ಪ್ರಭಾಸ್ ಅಭಿನಯದ ‘ಯೋಗಿ’ ತೆಲುಗು ಸಿನಿಮಾ ಆಗಸ್ಟ್ 18ರಂದು ರೀರಿಲೀಸ್ ಆಗಲಿದೆ. ಶಿವರಾಜಕುಮಾರ್ ನಟನೆಯ ಬ್ಲಾಕ್‌ಬಸ್ಟರ್ ‘ಜೋಗಿ’ ಚಿತ್ರದ ತೆಲುಗು ರೀಮೇಕಿದು. ತೆಲುಗು ಸಿನಿಮಾಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
ಪ್ರಭಾಸ್ ಮತ್ತು ನಯನತಾರಾ ನಟನೆಯ ‘ಯೋಗಿ’ ತೆಲುಗು ಸಿನಿಮಾ ಆಗಸ್ಟ್ 18ರಂದು ರೀರಿಲೀಸ್ ಆಗಲಿದೆ. ಪ್ರೇಮ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಟಿಸಿದ್ದ ಬ್ಲಾಕ್ ಬಸ್ಟರ್ ‘ಜೋಗಿ’ ಕನ್ನಡ ಚಿತ್ರದ ರೀಮೇಕಿದು. ‘ಜೋಗಿ’ ಹಾಡುಗಳು, ತಾಯಿ – ಮಗನ ಸೆಂಟಿಮೆಂಟ್ ಕನ್ನಡಿಗರಿಗೆ ಇಷ್ಟವಾಗಿತ್ತು. ಕನ್ನಡದಲ್ಲಿ ದೊಡ್ಡ ಯಶಸ್ಸು ಕಂಡ ಕತೆಗೆ ತೆಲುಗು ನಾಡಿನಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ವಿ ವಿ ವಿನಾಯಕ್ ನಿರ್ದೇಶನದ ‘ಯೋಗಿ’ 2007ರ ಜನವರಿ 14ರಂದು ಬಿಡುಗಡೆಯಾಗಿತ್ತು. ದೊಡ್ಡ ಬಜೆಟ್‌ನಲ್ಲಿ ತಯಾರಾದ ತೆಲುಗು ರೀಮಕ್ ಫ್ಲಾಪ್ ಎಂದು ಪರಿಗಣಿಸಲಾಗಿತ್ತು.
ಇದೀಗ ಪ್ರಭಾಸ್ ‘ಯೋಗಿ’ ಚಿತ್ರವನ್ನು 4K ತಂತ್ರಜ್ಞಾನದೊಂದಿಗೆ ಆಗಸ್ಟ್ 18ರಂದು ಮರುಬಿಡುಗಡೆ ಮಾಡಲಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಮರುಬಿಡುಗಡೆಯಾಗಿದ್ದ ‘ಬಿಲ್ಲಾ’ ಮತ್ತು ‘ವರ್ಷಂ’ ತೆಲುಗು ಚಿತ್ರಗಳು ಉತ್ತಮ ಗಳಿಕೆ ಕಂಡಿದ್ದವು. ಹೀಗಾಗಿ ಈ ಚಿತ್ರದ ಮೇಲೂ ನಿರೀಕ್ಷೆಗಳು ಹೆಚ್ಚಾಗಿವೆ. ಸುಬ್ಬರಾಜು, ಅಲಿ, ಸುನಿಲ್, ಕೋಟಾ ಶ್ರೀನಿವಾಸ್ ರಾವ್ ‘ಯೋಗಿ’ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಪ್ರಭಾಸ್ ಈಗ PAN ಇಂಡಿಯಾ ಹೀರೋ. ದುರದೃಷ್ಟವತಾಶ್ ‘ಬಾಹುಬಲಿ’ ಸರಣಿ ಸಿನಿಮಾಗಳ ನಂತರ ತೆರೆಕಂಡ ಪ್ರಭಾಸ್‌ರ ಯಾವ ಚಿತ್ರಗಳೂ ಯಶಸ್ಸು ಕಂಡಿಲ್ಲ. ಈ ಸಂದರ್ಭದಲ್ಲಿ ಮೊದಲ ರಿಲೀಸ್‌ನಲ್ಲಿ ಫ್ಲಾಪ್ ಎಂದು ಪರಿಗಣಿಸಿದ್ದ ‘ಯೋಗಿ’ ಚಿತ್ರಕ್ಕೆ ಪ್ರಭಾಸ್ ಅಭಿಮಾನಿಗಳು ಹೇಗೆ ಸ್ಪಂದಿಸಲಿದ್ದಾರೆ ಎಂದು ನೋಡಬೇಕು.