ಭಾರತದ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ನ ಆರಂಭದ ದಿನಗಳ ಜನಪ್ರಿಯ ನಟ ನವಾಜುದ್ದೀನ್ ಸಿದ್ದಿಕಿ OTT ತೊರೆಯಲು ನಿರ್ಧರಿಸಿದ್ದಾರೆ. ಇತರೆಡೆ ಮಾರಾಟವಾಗದ ಸರಕನ್ನು ಅಲ್ಲಿಗೆ ತಂದು ಸುರಿಯುತ್ತಿದ್ದಾರೆ ಎನ್ನುವುದು ಅವರ ದೂರು.

ಓಟಿಟಿಗಾಗಿಯೇ ತಯಾರಿಸುವ ಕಂಟೆಂಟ್‌ನಲ್ಲಿ ತಾವಿನ್ನು ನಟಿಸುವುದಿಲ್ಲ ಎಂದಿದ್ದಾರೆ ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿ. ಇತ್ತೀಚೆಗೆ ಈ ಪ್ಲಾಟ್‌ಫಾರ್ಮ್‌ ಅನಗತ್ಯ ಕಂಟೆಂಟ್‌ ತಂದುಹಾಕುವ ಡಂಪಿಂಗ್‌ ಗ್ರೌಂಡ್‌ನಂತಾಗಿದೆ ಎನ್ನುವುದು ಅವರ ಅಸಮಾಧಾನ. ಹಾಗೆ ನೋಡಿದರೆ ನವಾಜುದ್ದೀನ್‌ ಸಿದ್ದಿಕಿ ಭಾರತದಲ್ಲಿ ಆರಂಭದ ದಿನಗಳ ಜನಪ್ರಿಯ OTT ಸ್ಟಾರ್‌. ನೆಟ್‌ಫ್ಲಿಕ್ಸ್‌ನ ಮೊದಲ ಇಂಡಿಯನ್‌ ಒರಿಜಿನಲ್ ಸೀರೀಸ್‌ ‘ಸೇಕ್ರೆಡ್ ಗೇಮ್ಸ್‌’ನಲ್ಲಿ ಅವರು ನಟಿಸಿದ್ದರು. ಈ ಸರಣಿಯಲ್ಲಿ ಅವರು ಗ್ಯಾಂಗ್‌ಸ್ಟರ್‌ ಗಣೇಶ್ ಗೈತೊಂಡೆ ಪಾತ್ರ ನಿರ್ವಹಿಸಿದ್ದರು. ಸಿದ್ದಿಕಿ ಅವರ ಪಾತ್ರ ನಿರ್ವಹಣೆಗೆ ವಿಮರ್ಶಕರು ಹಾಗೂ ವೀಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅವರಿಗೆ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಬೇಸರ ಮೂಡಿಸಿದೆ.

‘ಬಾಲಿವುಡ್‌ ಹಂಗಾಮಾ’ ಸಂದರ್ಶನದಲ್ಲಿ ಅವರು ಮಾತನಾಡುತ್ತಾ, “ಅನಗತ್ಯ ಸರಕುಗಳಿಗೆ OTT ಪ್ಲಾಟ್‌ಫಾರ್ಮ್‌ ಡಂಪಿಂಗ್‌ ಗ್ರೌಂಡ್‌ ಆಗಿದೆ. ಪ್ರಾಮುಖ್ಯತೆ ಇಲ್ಲದ ಸರಣಿ, ಶೋಗಳಿಗೆ ಇದು ವೇದಿಕೆಯಾಗುತ್ತಿದೆ. ಇತ್ತೀಚೆಗೆ ಇದೊಂದು ‘ದಂಧೆ’ಯಾಗುತ್ತಿದೆ. ಬಾಲಿವುಡ್‌ ನಿರ್ಮಾಪಕರು ಮತ್ತು ನಟರು ಸ್ಟ್ರೀಮಿಂಗ್‌ ಸರ್ವೀಸ್ ಪ್ಲಾಟ್‌ಫಾರ್ಮ್‌ಗಳ ಜೊತೆ ದೊಡ್ಡ ಮೊತ್ತದ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕ್ವಾಂಟಿಟಿ ಹೆಚ್ಚಾಗುತ್ತದೆಯೇ ಹೊರತು ಕ್ವಾಲಿಟಿ ಸಿಗುತ್ತಿಲ್ಲ. ಆರಂಭದ ದಿನಗಳಲ್ಲಿ ‘ಸೇಕ್ರೆಡ್ ಗೇಮ್ಸ್‌’ ಸರಣಿಯಲ್ಲಿದ್ದ ಸವಾಲು, ಉತ್ಸಾಹ ಈಗ ನನ್ನಲ್ಲಿಲ್ಲ. ನನಗೇ ಅಲ್ಲಿನ ಕಾರ್ಯಕ್ರಮ ನೋಡಲು ಸಾಧ್ಯವಾಗುತ್ತಿಲ್ಲ ಎಂದಾದ ಮೇಲೆ ನಾನು ಅಲ್ಲಿ ನಟಿಸುವುದು ಹೇಗೆ ಸಾಧ್ಯವಾಗುತ್ತದೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಸಿನಿಮಾದಲ್ಲಿ ನಟಿಸುತ್ತಿದ್ದ ಕೆಲವು ತಾರೆಯರು OTT ಸ್ಟಾರ್‌ಗಳಾಗಿ ಬೀಗುತ್ತಿರುವ ಬಗ್ಗೆಯೂ ಅವರಿಗೆ ಕೋಪವಿದೆ. “ಯೆಹ್ ಸ್ಟಾರ್ ಸಿಸ್ಟಮ್‌ ಬಡೇ ಪರ್ದೇ ಕೋ ಖಾ ಗಯಾ (ಈ ಸ್ಟಾರ್ ಸಿಸ್ಟಮ್ ದೊಡ್ಡ ಪರದೆಯನ್ನು ಕೊಂದುಹಾಕಿತು). OTT ಸ್ಟಾರ್‌ಗಳೆಂದು ಕರೆಸಿಕೊಳ್ಳುವ ನಾವು ಸಾಕಷ್ಟು ಹಣ ಗಳಿಸುತ್ತಿದ್ದು, ಬಾಲಿವುಡ್‌ನ ಸ್ಟಾರ್ ಹೀರೋಗಳಂತೆ ಬೀಗುತ್ತಿದ್ದೇವೆ. ಆದರೆ ಈಗ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ‘ಕಂಟೆಂಟ್‌ ಈಸ್ ಕಿಂಗ್‌’ ಎನ್ನುವ ಮಂತ್ರ ಕಾಣೆಯಾಗುತ್ತಿದೆ. ಲಾಕ್‌ಡೌನ್‌ಗಿಂತ ಮುನ್ನ, OTT ಅಬ್ಬರಕ್ಕಿಂದ ಮೊದಲು ಬಾಲಿವುಡ್‌ ಹೀರೋಗಳ ಸಿನಿಮಾಗಳು ದೇಶದ 3000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದವು. ಜನರಿಗೂ ಬೇರೆ ಆಯ್ಕೆ ಇರದ ಕಾರಣ ಸಿನಿಮಾ ನೋಡುತ್ತಿದ್ದರು. ಈಗ ಅವರಿಗೆ ಸಾಕಷ್ಟು ಆಯ್ಕೆಗಳಿವೆ” ಎನ್ನುವ ಅವರು ತಾವು ಮೂಲತಃ ಸಿನಿಮಾದವರೆನ್ನುವ ಅಭಿಮಾನ ಬಿಟ್ಟುಕೊಡುವುದಿಲ್ಲ.

LEAVE A REPLY

Connect with

Please enter your comment!
Please enter your name here