿಳುನಾಡಲ್ಲಿ ನವೆಂಬರ್ ನಲ್ಲಿ ಭಾರೀಮಳೆ, ಹಾಗಾಗಿ ಈ ಚಿತ್ರಕ್ಕೆ ನವೆಂಬರ್ ಮಳೆಯಲ್ ನಾನುಂ ಅವಳುಂ ಶೀರ್ಷಿಕೆ ಇಟ್ಟಿದ್ದೇನೆ. ಮೊದಲು ಈ ಕಥೆಯನ್ನು ಬೇರೆ ಹೀರೋಗಾಗಿ ಮಾಡಿದ್ದೆ. ಇಲ್ಲಿ ನಾಯಕನಿಗೆ ಸೀಳುತುಟಿಯಿರುತ್ತೆ. ಆತನಿಗೆ ತಾನೊಬ್ಬ ದೊಡ್ಡ ಸಿಂಗರ್ ಆಗಬೇಕೆಂಬ ಕನಸು. ಆತನ ಜೀವನದಲ್ಲೊಂದು ಲವ್ ಸ್ಟೋರಿ. ಇದು ಚಿತ್ರದ ಕಂಟೆಂಟ್. ಆ ನಾಯಕ ಈ ಕಥೆ ಮಾಡಿದರೆ ಸೆನ್ಸಾರ್ ನಿಂದ ಪ್ರಾಬ್ಲಂ ಆಗಬಹುದು ಎಂದಾಗ ನಾನು ಸ್ನೇಹಿತ ಸೆನ್ಸಾರ್ ಶಿವು ಬಳಿ ಚರ್ಚಿಸಿದೆ. ಈ ಕಥೆ ಕೇಳಿದ ಶಿವು ಇದರಲ್ಲಿ ನೀನೇ ಹೀರೋ ಆದ್ರೆ ಚೆನ್ನಾಗಿರುತ್ತೆ ಅಂದರು. ಕೊನೆಗೆ ನಾನೇ ಹೀರೋ ಆದೆ” ಎಂದರು.
ನಟಿ ಸುಮನ್ ರಂಗನಾಥ್ ಮಾತನಾಡಿ, “ನಾಗಶೇಖರ್ ಕಾಲ್ ಮಾಡಿ ಈ ಪೋಲಿಸ್ ಕಮೀಷನರ್ ಪಾತ್ರದ ಬಗ್ಗೆ ಹೇಳಿದರು. ಚಿಕ್ಕದಾದರೂ ಪ್ರಮುಖ ಪಾತ್ರ. ಯೂನಿಫಾರ್ಮ್ ಹಾಕಿದ ಕೂಡಲೇ ಅದೇನೋ ಪವರ್ ಬಂದುಬಿಡುತ್ತೆ!” ಎಂದರು. ಹಿರಿಯ ಕಲಾವಿದ ಡೆಲ್ಲಿ ಗಣೇಶ್, “ಸೌತ್ ಇಂಡಿಯಾ ಸಿನಿಮಾಗಳು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿವೆ. 47 ವರ್ಷಗಳಿಂದ ಬಣ್ಣ ಹಚ್ಚುತ್ತಿದ್ದೇನೆ. ಚಿತ್ರದಲ್ಲಿ ನನಗೆ ಸಾಫ್ಟ್ ಪರ್ಸನಾಲಿಟಿ ವ್ಯಕ್ತಿಯ ಪಾತ್ರ ಮಾಡುತ್ತಿದ್ದೇನೆ” ಎಂದರು. ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗಿಗೆ ಡಬ್ ಆಗಲಿದೆ. ಮಲಯಾಳಂನ ಅನು ಸಿತಾರಾ ನಾಯಕಿ. ಏಳು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಡೆಲ್ಲಿ ಗಣೇಶ್, ದತ್ತಣ್ಣ, ರಂಗಾಯಣ ರಘು ಕೂಡ ಅಭಿನಯಿಸಿದ್ದಾರೆ. ಐಡಿಯಲ್ ಹೋಮ್ಸ್ ನ ರಾಜಶೇಖರ್ ಸಿಎಂ ಪಾತ್ರ ಮಾಡಿದ್ದಾರೆ. ಶಬ್ಬೀರ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದು, ಮದನ್ ಕಾರ್ಕಿ(ವೈರಮುತ್ತು ಮಗ) ಸಾಹಿತ್ಯ ರಚಿಸಿದ್ದಾರೆ. ನವೆಂಬರ್ 11ರಂದು ಸಿನಿಮಾ ತೆರೆಕಾಣುತ್ತಿದೆ.