ಈ ಮಾದರಿಯ ಚಿತ್ರ ಎಷ್ಟು ಆಸಕ್ತಿಕರವೋ ಒಂದು ಹಂತ ಆದ ಮೇಲೆ ಒಂದು ರೀತಿ ಕಿರಿಕಿರಿ ಕೂಡ. ಆಯ್ಕೆ ಮಾಡುವ ಪ್ರಶ್ನೆ ಎದುರಾದಾಗ ಅದೋ, ಇದೋ ಎಂಬ ಗೊಂದಲದಲ್ಲೇ ಚಿತ್ರವನ್ನು ಆಸ್ವಾದಿಸುವ ಅವಕಾಶ ಮಾಯವಾಗಿಬಿಡುತ್ತದೆ. ಮನರಂಜನೆಗೋಸ್ಕರ ಚಿತ್ರ ನೋಡುವವರಿಗೆ ಈ ಮಾದರಿ ಇಷ್ಟವಾಗಲಾರದು. ‘ಚೂಸ್ ಲವ್’ ಚಿತ್ರ Netflixನಲ್ಲಿ stream ಆಗುತ್ತಿದೆ.

ಯಾವುದಾದರೂ ಸಿನಿಮಾ ನೋಡೋವಾಗ, ‍ಛೇ ಹೀಗಾಗಿದ್ರೆ ಚೆನ್ನಾಗಿರೋದು ಅಲ್ವಾ, ಹೀಗಾಗೋ ಬದಲು ಹಾಗಾಗಿದ್ರೆ ಏನಾಗಿರೋದು ಅಂತೆಲ್ಲ ಊಹೆಗಳನ್ನು ಮಾಡಿಕೊಳ್ಳುತ್ತೀವಿ. ನಾನೇನಾದ್ರೂ ಕಥೆ ಬರೆದಿದ್ರೆ ಹೀಗೆ ಬರೀತಿರಲಿಲ್ಲ ಬಿಡು ಅಂದುಕೊಳ್ಳುತ್ತೀವಿ. ವೀಕ್ಷಕರಾಗಿ ನಮಗೆ ಆಯ್ಕೆಗಳು ಇರಲ್ಲ. ನಿರ್ದೇಶಕರು ತೋರಿಸಿದ್ದನ್ನು ಮಾತ್ರ ನೋಡಬೇಕು. ಆದರೆ ನಮಗೇ ಆಯ್ಕೆ ಇದ್ದಾಗ?

ವೀಕ್ಷಕರಿಗೇ ಕಥೆಯಲ್ಲಿ ಏನಾಗಬೇಕೆಂಬ ಆಯ್ಕೆಯನ್ನು ನೀಡುವ ಪ್ರಪ್ರಥಮ ಸಂವಾದಾತ್ಮಕ ಮಾದರಿಯ ಪ್ರೇಮಕತೆಯೊಂದನ್ನು Netflix ಪ್ರಸ್ತುತಪಡಿಸಿದೆ. ಈ ವಿಭಿನ್ನ ಚಿತ್ರದ ಹೆಸರು ‘ಚೂಸ್ ಲವ್’. ಸದಾಕಾಲವೂ ಏನಾದರೊಂದು ಹೊಸ ಹೊಸ ಪ್ರಸ್ತುತಿಗಳನ್ನು ನೀಡುವ ನೆಟ್‌ಫ್ಲಿಕ್ಸ್‌ ಇದೀಗ ಕಥೆಯಲ್ಲಿ ಏನಾಗಬೇಕೆಂದು ವೀಕ್ಷಕರೇ ಆಯ್ಕೆ ಮಾಡಬಲ್ಲ ಚಿತ್ರವನ್ನು ನೀಡಿರುವುದು ವಿಶೇಷ. ಈ ಪ್ರಯತ್ನವನ್ನು ಈಗಾಗಲೇ ಬ್ಲಾಕ್ ಮಿರರ್ ಸರಣಿಯಲ್ಲೂ ಮತ್ತೊಂದು ಗೇಮ್ ಶೋನಲ್ಲೂ ಪ್ರಯೋಗ ಮಾಡಲಾಗಿತ್ತು. ಆದರೆ ಪೂರ್ಣಪ್ರಮಾಣದ ಚಿತ್ರವೊಂದರಲ್ಲಿ ಮಾಡಿರಲಿಲ್ಲ.

ಸ್ಟುವರ್ಟ್ ಮ್ಯಾಕ್ ಡೋನಾಲ್ಡ್ ನಿರ್ದೇಶನದ ‘ಚೂಸ್ ಲವ್’ ಚಿತ್ರದಲ್ಲಿ ಲಾರ ಮರಾನೋ, ಅವಾನ್ ಜೋಗಿಯ, ಸ್ಕಾಟ್ ಮೈಕಲ್ ಫಾಸ್ಟರ್ ಮತ್ತು ಜೋರ್ಡಿ ವೆಬ್ಬಾರ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಈ ಮಾದರಿಯ ಪ್ರಯೋಗಗಳ ಬಗ್ಗೆ ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದೊಂದು ಆಸಕ್ತಿಕರ ಚಟುವಟಿಕೆ ಎಂದು ಅಭಿಪ್ರಾಯಪಟ್ಟರೆ ಮತ್ತೆ ಕೆಲವರು ಇದೊಂದು ಬೋರಿಂಗ್ ಮತ್ತು ಸಮಯ ವ್ಯರ್ಥ ಮಾಡುವ ಚಟುವಟಿಕೆ ಎನ್ನುತ್ತಾರೆ.

ಇನ್ನು ‘ಚೂಸ್ ಲವ್’ವಿಚಾರಕ್ಕೆ ಬಂದರೆ ಇದರ ನಾಯಕಿ ಕ್ಯಾಮಿ ಬಹಳ ಗೊಂದಲಗಳ ಹುಡುಗಿ ಆದ್ದರಿಂದ ಅವಳ ಜೀವನದ ನಿರ್ಧಾರಗಳು ವೀಕ್ಷಕರಾಗಿ ನೀವು ತೆಗೆದುಕೊಳ್ಳುವ ಆಯ್ಕೆಯ ಮೇಲೆ ಅವಲಂಬಿತವಾಗಿರುತ್ತವೆ. ಹಾಗಾಗಿ ಚಿತ್ರದ ಉದ್ದಕ್ಕೂ ವೀಕ್ಷಕನೂ ಒಂದು ರೀತಿಯಲ್ಲಿ ಗಮನ ಕೇಂದ್ರೀಕರಿಸಿ ನೋಡುವಂತಾಗುತ್ತದೆ. ಚಿತ್ರದ ಅಂತ್ಯ ಹೇಗಾಗಬೇಕು ಎಂಬುದನ್ನು ಕೂಡ ವೀಕ್ಷಕನೇ ನಿರ್ಧರಿಸುವ ಆಯ್ಕೆಯನ್ನು ಈ ಚಿತ್ರ ನೀಡುತ್ತದೆ. ಈ ಚಿತ್ರದ ನಾಯಕಿ ಕ್ಯಾಮಿ ಒಬ್ಬಳು ಸೌಂಡ್ ರೆಕಾರ್ಡಿಂಗ್ ಇಂಜಿನಿಯರ್. ಅವಳ ವೃತ್ತಿಯ ಮತ್ತು ವೈಯಕ್ತಿಕ ಜೀವನದ ನಾನಾ ಮಜಲುಗಳಲ್ಲಿ ಮೂರು ಬೇರೆ ಬೇರೆ ವ್ಯಕ್ತಿತ್ವದ ಪುರುಷರನ್ನು ಭೇಟಿ ಮಾಡುತ್ತಾಳೆ, ಇಷ್ಟಪಡುತ್ತಾಳೆ. ಅವರು ಮೂವರಲ್ಲಿ ಕ್ಯಾಮಿ ಯಾರನ್ನು ಸಂಗಾತಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸುವುದು ನೀವು ಅಂದರೆ ವೀಕ್ಷಕರು.

ಈ ಮಾದರಿಯ ಚಿತ್ರ ಎಷ್ಟು ಆಸಕ್ತಿಕರವೋ ಒಂದು ಹಂತ ಆದ ಮೇಲೆ ಒಂದು ರೀತಿ ಕಿರಿಕಿರಿ ಕೂಡ. ಆಯ್ಕೆ ಮಾಡುವ ಪ್ರಶ್ನೆ ಎದುರಾದಾಗ ಅದೋ, ಇದೋ ಎಂಬ ಗೊಂದಲದಲ್ಲೇ ಚಿತ್ರವನ್ನು ಆಸ್ವಾದಿಸುವ ಅವಕಾಶ ಮಾಯವಾಗಿಬಿಡುತ್ತದೆ. ಕಥೆ ಹೀಗೇ ಸಾಗಬೇಕು ಎಂದು ನಿರ್ಧರಿಸುವವರು ನಾವೇ ಎಂದಾಗ surprise element ಕೂಡ ಇಲ್ಲವಾಗಿ ಚಿತ್ರವೀಕ್ಷಣೆಯ ಅನುಭವ ಸ್ವಲ್ಪ ನಿರಾಸೆ ಉಂಟುಮಾಡುತ್ತದೆ. ಮನರಂಜನೆಗೋಸ್ಕರ ಚಿತ್ರ ನೋಡುವವರಿಗೆ ಈ ಮಾದರಿ ಇಷ್ಟವಾಗಲಾರದು. ಒಂದು ಹಂತದಲ್ಲಿ ಯಾವುದೋ ಒಂದು ಆಯ್ಕೆ ಮಾಡಿದ್ರಾಯ್ತು ಅನ್ನೋ ಉಡಾಫೆ ಬರುತ್ತದೆ. ಯಾವುದನ್ನೂ ಆಯ್ಕೆ ಮಾಡದೇ ಹೋದರೆ ಚಿತ್ರ ತಾನೇ ಒಂದು ಆಯ್ಕೆ ಮಾಡಿ ಕಥೆ ಮುಂದುವರೆಸಿಕೊಳ್ಳುತ್ತದೆ. ಆದರೆ ಈ ಚಿತ್ರದಲ್ಲಿ ಕ್ಯಾಮಿ ಪಾತ್ರ, ಆಯ್ಕೆಗಳನ್ನು ವೀಕ್ಷಕರ ಮುಂದೆ ಅಭಿಪ್ರಾಯದಂತೆ ಕೇಳುವ ರೀತಿ ವೀಕ್ಷಕರನ್ನು ಕಥೆಯೊಡನೆ ಒಂದು ಮಟ್ಟಕ್ಕೆ ಕಟ್ಟಿ ಕೂರಿಸುತ್ತದೆ. ಆದರೂ ಒಂದು ಹಂತವಾದ ಮೇಲೆ ಈ ಪ್ರಕ್ರಿಯೆ ಸ್ವಲ್ಪ ಬೋರ್ ಹೊಡೆಸಿದ್ದು ಹೌದು.

ಇನ್ನು ಕಥೆಯ ವಿಚಾರಕ್ಕೆ ಬಂದರೆ ಇದೊಂದು ಸಾಧಾರಣವಾದ ಪ್ರೇಮಕತೆ ಅಷ್ಟೇ. ವಿಶೇಷವೇನಿಲ್ಲ. ಪಾತ್ರಧಾರಿಗಳ ಅಭಿನಯ ಚೊಕ್ಕವಾಗಿದೆ. ನೀವು ಮಾಡಿದ ಆಯ್ಕೆಗಳನ್ನು ಅಲ್ಲಲ್ಲೇ ಬದಲಿಸುವ ಅವಕಾಶ ಇರುವುದರಿಂದ ಒಂದಷ್ಟು ನಿಮ್ಮ ಕುತೂಹಲಗಳಿಗೆ ಸವಾಲು ಹಾಕುತ್ತಾ ನೋಡಿಸಿಕೊಂಡು ಹೋಗುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಸಿನಿಮಾ ‘ಚೂಸ್ ಲವ್’ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಹೇಳುವುದಕ್ಕಿಂತ ಈ ಸಿನಿಮಾ ತನ್ನನ್ನು ತಾನು ನೋಡಿಸಿಕೊಂಡು ಹೋಗುವ ಬಗೆ ವಿಶೇಷವಾಗಿ ರೂಪಿತವಾಗಿದೆ ಎನ್ನಬಹುದು. ಇಲ್ಲಿ ಪ್ರೇಕ್ಷಕನೇ ಪ್ರಭು. ಹಾಗಾಗಿ ಚಿತ್ರ ಚೆನ್ನಾಗಿದ್ದರೂ, ಚೆನ್ನಾಗಿಲ್ಲದಿದ್ದರೂ ಅದು ಆತನದೇ ಆಯ್ಕೆಯ ಪರಿಣಾಮ. ಒಂದು ವಿಭಿನ್ನ ಮತ್ತು ವಿಶಿಷ್ಟ ಚಿತ್ರವೀಕ್ಷಣೆಯ ಅನುಭವಕ್ಕಾಗಿ ‘ಚೂಸ್ ಲವ್’ ನೋಡಿರಿ. ಚಿತ್ರ Netflixನಲ್ಲಿ stream ಆಗುತ್ತಿದೆ.

1 COMMENT

  1. Dharmashree Iyengar’s review about Choose Love is one of the most unique and creative pieces of late. It opens up the role of options available to our life styles and leaves us with the question of validity of options available and assumed. It would be fascinating to look forward to her forthcoming writings/reviews.

LEAVE A REPLY

Connect with

Please enter your comment!
Please enter your name here