ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಯಶಸ್ವೀ ಮಲಯಾಳಂ ಸಿನಿಮಾ ‘ಅಯ್ಯಪ್ಪನಮ್ ಕೊಶಿಯಮ್‌’ ತೆಲುಗು ಅವತರಣಿಕೆ ಇದು. ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ಧಾರೆ. ಇದೇ ವಾರ ಫೆಬ್ರವರಿ 25ರಂದು ಸಿನಿಮಾ ತೆರೆಕಾಣಲಿದೆ.

ಬಿಡುಗಡೆಗೆ ನಾಲ್ಕು ದಿನಗಳಿರುವಂತೆ ಪವನ್‌ ಕಲ್ಯಾಣ್‌ ಅಭಿನಯದ ‘ಭೀಮ್ಲಾ ನಾಯಕ್‌’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಪವನ್‌ ನಿರ್ವಹಿಸಿರುವ ಭೀಮ್ಲಾ ನಾಯಕ್‌ ಮತ್ತು ರಾಣಾ ದಗ್ಗುಬಾಟಿ ನಟಿಸಿರುವ ಡೇನಿಯಲ್‌ ಶೇಖರ್‌ ಪಾತ್ರಗಳ ಮಧ್ಯೆಯ ಈಗೋ ಸಿನಿಮಾದ ಕತೆಯ ಎಳೆ. ಪವನ್‌ ಕಲ್ಯಾಣ್‌ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದ್ದು, ಅವರ ಅಭಿಮಾನಿಗಳು ಟ್ರೈಲರ್‌ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಕೋವಿಡ್‌ ಹಿನ್ನೆಲೆಯಲ್ಲಿ ಥಿಯೇಟರ್‌ಗಳ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಕಳೆದ ವಾರ ತೆರವುಗೊಳಿಸಿದೆ. ಹಿರಿಯ ನಟ ಚಿರಂಜೀವಿ ಕಲಾವಿದರು ಹಾಗೂ ತಂತ್ರಜ್ಞರ ನಿಯೋಗದೊಂದಿಗೆ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಈ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಏಕಾಏಕಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ‘ಭೀಮ್ಲಾ ನಾಯಕ್‌’ ಥಿಯೇಟರ್‌ಗೆ ಬರುತ್ತಿದೆ.

‘ಭೀಮ್ಲಾ ನಾಯಕ್‌’ ಸಿನಿಮಾ ಬಿಡುಗಡೆಯನ್ನು ಏಕಾಏಕಿ ನಿಗದಿಗೊಳಿಸಿದ್ದರಿಂದ ಇತರೆ ಕೆಲವು ತೆಲುಗು ಸಿನಿಮಾಗಳಿಗೆ ತೊಂದರೆಯಾಗಿದೆ. ಆದರೆ ದೊಡ್ಡ ಸಿನಿಮಾ ಆದ್ದರಿಂದ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಯಾಗಿದೆ. ಫೆಬ್ರವರಿ 25ರಂದು ಅಜಿತ್‌ ಅಭಿನಯದ ‘ವಾಲಿಮೈ’ ತಮಿಳು ಸಿನಿಮಾ ಕೂಡ ತೆರೆಕಾಣುತ್ತಿದೆ. ಮಲಯಾಳಂ ಸೂಪರ್ ಹಿಟ್‌ ಸಿನಿಮಾ ‘ಅಯ್ಯಪ್ಪನಮ್ ಕೊಶಿಯಮ್‌’ ತೆಲುಗು ರೀಮೇಕ್‌ ‘ಭೀಮ್ಲಾ ನಾಯಕ್‌’. ಮೂಲ ಮಲಯಾಳಂ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್‌ ಮತ್ತು ಬಿಜು ಮೆನನ್ ನಟಿಸಿದ್ದರು. ಸಾಗರ್ ಕೆ. ಚಂದ್ರು ‘ಭೀಮ್ಲಾ ನಾಯಕ್‌’ ಸಿನಿಮಾ ನಿರ್ದೇಶಿಸಿದ್ದಾರೆ.

LEAVE A REPLY

Connect with

Please enter your comment!
Please enter your name here