ದೇವಿಶ್ರೀ ಪ್ರಸಾದ್‌ ಸಂಗೀತ ನೀಡಿರುವ ‘ಪುಷ್ಪ’ ಸಿನಿಮಾದ ಹಾಡುಗಳು ಸಖತ್‌ ಹಿಟ್‌ ಆಗಿದ್ದವು. ಹೀಗಾಗಿಯೇ ‘ಪುಷ್ಪ 2’ ಸಿನಿಮಾದ ಹಾಡುಗಳ ಮೇಲೆ ಸಿನಿಪ್ರಿಯರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ನಿರೀಕ್ಷೆ ಹುಸಿಯಾಗಲಿಲ್ಲ. ನಿನ್ನೆಯಷ್ಟೆ ಚಿತ್ರದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ 2’. ಮ್ಯೂಸಿಕಲ್‌ ಹಿಟ್‌ ಸಹ ಆಗಿರುವ ‘ಪುಷ್ಪ’ ಚಿತ್ರದ ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು. ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಹಾಡುಗಳು ಸಂಗೀತ ಪ್ರಿಯರ ನಾಗಲೆ ಮೇಲೆ ಇಂದಿಗೂ ಕುಣಿದಾಡುತ್ತಿದೆ. ಹೀಗಾಗಿಯೇ ‘ಪುಷ್ಪ 2’ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಲಿದೆ ಅಂದಾಗ ಅಲ್ಲು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿತ್ತು. ಹೇಳಿದಂತೆ ಚಿತ್ರತಂಡ ಸಿನಿಮಾದ ಮೊದಲ ಹಾಡು- ಟೈಟಲ್‌ ಟ್ರ್ಯಾಕ್‌ ಅನ್ನ ರಿಲೀಸ್‌ ಮಾಡಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಸೇರಿ 6 ಭಾಷೆಯಲ್ಲಿ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಸಾಮಾನ್ಯ ಕಾರ್ಮಿಕನಾಗಿದ್ದ ‘ಪುಷ್ಪ’ ನಂತರದಲ್ಲಿ ಕುಬೇರ ಪುಷ್ಪರಾಜ್ ಆಗಿ ಬೆಳೆದ ರೀತಿಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಹೀಗಾಗಿ ಈ ಹಾಡನ್ನು ಕಾರ್ಮಿಕರ ದಿನದಂದು ಬಿಡುಗಡೆ ಮಾಡಲಾಗಿದೆ.

ದೇವಿಶ್ರೀ ಪ್ರಸಾದ್‌ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಪುಷ್ಪ… ಪುಷ್ಪ… ಪುಷ್ಪರಾಜ್‌…’ ಹಾಡಿಗೆ ತೆಲುಗಿನಲ್ಲಿ ಚಂದ್ರಬೋಸ್ ಸಾಹಿತ್ಯ ಬರೆದಿದ್ದು, ನಕಾಶ್ ಅಜೀಜ್ ಮತ್ತು ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದರೆ, ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಸುಕುಮಾರ್ ನಿರ್ದೇಶನದ ಚಿತ್ರಲ್ಲಿ ಅಲ್ಲು ಅರ್ಜುನ್ ಎಂದಿನಂತೆ ಜಭರ್ದಸ್ತ್ ಆಗಿ ಕುಣಿದಿದ್ದಾರೆ. ಕೈಯಲ್ಲಿ ಟೀ ಗ್ಲಾಸ್‌ ಹಿಡಿದು ಸ್ಟೆಪ್ಸ್‌ ಹಾಕಿ ಬಿಸ್ಕೆಟ್‌ ತಿನ್ನುವ ರೀತಿ ಕ್ರೇಜಿಯಾಗಿದೆ. ಜೊತೆಗೆ ತಗ್ಗೋದೇ ಇಲ್ಲ ಅಂತ ಹೊಸ ಸ್ಟೈಲ್‌ನಲ್ಲಿ ಹೇಳಿರುವ ರೀತಿ ಸಹ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಮೈತ್ರಿ ಮೂವೀ‌ ಮೇಕರ್ಸ್ ದುಬಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದೆ. ಪುಷ್ಪರಾಜನಿಗೆ ಜೊತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್ , ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶ-ವಿದೇಶಗಳಲ್ಲಿ ‘ಪುಷ್ಪ 2: ದಿ ರೂಲ್’ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here