ಶತಮಾನಗಳ ಜಾತಿ ಕ್ರೌರ್ಯವನ್ನು ನಮ್ಮ ಮುಂದಿಟ್ಟು ‘ನಿಮ್ಮ ಹೊಣೆಗಾರಿಕೆಯೇನು’ ಎಂದು ಪ್ರಶ್ನಿಸುತ್ತಾರೆ ಸೆಲ್ವರಾಜ್. ‘ಪರಿಯೇರಂ’ನಲ್ಲಿಯೂ ಪ್ರಶ್ನಿಸಿದ್ದರು, ‘ಕರ್ಣನ್’ನಲ್ಲಿಯೂ ಪ್ರಶ್ನಿಸಿದ್ದರು. ಈಗಲೂ ಸಹ.

ಸಾಮಾಜಿಕವಾಗಿ, ರಾಜಕೀಯವಾಗಿ ಜಾತಿ ವಿರೋಧಿ ಚಳುವಳಿಯು ಸಂಪೂರ್ಣ ನಿಷ್ಕ್ರಿಯಗೊಂಡ ಇಂದಿನ ಸಂದರ್ಭದಲ್ಲಿ ಸಿನಿಮಾ ಮಾಧ್ಯಮದ ಮೂಲಕ ಅಪಾರ ಬದ್ಧತೆ ಮತ್ತು ಕಾಳಜಿಯಿಂದ ಅದನ್ನು ಮರು ಕಟ್ಟುತ್ತಿರುವ ಮಾರಿ ಸೆಲ್ವರಾಜ್ ಅವರ ಮೂರನೆಯ ಕೃತಿ ‘ಮಾಮನ್ನನ್’ ಪ್ರಸ್ತುತ ಕಾಲದ ಮಹತ್ವದ ಸಿನಿಮಾ.
ಯಥಾಸ್ಥಿತಿವಾದವನ್ನು ಸಮಗ್ರವಾಗಿ ಬದಲಿಸುವುದಿರಲಿ ಅದನ್ನು ಆಚೀಚೆ ಅಲುಗಾಡಿಸಲು ಸಾಧ್ಯವಿಲ್ಲದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸೆಲ್ವರಾಜ್ ಮತ್ತೊಮ್ಮೆ ದಿಟ್ಟವಾಗಿ ‘ಆನು ಒಲಿದಂತೆ ಹಾಡುವೆ’ ಎಂದು ಹೇಳಿದ್ದಾರೆ.
ಜಾತಿ ರೋಗದ ಕೊಚ್ಚೆಯಂತಿರುವ ಭಾರತದಂತಹ ದೇಶದಲ್ಲಿ ಅದನ್ನು ಟೀಕಿಸಿ ಸಿನಿಮಾ ಮಾಡುವುದು ತುಂಬಾ ಕಷ್ಟ. ಆದರೆ ಇಂತಹ ಒತ್ತಡವನ್ನು ಮೈಮೇಲೆ ಎಳೆದುಕೊಂಡಿರುವ ಸೆಲ್ವರಾಜ್ ‘ಮಾಮನ್ನನ್’ ಮೂಲಕ ಮತ್ತೊಮ್ಮೆ ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ಸೂಜಿಮೊನೆ ಚುಚ್ಚಿದ್ದಾರೆ.

ಜಾತಿ ವೈಭವೀಕರಣದ ‘ತೇವರ್ ಮಗನ್’ನ ಪ್ರೊಟಗಾನಿಸ್ಟ್ ಶಕ್ತಿವೇಲುವಿಗೆ ಸೆಡ್ಡು ಹೊಡೆದಂತೆ 30 ವರ್ಷಗಳ ನಂತರ ತಳ ಸಮುದಾಯದ ‘ಮಾಮನ್ನನ್’ ಎದ್ದು ಬಂದಿದ್ದಾನೆ. ಪೆರಿಯ ತೇವರ್ ಮತ್ತು ಅವನ ಮಗ ಶಕ್ತಿವೇಲು ತೇವರ್‌ನ ಜಾತಿ ಶ್ರೇಷ್ಠತೆಯ ಅಟ್ಟಹಾಸದಲ್ಲಿ ನಲುಗಿದ್ದ, ದನಿಯಿಲ್ಲದ ಇಸಾಕ್ಕಿ ಮೂವತ್ತು ವರ್ಷಗಳ ನಂತರ ಮಾಗಿದ ‘ಮಾಮನ್ನನ್’ ಆಗಿ ಮರಳಿ ಬಂದಿದ್ದಾನೆ. ‘ತೇವರ್ ಮಗನ್’ನಲ್ಲಿ ಶಕ್ತಿವೇಲು ಮತ್ತು ಮಾಸ ತೇವರ್ ಪರಸ್ಪರ ಬದ್ಧ ವೈರಿಗಳಾಗಿದ್ದರೂ ಸಹ ಅದು ಜಾತಿ ಶ್ರೇಷ್ಠತೆಯ ಹಿನ್ನೆಲೆಯಲ್ಲಿಯೇ ಹೊರತು ಮತ್ಯಾವುದೇ ಉದ್ದೇಶವಿರಲಿಲ್ಲ.

ಆದರೆ ‘ಮಾಮನ್ನನ್’ನಲ್ಲಿ ಜಾತಿ ಶ್ರೇಷ್ಠತೆಯನ್ನು ಮೆರೆಸುವ ರತ್ನವೇಲುವಿನ ಅಣ್ಣನಾಗಿ ಮಾಸ ತೇವರ್ ಮರು ರೂಪ ಪಡೆದಿದ್ದಾನೆ. ಇದಿಷ್ಟನ್ನು ಮೊದಲಾರ್ಧದಲ್ಲಿ ಸಮರ್ಥವಾಗಿ ನಿರೂಪಿಸಿದ ಸೆಲ್ವರಾಜ್ ದ್ವಿತೀಯಾರ್ಧದಲ್ಲಿ ಇದರಿಂದ ಹೊರಬಂದು ಬೇರೆ ದಿಕ್ಕಿಗೆ ತಿರುಗಿರುವುದು ಅಚ್ಚರಿಯಾಗುತ್ತದೆ. ಅಪರಿಚಿತವಾದ ಪಕ್ಷ ರಾಜಕಾರಣದ ಕಡೆಗೆ ಈ ಹೊರಳುವಿಕೆ ಸಿನಿಮಾದ ದೌರ್ಬಲ್ಯವಾಗಿದೆ. ಇಡೀ ಸಿನಿಮಾದಲ್ಲಿ ಕುರ್ಚಿಯ ಮೇಲೆ ಬಲಿಷ್ಠ ಜಾತಿಗಳೊಂದಿಗೆ ಸಮಾನವಾಗಿ ಕೂಡುವುದರ ಮೂಲಕ ದಲಿತ assertion ಕಥನವನ್ನು ಮತ್ತೆ ಮತ್ತೆ ನಿರೂಪಿಸುತ್ತಿರುವ ಸೆಲ್ವರಾಜ್ ಅದಕ್ಕೆ ಈಸ್ತಟಿಕ್ ಪ್ರಜ್ಞೆಯ ಚೌಕಟ್ಟನ್ನು ಕಟ್ಟಲು ಶ್ರಮಿಸಿದ್ದಾರೆ.

ಸಿನಿಮಾದ ಅತ್ಯುತ್ತಮ ದೃಶ್ಯವೊಂದರಲ್ಲಿ ರತ್ನವೇಲು ‘ನೀನು (ಮಾಮನ್ನನ್) ಕೂಡುವಂತಿಲ್ಲ ಎಂಬುದು ನನ್ನ ಆದೇಶ, ನಿನ್ನ ಮಗ (ಅದಿವೀರ) ಕೂಡಬೇಕು ಎನ್ನುವುದು ನನ್ನ ಮೇಲ್ಗಾರಿಕೆ’ ಎಂದು ಹೇಳುತ್ತಾನೆ. ಇದು ಮುಂದಿನ ಘಟನೆಗಳಿಗೆ ಕಾರಣವಾಗಿ ಕ್ಲೈಮ್ಯಾಕ್ಸ್ ನಲ್ಲಿ ‘ಮಾಮನ್ನನ್’ ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಯಲ್ಲಿ ಕೂಡುವುದು ದಲಿತ assertionನ ಮತ್ತೊಂದು ಮೈಲಿಗಲ್ಲು. ಜಾತಿ ಶ್ರೇಷ್ಠತೆಯ ಕಾರಣಕ್ಕೆ ದಲಿತರ ಮೇಲೆ ದೌರ್ಜನ್ಯ, ಹಲ್ಲೆ ನಡೆಸುವ ವಾಸ್ತವ ಘಟನೆಗಳನ್ನು ಅದರ ಎಲ್ಲಾ ಕ್ರೌರ್ಯ, ಹಿಂಸೆಯೊಂದಿಗೆ ತೆರೆಯ ಮೇಲೆ ಮರು ಕಟ್ಟುವುದರಲ್ಲಿ ಸೆಲ್ವರಾಜ್‌ಗೆ ಸೆಲ್ವರಾಜೇ ಸಾಟಿ. ಇಲ್ಲಿ ‘ಸೆಲ್ವರಾಜ್ ತನ’ ಎನ್ನುವ ಛಾಪು ಮೂಡಿಬಿಟ್ಟಿದೆ. ಅನುಮಾನವೇ ಇಲ್ಲ.

‘ಮಾಮನ್ನನ್’ನಲ್ಲಿ ಬಾವಿಯಲ್ಲಿ ಈಜಾಡುತ್ತಿರುವ ದಲಿತ ಮಕ್ಕಳ ಮೇಲೆ ಬಲಿಷ್ಠ ಜಾತಿಯವರು ಕಲ್ಲು ಹೊಡೆದು ಕೊಲೆ ಮಾಡುವ ದೃಶ್ಯ ಮತ್ತು ನಂತರ ಬೆಳವಣಿಗೆಗಳ ಹತ್ತು ನಿಮಿಷಗಳನ್ನು ಒಂದೇ ದಾರದಲ್ಲಿ ಸೂತ್ರೀಕರಿಸಿ ಶತಮಾನಗಳ ಜಾತಿ ಕ್ರೌರ್ಯವನ್ನು ನಮ್ಮ ಮುಂದಿಟ್ಟು ‘ನಿಮ್ಮ ಹೊಣೆಗಾರಿಕೆಯೇನು’ ಎಂದು ಪ್ರಶ್ನಿಸುತ್ತಾರೆ ಸೆಲ್ವರಾಜ್. ಪರಿಯೇರಂನಲ್ಲಿಯೂ ಪ್ರಶ್ನಿಸಿದ್ದರು, ಕರ್ಣನ್ ನಲ್ಲಿಯೂ ಪ್ರಶ್ನಿಸಿದ್ದರು. ಈಗಲೂ ಸಹ. ನಮ್ಮಲ್ಲಿ ಉತ್ತರವಿದೆಯೇ?

ಇಷ್ಟೆಲ್ಲ ಸವಾಲುಗಳನ್ನು ಕೈಗೆತ್ತಿಕೊಂಡ ಸೆಲ್ವರಾಜ್ ಅದ್ಭುತವಾದ intervel break ಕೊಟ್ಟು (ಇದು ಮಾರಿಯವರ ಟ್ರಂಪ್ ಕಾರ್ಡ್) ದ್ವಿತಿಯಾರ್ಧದಲ್ಲಿ ತಮಗೆ ಅಪರಿಚಿತವಾದ ಪಕ್ಷ ರಾಜಕಾರಣಕ್ಕೆ ಹೊರಳಿಕೊಳ್ಳುವದರ ರಿಸ್ಕ್‌ನ ಫಲವಾಗಿ ಇಡೀ ಸಿನಿಮಾದ ಆಶಯಕ್ಕೆ ಭಂಗ ಬಂದಿದೆ. ಈ ಭಾಗದ ಚಿತ್ರಕತೆ ಇಡೀ ಸಿನಿಮಾದ ದುರ್ಬಲ ಕೊಂಡಿ. ದ್ರಾವಿಡ ಚಳವಳಿಯ ಜಾತಿ ವಿರೋಧಿ ಚಳುವಳಿ ಮತ್ತು ಪ್ರಸ್ತುತ ಸಂದರ್ಭದ ದಲಿತ assertive ಚಳುವಳಿಯ ನಡುವೆ ಭಿನ್ನತೆಗಳಿವೆ. ಎರಡನೆಯದು ಮೊದಲನೆಯದರ ಮಿತಿಗಳನ್ನು ಹೇಳುತ್ತಿದೆ. ಸಂಕೀರ್ಣವಾದ ಈ ವಿಚಾರವನ್ನು ಪಕ್ಷ ರಾಜಕಾರಣದ ಮೂಲಕ ಹೇಳಲು ಹೋಗಿ ಚಿತ್ರಕತೆಯನ್ನು ದುರ್ಬಲಗೊಳಿಸಿದ್ದಾರೆ. ಇದು ಸೆಲ್ವರಾಜ್ ಅವರಿಗೆ ಗೊತ್ತಿತ್ತು. ಆದರೂ ಯಾಕೆ ಹೀಗಾಯಿತು?

ಮೊದಲಾರ್ಧದಲ್ಲಿ ‘ಆನು ಬಿಜ್ಜಳನಿಗೆ ಅಂಜುವುನೇ’ ಎಂದು ತೊಡೆ ತಟ್ಟಿ ದ್ವಿತೀಯಾರ್ಧದಲ್ಲಿ ಬಿಜ್ಜಳನ ಪಕ್ಷ ರಾಜಕಾರಣದ ಒಳಸುಳಿಯನ್ನು ಕಥನವಾಗಿಸುವುದು ಪ್ರಶ್ನೆಯಾಗಿ ಉಳಿದುಕೊಳ್ಳುತ್ತದೆ. ಇದೆಲ್ಲದರಾಚೆಗೆ ‘ಮಾಮನ್ನನ್’ ಮಹತ್ವದ ಸಿನಿಮಾ. ಹೌದು ಜಾತಿ ವಿರೋಧಿ ಚಳುವಳಿಯ ಮುಂದುವರಿದ ಕಥನ. Mari selvaraj done it again.

Previous articleTHE DEMON WAR BEGINS | ಸುದೀಪ್‌ ನೂತನ ಸಿನಿಮಾ ಕ್ಯಾರಕ್ಟರ್‌ ಟೀಸರ್‌
Next articleಶಿವರಾಜಕುಮಾರ್‌ ಬರ್ತ್‌ಡೇಗೆ ‘Big Daddy’ ವೀಡಿಯೊ | ಶ್ರೀನಿ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here