ಪ್ರಭುದೇವ ಅಭಿನಯದ ಸೈಕೋ ಥ್ರಿಲ್ಲರ್‌ ‘ಬಘೀರ’ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದಿತ್ ರವಿಚಂದ್ರನ್ ನಿರ್ದೇಶನದ ಚಿತ್ರದಲ್ಲಿನ ಪ್ರಭುದೇವ ವಿಚಿತ್ರ ಗೆಟಪ್‌ಗಳು ಗಮನಸೆಳೆಯುತ್ತವೆ.

ಅದಿಕ್ ರವಿಚಂದ್ರನ್ ನಿರ್ದೇಶನದಲ್ಲಿ ಪ್ರಭುದೇವಾ ನಟಿಸಿರುವ ‘ಬಘೀರ’ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್‌ 2004ರಲ್ಲಿ ತೆರೆಕಂಡ ಸಿಂಬು ನಟನೆಯ ‘ಮನ್ಮಥನ್‌’ ಸಿನಿಮಾ ನೆನಪಿಸುತ್ತದೆ. ಪ್ರೀತಿಸಿ ಮೋಸ ಮಾಡುವ, ಒಬ್ಬರಿಗಿಂತ ಹೆಚ್ಚು ಪ್ರಿಯಕರರನ್ನು ಹೊಂದಿರುವ ಯುವತಿಯರನ್ನು ಕೊಲ್ಲುವ ಸೈಕೋ ಪಾತ್ರ ಅಲ್ಲಿತ್ತು. ‘ಬಘೀರ’ದಲ್ಲಿ ಪ್ರಭುದೇವಾ ಪಾತ್ರಕ್ಕೆ ಇದೇ ಆಯಾಮ ಇರುವಂತಿದೆ. ಪ್ರಿಯಕರನಿಗೆ ಮೋಸ ಮಾಡುವ ಯುವತಿಯರನ್ನು ಟಾರ್ಗೆಟ್‌ ಮಾಡಿ ಅವರನ್ನು ಮುಗಿಸುವ ಸನ್ನಿವೇಶಗಳು ಇಲ್ಲಿ ಕಾಣಿಸುತ್ತವೆ. ಟ್ರೈಲರ್‌ನಲ್ಲಿ ಪ್ರಭುದೇವಾರನ್ನು ಚಿತ್ರವಿಚಿತ್ರ ಗೆಟಪ್‌ಗಳಲ್ಲಿ ನೋಡಬಹುದು. ಅವರು ನಾಲ್ಕಾರು ಪಾತ್ರ ಮಾಡಿರಬಹುದು ಇಲ್ಲವೇ ನಿರ್ದೇಶಕರು ಪ್ರೇಕ್ಷಕರನ್ನು ಹಾಗೆ ನಂಬಿಸಲು ಎತ್ನಿಸುತ್ತಿರಬಹುದು! ಅವರ ವಿಚಿತ್ರ ಕನ್ನಡಕ ತೊಟ್ಟ ಬಾಲ್ಡ್‌ ಕಿಲ್ಲರ್ ಪಾತ್ರ ‘ನೂರವತ್ತು ನಾಳ್‌’ ತಮಿಳು ಚಿತ್ರದ ಸತ್ಯರಾಜ್‌ ಪಾತ್ರವನ್ನು ಹೋಲುತ್ತದೆ.

ಕಂಫರ್ಟ್‌ ಜೋನ್‌ನಿಂದ ಹೊರಗೆ ಬಂದು ನಟಿಸಿರುವ ಪ್ರಭುದೇವಾರ ಈ ಸಿನಿಮಾ ಕೆಲವೆಡೆ ಡಾರ್ಕ್ ಕಾಮಿಡಿಯಂತೆ ಭಾಸವಾಗುತ್ತದೆ. ‘ತ್ರಿಷಾ ಇಲಿಯಾನ ನಯನತಾರಾ’ (2015) ತಮಿಳು ಚಿತ್ರದೊಂದಿಗೆ ಸ್ವತಂತ್ರ ನಿರ್ದೇಶಕರಾದ ಅದಿತ್‌ ರವಿಚಂದ್ರನ್‌ ಕೆಲವು ಚಿತ್ರಗಳಿಗೆ ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ‘ಬಘೀರ’ ಅವರ ನಿರ್ದೇಶನದ ಮೂರನೇ ಸಿನಿಮಾ. ಅಮೈರಾ ದಸ್ತರ್‌, ರಮ್ಯಾ ನಂಬಿಸನ್‌, ಜನನಿ ಅಯ್ಯರ್‌, ಸಂಚಿತಾ ಶೆಟ್ಟಿ, ಸಾಕ್ಷಿ ಅಗರ್‌ವಾಲ್‌, ಸೋನಿ ಅಗರ್‌ವಾಲ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

LEAVE A REPLY

Connect with

Please enter your comment!
Please enter your name here