ಇಬ್ಬರು ಅಪಾಪೋಲಿಗಳು ಹೇಗೆ ಯುದ್ಧೋಪಕರಣ ಸರಬರಾಜುದಾರರಾದರು ಎಂಬುದೇ ‘ವಾರ್ ಡಾಗ್ಸ್‌’ ಕಥಾವಸ್ತು. ನೈಜ ಘಟನೆ ಆಧಾರಿತ, ವಿಡಂಬನೆಯ ಹಾಸ್ಯದ ಲೇಪನವಿರುವ ಈ ಸಿನಿಮಾ ರಷ್ಯಾ-ಯುಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ನಿಮಗೆ ಬೇರೆಯದೇ ಅನುಭವ ನೀಡುವುದಂತೂ ಖರೆ.

ಯುದ್ಧ ನಡೆಯುತ್ತಿದೆ. ಸಾಕಷ್ಟು ಪ್ರಾಣ ಹಾನಿ, ಅದೆಷ್ಟೋ ಜನರಿಗೆ ನಿರ್ವಸತಿ, ಇನ್ನೆಷ್ಟೋ ಮಂದಿಗೆ ಅಂಗವೈಕಲ್ಯ, ಇವೆಲ್ಲ ಯುದ್ಧದ ಪರಿಣಾಮಗಳು. ಆದರೆ ಮೇಲ್ನೋಟಕ್ಕೆ ಕಾಣದ, ಯುದ್ಧ ಸಂದರ್ಭದಲ್ಲಿ ಚರ್ಚೆಗೂ ಬಾರದ ತೆರೆಮರೆಯ ವಿಚಾರವೊಂದಿದೆ. ಅದು ವ್ಯಾಪಾರ. ಯುದ್ಧವೆಂಬುದೊಂದು ಬಹುದೊಡ್ಡ ವ್ಯಾಪಾರ. ಎಷ್ಟು ದೊಡ್ಡ ವ್ಯಾಪಾರವದು? ಹೇಗೆಲ್ಲಾ ಆ ವಹಿವಾಟು ನಡೆಯುತ್ತದೆ? ಎಂಬುದನ್ನು ಅರ್ಥ ಮಾಡಿಕೊಳ್ಳಲು ‘ವಾರ್ ಡಾಗ್ಸ್’ ನೋಡಬೇಕು. ಇದು ಸ್ವಲ್ಪ ಹಳೆಯ ಸಿನಿಮಾ, 2016ರದ್ದು. ಆದರೆ ನೈಜ ಕತೆ ಆಧಾರಿತ ಮತ್ತು ಈಗನ ಕಾಲಕ್ಕೆ ಪ್ರಸ್ತುತ.

ಈ ಸಿನಿಮಾ ಏನನ್ನು ಹೇಳುತ್ತದೆ‌ ಎಂಬುದು ಆರಂಭದಲ್ಲೇ ಸ್ಪಷ್ಟವಾಗುತ್ತದೆ. ಒಬ್ಬ ಯೋಧ ನಿಂತಿದ್ದಾನೆ ಎಂದರೆ ಜನಸಾಮಾನ್ಯನಿಗೆ ಅಲ್ಲೊಬ್ಬ ದೇಶಪ್ರೇಮಿ ಕಾಣುತ್ತಾನೆ. ಆದರೆ ವ್ಯಾಪಾರಿಗೆ ಅಲ್ಲೊಂದು ಹೆಲ್ಮೆಟ್, ಬೆಂಕಿ ನಿರೋಧಕ ಕೈಗವಸು, ಎಂ16 ಬಂದೂಕು ಹೀಗೆ ಒಟ್ಟು ಹದಿನೇಳೂವರೆ ಸಾವಿರ ಡಾಲರ್ ಕಾಣುತ್ತದೆ ಎಂದು ಡೇವಿಡ್ ಪ್ಯಾಕೌಸ್ ಎಂಬ ಪಾತ್ರಧಾರಿ ಹೇಳುವಾಗ ಅರರೆ ಹೌದಲ್ವೇ ಎಂದು ನಮಗೆ ಪ್ರಥಮ ಬಾರಿಗೆ ಅನಿಸುತ್ತದೆ. ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಒಟ್ಟು 20 ಲಕ್ಷ ಸೈನಿಕರು ಸೆಣೆಸಿದ್ದರು ಎಂದು ಆತ ಹೇಳುವಾಗ, ಅವರ ಧಿರಿಸಿನ ಮೊತ್ತವೆಷ್ಟು ಎಂದು ತಿಳಿಯಲು ನೀವೊಮ್ಮೆ ಫೋನಲ್ಲೇ‌ ಕ್ಯಾಲ್ಕುಲೇಟರ್ ಒತ್ತುತ್ತೀರಿ. ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೈನಿಕರಿಗೆ ಬ್ಯಾರೆಕ್‌ಗಳಲ್ಲಿ ಏರ್ ಕಂಡೀಶನ್ ವ್ಯವಸ್ಥೆ ನೀಡಲು ಸರ್ಕಾರ ವರ್ಷಂಪ್ರತಿ 450 ಕೋಟಿ ಡಾಲರ್ ವ್ಯಯಿಸುತ್ತಿತ್ತು ಎಂಬುದನ್ನು ಕೇಳಿಸಿಕೊಳ್ಳುವಲ್ಲಿಗೆ ಯುದ್ಧದ ಹೆಸರಲ್ಲಿ ನಡೆಯುವ ವಹಿವಾಟುಗಳು ನಮ್ಮ ನಿಮ್ಮ ಎಣಿಕೆಯ ಪರಿಧಿ ಮೀರಿದ್ದು ಎಂಬುದು ಖಾತ್ರಿ. ಆ ಪಾತ್ರ ನೀಡುವ ಯಾವ ಮಾಹಿತಿಗಳೂ ಸುಳ್ಳಲ್ಲ. ಏಕೆಂದರೆ ‘ವಾರ್ ಡಾಗ್ಸ್’ ಸಿನಿಮಾಕ್ಕೆ ಆಧಾರವಾಗಿ ಇಟ್ಟುಕೊಂಡದ್ದು ಎಪ್ರೈಮ್ ಡಿವೆರೋಲಿ ಬರೆದ ‘ವನ್ಸ್ ಎ ಗನ್ ರನ್ನರ್’ ಎಂಬ ಪುಸ್ತಕವನ್ನು. ಅಂದಹಾಗೆ ಎಫ್ರೈಮ್ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಒಬ್ಬ.

ಡೇವಿಡ್ ಪ್ಯಾಕೌಸ್ ಹಾಗೂ ಎಪ್ರೈಮ್ ಬಾಲ್ಯದ ಗೆಳೆಯರು. ಎಪ್ರೈಮ್ ಶಾಲಾ ದಿನಗಳಲ್ಲೇ ಅದೆಂಥ ಪೋಕರಿ ಎಂದರೆ ಆತನನ್ನು ತನ್ನ ಮಗ ಭೇಟಿಯಾಗುವುದೂ ಡೇವಿಡ್‌ನ ತಾಯಿಗೆ ಇಷ್ಟವಿರಲಿಲ್ಲ. ಹೈಸ್ಕೂಲು ಮುಗಿದ ಮೇಲೆ ಎಫ್ರೈಮ್‌ಗೊಂದು ವಿದಾಯ ಹೇಳಿಬರೋಣವೆಂದರೂ ಡೇವಿಡ್‌ನ ತಾಯಿ ಬಿಟ್ಟಿರಲಿಲ್ಲವಂತೆ. ವಿದ್ಯಾಭ್ಯಾಸ ಮುಗಿದ ಮೇಲೆ ಹೊಟ್ಟೆ ಹೊರೆಯಲು ಡೇವಿಡ್ ಸಿಕ್ಕ ಸಿಕ್ಕ ಉದ್ಯೋಗಗಳನ್ನೆಲ್ಲಾ ಮಾಡಿದ ಮತ್ತು ದಾರುಣವಾಗಿ ಸೋತ. ಹಾಗೆ ಆತ ಸೋತ ಸಂದರ್ಭದಲ್ಲಿ ಎಫ್ರೈಮ್‌ ಜತೆಗಿನ ಮರುಭೇಟಿ ಆಗುತ್ತದೆ.

ಎಫ್ರೈಮ್ ಅದಾಗಲೇ ಸಣ್ಣ ಮಟ್ಟಿನ ಸೇನಾ ವಹಿವಾಟು ತಜ್ಞ. ಸೇನೆಗೆ ಪೆನ್ನು, ಪೇಪರು, ಗುಂಡುಪಿನ್ನಿನಂಥ ಸಣ್ಣ ಪುಟ್ಟ ಸಾಮಗ್ರಿಗಳು ಹೇರಳವಾಗಿ ಬೇಕಾಗುತ್ತದೆ. ಅದಕ್ಕಾಗಿ ಆನ್‌ಲೈನ್ ಮೂಲಕ ಟೆಂಡರನ್ನೂ ಪ್ರಕಟಿಸುತ್ತದೆ ಅಮೆರಿಕ ಸೇನೆ. ಆದರೆ ಅವೆಲ್ಲ ಸಣ್ಣ ವ್ಯವಹಾರ ಎಂದು ಯಾವುದೇ ದೊಡ್ಡ ವ್ಯಾಪಾರಿಗಳು ಅತ್ತ ಕಡೆ ತಲೆ ಹಾಕುವುದಿಲ್ಲ. ಅಂಥ ಸಣ್ಣಪುಟ್ಟ ಆರ್ಡರುಗಳನ್ನೇ ಹಿಡಿದು ವಹಿವಾಟು ನಡೆಸುವವ ಎಫ್ರೈಮ್. ಮಾತಲ್ಲೇ ಮಂಟಪ ಕಟ್ಟುವ ಸಾಮರ್ಥ್ಯವಿರುವ ಆತ ಒಂದಷ್ಟು ಸಪ್ಲೈಯರುಗಳ ವಿವರಗಳನ್ನು ತಾನು ಕೆಲಸ ಮಾಡುತ್ತಿದ್ದ ಹಳೆಯ ಕಂಪನಿಯಿಂದ ಕದ್ದು ತಂದಿರುತ್ತಾನೆ. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯ ಎಂಬಂತೆ ಎಇವೈ ಹೆಸರಿನ ಆತನ ಕಂಪನಿಗೆ ಆತನೇ ಸಿಇಒ. ಲಾಂಡ್ರಿ ನಡೆಸುವ ಯಹೂದಿಯೊಬ್ಬನನ್ನು ಮಾತಲ್ಲೇ ಮರುಳು ಮಾಡಿ ತನ್ನ ಕಂಪನಿಗೆ ಒಂದಷ್ಟು ಹೂಡಿಕೆ ಮಾಡಿಸಿರುತ್ತಾನೆ. ಆದೊಂದೇ ಕಂಪನಿಗಿದ್ದ ಬಂಡವಾಳ. ಜತೆ ಸೇರುವ ಎರಡನೇ ಉದ್ಯೋಗಿ ಬಾಲ್ಯದ ಗೆಳೆಯ ಡೇವಿಡ್.

ಡೇವಿಡ್ ಏಕಾಗ್ರತೆಯಿಂದ ಟೆಂಡರುಗಳನ್ನು ನೋಡುವಾಗ ಒಮ್ಮೆ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ ಮಾಡುವ ಅವಕಾಶ ಸಿಗುತ್ತದೆ. ಮೊದಲ ಆ ವಹಿವಾಟು ಸುಲಭದಲ್ಲಿ ಯಶಸ್ಸೂ ಕಾಣುತ್ತದೆ. ಅಂಥದ್ದೇ ಮತ್ತೊಂದು ಆರ್ಡರು ಹಿಡಿದು ಅದರಲ್ಲೂ ಜಯ ಸಾಧಿಸುತ್ತಾರೆ. ಅಷ್ಟು ಹೊತ್ತಿಗೆ ಈ ಪಡ್ಡೆ ಹೈಕಳ ಕೈಗೆ ಭರಪೂರ ದುಡ್ಡೂ ಬರಲು ಆರಂಭ.

ಪ್ರಪ್ರಥಮವಾಗಿ ಇವರಿಬ್ಬರು ದೊಡ್ಡ ಮಟ್ಟದ ವಹಿವಾಟು ನಡೆಸುವುದು ಇರಾಕ್‌ನಲ್ಲಿ ಸದ್ದಾಂನನ್ನು ಅಮೆರಿಕ ಸೇನೆ ಅಧಿಕಾರದಿಂದ ಕಿತ್ತೊಗೆದ ಸಂದರ್ಭದಲ್ಲಿ. ಮೂಲ ಉದ್ದೇಶ ಈಡೇರಿದ ನಂತರ ಅಮೆರಿಕ ಸರ್ಕಾರದ ಪಾಲಿಗೆ ಇರಾಕ್ ಕೇಂದ್ರ ಬಿಂದುವಾಗಲಿಲ್ಲ. ಅಲ್ಲಿನ ಬಂಡಾಯ ಹಾಗೂ ಬಂಡುಕೋರರ ನಿಯಂತ್ರಣಕ್ಕೆ ಸೇನೆಯನ್ನು ಅಲ್ಲಿ ಇಟ್ಟುಕೊಂಡಿತ್ತು. ಆದರೆ ಆ ಸೇನೆಗೆ ಶಸ್ತ್ರಾಸ್ತ್ರ ಪೂರೈಕೆಯ ಅಗತ್ಯವಿರಲಿಲ್ಲ. ಕೇವಲ ಮದ್ದುಗುಂಡಿನ ಅಗತ್ಯವಿದ್ದ ಅವರತ್ತ ಯಾವ ದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನೂ ತಲೆಯೆತ್ತಿ ನೋಡದ ಕಾರಣ ಆ ಆರ್ಡರೂ ಈ ಪಡ್ಡೆಗಳಿಗೆ ಸಿಕ್ಕಿಬಿಡುತ್ತದೆ. ಆದರೆ ಅಂತಾರಾಷ್ಟ್ರೀಯ ವಹಿವಾಟುಗಳ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದ ಇವರು ಗುಂಡುಗಳನ್ನು ಇಟಲಿಯಿಂದ ಕೊಂಡು ಇರಾಕ್‌ಗೆ ಕಳಿಸಲು ತೀರ್ಮಾನಿಸುತ್ತಾರೆ. ಇವರ ದುರಾದೃಷ್ಟಕ್ಕೆ ಇರಾಕ್‌ಗೆ ಎಲ್ಲಾ ರೀತಿಯ ಶಸ್ತ್ರಾಸ್ತ್ರ ಪೂರೈಕೆಯನ್ನು ಇಟಲಿ ತಡೆ ಹಿಡಿದಿರುತ್ತದೆ. ಹಾಗಾಗಿ ಇವರ ಮದ್ದು ಗುಂಡಿನ ಕಂಟೈನರ್ ಜೋರ್ಡಾನ್ ದಾಟಿ ಹೋಗುವುದಿಲ್ಲ. ಅದರ ಪೂರೈಕೆಗೆ ಇವರಿಬ್ಬರು ಸ್ವತಃ ಜೋರ್ಡಾನಿಗೆ ಹೋಗಿ ಪಡುವ ಪಡಿಪಾಟಲನ್ನು ನೀವು ತೆರೆಯ ಮೇಲೆಯೇ ನೋಡಬೇಕು. ನೈಜ ಘಟನೆಯಿಂದ ಸ್ವಲ್ಪ ಉತ್ಪ್ರೇಕ್ಷಿತವಾದರೂ ಚಿತ್ರಕತೆ ಬರಹಗಾರ ಆ ಸನ್ನಿವೇಶವನ್ನು ಮಜಬೂತಾಗಿ ಬರೆದಿದ್ದಾನೆ.

ತಮ್ಮ ಕಲ್ಪನೆಯಲ್ಲೂ ಇರದ ಹಣ ಕಂಡ ಅವರು ಮತ್ತೂ ದೊಡ್ಡ ದೊಡ್ಡ ಆರ್ಡರನ್ನು ಹಿಡಿಯಲು ಶುರುವಿಡುತ್ತಾರೆ, ಭಾರಿ ಪ್ರಮಾಣದಲ್ಲಿ ಎಕೆ 47 ಗುಂಡುಗಳ ಪೂರೈಕೆಗೆ ಒಪ್ಪಿಕೊಂಡ ಮೇಲಷ್ಟೇ ಅದು ಇವರ ಪರಿಧಿಯನ್ನೂ ಮೀರಿದ ಸರಬರಾಜು ಎಂಬುದು ಮನವರಿಕೆಯಾಗುವುದು. ಆ ಹೊತ್ತಿಗೆ ಇವರ ಅಗತ್ಯ ಪೂರೈಕೆಗೆ ದೇವರಂತೆ ಸಿಗುವವ ಕಾಳ ದಂಧೆಯ ಶಸ್ತ್ರಾಸ್ತ್ರ ಪೂರೈಕೆದಾರ. ಸೋವಿಯತ್ ಕಾಲದ ಗುಂಡುಗಳು ಅಲ್ಬೇನಿಯಾದಲ್ಲಿ ಭಾರಿ ಪ್ರಮಾಣದ ಸಂಗ್ರಹದಲ್ಲಿದೆ‌ ಎಂಬುದನ್ನು ನಂಬಿ ಮುನ್ನಡೆವ ಇವರಿಗೆ ಅದು ಚೀನಾ ಮಾಲು ಎಂದು ಗೊತ್ತಾಗುವುದು ಕೊನೆಯ ಹಂತಕ್ಕೆ. ಅಲ್ಲೂ ಕಪಟ ಬುದ್ಧಿ ಉಪಯೋಗಿಸಿ ಅವುಗಳ ಚೀನಾ ಮೂಲ ಸಿಗದಂತೆ ಮರು ಪ್ಯಾಕ್ ಮಾಡಿಸುವ ಇವರು ಪ್ಯಾಕಿಂಗ್ ಮಾಡಿದವನಿಗೆ ಕೇವಲ ಒಂದಷ್ಟು ಸಾವಿರ ಡಾಲರ್‌‌ಗೆ ಕೈ ಎತ್ತಿಬಿಡುತ್ತಾರೆ. ಮನನೊಂದ ಆತ ಅಮೆರಿಕಕ್ಕೆ ನೀಡಿದ ಮಾಹಿತಿಯಿಂದ ಡೇವಿಡ್ ಮತ್ತು ಎಫ್ರೈಮ್‌ನ ಈ ಅಡ್ಡ ವ್ಯವಹಾರ ಬೆಳಕಿಗೆ ಬರುತ್ತದೆ.

ಆದರೆ ಅಲ್ಲಿಯವರೆಗೆ ಯಕಶ್ಚಿತ್ ಪೋಲಿಗಳ ಸಾಲಿಗೆ ಸೇರುವ ಈ ಹುಡುಗರು ಅಮೆರಿಕ ಸೇನೆಗೆ ಪೂರೈಕೆ ಮಾಡಿದ ಶಸ್ತ್ರಾಸ್ತ್ರ ಅಪಾರ. ಅದೆಲ್ಲಾ ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಈ ವಿಮರ್ಶೆಯನ್ನೂ ಮೀರಿದ ಅಂಶಗಳು ಸಿನಿಮಾದಲ್ಲಿದೆ. ‘ವಾರ್ ಡಾಗ್ಸ್’ ಪ್ರೈಮ್ ವಿಡಿಯೋ ‌ಮತ್ತು ನೆಟ್‌ಫ್ಲಿಕ್ಸ್ ಎರಡರಲ್ಲೂ ಸ್ಟ್ರೀಂ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here