ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಡಾಕ್ಯುಮೆಂಟರಿ ‘ಅವರ್ ಫಾದರ್’ ವಿಶೇಷ ರೀತಿಯ ವಂಚನೆ ಪ್ರಕರಣವನ್ನು ತೆರೆದಿಡುತ್ತದೆ. ಸಂತ್ರಸ್ತರನ್ನು ಮಾನಸಿಕವಾಗಿ ದಾರುಣ ಸ್ಥಿತಿಗೆ ದೂಡಿದ ಸತ್ಯ ಘಟನೆಯದು. ನಂಬಿಕೆ, ವಿಶ್ವಾಸದ ಪರಿಧಿಯನ್ನು ವೈದ್ಯರು ಮೀರಿದಾಗ ನಡೆಯುವ ಅನಾಹುತಗಳ ಅನಾವರಣ ಇಲ್ಲಿದೆ.
ಜಕೋಬಾ ಬಲ್ಲಾರ್ಡ್ ಅಮೆರಿಕ ನಿವಾಸಿ. ಕೆಂಚು ಕೂದಲು, ನೀಲಿ ಕಂಗಳ ಅವಳಿಗೆ ತಾನೇಕೆ ತನ್ನ ಕುಟುಂಬದವರಂತೆ ಕಾಣುವುದಿಲ್ಲ ಎಂಬುದು ಬುದ್ಧಿ ಬಂದಾಗಿನಿಂದಲೂ ಇದ್ದ ಪ್ರಶ್ನೆ. ಅವಳ ಅಪ್ಪ ಅಮ್ಮನಿಗೆ ಕಪ್ಪು ಕೂದಲು. ಕುಟುಂಬದಲ್ಲಿ ಯಾರಿಗೂ ಕೆಂಚು ಕೂದಲಿಲ್ಲ. ಹಾಗಾಗಿ ತಾನು ದತ್ತು ಪುತ್ರಿಯೋ ಎಂಬ ಪ್ರಶ್ನೆಯನ್ನು ಆಗಾಗ ಅಮ್ಮನಲ್ಲಿ ಕೇಳುತ್ತಿದ್ದಳು. ಅವಳಿಗೆ ಹತ್ತು ವರ್ಷ ಪ್ರಾಯವಾದಾಗ ಕೊನೆಗೂ ಅಮ್ಮ ಸತ್ಯ ಹೇಳಿದಳು. ಜಕೋಬಾಳ ತಂದೆಗೆ ವೀರ್ಯಸಂಬಂಧಿ ಕೆಲವು ತೊಂದರೆಗಳಿದ್ದ ಕಾರಣ ತಾಯಿ ಡೆಬ್ಬಿ ಪೈರ್ಸ್‌ಗೆ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಹಾಗಾಗಿ ಕೃತಕ ಗರ್ಭಧಾರಣೆ ಮೂಲಕ ಡೆಬ್ಬಿ ತನಗೆ ಜನ್ಮವಿತ್ತಳು ಎಂಬ ಸತ್ಯ ಜಕೋಬಾಗೆ ತಿಳಿಯಿತು. ತಂದೆ ತಾಯಿಯ ಪ್ರೀತಿ-ಅಕ್ಕರೆಯಲ್ಲಿ ಬೆಳೆದ ಜಕೋಬಾ ಆ ಸತ್ಯವನ್ನು ಸಹಜವಾಗಿ ಸ್ವೀಕರಿಸಿದಳು. ಆದರೆ ತನ್ನ ಹುಟ್ಟಿಗೆ ಕಾರಣವಾದ ಅದೇ ದಾನಿಯ ವೀರ್ಯದಿಂದ ಜನ್ಮ ತಾಳಿದ ತನ್ನ ಜೈವಿಕ ಸಂಬಂಧಿಗಳು ಬೇರೆ ಯಾರು ಇರಬಹುದು ಎಂಬ ಕುತೂಹಲ ಅವಳನ್ನು ಕಾಡುತ್ತಿತ್ತು.
ವೀರ್ಯದಾನದ ಸಂದರ್ಭ ದಾನಿಯ ಭೇಟಿಗೆ ಅವಕಾಶ ಇರುವುದಿಲ್ಲ. ಎಂಭತ್ತರ ದಶಕದಲ್ಲಿ ತಾಯಿಯಾಗುವ ಕನಸು ಹೊತ್ತು ಡೆಬ್ಬಿ ಇಂಡಿಯಾನದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ಹೋದಾಗ ವೀರ್ಯದಾನದ ಪ್ರಕ್ರಿಯೆಯನ್ನು ಆಕೆಗೆ ವಿವರಿಸಲಾಗಿತ್ತು. ದಾನಿಗಳಾಗಿ ಬರುವ ವೈದ್ಯಕೀಯ ವಿದ್ಯಾರ್ಥಿಗಳ ವೀರ್ಯವನ್ನು ಕೃತಕ ಗರ್ಭಧಾರಣೆಗೆ ಬಳಸಲಾಗುತ್ತದೆ ಎಂಬ ಮಾಹಿತಿಯನ್ನು ಡಾ. ಡೊನಾಲ್ಡ್ ಕ್ಲೈನ್ ನೀಡಿದ್ದ. ದಾನಿಯ ವೀರ್ಯವನ್ನು ಸಾಮಾನ್ಯವಾಗಿ ಮೂವರಿಗೆ ಬಳಕೆ ಮಾಡುತ್ತೇವೆ ಎಂದೂ ಹೇಳಿದ್ದ. ಈ ವಿಚಾರವನ್ನೂ ಡೆಬ್ಬಿ ತನ್ನ ಮಗಳ ಜತೆ ಹಂಚಿಕೊಂಡಿದ್ದಳು. ಹಾಗಾಗಿ ಜಕೋಬಾಗೆ ಆ ಇತರೆ ಇಬ್ಬರು ಜೈವಿಕ ಸಂಬಂಧಿಯನ್ನು ಹುಡುಕುವ ಕುತೂಹಲ. ಆದರೆ ಅದನ್ನು ತಿಳಿಯುವ ಮಾರ್ಗಗಳಿರಲಿಲ್ಲ. ಆಸ್ಪತ್ರೆಗೆ ಫೋನಾಯಿಸಿ ಕೇಳಿದಾಗ ಆ ವರದಿಗಳನ್ನು ನಾಶ ಪಡಿಸಲಾಗಿದೆ ಎಂಬ ಉತ್ತರ ಸಿಕ್ಕಿ ಅಲ್ಲಿಗೇ ಸುಮ್ಮನಾದಳು.
ಹೀಗಿದ್ದಾಗ ವಿಜ್ಞಾನ ವಲಯದಲ್ಲಿ ಒಂದು ಮಹತ್ತರ ಬೆಳವಣಿಗೆ ನಡೆಯಿತು. ಅದು ಗೃಹಮಟ್ಟದ ಡಿಎನ್‌ಎ ಪರೀಕ್ಷೆ. ಕೊರೋನಾ ಪರೀಕ್ಷೆ ಮಾಡಲು ಬಳಸಿದಷ್ಟೇ ಸರಳವಾದ ಕಿಟ್ ಮಾರುಕಟ್ಟೆಗೆ ಬಂತು. ಹತ್ತಿಯ ಕಡ್ಡಿಯನ್ನು ಬಾಯಿಗಿಟ್ಟು ಆ ಎಂಜಲ ಮಾದರಿಯನ್ನು ಪರೀಕ್ಷಾ ಕೇಂದ್ರಕ್ಕೆ ಕಳಿಸಿದರೆ ವಂಶಾವಳಿ ಪರೀಕ್ಷಿಸಿ ವರದಿ ನೀಡುವ ಸರಳ ವಿಧಾನವದು. ಆ ಸೇವೆ ನೀಡುವ 23 ಆ್ಯಂಡ್ ಮಿ ಎಂಬ ಆ ಕಂಪನಿ ಫೇಸ್‌ಬುಕ್‌ನಂಥ ಒಂದು ಜಾಲತಾಣವನ್ನೂ ಮಾಡಿಕೊಂಡಿದೆ. ಆ ಮುಖೇನ ತನ್ನದೇ ವಂಶಾವಳಿ ಹೊಂದಿದ ಇತರರ ಜತೆ ಸಂಪರ್ಕ ಸಾಧಿಸಲು ಅವಕಾಶವಿದೆ. ಜಕೋಬಾ ಜೀವಾವಧಿಯ ಅಚ್ಚರಿಯ ಜತೆ ಎದುರು ಬದುರಾದದ್ದು ಆ ವೇಳೆಗೆ. ಏಕೆಂದರೆ ನಿನ್ನದೇ ವಂಶಾವಳಿ ಹೊಂದಿದೆ ಇತರೆ ಎಂಟು ಮಂದಿ ಇದ್ದಾರೆ ಎಂದು ಆ ಜಾಲತಾಣ ಹೇಳುತ್ತಿತ್ತು.
ಸರಿ, ಎಂಟು ಮಂದಿಯ ಜನನಕ್ಕೆ ಕಾರಣವಾದ ಆ ತಂದೆ ಯಾರು ಎಂದು ತಿಳಿಯಲು ಅಷ್ಟೂ ಮಂದಿ ಒಂದಾದರು. ಡಿಎನ್‌ಎ ಪರೀಕ್ಷೆ ಜನಪ್ರಿಯಗೊಂಡಂತೆಲ್ಲ ಆ ಎಂಟರ ಸಂಖ್ಯೆ ಬೆಳೆಯುತ್ತಾ ಸಾಗಿದಾಗ ಎಲ್ಲೋ ಏನೋ ಎಡವಟ್ಟಾಗಿದೆ ಎಂಬುದು ಆ ಎಂಟೂ ಮಂದಿಯ ಅನುಮಾನ. ಆ ಅನುಮಾನದ ಹಿಂದೆ ಬಿದ್ದಾಗ ತಿಳಿದ ಸತ್ಯ ಡಾ. ಡೊನಾಲ್ಡ್ ಕ್ಲೈನ್ ಹಾಗೂ ಆತನ ವಿಲಕ್ಷಣ ಮನಸ್ಥಿತಿ.
ವಾಸ್ತವದಲ್ಲಿ ಆ ವೈದ್ಯ ತನ್ನ ಆಸ್ಪತ್ರೆಗೆ ಬಂದ ಎಲ್ಲಾ ಮಹಿಳೆಯರ ಕೃತಕ ಗರ್ಭಧಾರಣೆಗೂ ತನ್ನದೇ ವೀರ್ಯ ಬಳಕೆ ಮಾಡುತ್ತಿದ್ದ. ಜಕೋಬಾಳ ಹುಟ್ಟಿಗೆ ದಾನಿಯ ವೀರ್ಯ ಬಳಕೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಇತರೆ ಹಲವು ಮಹಿಳೆಯರಿಗೆ ಅವರ ಗಂಡನ ವೀರ್ಯದ ಮೂಲಕವೇ ಕೃತಕ ಗರ್ಭಧಾರಣೆ ಮಾಡುತ್ತಿದ್ದೇನೆ ಎಂದು ನಂಬಿಸಿ ಆತ ತನ್ನ ವೀರ್ಯ ಬಳಕೆ ಮಾಡಿದ್ದ. ಇಂತಿಪ್ಪ ಡೊನಾಲ್ಡ್ ಕ್ಲೈನ್ ಭಾರಿ ದೈವ ಭಕ್ತ, ಚರ್ಚ್ ವ್ಯಾಪ್ತಿಯಲ್ಲಿ ಆತನದ್ದು ದೊಡ್ಡ ಹೆಸರು. ಸಾಧ್ಯವಾದಷ್ಟೂ ಹೆಚ್ಚು ಮಂದಿಗೆ ಜನ್ಮ ನೀಡುವುದು ದೈವಿಕ ಆಜ್ಞೆಯ ಪಾಲನೆ ಎಂದು ನಂಬುವ ಕ್ವಿವರ್‌ಫುಲ್ ಎಂಬ ಕ್ರೈಸ್ತ ಸಿದ್ಧಾಂತದ ಪರಿಪಾಲಕ ಆತ. ಹಾಗಾಗಿ ತಾನು ಮಾಡುತ್ತಿರುವುದು ದೇವರ ಆಜ್ಞೆಯ ಪ್ರತಿಪಾಲನೆ ಎಂದು ಆತ ನಂಬಿದ್ದ. ಆ ಮೂಲಕ ತನ್ನಲ್ಲಿಗೆ ಬಂದವರ ಮೇಲೆಲ್ಲ ತನ್ನದೇ ವೀರ್ಯ ಪ್ರಯೋಗ ಮಾಡುವ ವಿಲಕ್ಷಣ ಮನಸ್ಥಿತಿಯನ್ನು ಕ್ಲೈನ್ ಬೆಳೆಸಿಕೊಂಡಿದ್ದ.
ಆತನ ವಂಶಾವಳಿ ಹೊತ್ತವರ ಸಂಖ್ಯೆ ಏಳೆಂಟಾಗುವಾಗ ನಮಗೂ ಇದೊಂದು ಲಘು ವಿಚಾರದಂತೆ ಭಾಸವಾಗುತ್ತದೆ. ಆದರೆ ಡಾಕ್ಯುಮೆಂಟರಿಯಲ್ಲಿ ಅವರ ಸಂಖ್ಯೆ ಹತ್ತು, ಹದಿನೈದು, ಇಪ್ಪತ್ತು, ನಲುವತ್ತು ಎಂದು ಬೆಳೆಯುತ್ತಾ ಹೋದ ಹಾಗೆ ಅದರ ಅಪಾಯಗಳ ಅರಿವು ನಿಧಾನಕ್ಕೆ ನಮ್ಮೊಳಗೆ ಇಳಿಯುತ್ತದೆ. ಆ ಅಷ್ಟೂ ಮಂದಿಯ ಮಕ್ಕಳೂ ಯಾರೊಂದಿಗೂ ಮೊದಲ ನೋಟಕ್ಕೇ ಪ್ರೀತಿಗೆ ಬೀಳುವಂತಿಲ್ಲ. ಪ್ರೀತಿಸುವ ಮೊದಲು ಅವರ ಅಜ್ಜಿ ಡಾ. ಕ್ಲೈನ್ ಬಳಿ ಹೋಗಿದ್ದರೋ ಎಂದು ತಿಳಿಯಬೇಕಾದ ವಿಚಿತ್ರ ಪರಿಸ್ಥಿತಿ ಡೊನಾಲ್ಡ್ ಕ್ಲೈನ್ ತಂದೊಡ್ಡಿದ್ದಾನೆ. ಸಾವಿರ ಚದರ ಕಿಲೋಮೀಟರ್ ಪ್ರದೇಶದಲ್ಲಿ ಚಚ್ಚೌಕವಾಗಿ ಹಬ್ಬಿದ ಇಂಡಿಯಾನ ಪ್ರಾಂತ್ಯದಲ್ಲಿ ಡೊನಾಲ್ಡ್ ಕ್ಲೈನ್ ಒಂದು ಕಾಲದ ಹೆಸರಾಂತ ವೈದ್ಯ. ಹಾಗಾಗಿ ಅವನ ಬಳಿ ಚಿಕಿತ್ಸೆಗೆ ಬಂದ ಮಹಿಳೆಯರು ಸಹಸ್ರಾರು. ಈ ವಿಚಿತ್ರ ಸತ್ಯ ಅರಿತ ಆ ಅಷ್ಟೂ ಮಂದಿ ನಿರಪರಾಧಿ ಸಂತ್ರಸ್ತರ ಮಾನಸಿಕ ಸ್ಥಿತಿ ಏನಾಗಿರಬೇಡ?
‘ಅವರ್ ಫಾದರ್’ ಡಾಕ್ಯುಮೆಂಟರಿ ನಿರ್ಮಾಣದ ವೇಳೆ ಸಿಕ್ಕ ಡೊನಾಲ್ಡ್ ಕ್ಲೈನ್ ವಂಶವಾಹಿಗಳ ಸಂಖ್ಯೆ ಬರೋಬ್ಬರಿ 94! ಈ ಸಂಬಂಧ ಸಂತ್ರಸ್ತರು ಹೋರಾಟ ಆರಂಭಿಸುತ್ತಾರೆ. ವೈದ್ಯನ ಅವಾಂತರಗಳ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡುತ್ತವೆ. ಆತನ ವಿರುದ್ಧ ಕೋರ್ಟಿನಲ್ಲಿ ದಾವೆಯೂ ಹೂಡಲಾಗುತ್ತದೆ. ಆದರೆ ಕ್ಲೈನ್ ಮಾಡಿರುವ ಅಪರಾಧಕ್ಕೆ ನೇರವಾಗಿ ಹೊಂದುವ ಯಾವುದೇ ಕಾನೂನು ಅಮೆರಿಕದಲ್ಲೂ ಇಲ್ಲ. ಕೃತಕ ಗರ್ಭಧಾರಣೆ ವೇಳೆಗೆ ಸಂತ್ರಸ್ತರ ಸಮ್ಮತಿ ಪಡೆಯದೆ 94 ಮಂದಿಗೆ ಅಪ್ಪನಾದರೂ ಕಾನೂನು ಪ್ರಕಾರ ಅದು ಅತ್ಯಾಚಾರವಲ್ಲ. ಹಾಗಾಗಿ ಅವನಿಗೆ ಇಂಡಿಯಾನಾದ ನ್ಯಾಯಾಲಯ 500 ಡಾಲರ್‌ಗಳ ಜುಲ್ಮಾನೆ ವಿಧಿಸಿ ಶಿಕ್ಷೆಯಿಂದ ಮುಕ್ತಗೊಳಿಸುತ್ತದೆ.
ಇದೊಂದು ಸಾಕ್ಷ್ಯಚಿತ್ರವೇ ಹೊರತು ಸಿನಿಮಾವಲ್ಲವಾದ ಕಾರಣ ಕ್ಲೈಮ್ಯಾಕ್ಸು ಕಟುಸತ್ಯದಲ್ಲಿ ಕೊನೆಯಾಗುತ್ತದೆ. ಅಮೆರಿಕದಲ್ಲಿ ಇಂಥ 44 ಮಂದಿ ವೈದ್ಯರು ಸಮ್ಮತಿಯ ವಿನಃ ತಮ್ಮದೇ ವೀರ್ಯ ಬಳಸಿ ಗರ್ಭಧಾರಣೆ ಮಾಡಿಸಿದ್ದಾರೆ ಎಂಬ ಹೌಹಾರುವ ಅಂಶ ಕೊನೆಯಲ್ಲಿ ಪ್ರಕಟವಾಗುತ್ತದೆ. ವೈದ್ಯಕೀಯ ಸಹಾಯದ ಮೂಲಕ ಗರ್ಭಧಾರಣೆಯ ವಿಚಾರದಲ್ಲಿ ಅಮೆರಿಕ 70-80ರ ದಶಕದಲ್ಲಿ ಇದ್ದ ಪರಿಸ್ಥಿತಿಯಲ್ಲಿ ಭಾರತ ಈಚಿನ ಹತ್ತು-ಹದಿನೈದು ವರ್ಷದಿಂದಿದೆ. ಹಾಗಾಗಿ ಕ್ಲೈನ್‌ನಂಥ ವೈದ್ಯರಿಂದ ಇಲ್ಲಿ ಏನೇನು ಅಪಸವ್ಯಗಳು ನಡೆದಿರಬಹುದು ಎಂಬ ಪ್ರಶ್ನೆಯನ್ನು ಡಾಕ್ಯುಮೆಂಟರಿ ಮುಗಿದಾಗ ನಮ್ಮಲ್ಲಿ ಮೂಡುತ್ತದೆ.