ಪುನೀತ್‌ ರಾಜಕುಮಾರ್‌ ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್‌’ ಟೀಸರ್‌ ಬಿಡುಗಡೆಯಾಗಿದೆ. ಭರಪೂರ ಆಕ್ಷನ್‌ ಸನ್ನಿವೇಶಗಳು, ಪುನೀತ್‌ ಸ್ಟೈಲಿಷ್‌ ಎಂಟ್ರಿಯ ಟೀಸರ್‌ ಇದೊಂದು ಭರ್ಜರಿ ಆಕ್ಷನ್‌ – ಥ್ರಿಲ್ಲರ್‌ ಸಿನಿಮಾ ಎನ್ನುವ ಸುಳಿವು ನೀಡುತ್ತದೆ.

“ನನಗೆ ಮೊದಲಿನಿಂದಲೂ ರೆಕಾರ್ಡ್ಸ್‌ ಬ್ರೇಕ್‌ ಮಾಡೇ ಅಭ್ಯಾಸ” ಎಂದು ‘ಜೇಮ್ಸ್‌’ ಟೀಸರ್‌ನ ಕೊನೆಯಲ್ಲಿ ನಟ ಶಿವರಾಜಕುಮಾರ್‌ ಧ್ವನಿ ಕೇಳಿಸುತ್ತದೆ. ಅಕಾಲಿಕವಾಗಿ ಅಗಲಿದ ಪುನೀತ್‌ ರಾಜಕುಮಾರ್‌ ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್‌’ ಟೀಸರ್‌ ಇಂದು ಬಿಡುಗಡೆಯಾಗಿದೆ. ಚೇತನ್‌ ಕುಮಾರ್‌ ನಿರ್ದೇಶನದ ಸಿನಿಮಾಗೆ ಪುನೀತ್‌ ಡಬ್ಬಿಂಗ್‌ ಅಷ್ಟೇ ಬಾಕಿ ಇತ್ತು. ಪುನೀತ್‌ ಅವರಿಗೆ ಶಿವರಾಜಕುಮಾರ್‌ ಡಬ್‌ ಮಾಡಿದ್ದಾರೆ. ನಿರ್ದೇಶಕರು ಮೊದಲೇ ಹೇಳಿದಂತೆ ಇದೊಂದು ಆಕ್ಷನ್‌ – ಥ್ರಿಲ್ಲರ್‌ ಕಥಾನಕ ಎನ್ನುವುದಕ್ಕೆ ಟೀಸರ್‌ ಪುಷ್ಠಿ ನೀಡುತ್ತದೆ. ಜೇಸಿಂಗ್‌ ಸನ್ನಿವೇಶಗಳು, ಆಕರ್ಷಕ ಹಿನ್ನೆಲೆ ಸಂಗೀತವಿದ್ದು, ಪುನೀತ್‌ ಎಂಟ್ರಿ ಸೀನ್‌ ಖಡಕ್‌ ಆಗಿದೆ. ಶರತ್‌ ಕುಮಾರ್‌, ಶ್ರೀಕಾಂತ್‌ ಪಾತ್ರಗಳ ಪರಿಚಯವಿದೆ.

“ಜೇಮ್ಸ್‌ ಅಲಿಯಾಸ್‌ ಸಂತೋಷ್‌ ಕುಮಾರ್‌ ‘J – WINGS’ ಸೆಕ್ಯೂರಿಟಿ ಕಂಪನಿ ಮ್ಯಾನೇಜರ್‌. ಎಲ್ಲರಿಗೂ ಬೇಕಾದ ಸಹೃದಯ ವ್ಯಕ್ತಿಗೆ ದುಷ್ಟ ಕೂಟವೊಂದನ್ನು ಎದುರಿಸಬೇಕಾಗಿ ಬರುತ್ತದೆ. ಕ್ರೈಂನಲ್ಲಿ ತೊಡಗಿರುವ ಪವರ್‌ ಬ್ರೋಕರ್‌, ಬ್ಯುಸಿನೆಸ್‌ಮ್ಯಾನ್‌ಗಳೊಂದಿಗೆ ಸೆಣಸಬೇಕಾಗುತ್ತದೆ. ಭಾವನಾತ್ಮಕ, ಆಕ್ಷನ್‌ ಹಾಗೂ ದೇಶಭಕ್ತಿಗೆ ಸ್ಫೂರ್ತಿಯಾಗುವ ಕಮರ್ಷಿಯಲ್‌ ಎಂಟರ್‌ಟೇನ್‌ ಸಿನಿಮಾ” ಎನ್ನುತ್ತದೆ ‘ಜೇಮ್ಸ್‌’ ಅಫಿಷಿಯಲ್‌ ಸಿನಾಪ್ಸಿಸ್‌. ಈ ಚಿತ್ರವನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ. ಸದ್ಯ ಕನ್ನಡ, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಟೀಸರ್‌ ರಿಲೀಸ್‌ ಆಗಿದೆ. ಚಿತ್ರತಂಡದ ಮಾಹಿತಿಯನ್ವಯ ಸಿನಿಮಾದಲ್ಲಿ ಶಿವರಾಜಕುಮಾರ್‌ ಮತ್ತು ರಾಘವೇಂದ್ರ ರಾಜಕುಮಾರ್‌ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಿಯಾ ಆನಂದ್‌ ಚಿತ್ರದ ನಾಯಕಿ. ಕಿಶೋರ್‌ ಪತಿಕೊಂಡ ನಿರ್ಮಾಣದ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ, ಸ್ವಾಮಿ ಗೌಡ ಛಾಯಾಗ್ರಹಣ, ದೀಪು ಕುಮಾರ್‌ ಸಂಕಲವಿದೆ. ರವಿವರ್ಮ, ರಾಮ್‌ ಲಕ್ಷ್ಮಣ್‌, ಚೇತನ್‌ ಡಿಸೋಜಾ, ಅರ್ಜುನ್‌ ಮತ್ತು ವಿಜಯ್‌ ಆಕ್ಷನ್‌ ಸನ್ನಿವೇಶಗಳನ್ನು ಕಂಪೋಸ್‌ ಮಾಡಿದ್ದಾರೆ. ಸಿನಿಮಾ ಮಾರ್ಚ್‌ 17ರಂದು ತೆರೆಕಾಣಲಿದೆ.

Previous articleರಿಲೀಸ್‌ ಆಯ್ತು ‘ಫ್ಯಾಮಿಲಿ ಪ್ಯಾಕ್‌’ ಟ್ರೈಲರ್‌; ಫೆ.17ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ
Next articleಮಾಫಿಯಾ ಕಂಟೆಟ್‌ನ ‘ಮೇಲೊಬ್ಬ ಮಾಯಾವಿ’; ತೆರೆಗೆ ಸಿದ್ಧವಾದ ಸಂಚಾರಿ ವಿಜಯ್‌ ಸಿನಿಮಾ

LEAVE A REPLY

Connect with

Please enter your comment!
Please enter your name here