ಇತ್ತೀಚೆಗೆ ಬಿಡುಗಡೆಯಾದ ಸನ್ನಿ ಲಿಯೋನ್‌ ‘ಮಧುಬನ್‌’ ಮ್ಯೂಸಿಕ್‌ ವೀಡಿಯೋಗೆ ಮಥುರಾ ಮೂಲದ ಕೆಲವು ಪುರೋಹಿತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಮಾದಕ ನೃತ್ಯದಿಂದಾಗಿ ರಾಧಾ-ಕೃಷ್ಣ ಕುರಿತ ಗೀತೆಗೆ ಅಪಚಾರವಾಗಿದೆ ಎನ್ನುವುದು ಅವರ ವಾದ.

‘ಕೊಹಿನೂರ್‌’ (1960) ಹಿಂದಿ ಚಿತ್ರಕ್ಕಾಗಿ ಮೊಹಮ್ಮದ್‌ ರಫಿ ‘ಮಧುಬನ್‌ ಮೆ ರಾಧಿಕಾ ನಾಚೆ’ ಗೀತೆ ಹಾಡಿದ್ದರು. ಸರಿಗಮ ಮ್ಯೂಸಿಕ್‌ ಇದೇ ಗೀತೆಗೆ ಪಾರ್ಟಿ ಸಾಂಗ್‌ ರೂಪ ಕೊಟ್ಟು ಚಿತ್ರಿಸಿ ಮೊನ್ನೆ ರಿಲೀಸ್‌ ಮಾಡಿದೆ. ಶಾರಿಬ್‌ ಮತ್ತು ತೋಷಿ ಸಂಗೀತ ಸಂಯೋಜಿಸಿರುವ ಗೀತೆಗೆ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಹೆಜ್ಜೆ ಹಾಕಿದ್ದಾರೆ. ಕನಿಕಾ ಕಪೂರ್‌ ಮತ್ತು ಅರಿಂಧಮ್‌ ಚಕ್ರವರ್ತಿ ಹಾಡಿದ್ದು, ಗಣೇಶ್‌ ಆಚಾರ್ಯ ನೃತ್ಯ ಸಂಯೋಜಿಸಿದ್ದಾರೆ. ಕೃಷ್ಣ ಮತ್ತು ರಾಧೆಯ ಪ್ರೀತಿಯನ್ನು ಸಾರುವ ಗೀತೆಯಿದು. ಇದೀಗ ಈ ಮ್ಯೂಸಿಕ್‌ ಆಲ್ಬಂ ಬ್ಯಾನ್‌ ಮಾಡುವಂತೆ ಮಥುರಾ ಮೂಲದ ಕೆಲವು ಪುರೋಹಿತರು ಆಗ್ರಹಿಸಿದ್ದಾರೆ. “ರಾಧಾ – ಕೃಷ್ಣರ ಈ ಗೀತೆಗೆ ಸನ್ನಿ ಲಿಯೋನ್‌ ಮಾದಕ ನೃತ್ಯವಿದೆ. ಇದರಿಂದಾಗಿ ಹಾಡು ಮತ್ತು ಕೃಷ್ಣ, ರಾಧೆಯರ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಸರ್ಕಾರ ಈ ಆಲ್ಬಂ ಅನ್ನು ನಿಷೇಧಿಸಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಸರಿಗಮ ಮ್ಯೂಸಿಕ್‌ ಮತ್ತು ಸನ್ನಿಲಿಯೋನ್‌ ಮೇಲೆ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ” ಎಂದು ಸಂತ ನಾವಲ್‌ ಗಿರಿ ಮಹಾರಾಜ್‌ ಎಚ್ಚರಿಕೆ ನೀಡಿದ್ದಾರೆ. ಅಖಿಲ ಭಾರತೀಯ ತೀರ್ಥ ಪುರೋಹಿತ್‌ ಮಹಾಸಭಾದ ರಾಷ್ಟ್ರಾಧ್ಯಕ್ಷ ಮಹೇಶ್‌ ಪಾಠಕ್‌ ಕೂಡ ಆಲ್ಬಂ ನಿಷೇಧಕ್ಕೆ ಒತ್ತಾಯ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here