ಹಿರಿಯ ನಟ ಕಮಲ ಹಾಸನ್‌ ‘ಕಿಂಗ್‌ಸ್ಟನ್‌’ ತಮಿಳು ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. G V ಪ್ರಕಾಶ್‌ ನಿರ್ಮಿಸಿ, ನಟಿಸುತ್ತಿರುವ ಈ ಚಿತ್ರವನ್ನು ಕಮಲ್‌ ಪ್ರಕಾಶ್ ನಿರ್ದೇಶಿಸುತ್ತಿದ್ದಾರೆ. ದಿವ್ಯಾ ಭಾರತಿ ಚಿತ್ರದ ನಾಯಕಿ.

G V ಪ್ರಕಾಶ್ ಅಭಿನಯದ 25ನೇ ತಮಿಳು ಚಿತ್ರ ‘ಕಿಂಗ್‌ಸ್ಟನ್‌’ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಹಿರಿಯ ನಟ ಕಮಲ ಹಾಸನ್‌ ಅವರು ಫಸ್ಟ್‌ಲುಕ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. G V ಪ್ರಕಾಶ್‌ ಕುಮಾರ್‌ ಅವರೇ ಚಿತ್ರ ನಿರ್ಮಿಸುತ್ತಿದ್ದು, ಕಮಲ್‌ ಪ್ರಕಾಶ್‌ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇದು ಭಾರತದ ಮೊದಲ ಸಮುದ್ರ ಯಾನದ ಸಾಹಸ ದೃಶ್ಯಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಫಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ಉಬ್ಬರವಿಳಿತದ ನಡುವೆ ನೌಕಾಯಾನ ಮಾಡುತ್ತಿರುವ ದೋಣಿಯೊಂದರಲ್ಲಿ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದಾನೆ. ಒಂದು ದೊಡ್ಡ ಅಲೆಯು ಆ ದೋಣಿಯನ್ನು ಮುಳುಗಿಸಲು ಪ್ರಯತ್ನಿಸುತ್ತಿರುವಾಗ, ಸಮುದ್ರದಲ್ಲಿ ತೇಲುತ್ತಿರುವ ಮೃತದೇಹಗಳ ಗುಂಪನ್ನು ಸಹ ನೋಡಬಹುದು. ಚಿತ್ರ ಸಮುದ್ರಕ್ಕೆ ಸಂಬಂಧಿಸಿದ ಅಂಶಗಳ ಸುತ್ತ ಸುತ್ತಲಿದೆ ಎನ್ನುತ್ತಾರೆ ಪ್ರಕಾಶ್‌. ಚಿತ್ರತಂಡ ಇದನ್ನು ಭಾರತದ ಮೊದಲ ಸಮುದ್ರಯಾನದ ಚಿತ್ರ ಎಂದು ಘೋಷಿಸಿದೆ.

ಪೋಸ್ಟರ್‌ ಅನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ G V ಪ್ರಕಾಶ್‌, ‘ತಮಿಳು ಚಿತ್ರರಂಗದ ಕನಸಿನ ಧ್ವನಿ ಈ ಚಿತ್ರ. ಇದು ಸಿನಿಮಾದ ಬಗ್ಗೆ ಹೆಚ್ಚು ಉತ್ಸಾಹ ಮತ್ತು ಪ್ರೀತಿಯನ್ನು ಹೊಂದಿರುವ ಯುವಕರಿಂದ ತುಂಬಿರುವ ತಂಡದಿಂದ ರಚನೆಯಾಗುತ್ತಿದ್ದು, ನನ್ನ ನಿರ್ಮಾಣದ ಮೊದಲ ಚಿತ್ರವೂ ಹೌದು. ಕಮಲ್‌ ಹಾಸನ್‌ ಸರ್‌ಗೆ ಧನ್ಯವಾದಗಳು’ ಎಂದಿದ್ದಾರೆ. ಚಿತ್ರದಲ್ಲಿ ದಿವ್ಯಾ ಭಾರತಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆಂಟನಿ, ಚೇತನ್, ಕುಮಾರವೇಲ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ನಾಯಕನಾಗಿ ನಟಿಸಿರುವ G V ಪ್ರಕಾಶ್‌ ಅವರೇ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.

LEAVE A REPLY

Connect with

Please enter your comment!
Please enter your name here