ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಹಿಂದಿ ಚಿತ್ರಕ್ಕೆ ಪ್ರಧಾನಮಂತ್ರಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಚಿತ್ರದ ಮೂಲಕ ವಿಜ್ಞಾನಿಗಳು ಮತ್ತು ವಿಜ್ಞಾನಕ್ಕೆ ಪ್ರಾಮುಖ್ಯತೆ ಮತ್ತು ಗೌರವ ನೀಡಿದ್ದಕ್ಕೆ ನಾನು ಆ ಸಿನಿಮಾದ ನಿರ್ಮಾಪಕರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ’ ಎಂದಿದ್ದಾರೆ ಮೋದಿ.
ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಹಿಂದಿ ಸಿನಿಮಾ ಕುರಿತು ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ಮೋದಿಯವರು ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದ್ದು, ಸಭೆ ಉದ್ದೇಶಿಸಿ ಮಾತನಾಡಿದರು. ಭಾಷಣದ ವೇಳೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಚಿತ್ರವನ್ನು ಪ್ರಸ್ತಾಪಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
”ದಿ ವ್ಯಾಕ್ಸಿನ್ ವಾರ್’ ಚಿತ್ರ ತೆರೆಕಂಡಿದೆ ಎಂಬುದರ ಬಗ್ಗೆ ನಾನು ಕೇಳಿದ್ದೇನೆ, ನಮ್ಮ ದೇಶದ ವಿಜ್ಞಾನಿಗಳು ಭಾರತದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಹಗಲಿರುಳು ಶ್ರಮಿಸಿದ್ದಾರೆ. ಆ ಎಲ್ಲಾ ವಿಷಯಗಳನ್ನು ಆ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದ ಮೂಲಕ ವಿಜ್ಞಾನಿಗಳು ಮತ್ತು ವಿಜ್ಞಾನಕ್ಕೆ ಪ್ರಾಮುಖ್ಯತೆ ಮತ್ತು ಗೌರವ ನೀಡಿದ್ದಕ್ಕೆ ನಾನು ಆ ಸಿನಿಮಾದ ನಿರ್ಮಾಪಕರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ’ ಎಂದಿದ್ದಾರೆ ಮೋದಿ. ಈ ವೈದ್ಯಕೀಯ ಥ್ರಿಲ್ಲರ್ ಸಿನಿಮಾವನ್ನು ಅಭಿಷೇಕ್ ಅಗರ್‌ವಾಲ್ ಮತ್ತು ಪಲ್ಲವಿ ಜೋಶಿ ನಿರ್ಮಿಸಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಚಿತ್ರದಲ್ಲಿ ಅನುಪಮ್ ಖೇರ್, ನಾನಾ ಪಾಟೇಕರ್, ಪಲ್ಲವಿ ಜೋಶಿ, ರೈಮಾ ಸೇನ್, ಗಿರಿಜಾ ಓಕ್, ನಿವೇದಿತಾ ಭಟ್ಟಾಚಾರ್ಯ, ಸಪ್ತಮಿ ಗೌಡ (ʼಕಾಂತಾರʼ ಖ್ಯಾತಿ) ಮತ್ತು ಮೋಹನ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.