ಸ್ಪಷ್ಟತೆ ಇಲ್ಲದ ನಿರೂಪಣೆ, ಫ್ಲಾಶ್‌ಬ್ಯಾಕ್‌ ಮೂಲಕ ಕಥೆ ಹೇಳುವ ವಿಧಾನ, ಅಪೂರ್ಣ ಎನಿಸುವಂತಹ ಕೆಲವು ದೃಶ್ಯಗಳಿಂದಾಗಿ, ಪ್ರೇಕ್ಷಕನಿಗೆ ಚಿತ್ರ ನೋಡಿದ ತೃಪ್ತಿ ಸಿಗುವುದಿಲ್ಲ. ಇನ್ನೂ ಏನೋ ಇರಬೇಕಿತ್ತಲ್ಲ ಎನಿಸುವ ಸಣ್ಣ ಅತೃಪ್ತಿ ಉಳಿಸಿಬಿಡುತ್ತದೆ ಚಿತ್ರ. ಕಥಾವಸ್ತು ಮತ್ತು ಫಹಾದ್ ಎಂಬ ಅದ್ಭುತ ಪ್ರತಿಭೆಯ ನಟನೆಗೋಸ್ಕರ ಚಿತ್ರವನ್ನು ಒಮ್ಮೆ ನೋಡಬಹುದು. ‘ಧೂಮಂ’ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

‘ಲೂಸಿಯಾ’, ‘ಯು ಟರ್ನ್‌’ ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಕಳೆದ ಹಲವು ವರ್ಷಗಳ ಹಿಂದೆಯೇ ಧೂಮಪಾನದ ಕುರಿತಾದ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಈಗ ‘ಧೂಮಂ’ ಚಿತ್ರ ಬಿಡುಗಡೆಯಾಗಿದೆ. ಹೆಸರಾಂತ ಹೊಂಬಾಳೆ ಪ್ರೊಡಕ್ಷನ್‌ ಹೌಸ್ ನಿರ್ಮಿಸಿರುವ, ಅದ್ಭುತ ಕಲಾವಿದರ ತಾರಾಗಣ ಹೊಂದಿರುವ, ಯಶಸ್ವಿ ಸಿನಿಮಾಗಳನ್ನು ಕೊಟ್ಟಿರುವ ಪವನ್‌ ಕುಮಾರ್ ನಿರ್ದೇಶನದ ಈ ‘ಧೂಮಂ’ ಬಗ್ಗೆ ಅಪಾರ ನಿರೀಕ್ಷೆ ಇದ್ದದ್ದು ಹೌದು.

ತಂಬಾಕು ಮತ್ತು ಧೂಮಪಾನ ಆರೋಗ್ಯಕ್ಕೆ ಮಾರಕ. ಇದು ‘ಧೂಮಂ’ ಚಿತ್ರದ ಮುಖ್ಯವಸ್ತು. ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗೆಗೆ ಸಮಾಜದಲ್ಲಿ ಜಾಗೃತಿ ಬಹಳ ಅತ್ಯಗತ್ಯ. ಪವನ್ ಕುಮಾರ್ ಅವರ ಮೊದಲನೇ ಮಲಯಾಳಂ ಚಿತ್ರವಾದ ‘ಧೂಮಂ’ ಚಿತ್ರದಲ್ಲಿ ಫಹಾದ್ ಫಾಜಿಲ್ ನಾಯಕ. ಇಬ್ಬರು ವಿಶೇಷವಾದ ಪ್ರತಿಭೆಗಳು ಸೇರಿ ಒಂದು ಪರಿಣಾಮಕಾರಿಯಾದ ಕಥಾವಸ್ತು ತೆಗೆದುಕೊಂಡು ಸಿನಿಮಾ ಮಾಡಲು ಹೊರಟಾಗ ಅಪಾರವಾದ ನಿರೀಕ್ಷೆ ಸಹಜ. ಸಿನಿಮಾ ನಿರೀಕ್ಷೆಯ ಮಟ್ಟ ತಲುಪಿದೆಯೇ ಎಂದು ನೋಡಲು ಹೊರಟರೆ ಸ್ವಲ್ಪ ನಿರಾಸೆ ಆಗುವೆದೆಂದೇ ಹೇಳಬಹುದು.

ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿ, ಕಿರುಚಿತ್ರ, ಸಾಕ್ಷ್ಯಚಿತ್ರ, ಜಾಹೀರಾತುಗಳು ಲೆಕ್ಕವಿಲ್ಲದಷ್ಟು ಬಂದಿವೆ, ಬರುತ್ತಲೇ ಇವೆ, ಬರುತ್ತಲೇ ಇರುತ್ತವೆ. ಒಂದು ಚಲನಚಿತ್ರ ಬಂದಿದೆ ಎಂದಾಗ ಅದರಿಂದ ಮತ್ತೇನೋ ಹೊಸ ಆಯಾಮವೊಂದನ್ನು ಪ್ರೇಕ್ಷಕ ನಿರೀಕ್ಷೆ ಮಾಡುತ್ತಾನೆ. ನಿರ್ದೇಶಕನ ಪಾತ್ರ ಇಲ್ಲೇ ಮಹತ್ವ ಪಡೆಯುವುದು. ಈಗಾಗಲೇ ಗೊತ್ತಿರುವ ವಿಚಾರಗಳನ್ನೇ ತನ್ನದೇ ವಿಶಿಷ್ಟ ಶೈಲಿಯಲ್ಲಿ ಆಸಕ್ತಿಕರವಾಗಿ ಕಥೆಯಲ್ಲಿ ಕಟ್ಟಿಕೊಟ್ಟಾಗ ಮಾತ್ರ ಚಿತ್ರ ವೀಕ್ಷಕರನ್ನು ತಲುಪುತ್ತದೆ. ಆದರೆ ಇಲ್ಲಿ ಕಥೆಯ ವಸ್ತು ಚೆನ್ನಾಗಿದ್ದರೂ ಸಿಗರೇಟಿನಿಂದ ಬರುವ ಹೊಗೆ ದಿಕ್ಕಿಲ್ಲದೇ ಎತ್ತೆತ್ತಲೋ ಸಾಗುವಂತೆ ಕಥೆ ಎತ್ತೆತ್ತಲೋ ಸಾಗುತ್ತಾ ದಿಕ್ಕು ತಪ್ಪುತ್ತದೆ.

ಇಲ್ಲಿ ಚಿತ್ರದ ನಾಯಕ ಅವಿನಾಶ್ ಮಾತಿನಲ್ಲೇ ಎಲ್ಲರನ್ನೂ ಮೋಡಿ ಮಾಡುವ ಮಾರ್ಕೆಟಿಂಗ್‌ ಕ್ಷೇತ್ರದ ಚಾಣಕ್ಷನಾಗಿರುತ್ತಾನೆ. ಹೆಸರಾಂತ ಸಿಗರೇಟ್ ಕಂಪನಿಯಲ್ಲಿ ಆತನಿಗೆ ಕೆಲಸ ಸಿಗುತ್ತದೆ. ನಷ್ಟದಲ್ಲಿರುವ ಆ ಕಂಪನಿಯ ಸಿಗರೇಟ್‌ಗಳನ್ನು ಜನರು ಹೆಚ್ಚು ಕೊಳ್ಳುವಂತೆ ಮಾಡುವುದೇ ನಾಯಕನ ಜವಾಬ್ದಾರಿ. ಅದನ್ನು ಅವನು ಯಶಸ್ವಿಯಾಗಿ ಪೂರೈಸಿ ಶಹಭಾಷ್‌ಗಿರಿ ಪಡೆಯುತ್ತಾನೆ. ಆದರೆ ಸಂದರ್ಭಗಳು ಎದುರಾಗಿ ಅವಿನಾಶ್‌ನ ಹೆಂಡತಿ ದಿಯಾ ಕಷ್ಟಕ್ಕೆ ಈಡಾಗುತ್ತಾಳೆ. ಅವಿನಾಶ್‌ ಮತ್ತು ದಿಯಾ ಯಾರದ್ದೋ ಒಳಸಂಚಿಗೆ ಸಿಲುಕಬೇಕಾಗುತ್ತದೆ. ಇದಕ್ಕೆಲ್ಲದಕ್ಕೂ ಮೂಲ ಅವನ ಜೀವನದ ಆದಾಯಕ್ಕೆ ಮೂಲವಾದ ಸಿಗರೇಟ್ ಆಗಿರುತ್ತದೆ ಎಂಬುದೇ ವಿಸ್ಮಯ ಮತ್ತು ವಿಪರ್ಯಾಸ ಕೂಡ. ಹಾಗಾದರೆ, ಇಷ್ಟೆಲ್ಲ ತೊಂದರೆ ಯಾರಿಂದ ಎದುರಾಯ್ತು? ಅವರ ಉದ್ದೇಶ ಏನು? ಮೊದಲಾದ ಪ್ರಶ್ನೆಗಳಿಗೆ ಒಂದು ಥ್ರಿಲ್ಲಿಂಗ್‌ ಪರಿಣಾಮ ಕೊಡುತ್ತಾ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪವನ್ ಕುಮಾರ್‌.

ಈ ಹಿಂದಿನ ‘ಯು ಟರ್ನ್‌’ ಸಿನಿಮಾ, ಸಂಚಾರಿ ನಿಯಮಗಳ ಬಗ್ಗೆ ಒಂದು ಗಂಭೀರವಾದ ಸಂದೇಶ ನೀಡಿತ್ತು. ಕಮರ್ಷಿಯಲ್ ಆಂಗಲ್‌ನಿಂದಲೂ ಮತ್ತು ಮನರಂಜನೆಯುಕ್ತವಾಗಿಯೂ ಸಂದೇಶ ನೀಡಬಹುದು ಎಂಬುದನ್ನು ನಿರ್ದೇಶಕ ಸಾಬೀತು ಮಾಡಿದ್ದರು. ‘ಧೂಮಂ’ ಚಿತ್ರದಲ್ಲೂ ಅದೇ ಮಾರ್ಗವನ್ನು ಅವರು ಅನುಸರಿಸಲು ಹೋಗಿದ್ದಾರೆ. ಸಿಗರೇಟ್‌ ಮಾರ್ಕೆಟಿಂಗ್ ಮಾಡಲು ಸಂಸ್ಥೆಗಳು ಮಾಡುವ ತಂತ್ರಗಾರಿಕೆ, ಸಿಗರೇಟ್ ಸೇವನೆ ಜನರ ಮೇಲೆ ಬೀರುವ ದುಷ್ಪರಿಣಾಮ, ಮುಂದಿನ ಪೀಳಿಗೆಗಳ ಮೇಲೆ ಸಿಗರೇಟ್‌ನಿಂದ ಆಗುವ ತೊಂದರೆಗಳು ಇವೆಲ್ಲದರ ಬಗ್ಗೆಯೂ ಒಂದು ಸಣ್ಣ ಸಂದೇಶವನ್ನು ಇಟ್ಟುಕೊಂಡು ‘ಧೂಮಂ’ ಸಿನಿಮಾ ಮಾತನಾಡುತ್ತದೆ. ಆದರೆ ಇದೆಲ್ಲವನ್ನೂ ಒಂದು ಥ್ರಿಲ್ಲರ್ ಮಾದರಿಯ ನಿರೂಪಣೆಯಲ್ಲಿ ಹೇಳಹೊರಟಿರುವ ವಿಧಾನ ಫಲಪ್ರದವಾಗಿಲ್ಲ. ಇಡೀ ಸಿನಿಮಾ ಮುಗಿದ ಮೇಲೆ ‘ಉಸ್ಸಪ್ಪ’ ಎನ್ನುವ ಅನುಭವ ಪ್ರೇಕ್ಷಕನದ್ದಾಗಿರುತ್ತದೆ. ಸಿಗರೇಟಿನ ಮೇಲೆ ಅತಿಯಾಗಿ ಕೇಂದ್ರೀಕೃತವಾಗಿರುವ ಈ ಚಿತ್ರದಲ್ಲಿ ಕಥೆ ಮತ್ತು ಸಂದೇಶ ಮಸುಕಾಗಿಬಿಟ್ಟಿದೆ.

ಸ್ಪಷ್ಟತೆ ಇಲ್ಲದ ನಿರೂಪಣೆ, ಫ್ಲಾಶ್‌ಬ್ಯಾಕ್‌ ಮೂಲಕ ಕಥೆ ಹೇಳುವ ವಿಧಾನ, ಅಪೂರ್ಣ ಎನಿಸುವಂತಹ ಕೆಲವು ದೃಶ್ಯಗಳಿಂದಾಗಿ, ಪ್ರೇಕ್ಷಕನಿಗೆ ಚಿತ್ರ ನೋಡಿದ ತೃಪ್ತಿ ಸಿಗುವುದಿಲ್ಲ. ಇನ್ನೂ ಏನೋ ಇರಬೇಕಿತ್ತಲ್ಲ ಎನಿಸುವ ಸಣ್ಣ ಅತೃಪ್ತಿ ಉಳಿಸಿಬಿಡುತ್ತದೆ ಚಿತ್ರ. ಕೊಲೆ, ಅಪಹರಣ, ಸಾಹಸ ದೃಶ್ಯಗಳು ಎಲ್ಲವನ್ನು ಮಿಶ್ರಣ ಮಾಡಿ ಒಂದು ಹಂತದಲ್ಲಿ ಚಿಟ್ಟು ಹಿಡಿದಂತಾಗುತ್ತದೆ. ಮೊದಲಾರ್ಧ ಮುಗಿಯವವರೆಗೂ ಪ್ರೇಕ್ಷಕನಿಗೆ ತೆರೆಮೇಲೆ ಏನಾಗುತ್ತಿದೆ ಎಂದೇ ತಿಳಿಯದೆ ಗೊಂದಲವಾಗುತ್ತದೆ. ದ್ವಿತಿಯಾರ್ಧದಲ್ಲೂ ಆಸಕ್ತಿದಾಯಕವಾಗಿ ಕಥೆ ಮುಂದುವರೆಯುವುದಿಲ್ಲ.

ಇದೆಲ್ಲದರ ನಡುವೆಯೂ ಪ್ರತಿಭಾವಂತ ಫಹಾದ್ ಫಾಸಿಲ್‌ ‘ಧೂಮಂ’ ಚಿತ್ರದಲ್ಲಿ ಅವಿನಾಶ್ ಪಾತ್ರವನ್ನು ಅಕ್ಷರಶಃ ಜೀವಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಅಪರ್ಣಾ ಬಾಲಮುರಳಿ ಪ್ರತಿಭೆಗೆ ಇನ್ನೂ ಹೆಚ್ಚಿನ ಆಳ ಇರುವ ಪಾತ್ರ ಸಿಗಬೇಕಿತ್ತು. ಆದರೂ ಅವರ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಿಗರೇಟ್‌ ಕಂಪನಿಯ ಮಾಲೀಕನಾಗಿ ರೋಶನ್ ಮ್ಯಾಥ್ಯೂ ಅವರ ಅಭಿನಯ ಅತ್ಯುತ್ತಮವಾಗಿದೆ. ಇದು ಮಲಯಾಳಂ ಸಿನಿಮಾ ಆಗಿದ್ದರೂ, ಕಥೆ ನಡೆಯುವುದು ಬೆಂಗಳೂರಿನಲ್ಲಿ. ಕನ್ನಡದ ನಟರಾದ ಅಚ್ಯುತ್ ಕುಮಾರ್, ಕಿರಣ್, ಧರ್ಮಣ್ಣ ಕಡೂರು ಅವರ ಅಭಿನಯ ಕೂಡ ಈ ಚಿತ್ರಕ್ಕೆ ಇದೆ. ಪೊಲೀಸ್ ಅಧಿಕಾರಿಗಳ ಪಾತ್ರದಲ್ಲಿ ಅಚ್ಯುತ್ ಕುಮಾರ್ ಮತ್ತು ಕಿರಣ್ ನಟಿಸಿದ್ದರೆ, ಕೊನೆಯಲ್ಲಿ ಕಥೆಗೆ ಒಂದು ಕುತೂಹಲಕರ ತಿರುವು ಕೊಡುವ ಪಾತ್ರದಲ್ಲಿ ನಟ ಧರ್ಮಣ್ಣ ಕಡೂರು ಕಾಣಿಸಿಕೊಂಡಿಸಿದ್ದಾರೆ.

ಅದೇನೇ ಇರಲಿ ನಿರ್ದೇಶಕ ಪವನ್‌ ಕುಮಾರ್ ಸಿನಿಮಾಗಳು ನಿರ್ಮಾಣದ ಗುಣಮಟ್ಟದ ವಿಚಾರದಲ್ಲಿ ಯಾವತ್ತೂ ಒಂದು ಹೆಜ್ಜೆ ಮುಂದೆಯೇ. ಅದು ‘ಧೂಮಂ’ ಚಿತ್ರದಲ್ಲಿ ಕೂಡ ಕಾಣಬಹುದು . ಪ್ರೀತಾ ಜಯರಾಮನ್ ಛಾಯಾಗ್ರಹಣ ಈ ಚಿತ್ರದ ಅತ್ಯುತ್ತಮ ವಿಭಾಗ. ಪೂರ್ಣಚಂದ್ರ ತೇಜಸ್ವಿ ನೀಡಿರುವ ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಬಹಳ ಪೂರಕವಾಗಿ ಪರಿಣಾಮಕಾರಿಯಾಗಿದೆ. ಅತ್ಯುತ್ತಮ ಮತ್ತು ಉತ್ತಮ ಗುಣಮಟ್ಟದ ಚಿತ್ರನಿರ್ಮಾಣಕ್ಕೆ ಹೆಸರುವಾಸಿಯಾದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರದಲ್ಲೂ ಮೇಕಿಂಗ್ ವಿಭಾಗದಲ್ಲಿ ರಾಜಿ ಮಾಡಿಕೊಂಡಿಲ್ಲ ಎನ್ನುವುದು ತೆರೆಯ ಮೇಲೆ ಕಾಣುತ್ತದೆ. ಒಟ್ಟಾರೆ ಹೇಳಬೇಕು ಎಂದರೆ ಚಿತ್ರದ ಕಥಾವಸ್ತು ಮತ್ತು ಫಹಾದ್ ಎಂಬ ಅದ್ಭುತ ಪ್ರತಿಭೆಯ ನಟನೆಗೋಸ್ಕರ ಚಿತ್ರವನ್ನು ಒಮ್ಮೆ ಧಾರಾಳವಾಗಿ ನೋಡಬಹುದು. ‘ಧೂಮಂ’ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here