ಬಹುಭಾಷಾ ಗಾಯಕ ಪಿ.ಜಯಚಂದ್ರನ್ ಅವರಿಗೆ ಮಲಯಾಳಂ ಸಿನಿಮಾದ ಪ್ರತಿಷ್ಠಿತ ‘ಜೆ.ಸಿ.ಡೇನಿಯಲ್ ಪ್ರಶಸ್ತಿ’ ಘೋಷಣೆಯಾಗಿದೆ. ‘ಭಾವ ಗಾಯಕನ್’ ಎಂದೇ ಕರೆಸಿಕೊಳ್ಳುವ ಜಯಚಂದ್ರನ್ ಐದು ದಶಕಗಳ ತಮ್ಮ ವೃತ್ತಿ ಬದುಕಿನಲ್ಲಿ 10,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಗಾಯಕ ಪಿ.ಜಯಚಂದ್ರನ್ ಅವರಿಗೆ ಮಲಯಾಳಂ ಸಿನಿಮಾದ ಪ್ರತಿಷ್ಠಿತ ಗೌರವ ‘ಜೆ.ಸಿ.ಡೇನಿಯಲ್ ಪ್ರಶಸ್ತಿ’ ಘೋಷಣೆಯಾಗಿದೆ. ಮಲಯಾಳಂ ಚಿತ್ರರಂಗದ ಪಿತಾಮಹ ಎಂದೇ ಪರಿಗಣಿಸಲ್ಪಡುವ ಜೆ.ಸಿ.ಡೇನಿಯಲ್ ಅವರ ಹೆಸರಿನಲ್ಲಿ ಕೇರಳ ಚಲನಚಿತ್ರ ಅಕಾಡೆಮಿ ಕೊಡಮಾಡುವ ಪುರಸ್ಕಾರವಿದು. 2020ರ ಸಾಲಿಗೆ ಗಾಯಕ ಜಯಚಂದ್ರನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಡಿಸೆಂಬರ್ 23ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 1992ರಿಂದ ಈ ಪ್ರಶಸ್ತಿ ಕೊಡಲಾಗುತ್ತಿದೆ. ಜಯಚಂದ್ರನ್ ಈ ಪ್ರಶಸ್ತಿ ಪಡೆಯುತ್ತಿರುವ 28ನೇ ಸಾಧಕರು. ಪ್ರಶಸ್ತಿ ಐದು ಲಕ್ಷ ರೂಪಾಯಿ ನಗದು ಪುರಸ್ಕಾರವನ್ನೊಳಗೊಂಡಿದೆ.
ಜಯಚಂದ್ರನ್ ಹಾಡಿದ ಮೊದಲ ಹಾಡು ‘ಉರುಮುಲ್ಲಪೂಮಾಲಯುಮಾಯಿ’. ‘ಕುಂಜಾಲಿ ಮರಕ್ಕಾರ್’ (1965) ಮಲಯಾಳಂ ಚಿತ್ರಕ್ಕಾಗಿ ಚಿಂದಂಬರನಾಥ್ ಸಂಗೀತ ಸಂಯೋಜಿಸಿದ ಹಾಡಿದು. ಎರಡು ತಲೆಮಾರಿನ ನಾಯಕನಟರಿಗೆ ಹಾಡಿರುವ ಜಯಚಂದ್ರನ್ ರೊಮ್ಯಾಂಟಿಕ್ ಹಾಡುಗಳ ಮೂಲಕ ಮಲಯಾಳಂ ಸಿನಿಮಾರಂಗದಲ್ಲಿ ‘ಭಾವ ಗಾಯಕನ್’ ಎಂದೇ ಕರೆಸಿಕೊಂಡರು. ಪ್ರಮುಖವಾಗಿ ಮಲಯಾಳಂ ಸೇರಿದಂತೆ ಕನ್ನಡ, ತಮಿಳು, ತೆಲುಗಿನ ಹತ್ತು ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಅವರು ದನಿಯಾಗಿದ್ದಾರೆ. ಉತ್ತಮ ಗಾಯನಕ್ಕಾಗಿ ಆರು ಬಾರಿ (ಐದು ಮಲಯಾಳಂ, ಒಂದು ತಮಿಳು) ಶ್ರೇಷ್ಠ ಗಾಯಕ ರಾಜ್ಯಪ್ರಶಸ್ತಿ ಪಡೆದಿದ್ದು, ‘ಶ್ರೀ ನಾರಾಯಣ ಗುರು’ (1986) ಚಿತ್ರದ ಉತ್ತಮ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.