ಇದೊಂದು ಖುಷಿಗಾಗಿ, ಫೀಲ್ ಗುಡ್ ಅನುಭವಕ್ಕಾಗಿ ನೋಡುವ ಡಾಕ್ಯುಮೆಂಟರಿ ಖಂಡಿತ ಅಲ್ಲ. ಇದನ್ನು ನಿರ್ಮಿಸಿದವರ ಉದ್ದೇಶ ಸಹ ಅದಲ್ಲ. ಒಂದು ನಂಬಲಾರದ ಘಟನೆಯ ನಾನಾ ಮಗ್ಗುಲುಗಳನ್ನು ಜರಡಿ ಆಡಿಸುವ ಕಾರಣಕ್ಕೆ, ಮಾನಸಿಕ ಆರೋಗ್ಯದ ಕಡೆ ನಾವು ಕೊಡಬೇಕಾದ ಗಮನದ ಕಾರಣಕ್ಕೆ ಇದು ಮುಖ್ಯವಾಗುತ್ತದೆ. ದುರದೃಷ್ಟ ಘಟನೆಯನ್ನು ವರ್ಣಿಸದೆ, ಕಾರಣಗಳನ್ನು ಅನ್ವೇಶಿಸಿರುವುದು ಇದರ ವಿಶೇಷ. ಕೇವಲ ವಸ್ತುವಿನ ಕಾರಣಕ್ಕಲ್ಲದೆ, ನಿರ್ವಹಣೆಯ ಕಾರಣಕ್ಕೂ ನೋಡಬೇಕಾದ ಸರಣಿ ಇದು. ‘ಹೌಸ್‌ ಆಫ್‌ ಸೀಕ್ರೇಟ್‌’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಜುಲೈ 1, 2018. ದೆಹಲಿಯ ಸಂತ್ ನಗರದ ಬುರಾರಿ ಪ್ರದೇಶ. ಬೆಳಗಿನ 7 ಗಂಟೆಯ ಸಮಯ. ಬೀಗ ತೆಗೆಯದ ಅಂಗಡಿಯೊಂದರ ಮುಂದೆ ಹಾಲಿನ ಪಾಕೆಟ್ಟುಗಳು ತುಂಬಿರುವ ಕ್ರೇಟ್ ಕಾಯುತ್ತಲೇ ಇರುತ್ತದೆ. ಪ್ರತಿದಿನ ಬೆಳಗ್ಗೆ 5.30ರ ಸುಮಾರಿಗೆ ತೆಗೆಯಬೇಕಿದ್ದ ಹಾಲಿನ ಅಂಗಡಿ ಬಾಗಿಲು ಏಳಾದರೂ ತೆಗೆದಿಲ್ಲ. ನೆರೆಮನೆಯ ಹಿರಿಯರೊಬ್ಬರು ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯವರ ಮನೆಬಾಗಿಲು ತಟ್ಟುತಾರೆ. ಬಾಗಿಲಿನ ಚಿಲಕ ಹಾಕಿರುವುದಿಲ್ಲ, ತಳ್ಳಿ ಮೊದಲ ಮಹಡಿಯಲ್ಲಿರುವ ಮನೆಗೆ ಹೋಗಲೆಂದು ಮೆಟ್ಟಿಲು ಏರತೊಡಗುತ್ತಾರೆ. ಇನ್ನೊಬ್ಬ ನೆರೆಯವರ ವಯಸ್ಸಾದ ತಾಯಿ ಬೆಳಗಿನ ವಾಕಿಂಗ್ ಮುಗಿಸಿಕೊಂಡು ಬರುತ್ತಿದ್ದವರು ಮನೆಗೆ ಬರುವಷ್ಟರಲ್ಲಿ ಚೀರುತ್ತಿರುತ್ತಾರೆ. ರಾತ್ರಿಪಾಳಿ ಕೆಲಸ ಮುಗಿಸಿ ಬಂದಿದ್ದ ಅವರ ಮಗ ಗಾಬರಿಯಲ್ಲಿ ಎದ್ದು, ಅಮ್ಮ ಅರೆಬರೆಯಾಗಿ ಹೇಳುತ್ತಿದ್ದ ಮಾತು ಅರ್ಥವಾಗದೆ ಆ ಅಂಗಡಿಯವರ ಮನೆಗೆ ಧಾವಿಸುತ್ತಾರೆ.

ಅಲ್ಲಿ ಕಂಡ ದೃಶ್ಯ ನಿದ್ದೆಕಣ್ಣಿನಲ್ಲಿದ್ದ ಇವರ ಮನಸ್ಸಿಗೆ ಇಳಿಯಲು ಹಲವಾರು ಕ್ಷಣಗಳು ಬೇಕಾಗುತ್ತವೆ. ನಡುಮನೆಯ ಬಿಸಿಲುಮಚ್ಚಿಗೆ ಹಾಕಿದ್ದ ಕಬ್ಬಿಣದ ಛಾವಣಿಯ ಸರಳುಗಳಿಗೆ ನೇತು ಬಿದ್ದಿರುವ ಸಾಲು ಸಾಲು ದೇಹಗಳು. ಕೈಗಳನ್ನು ಕಟ್ಟಿಹಾಕಲಾಗಿದೆ, ಕಣ್ಣುಗಳಿಗೆ ಪಟ್ಟಿ ಕಟ್ಟಲಾಗಿದೆ. ಎಣಿಸಿ ನೋಡಿದರೆ 9 ದೇಹಗಳು, ಆಲದ ಮರದ ಬಿಳಲಿನಂತೆ ತೂಗಿಬಿದ್ದಿವೆ. ಅವರೆಲ್ಲರ ಕುತ್ತಿಗೆಗಳ ಸುತ್ತಲೂ ಜೀವತೆಗೆದ ಬಣ್ಣಬಣ್ಣದ ದುಪ್ಪಟ್ಟಗಳು. ಅಲ್ಲೇ ಅವರ ಕಾಲುಗಳ ಪಕ್ಕದಲ್ಲಿ, ಹಲವಾರು ಸ್ಟೂಲ್‌ಗಳು, ಅವರ ಪಾದಗಳಿಗೂ ನೆಲಕ್ಕೂ ದೂರವೇನೂ ಇಲ್ಲ, ಪ್ರಯತ್ನಿಸಿದರೆ ನೇಣಿನ ಬಿಗಿ ತಪ್ಪಿಸಿಕೊಳ್ಳುವುದು ಸಾಧ್ಯ. ಆದರೆ…???

ಅಲ್ಲೇ ಎದುರಿನಲ್ಲಿ ಇನ್ನೊಂದು ದೇಹ. ಒಳಮನೆಯ ಮಂಚದ ಮೇಲೆ ಮನೆಯ ಹಿರಿತಲೆ ಅಜ್ಜಮ್ಮನ ದೇಹ. ಕುತ್ತಿಗೆಗೆ ಬಿಗಿದ ಅದೇ ಸಾವಿನ ಪಾಶ. ಮಹಡಿಯ ಮೇಲೆ, ಛಾವಣಿಯ ಸರಳಿಗೆ ಕಟ್ಟಿಹಾಕಿದ ನಾಯಿ ಒಂದೇ ಸಮನೆ ಬೊಗಳುತ್ತಲಿರುತ್ತದೆ. ಆಗ ಈ ಕೇಸ್ ಮೆಲ್ವಿಚಾರಣೆ ಮಾಡಿದ ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಆ ದೃಶ್ಯ ಅವರು ಜೀವಂತ ಇರುವ ತನಕ ಮರೆಯಲಾಗದ್ದು. ಆ ಮನೆಯಲ್ಲಿ ಅಂದು ಒಟ್ಟು 11 ಜನರ ಸಾವಾಗಿರುತ್ತದೆ. 12-13 ವರ್ಷದ ಮೊಮ್ಮಕ್ಕಳಿಂದ ಹಿಡಿದು ಸುಮಾರು 80 ವರ್ಷಗಳ ಮನೆಯ ಅಜ್ಜಮ್ಮನವರೆಗೂ ಮೂರು ತಲೆಮಾರು ಒಂದೇ ದಿನ ಇಲ್ಲವಾಗಿರುತ್ತವೆ. ಅದು ಹತ್ಯೆಯೆ ಅಥವಾ ಆತ್ಮಹತ್ಯೆಯೆ? ಮನೆಯ 11 ಜನರನ್ನು ಒಟ್ಟಿಗೇ ಮುಗಿಸಬೇಕೆಂದರೆ 30-40 ಮಂದಿ ಇರಬೇಕು, ಅಲ್ಲದೆ ಅಷ್ಟು ದೊಡ್ಡ ಹತ್ಯಾಕಾಂಡವಾದರೆ ಮನೆ ರಣರಂಗವಾಗಿರಬೇಕು. ಆದರೆ ಅದೇನೂ ಇಲ್ಲ, ಮನೆಯ ಎಲ್ಲ ವಸ್ತುಗಳೂ ಇಟ್ಟ ಜಾಗದಲ್ಲಿವೆ. ಒಂದು ವಸ್ತುವೂ ಕಳುವಾಗಿಲ್ಲ. ಇಡೀ ಘಟನೆಗೆ ಸಾಕ್ಷಿಯಾಗಿರುವುದು ಒಂದು ಜೊತೆ ಕಣ್ಣುಗಳು. ಅವು ಈ ಮೊದಲೇ ಹೇಳಿದ ಆ ಕಟ್ಟಿಹಾಕಿದ ನಾಯಿಯ ಕಣ್ಣುಗಳು. ಕಟ್ಟು ಬಿಚ್ಚಿದ ಕೂಡಲೇ ಈ ನಾಯಿ ಹುಚ್ಚು ಹಿಡಿದಂತೆ ಅರಚಾಡತೊಡಗುತ್ತದೆ. ಪೋಲಿಸರಿಗೂ ಅದನ್ನು ಹಿಡಿಯಲಾಗುವುದಿಲ್ಲ. ಕಡೆಗೆ ಸೆಡೆಟಿವ್ ಕೊಟ್ಟು ಅದನ್ನು ಮಲಗಿಸಬೇಕಾಗುತ್ತದೆ. ದೆಹಲಿ ಅಲ್ಲಾಡಿ ಹೋಗುತ್ತದೆ. ಜನ ಕಂಗಾಲಾಗುತ್ತಾರೆ. ಮಾಧ್ಯಮಗಳು ಕ್ಷಣಕ್ಕೊಂದು ಬ್ರೇಕಿಂಗ್ ನ್ಯೂಸ್, ದಿನಕ್ಕೊಂದು ಹೊಸ ಕೋನದಲ್ಲಿ ಹಲವಾರು ಥಿಯರಿಗಳನ್ನು ತೇಲಿ ಬಿಡುತ್ತಿರುತ್ತವೆ.

Netflixನಲ್ಲಿರುವ ಮೂರು ಸರಣಿಗಳ ಈ ಡಾಕ್ಯುಮೆಂಟರಿ ಎಲ್ಲಿಯೂ ಘಟನೆಗೆ ಒಂದು ತಾರ್ಕಿಕ ಅಂತ್ಯ ಒದಗಿಸಲೇಬೇಕೆಂದು ಪ್ರಯತ್ನಿಸದೆ, ಅದನ್ನು ಜನಪ್ರಿಯಗೊಳಿಸಲೇಬೇಕೆಂದು ಅದನ್ನು ಸೆನ್ಸೇಶನಲೈಸ್ ಮಾಡದೆ, ಈ ಆಗುಹೋಗುಗಳನ್ನು ಹಲವು ನೆಲೆಗಳಿಂದ ಕಟ್ಟಿಕೊಡುತ್ತಾ, ಪ್ರಶ್ನಿಸುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಾವುಗಳಾದ ಭಾಟಿಯಾ ಮನೆಯ ನೆರೆಹೊರೆಯವರು, ಕುಟುಂಬದ ಸ್ನೇಹಿತರು, ದೂರದ ಊರಲ್ಲಿರುವ ಸಂಬಂಧಿಗಳ ಜೊತೆಜೊತೆಯಲ್ಲಿ ಮನೋವಿಶ್ಲೇಷಕರು, ವೈದ್ಯರು, ಪೋಲಿಸ್ ಅಧಿಕಾರಿಗಳು, ವೈದ್ಯರು ಮತ್ತು ವರದಿಗಾರರನ್ನು ಸಹ ಸಂದರ್ಶಿಸುತ್ತದೆ. ಇಡೀ ಡಾಕ್ಯುಮೆಂಟರಿ ಮೂರು ಸರಣಿಗಳಾಗಿ ವಿಭಾಗಿಸಲ್ಪಟ್ಟಿದ್ದು, ಲೀನಾ ಯಾದವ್ ಮತ್ತು ಅನುಭವ್ ಚೋಪ್ರಾ ಅದನ್ನು ನಿರ್ದೇಶಿಸಿದ್ದಾರೆ. ಸರಣಿಯ ಹಿನ್ನೆಲೆ ಸಂಗೀತ ಎ.ಆರ್.ರೆಹಮಾನ್ ಅವರದಾಗಿದ್ದು, ಘಟನಾವಳಿಗಳ ನಿರೂಪಣೆಯಲ್ಲಿ ಅದೂ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲ ಭಾಗದಲ್ಲಿ ಆಘಾತಕಾರಿ ಸಾವಿನ ಸುದ್ದಿ ಮತ್ತು ಅದು ಎತ್ತಿದ ಪ್ರಶ್ನೆಗಳನ್ನು ವಿವರಿಸಿದ್ದರೆ, ಎರಡನೆಯ ಭಾಗದಲ್ಲಿ ಇಡೀ ಘಟನೆಯ ಮೇಲೆ ಬೆಳಕು ಚೆಲ್ಲುವ ಡೈರಿಗಳ ಬಗ್ಗೆ, ಮಾಧ್ಯಮ ಹೇಗೆ ಈ ಸಾವುಗಳಿಗೆ ಮಸಾಲೆ ತುಂಬಿ, ಮಾರಾಟದ ಸರಕನ್ನಾಗಿಸಿತು ಎನ್ನುವುದರ ವಿವರಗಳಿವೆ. ಮೂರನೆಯ ಘಟನೆ ಕುಟುಂಬದ ಸಮೂಹಸನ್ನಿ ಮನಸ್ಥಿತಿಯನ್ನು ಹೇಳುತ್ತಾ ಮನೆಯ ಕಿರಿಮಗ ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ಅಪಘಾತ, ಮಾನಸಿಕ ಟ್ರಾಮಾ ಮತ್ತದರ ಪರಿಣಾಮಗಳನ್ನು ಕುರಿತು ಮಾತನಾಡುತ್ತದೆ. ಒಂದು ರೀತಿಯಲ್ಲಿ ಮಾಧ್ಯಮದ ಹೊಣೆಗಾರಿಕೆಯನ್ನು ಈ ಡಾಕ್ಯುಮೆಂಟರಿ ನಿರ್ವಹಿಸಿದೆ ಎಂದು ಹೇಳಬಹುದು.

ಈ ಡಾಕ್ಯುಮೆಂಟರಿಯ ವಿಶೇಷತೆ ಇರುವುದು ಅದರ ನಿರೂಪಣೆಯಲ್ಲಿ. ಎಲ್ಲೂ, ಯಾವುದನ್ನೂ ಅತಿರಂಜಕವಾಗಿಸದೆಯೂ ಇದು ಭೀಕರತೆ ಮತ್ತು ಭಯಾನಕ ಗುಣವನ್ನು ಕಾಪಾಡಿಕೊಂಡಿದೆ. ಎರಡನೆಯ ಭಾಗದಲ್ಲಿ ಮನೆಯಲ್ಲಿ ಸಿಗುವ ಆ ಡೈರಿಗಳು ಬಿಚ್ಚಿಡುವ ಲೋಕ ಧಾರುಣವಾದದ್ದು. ಅದರ ಪ್ರಕಾರ ಹೇಳುವುದಾದರೆ ಅವೆಲ್ಲಾ ಆ ಮನೆಯ ಹಿರಿಯ ತಲೆ, ಅಜ್ಜಮ್ಮನ ಗಂಡ ಸತ್ತ ಎಷ್ಟೋ ವರ್ಷಗಳ ನಂತರ ಚಿಕ್ಕ ಮಗ ಲಲಿತ್ ನ ಕನಸಿನಲ್ಲಿ ಬಂದು ಕೊಟ್ಟ ಸಂದೇಶಗಳು, ನೀಡಿದ ನಿರ್ದೇಶನಗಳು. ಬೆಳಗ್ಗೆ ಎದ್ದ ನಂತರ ಲಲಿತ್ ತನ್ನ ಕನಸುಗಳನ್ನು ನೆನಪು ಮಾಡಿಕೊಂಡು ಹೇಳುತ್ತಾ ಹೋದಂತೆ ಮನೆಯ ಯಾರಾದರೂ ಅವೆಲ್ಲವನ್ನೂ ಆ ಡೈರಿಗಳಲ್ಲಿ ಬರೆದುಕೊಳ್ಳುತ್ತಾ ಹೋಗುತ್ತಾರೆ. ನಂತರ ಇಡೀ ಮನೆ ಅದರಂತೆ ನಡೆದುಕೊಳ್ಳುತ್ತಿರುತ್ತದೆ. ಒಂದು ರೀತಿಯಲ್ಲಿ ಇಡೀ ಮನೆ ಕಿರಿಯ ಮಗ ಲಲಿತ್‌ನ ಮುಷ್ಟಿಯಲ್ಲಿರುತ್ತದೆ, ಅಪ್ಪ ಸತ್ತ ಎಷ್ಟೋ ವರ್ಷಗಳ ನಂತರ ಆತ ಆ ಸ್ಥಾನ ತೆಗೆದುಕೊಂಡಿರುತ್ತಾನೆ. ಇಡೀ ಮನೆಯಲ್ಲಿ ಆತನ ಮಾತುಗಳಿಗೆ, ಆತನ ಮನೆಯವರು ನಂಬುವ ಪ್ರಕಾರ ಆತನ ’ಮೂಲಕ’ ಬಂದ ಮಾತುಗಳಿಗೆ ಎದುರಿಲ್ಲ. ಹೊಸ ವ್ಯಾಪಾರ, ವ್ಯವಹಾರ, ಮದುವೆ ಸಂಬಂಧ, ಎಲ್ಲದರಲ್ಲೂ ಅವನದೇ ಕಡೆಯ ಮಾತು. ಇದು ಕೇಳಲಿಕ್ಕೆ, ನಂಬಲಿಕ್ಕೆ ವಿಚಿತ್ರ ಅನ್ನಿಸಬಹುದು. ಆದರೆ ಧಾರ್ಮಿಕ ಸಮೂಹಸನ್ನಿಗೆ ಒಳಗಾಗುವ ಜನ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಮಲಯಾಳಂನ ಚಿತ್ರ ’ಟ್ರಾನ್ಸ್’ ವಿಡಂಬನಾತ್ಮಕವಾಗಿ ಹೇಗೆ ಕಟ್ಟಿಕೊಟ್ಟಿದೆ ಎನ್ನುವುದನ್ನು ಮೊನ್ನೆಮೊನ್ನೆ ತಾನೆ ನೋಡಿದ್ದೇವೆ.

ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಒಂದು ವೆಬ್ ಸರಣಿ ಇದೆ, City Of Dreams. ಅದರಲ್ಲಿ ರಾಜಕೀಯ ದುರೀಣನೊಬ್ಬ ದೇವಮಾತೆಯೊಬ್ಬಳ ಸಾನಿಧ್ಯಕ್ಕೆ ಬಂದಾಗ ಮಾನಸಿಕ ಅಸ್ವಾಸ್ಥ್ಯವನ್ನು ಸಮಾಜ ನೋಡುವ ಬಗೆಯನ್ನು ಕುರಿತು ಒಂದು ಮಾತು ಹೇಳುತ್ತಾನೆ. ’ಹಿರಿಯ ರಾಜಕೀಯ ನಾಯಕನೊಬ್ಬ ಮಾನಸಿಕ ವೈದ್ಯರ ಬಳಿ ಸಮಾಲೋಚನೆಗಾಗಿ ಹೋದನೆಂದರೆ, ಆತ ಚುನಾವಣೆಗೆ ಅನರ್ಹನಾಗಿಬಿಡುತ್ತಾನೆ, ಅದೇ ಸಮಸ್ಯೆಗಳನ್ನಿಟ್ಟುಕೊಂಡು ಧಾರ್ಮಿಕ ನಾಯಕರ ಬಳಿ ಹೋದರೆ ಕೆಲವು ಹೆಚ್ಚುವರಿ ವೋಟುಗಳು ಸಿಗುತ್ತವೆ’. ಇದು ತಮಾಷೆಯ ವಿಷಯ ಅಲ್ಲ. ರಾಜಕೀಯ ನಾಯಕರ ಮಾತಂತಿರಲಿ, ಸಾಮಾನ್ಯ ಜನರ ಪಾಲಿಗೂ ಇದು ಇಂದಿಗೂ ಸತ್ಯವೇ. ಮಾನಸಿಕ ಸಮಸ್ಯೆಗಳಿಗೆ ಧರ್ಮದ ಹೊದಿಕೆ ಹೊದಿಸಿದಾಗ ಅವುಗಳ ನಿಭಾವಣೆ ಸರಳವಾಗಿ ಬಿಡುತ್ತವೆ. ಈ ಸರಣಿಯ ಮೂರನೆಯ ಭಾಗ ಆ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಅಲ್ಲಿ ಈ ಲಲಿತ್‌ನ ಟ್ರಾಮಾಟಿಕ್ ಬಾಲ್ಯ ಮತ್ತು ಹದಿಹರೆಯದ ದಿನಗಳ ಪ್ರಸ್ತಾಪ ಬರುತ್ತದೆ.

ಸಣ್ಣವಯಸ್ಸಿನಲ್ಲಿ ಒಂದು ಅಪಘಾತದಲ್ಲಿ ಈತನ ತಲೆಗೆ ಪೆಟ್ಟು ಬಿದ್ದಿರುತ್ತದೆ. ಆನಂತರ ಹದಿಹರೆಯದಲ್ಲಿ ಯಾವುದೋ ವ್ಯಾಜ್ಯದಲ್ಲಿ ಈತನನ್ನು ಗೋದಾಮೊಂದರಲ್ಲಿ ಕಟ್ಟಿ ಹಾಕಿ ಕೆಲವರು ಅದಕ್ಕೆ ಬೆಂಕಿ ಇಟ್ಟಿರುತ್ತಾರೆ. ಅದೃಷ್ಟವೆಂಬಂತೆ ಈತ ಬದುಕಿ ಉಳಿದರೂ ಆಗ ಅವನ ಮನಸ್ಸಿನ ಮೇಲಿನ ಆಘಾತ ಯಾವ ಮಟ್ಟದ್ದಾಗಿರುತ್ತದೆ ಎಂದರೆ ಈತ ದನಿ ಬಿದ್ದುಹೋಗಿರುತ್ತದೆ. ಹಲವಾರು ತಿಂಗಳುಗಳ ಆರೈಕೆಯ ನಂತರ ಇವನು ಚೇತರಿಸಿಕೊಳ್ಳುತ್ತಾನೆ. ನಿಧಾನವಾಗಿ ದನಿ ವಾಪಸ್ಸಾಗುತ್ತದೆ. ಆಗಿನಿಂದಲೇ ಈತ ಅಪ್ಪನ ’ವಾಹಕ’ವಾಗಿ ಪರಿವರ್ತಿತನಾಗಿರುತ್ತಾನೆ. ಆ ಡೈರಿಯ ಹಿನ್ನೆಲೆ ಓದಿಗೆ ಬಳಸಿಕೊಂಡಿರುವ ಧ್ವನಿಯೂ ಆ ಸನ್ನಿವೇಶಕ್ಕೆ ತಕ್ಕುದಾಗಿಯೇ ಇದೆ. ಈ ನಂತರವೇ ಮನೆಯಲ್ಲಿ ಆತನ ಸ್ಥಾನ ಪ್ರಾಮುಖ್ಯತೆಯನ್ನು ಗಳಿಸಿಕೊಳ್ಳುತ್ತಾ ಹೋಗುತ್ತದೆ. ಆದರೆ ಇಡೀ ಮನೆ ಅದನ್ನು ಒಪ್ಪಿಕೊಂಡಿದ್ದು ಹೇಗೆ. ಈತನನ್ನು ಉಳಿದು ಇನ್ನೂ ಹತ್ತು ಜನರಿರುವ ಆ ಮನೆಯಲ್ಲಿ ಯಾರೊಬ್ಬರೂ ಆತನನ್ನು ವಿರೋಧಿಸಲಿಲ್ಲವೆ? ಅದಕ್ಕಿಂತ ಆಶ್ಚರ್ಯಕಾರಿ ವಿಷಯವೆಂದರೆ ಇದನ್ನು ಆ ಹತ್ತೂ ಜನ ಇನ್ಯಾರೊಂದಿಗೂ ಚರ್ಚಿಸದೆಯೇ ಇರುವುದು. ಅವರ ಸಂಬಂಧಿಕರಲ್ಲಿ, ಸ್ನೇಹವಲಯದಲ್ಲಿ ಈ ಬಗ್ಗೆ ಒಂದೇ ಒಂದು ಸುಳಿವು ಕೂಡಾ ಇಲ್ಲ. ಸಮೂಹಸನ್ನಿ ಅದರಲ್ಲೂ ಮೂಢನಂಬಿಕೆಯ ಮೂಲದಿಂದ ಬಂದ ಸಮೂಹಸನ್ನಿ ಹೀಗೆ ಅವರೆಲ್ಲರ ಆಲೋಚನಾಶಕ್ತಿಯನ್ನೂ ಮಂಕುಗೊಳಿಸಿರಬಹುದೆ? ಏಕೆಂದರೆ ಜೂನ್ 30ರ ರಾತ್ರಿಯ ಆ ಸಮೂಹ ಸಾವಿನ ಹಿಂದೆ ಅಂತಹುದೇ ಒಂದು ಆಚರಣೆಯ ಉಲ್ಲೇಖ ಇರುತ್ತದೆ.

ಅದರ ಪ್ರಕಾರ ಮನೆಯವರೆಲ್ಲಾ ಒಂದೇ ಸಮಯದಲ್ಲಿ ಹಾಗೆ ಆಲದಮರದ ಬಿಳಲುಗಳ ಹಾಗೆ ಸಾಮೂಹಿಕವಾಗಿ ನೇಣು ಹಾಕಿಕೊಳ್ಳಬೇಕು, ಪಕ್ಕದಲ್ಲೇ ಪಾತ್ರೆಯೊಂದರಲ್ಲಿ ನೀರನ್ನು ಇಟ್ಟಿರಬೇಕು. ಸ್ವಲ್ಪ ಸಮಯದಲ್ಲೇ ಆ ನೀರಿನ ಬಣ್ಣ ಬದಲಾಗುತ್ತದೆ, ತೀರಿಕೊಂಡ ಅಪ್ಪನ ಆತ್ಮ ಬಂದು ಎಲ್ಲರನ್ನೂ ಕಾಪಾಡುತ್ತದೆ ಎಂದು ಬರೆದಿರುತ್ತದೆ. ಆದರೆ ಈ ಭೀಕರ ಕೃತ್ಯಕ್ಕೆ ಮನೆಯವರು ಒಪ್ಪಿದ್ದು ಹೇಗೆ? ಒಬ್ಬ ಮೊಮ್ಮಗಳಂತೂ ಎಂಬಿಎ ಮಾಡಿರುತ್ತಾಳೆ. ಮನೆಯ ಸೊಸೆಯರು, ಮೊಮ್ಮಕ್ಕಳು ಯಾರೂ ಇದನ್ನು ಪ್ರಶ್ನಿಸಲಿಲ್ಲವೆ? ಹಿಂದಿನ ರಾತ್ರಿ ಅವರ ಅಂಗಡಿಯ ಬಾಗಿಲನ್ನು ತೆರೆದ ಮೊಮ್ಮಗ ಅಲ್ಲಿಂದ ಸ್ಟೂಲೊಂದನ್ನು ತೆಗೆದುಕೊಂಡು ಹೋಗಿರುವುದನ್ನು ಅಕ್ಕಪಕ್ಕದ ಮನೆಯವರು ನೋಡಿರುತ್ತಾರೆ. ಆತನ ಕಾಲಕೆಳಗಿಟ್ಟು ನೇಣುಹಾಕಿ, ಆನಂತರ ಆ ಆಧಾರವನ್ನು ಪಕ್ಕಕ್ಕೆ ಸರಿಸಲು ಆ ಹುಡುಗನಿಂದಲೇ ಆ ಸ್ಟೂಲನ್ನು ತರಿಸಲಾಯಿತೆ? ಅವರ ಅಪ್ಪ ಅಮ್ಮ ಅದಕ್ಕೆ ಒಪ್ಪಿದ್ದಾದರೂ ಹೆಗೆ? ಪ್ರಶ್ನೆಗಳು, ಪ್ರಶ್ನೆಗಳು ಮತ್ತೂ ಪ್ರಶ್ನೆಗಳು. ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಾಗಿದ್ದ ಆ ಕಿರಿಮಗನ ಕೈಗೆ ಇಡೀ ಸಂಸಾರ ಹಾಗೆ ತಮ್ಮ ಬದುಕುಗಳ ಹಗ್ಗವನ್ನು ಕೊಟ್ಟಿದ್ದಾದರೂ ಹೇಗೆ? ಅವರೆಲ್ಲರಿಗೂ ಲಲಿತ್ ಕೈ ಕಟ್ಟಿ, ಕಣ್ಣು ಕಟ್ಟಿದ ನಂತರ ನಡೆದದ್ದಾದರೂ ಏನು? ಇದೊಂದು ಭೀಷಣವಾದ ಕೃತ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ, ಆದರೆ ಅವರೆಲ್ಲರೂ ಒಪ್ಪಿಕೊಂಡು ಅನುಸರಿಸಿದ್ದ ಕಾರಣಕ್ಕೆ ಅದು ಆತ್ಮಹತ್ಯೆಯಾಗುತ್ತದೋ ಅಥವಾ ಲಲಿತ್ ಪ್ರೇರೇಪಣೆಯ ಕಾರಣಕ್ಕೆ ಇದು ಜರುಗಿದ್ದರಿಂದ ಇದು ಹತ್ಯೆಯಾಗುತ್ತದೋ?

ಇದೊಂದು ಖುಷಿಗಾಗಿ, ಫೀಲ್ ಗುಡ್ ಅನುಭವಕ್ಕಾಗಿ ನೋಡುವ ಡಾಕ್ಯುಮೆಂಟರಿ ಖಂಡಿತ ಅಲ್ಲ. ಇದನ್ನು ನಿರ್ಮಿಸಿದವರ ಉದ್ದೇಶ ಸಹ ಅದಲ್ಲ. ಒಂದು ನಂಬಲಾರದ ಘಟನೆಯ ನಾನಾ ಮಗ್ಗುಲುಗಳನ್ನು ಜರಡಿ ಆಡಿಸುವ ಕಾರಣಕ್ಕೆ, ಮಾನಸಿಕ ಆರೋಗ್ಯದ ಕಡೆ ನಾವು ಕೊಡಬೇಕಾದ ಗಮನದ ಕಾರಣಕ್ಕೆ ಇದು ಮುಖ್ಯವಾಗುತ್ತದೆ. ದುರದೃಷ್ಟ ಘಟನೆಯನ್ನು ವರ್ಣಿಸದೆ, ಕಾರಣಗಳನ್ನು ಅನ್ವೇಶಿಸಿರುವುದು ಇದರ ವಿಶೇಷ. ಕೇವಲ ವಸ್ತುವಿನ ಕಾರಣಕ್ಕಲ್ಲದೆ, ನಿರ್ವಹಣೆಯ ಕಾರಣಕ್ಕೂ ನೋಡಬೇಕಾದ ಸರಣಿ ಇದು.

LEAVE A REPLY

Connect with

Please enter your comment!
Please enter your name here