ಅತಿಯಾದ ವಿಎಫ್ಎಕ್ಸ್ ಇಲ್ಲದಿರುವುದು ಚಿತ್ರಕ್ಕೆ ಹೆಚ್ಚಿನ ತೂಕ ಮತ್ತು ಘನತೆ ಕೊಟ್ಟಿದೆ. ಒಟ್ಟಿನಲ್ಲಿ, ಇಂತಹ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಯಾವುದನ್ನೂ ಅತಿಯಾಗಿ ಮಾಡದೇ, ತಂತ್ರಜ್ಞಾನದ ಬದಲು ಕತೆಯ ಮೇಲೆ ಹೆಚ್ಚು ಭರವಸೆ ಇಟ್ಟಿರುವುದು ಮಣಿರತ್ನಂ ವಿಶೇಷತೆ.

2,210 ಪುಟಗಳಷ್ಟು ಬೃಹತ್ ಆದ ಒಂದು ಕ್ಲಾಸಿಕ್ ಕಾದಂಬರಿ.. ಒಬ್ಬ ಸ್ಟಾರ್ ನಿರ್ದೇಶಕ….ಮತ್ತೊಬ್ಬ ವಿಶ್ವ ದರ್ಜೆಯ ಸಂಗೀತ ನಿರ್ದೇಶಕ…. ಹಲವಾರು ಪ್ರತಿಭಾವಂತ ಮತ್ತು ಜನಪ್ರಿಯ ನಟ-ನಟಿಯರ ದೊಡ್ಡ ತಾರಾಗಣ – ಇವೆಲ್ಲಾ ಒಂದೇ ಕಡೆ ಸೇರಿದಾಗ ಒಂದು ಅಪರೂಪದ ಕಲಾಕೃತಿ ಸೃಷ್ಚಿಯಾಗಿಯೇ ಆಗುತ್ತದೆ ಅನ್ನುವುದು ಚಿತ್ರಪ್ರೇಮಿಗಳ ಸಹಜ ನಿರೀಕ್ಷೆ. ಒಂದು ಸಿನಿಮಾದ ಬಗ್ಗೆ ಇಂತಹ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಸಲು ಏನು ಬೇಕು ಅದೆಲ್ಲವನ್ನೂ ಹೊಂದಿರುವ ತಮಿಳು ಚಿತ್ರ ಕಳೆದ ವಾರ ಬಿಡುಗಡೆಯಾಗಿರುವ – ಪೊನ್ನಿಯಿನ್ ಸೆಲ್ವನ್.

ಸುಮಾರು 75 ವರ್ಷದ ಹಿಂದೆ ತಮಿಳಿನ ಕಲ್ಕಿ ಪತ್ರಿಕೆಯಲ್ಲಿ ಮೂರು ವರ್ಷಗಳ ಕಾಲ ಧಾರಾವಾಹಿಯಾಗಿ ಪ್ರಕಟವಾಗಿ ಭಾರೀ ಜನಪ್ರಿಯತೆ ಗಳಿಸಿದ್ದ ಕಲ್ಕಿ ಕೃಷ್ಣಮೂರ್ತಿಯವರ ಕೃತಿ ಈ ಪೊನ್ನಿಯಿನ್ ಸೆಲ್ವನ್. ನಂತರ 5 ಭಾಗಗಳಲ್ಲಿ ಇದು ಕಾದಂಬರಿಯಾಗಿಯೂ ಬಿಡುಗಡೆಯಾಗಿತ್ತು. ಬಹಳಷ್ಚು ಭಾಷೆಗಳಿಗೆ ಅನುವಾದಗೊಂಡು ಮತ್ತಷ್ಟು ಓದುಗರನ್ನು ಸೆಳೆದಿತ್ತು. ಈಗಲೂ ಈ ಕಾದಂಬರಿಯನ್ನು ತಮಿಳಿನಲ್ಲಿ ಬಂದಿರುವ ಅತ್ಯುತ್ತಮ ಸಾಹಿತ್ಯ ಕೃತಿಗಳಲ್ಲಿ ಒಂದು ಎಂದು ಭಾವಿಸಲಾಗುತ್ತದೆ. ಅಷ್ಚು ಜನಪ್ರಿಯತೆ ಮತ್ತು ನಿಷ್ಟ ಓದುಗ ಅಭಿಮಾನಿಗಳನ್ನು ಹೊಂದಿರುವ ಈ ಕಾದಂಬರಿಯನ್ನು ಸಿನಿಮಾ ಮಾಡಬೇಕು ಎನ್ನುವ ಪ್ರಯತ್ನ ಕೂಡ ಕಾದಂಬರಿಯಷ್ಟೇ ಹಳೆಯದು. ಎಂಜಿಆರ್ ಈ ಕಾದಂಬರಿಯ ಸಿನಿಮಾ ಹಕ್ಕನ್ನು 1958ರಲ್ಲೇ ಪಡೆದುಕೊಂಡಿದ್ದರೂ ಕೂಡ, ಅವರ ಆಸೆ ಕೈಗೂಡಿರಲಿಲ್ಲ. ನಂತರದಲ್ಲಿ ಹಲವಾರು ನಿರ್ದೇಶಕರು ಇದನ್ನು ತೆರೆಗೆ ತರುವ ಯತ್ನ ಮಾಡಿದ್ದರು. ಮಣಿರತ್ನಂ ಕೂಡ ಕೆಲ ದಶಕಗಳ ಪ್ರಯತ್ನದ ಬಳಿಕ ಕೊನೆಗೂ ಪೊನ್ನಿಯಿನ್ ಸೆಲ್ವನ್ ಅನ್ನು ಚಿತ್ರವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

10ನೇ ಶತಮಾನದಲ್ಲಿ ನಡೆಯುವ ಚೋಳ ಸಂಸ್ಥಾನದ ಕತೆಯನ್ನು ಆಧರಿಸಿದ ಚಿತ್ರ ‘ಪೊನ್ನಿಯನ್ ಸೆಲ್ವಂ’. ಚೋಳರ ರಾಜ ಸುಂದರ ಚೋಳ(ಪ್ರಕಾಶ್ ರೈ) ಹಾಸಿಗೆ ಹಿಡಿದಿರುತ್ತಾನೆ. ದೊಡ್ಡ ಮಗ ಅದಿತ ಕರಿಕಾಲನ್ (ವಿಕ್ರಂ) ಮತ್ತು ಸಣ್ಣ ಮಗ ಅರುಳ್ಮೊಳಿ ವರ್ಮನ್(ಜಯರಾಂ ರವಿ) ಸಾಮ್ರಾಜ್ಯ ವಿಸ್ತರಣೆ ಮಾಡುತ್ತಾ ಪಾಂಡ್ಯರ ಆಳ್ವಿಕೆಯನ್ನು ಬಹುತೇಕ ಮುಗಿಸಿಬಿಟ್ಟಿರುತ್ತಾರೆ. ಈ ಅರುಳ್ಮೊಳಿ ವರ್ಮನ್ ಅಡ್ಡ ಹೆಸರೇ ಪೊನ್ನಿಯಿನ್ ಸೆಲ್ವನ್. ಅಂದ್ರೆ ಪೊನ್ನಿಯ ಮಗ. ಕನ್ನಡದಲ್ಲಿ ಹೇಳಬೇಕೆಂದರೆ ಕಾವೇರಿಯ ಕುವರ.

ಯುದ್ಧದಲ್ಲಿ ಪಾಂಡ್ಯರ ರಾಜ ವೀರ ಪಾಂಡ್ಯನ್‌ನನ್ನು ಕರಿಕಾಲ ವಧಿಸಿರುತ್ತಾನೆ. ಹೀಗಾಗಿ, ಒಂದೆಡೆ ಅಳಿದುಳಿದ ಪಾಂಡ್ಯರು ಪ್ರತೀಕಾರಕ್ಕಾಗಿ ಕಾಯುತ್ತಿದ್ದರೆ, ಮತ್ತೊಂದು ಕಡೆ ಚೋಳರ ಅರಮನೆಯೊಳಗೇ ವಿದ್ರೋಹದ ಬೆಂಕಿ ಏಳುತ್ತಿರುತ್ತದೆ. ಸುಂದರ ಚೋಳನ ದಾಯಾದಿಗೆ ಪಟ್ಟ ಕಟ್ಟಬೇಕೆಂದು, ಅರಮನೆಯೊಳಗೇ ಚೋಳರ ಹಲವು ಪ್ರಮುಖ ಮುಖಂಡರು ಸೇರಿ ಷಡ್ಯಂತ್ರ ರೂಪಿಸುತ್ತಿರುತ್ತಾರೆ. ಇದೆಲ್ಲದರ ರೂವಾರಿ ಪಳುವತ್ತರಯ್ಯರ್ (ಶರತ್ ಕುಮಾರ್). ಆತನ ಸಣ್ಣ ವಯಸ್ಸಿನ ಹೆಂಡತಿ ನಂದಿನಿ (ಐಶ್ವರ್ಯ ರೈ) ಕರಿಕಾಳನ್ ನ ಮಾಜಿ ಪ್ರೇಯಸಿ ಕೂಡ. ಆದರೆ, ಹಲವು ಕಾರಣಗಳಿಂದ ನಂದಿನಿಯ ಹೃದಯಲ್ಲಿರೋದು ಚೋಳ ಸಾಮ್ರಾಜ್ಯದ ವಿರುದ್ಧ ಸೇಡಿನ ಬೆಂಕಿ. ಸುಂದರ ಚೋಳನ ಮಗಳು ಕುಂದವಾಯಿ (ತ್ರಿಷಾ) ಈ ಪಿತೂರಿಗಳನ್ನೆಲ್ಲಾ ಸೋಲಿಸಲು ಯತ್ನಿಸುವ ರಾಜಕೀಯ ಚತುರೆ.

ಇಷ್ಟೆಲ್ಲಾ ಪಾತ್ರಗಳನ್ನು, ಸನ್ನಿವೇಶಗಳನ್ನು, ಸ್ಥಳಗಳನ್ನು ಜೋಡಿಸುವುದು ಕರಿಕಾಲನ ಗೆಳೆಯ ವಂದಿಯದೇವನ್(ಕಾರ್ತಿ). ಕರಿಕಾಳನ ಸಂದೇಶ ಹಿಡಿದು ಕಂಚಿಯಿಂದ ಶ್ರೀಲಂಕದವರೆಗೆ ಪ್ರಯಾಣಿಸುವ ವಂದಿಯದೇವನ್ ಮೂಲಕ ಕತೆ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಮಣಿರತ್ನ ಇಷ್ಚು ದೊಡ್ಡ ಕ್ಯಾನ್ವಾಸಿನ, ಐತಿಹಾಸಿಕ ಸಿನಿಮಾ ಮಾಡುತ್ತಿರುವುದು ಇದೇ ಮೊದಲು. ಆದರೆ, ಈಗಾಗಲೇ ಬಂದಿರುವ ಇಂತಹದೇ ಕಥಾನಕ ಹೊಂದಿರುವ ಅದ್ದೂರಿ ಸಿನಿಮಾಗಳಂತೆ ತಮ್ಮ ಸಿನಿಮಾವೂ ಇರಬೇಕು ಎಂಬ ಒತ್ತಡಕ್ಕೆ ಮಣಿದು, ಅವುಗಳ ಹಾದಿಯಲ್ಲಿ ನಡೆದಿಲ್ಲ. ತಮ್ಮದೇ ಶೈಲಿಯಲ್ಲಿ ಹೆಚ್ಚು ಪ್ರಬುದ್ಧವಾಗಿ ಮಾಸ್ ಅಂಶಗಳನ್ನು ಅತಿಯಾಗಿ ಬಳಸದೆ ಹೊಸ ದಾರಿಯಲ್ಲಿ ನಡೆದಿದ್ದಾರೆ. ತೀರಾ ಅಬ್ಬರದ ಹಿನ್ನೆಲೆ ಸಂಗೀತ, ವಿಎಫ್ಎಕ್ಸ್, ಸಿಳ್ಳೆ ಗಿಟ್ಟಿಸುವಂತಹ ಸಂಭಾಷಣೆಗಳನ್ನು ಬಳಸಿ ಪ್ರೇಕ್ಷಕರನ್ನು ಹಿಡಿದಿಡಬೇಕೆಂಬ ಯತ್ನ ನಡೆಸಿಲ್ಲ. ಅಗತ್ಯವಿದ್ದಷ್ಟೇ ಭಾವನೆಗಳನ್ನು ಬೆರೆಸಿ, ತಣ್ಣಗೆ ಕತೆ ಹೇಳುತ್ತಾ ಹೋಗುತ್ತಾರೆ. ಹೀಗಾಗಿ, ಯುದ್ಧ, ಪಿತೂರಿ, ಸೇಡು, ರಾಜಕೀಯಗಳೇ ತುಂಬಿರುವ ಸಿನಿಮಾದಲ್ಲೂ ಕೂಡ ಒಂದು ಕಾವ್ಯಾತ್ಮಕವಾದ ಗುಣ ಅಂತರ್ಗತವಾಗಿರುವಂತೆ ತೋರುತ್ತದೆ. ಸನ್ನಿವೇಶಗಳು, ಫೈಟ್ ಗಳು, ಪಾತ್ರಗಳು ಇವೆಲ್ಲಾ ಹೆಚ್ಚು ರಿಯಲಿಸ್ಚಿಕ್ ಆಗಿದೆ. ಇಲ್ಲಿ ನಾಯಕರ 6 ಪ್ಯಾಕ್ ದೇಹಗಳು ಮಾತ್ರ ಯುದ್ಧ ಮಾಡುವುದಿಲ್ಲ, ಅವರ ಚಾಣಕ್ಷತೆಯೂ ಮುಖ್ಯವಾಗುತ್ತದೆ. ನಾಯಕಿಯರ ಸೌಂದರ್ಯವೂ, ಅವರ ಬುದ್ಧಿವಂತಿಕೆಯೂ ಅಸ್ತ್ರವಾಗಿ ಬಳಕೆಯಾಗುತ್ತದೆ. ಹೀಗಾಗಿ, ನಾಯಕನ ವೈಭವೀಕರಣದ, ಆಕ್ಷನ್ ಪ್ಯಾಕ್ಡ್, ಸಿನಿಮಾದ ಬದಲು ಕತೆಯೇ ಪ್ರಧಾನವಾಗಿರುವ, ಹೆಚ್ಚು ಇಂಟೆಲಿಜೆಂಟ್ ಆದ, ಕ್ಲಾಸೀ ಸಿನಿಮಾವೊಂದು ಮಣಿರತ್ನಂ ಮೂಸೆಯಿಂದ ಹೊರಬಂದಿದೆ.

ನಟನೆಯ ವಿಷಯಕ್ಕೆ ಬಂದರೆ ಎಲ್ಲರೂ ತುಂಬಾ ಅಚ್ಚುಕಟ್ಟಾಗಿ ಕೆಲಸಮಾಡಿದ್ದಾರೆ. ವಿಕ್ರಂಗೆ ಇದರಲ್ಲಿ ಸ್ಕ್ರೀನ್ ಸ್ಪೇಸ್ ಕಡಿಮೆ ಇದೆ, ದ್ವಿತಿಯಾರ್ಧದಲ್ಲಿ ಜಯರಾಂ ರವಿ ಆವರಿಸಿಕೊಳ್ಳುತ್ತಾರೆ. ಕಾರ್ತಿ ತಮ್ಮ ಲವಲವಿಕೆಯ ನಟನೆಯಿಂದ ಚಿತ್ರಕ್ಕೆ ಜೀವಂತಿಕೆ ಕೊಟ್ಟಿದ್ದಾರೆ. ಆದರೆ, ವಸ್ತ್ರವಿನ್ಯಾಸ, ನಟನೆ ಮತ್ತು ಪಾತ್ರಗಳ ಸಂಕೀರ್ಣತೆಯಿಂದ ಹೆಚ್ಚಾಗಿ ಸೆಳೆಯುವುದು ಇಲ್ಲಿನ ಹೆಣ್ಣು ಪಾತ್ರಗಳು. ತ್ರಿಷಾ. ಐಶ್ವರ್ಯ ಲೇಕ್ಷ್ಮಿ ಕಣ್ಣು ಕೋರೈಸುವಂತೆ ಕಾಣುತ್ತಾರೆ ಮತ್ತು ನಟಿಸುತ್ತಾರೆ. ಇವೆಲ್ಲಕ್ಕೂ ಶಿಖರವಿಟ್ಟಂತೆ ಮಿಂಚುವುದು ಐಶ್ವರ್ಯಾ ರೈ. ಸಿನಿಮಾದಲ್ಲಿ ಅವರ ಸೌಂದರ್ಯ ಮತ್ತು ನಟನೆ ಎರಡೂ ಹಲವು ಕಾಲ ನೆನಪಿನಲ್ಲಿ ಉಳಿಯುವಂತಿದೆ.

ತಾಂತ್ರಿಕವಾಗಿಯೂ ಚಿತ್ರ ಗಟ್ಟಿಯಾಗಿದೆ. ರೆಹಮಾನ್ ಹಿನ್ನೆಲೆ ಸಂಗೀತ ಮತ್ತು ಸಂಗೀತ ಹಿತಮಿತವಾಗಿದೆ. ಹಾಡುಗಳನ್ನು ಕಡಿಮೆ ಮಾಡಿ ಸಂಭಾಷಣೆಯನ್ನೇ ಇನ್ನಷ್ಚು ಹೆಚ್ಚಿಸಿದ್ದರೆ, ಚಿತ್ರದ ಓಘಕ್ಕೆ ಉತ್ತಮವಾಗಿ ಹೊಂದುತ್ತಿತ್ತು. ರವಿವರ್ಮನ್ ಸಿನಿಮಟೋಗ್ರಫಿ ಕಣ್ಣು ತುಂಬುವಂತಿದೆ. ಅತಿಯಾದ ವಿಎಫ್ಎಕ್ಸ್ ಇಲ್ಲದಿರುವುದು ಚಿತ್ರಕ್ಕೆ ಹೆಚ್ಚಿನ ತೂಕ ಮತ್ತು ಘನತೆ ಕೊಟ್ಟಿದೆ. ಒಟ್ಟಿನಲ್ಲಿ, ಇಂತಹ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಯಾವುದನ್ನೂ ಅತಿಯಾಗಿ ಮಾಡದೇ, ತಂತ್ರಜ್ಞಾನದ ಬದಲು ಕತೆಯ ಮೇಲೆ ಹೆಚ್ಚು ಭರವಸೆ ಇಟ್ಟಿರುವುದು ಮಣಿರತ್ನಂ ವಿಶೇಷತೆ.

ಯುದ್ಧ ಸಿನಿಮಾವಾದ್ದರಿಂದ ಒಂದಷ್ಟು ಅಡ್ರಿನಲಿನ್ ರಷ್, ಹೈ ನಿರೀಕ್ಷಿಸಿ ಹೋದವರಿಗೆ ಪಿಎಸ್1 ನಿರಾಶೆ ಮಾಡಬಹುದು. ಇಂತಹ ಎಪಿಕ್ ಡ್ರಾಮಾಗಳನ್ನು, ಆ ರೀತಿಯಲ್ಲೇ ನೋಡಿ ಅಭ್ಯಾಸವಾಗಿರುವವರಿಗೆ ಇದು ನಿಧಾನ ಮತ್ತು ಏರಿಳಿತಗಳಿಲ್ಲದ ನಿರೂಪಣೆಯಂತೆ ಅನ್ನಿಸಬಹುದು. ಜೊತೆಗೆ, ಚೋಳರ ಇತಿಹಾಸದ ಪರಿಚಯವಿಲ್ಲದಿರುವವರಿಗೆ ಇಲ್ಲಿರುವ ತುಂಬಾ ಪಾತ್ರಗಳು, ಸ್ಥಳಗಳು, ಸನ್ನಿವೇಶಗಳು ಗೊಂದಲ ಉಂಟು ಮಾಡಬಹುದು.

ಆದರೆ, ಅಂತಹ ಎಪಿಕ್ ಕತೆಯೊಂದನ್ನು, ಇಷ್ಟು ಸಣ್ಣ ಅವಧಿಗೆ ಇಳಿಸಿ, ಅದನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವುದು ಸುಲಭ ಮಾತಲ್ಲ ಎಂಬುದನ್ನು ನೆನೆದಾಗ ಮಣಿರತ್ನಂ ಅದನ್ನು ಸಮರ್ಥವಾಗಿ ಮತ್ತು ಚಂದವಾಗಿ ಮಾಡಿದ್ದಾರೆ ಎಂಬುದು ಖಚಿತ. ಅನಗತ್ಯ ಹೈಪ್ ಗಳಿಲ್ಲದ, ಗ್ಲಾಮರ್ ಇಲ್ಲದ ಅಪ್ಪಟ ಐತಿಹಾಸಿಕ ಸಿನಿಮಾ ನೋಡಬೇಕೆಂದರೆ, ಪಿಎಸ್1 ನಿಮ್ಮ ಆಯ್ಕೆಯಾಗಲಿ.

LEAVE A REPLY

Connect with

Please enter your comment!
Please enter your name here