ಭಾರತೀಯ OTT ಮಾರುಕಟ್ಟೆಯಲ್ಲಿ ಇದು ದೊಡ್ಡ ಸುದ್ದಿ. ಜನಪ್ರಿಯ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಭಾರತದ ಮಾರುಕಟ್ಟೆಯಲ್ಲಿ ಶೇ. 60ರಷ್ಟು ದರ ಕಡಿತಗೊಳಿಸಿದೆ. ಅಮೇಜಾನ್ ಪ್ರೈಂ ದರ ಹೆಚ್ಚಿಸಿದ ಸಂದರ್ಭದಲ್ಲೇ ಈ ಬೆಳವಣಿಗೆ ಆಗಿರುವುದು ವಿಶೇಷ.
ಜಾಗತಿಕ OTT ಮಾರುಕಟ್ಟೆಯಲ್ಲಿ ನೆಟ್‌ಫ್ಲಿಕ್ಸ್ ಅತ್ಯಂತ ಜನಪ್ರಿಯ ಪ್ಲಾಟ್‌ಫಾರ್ಮ್. ಭಾರತದಲ್ಲಿ ನೆಟ್‌ಫ್ಲಿಕ್ಸ್‌ಗೆ ದೊಡ್ಡ ಸಂಖ್ಯೆಯ ಚಂದಾದಾರರಿದ್ದಾರೆ. ಈ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ನೆಟ್‌ಫ್ಲಿಕ್ಸ್ ಮುಂದಾಗಿದ್ದು, ಭಾರತದಲ್ಲಿ ಶೇ.60ರಷ್ಟು ದರ ಕಡಿತ ಮಾಡುತ್ತಿದೆ. ಇಂದಿನಿಂದಲೇ (ಡಿಸೆಂಬರ್ 14) ಹೊಸ ದರ ಚಾಲ್ತಿಗೆ ಬರುತ್ತಿದ್ದು, ಇದು ಭಾರತೀಯ OTT ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಬೇಸಿಕ್ ಪ್ಲಾನ್ ರೂ.499 ಇದ್ದ ಚಂದಾ ಹಣ ಶೇ.60ರಷ್ಟು ಕಡಿತಗೊಂಡು ರೂ.199 ಆಗಿದೆ. ಇನ್ನು ಬೇಸಿಕ್ ಮೊಬೈಲ್ ಪ್ಲಾನ್ ರೂ.199 ಇದ್ದುದು ಶೇ.25ರಷ್ಟು ಕಡಿತಗೊಂಡು ರೂ.149 ಆಗಿದೆ. ಪ್ರೀಮಿಯಮ್ ಪ್ಲಾನ್ ರೂ.799 ಇದ್ದುದು ರೂ.649 ಆಗಿದೆ.
ಈ ಬೆಳವಣಿಗೆಯಿಂದ ನೆಟ್‌ಫ್ಲಿಕ್ಸ್ ಚಂದಾದಾರರು ಗಮನಾರ್ಹವಾಗಿ ಹೆಚ್ಚಾಗಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತೊಂದೆಡೆ ಅಮೇಜಾನ್ ಪ್ರೈಂ ವೀಡಿಯೋ ಶೇ. 50ರಷ್ಟು ದರ ಹೆಚ್ಚಿಸಿದೆ. ಈ ದರ ಇಂದಿನಿಂದ ಚಾಲ್ತಿಗೆ ಬಂದಿದ್ದು, ತಿಂಗಳು, ಮೂರು ತಿಂಗಳು, ವಾರ್ಷಿಕ ಚಂದಾ ದರ ದುಬಾರಿಯಾಗಿದೆ. ನೆಟ್‌ಫ್ಲಿಕ್ಸ್ ತನ್ನ ಸಬ್‌ಸ್ಕ್ರೈಬರ್ಸ್‌ಗೆ ಹೊಸ ತಾರೀಫ್‌ನ ಇಮೇಲ್ ನೋಟಿಫಿಕೇಷನ್ ಕಳುಹಿಸುತ್ತಿದೆ. ಇನ್ನು ಅಮೇಜಾನ್ ಪ್ರೈಮ್ ದರಗಳು ಹೆಚ್ಚಾಗಿದ್ದು, ಈ OTT ಪ್ಲಾಟ್‌ಫಾರ್ಮ್‌ನ ಚಂದಾದಾರರು ಈಗ ವಾರ್ಷಿಕ ಚಂದಾ ಹಣವಾಗಿ ರೂ.1499 ಪಾವತಿಸಬೇಕಾಗಿದೆ. ಈ ಮೊದಲು ದರ ರೂ.999 ಇತ್ತು. ಮಾಸಿಕ ದರ ಈಗಿದ್ದ ರೂ.129 ಬದಲಿಗೆ ರೂ.50 ಹೆಚ್ಚಳದೊಂದಿಗೆ ರೂ.179 ಆಗಲಿದೆ. ಇನ್ನು ಮೂರು ತಿಂಗಳ ದರ ರೂ.459 ಆಗುತ್ತಿದೆ.