ಚಿತ್ರಸಾಹಿತಿ ಮಳವಳ್ಳಿ ಸಾಯಿಕೃಷ್ಣ ಅವರು ‘ರಾಖಾ’ ಚಿತ್ರದೊಂದಿಗೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಕ್ರಾಂತಿ ಮತ್ತು ಅಮೃತಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರು ಚಿತ್ರವಿದು. ಚಿತ್ರದಲ್ಲಿ ಕುಟುಂಬದ ಗೌರವ ಉಳಿಸುವ ಮಗನ ಕತೆ ಹೇಳುತ್ತಿದ್ದಾರೆ ನಿರ್ದೇಶಕರು.
ಯುವನಟ ಕ್ರಾಂತಿ ಕತೆ ಬರೆದು ನಿರ್ದೇಶಿಸುತ್ತಿರುವ ‘ರಾಖಾ’ ಸಿನಿಮಾಗೆ ಚಾಲನೆ ಸಿಕ್ಕಿದೆ. ಸಚಿವ ಶಿವರಾಜ್ ಎಸ್ ತಂಗಡಗಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ಚಿತ್ರಸಾಹಿತಿ ವಿ ನಾಗೇಂದ್ರ ಪ್ರಸಾದ್ ಮೊದಲ ದೃಶ್ಯಕ್ಕೆ ಆಕ್ಷನ್ – ಕಟ್ ಹೇಳಿದರು. ಚಿತ್ರಸಾಹಿತಿ ಮಳವಳ್ಳಿ ಸಾಯಿಕೃಷ್ಣ ಅವರು ಈ ಚಿತ್ರದೊಂದಿಗೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯೂ ಅವರದೆ. ಶಿವಾ ಮೂವೀಸ್ ಮೂಲಕ ಡಾ ಕೆ ಬಿ ನಾಗೂರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ರಾಖಾ’ ಎಂದರೇನು? ‘ರಾಖಾ ಅಂದರೆ brightness ಎನ್ನುವ ಅರ್ಥವಿದೆ. ಚಿತ್ರದಲ್ಲಿ ಇದು ನಾಯಕನ ಹೆಸರೂ ಹೌದು. ಊರಿನಲ್ಲಿ ಆತನ ತಂದೆ – ತಾಯಿಗೆ ಸ್ಥಳೀಯ ರಾಜಕೀಯ ಮುಖಂಡರಿಂದ ಅವಮಾನವಾಗಿರುತ್ತೆ. ನಾಯಕ ಬುದ್ಧಿವಂತಿಕೆಯಿಂದ ರಕ್ತಪಾತವಿಲ್ಲದೆ ಸೇಡು ತೀರಿಸಿಕೊಳ್ಳುವ ಕತೆಯಿದು’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಹೀರೋ ಕ್ರಾಂತಿ.
ನಿರ್ಮಾಪಕ ನಾಗೂರ್ ಅವರು ಕ್ರಾಂತಿ ನಟಿಸಿದ್ದ ‘ಶ್ರೀಮಂತ’ ಚಿತ್ರವನ್ನು ವೀಕ್ಷಿಸಿದ್ದರಂತೆ. ಚಿತ್ರದಲ್ಲಿ ಅವರ ನಟನೆ ಇಷ್ಟಪಟ್ಟಿದ್ದಾರೆ. ಹಾಗಾಗಿ ತಮ್ಮ ಸಿನಿಮಾಗೆ ಅವರನ್ನೇ ಹೀರೋ ಮಾಡಿದ್ದಾರೆ. ‘ನಾವು ಬಿಜಾಪುರದವರು. ಶ್ರೀ ಸಿದ್ದೇಶ್ವರಸ್ವಾಮಿ ಅನುಯಾಯಿಗಳು. ತಂದೆ ಮಕ್ಕಳ ಸಂಬಂಧದ ಸುತ್ತ ನಡೆಯುವ ಕೌಟುಂಬಿಕ ಕತೆಯಿದು. ಈಗ ಫ್ಯಾಮಿಲಿ ಸಂಬಂಧಗಳು ತುಂಬಾ ಕೆಟ್ಟುಹೋಗಿವೆ. ಒಂದಷ್ಟು ಜನ ಒಳ್ಳೇದನ್ನು ಕಲಿಯಲೆಂದು ಈ ಸಿನಿಮಾ ಮಾಡ್ತಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ನಾಗೂರ್. ಮಂಜುನಾಥ್ ಹೆಗಡೆ ಮತ್ತು ಹರಿಣಿ ಅವರು ಚಿತ್ರದಲ್ಲಿ ನಾಯಕನ ತಂದೆ – ತಾಯಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ನಿರ್ದೇಶಕ ಸಾಯಿಕೃಷ್ಣ ಅವರು ಚಿತ್ರದ ಬಗ್ಗೆ ಮಾತನಾಡಿ, ‘ಈ ಸಿನಿಮಾಗೆ ಡೈಲಾಗ್ ಬರೆಸಲೆಂದು ನನ್ನ ಬಳಿ ಬಂದವರು ನಂತರ ನೀವೇ ಡೈರೆಕ್ಷನ್ ಮಾಡಿ ಅಂದರು. ನಿರ್ಮಾಪಕರು ಲಾಭ – ನಷ್ಟದ ಚಿಂತೆ ಮಾಡದೆ ಸದಭಿರುಚಿಯ ಚಿತ್ರ ನೀಡಬೇಕೆಂಬ ಉದ್ದೇಶದೊಂದಿಗೆ ಈ ಸಿನಿಮಾ ಮಾಡ್ತಿದಾರೆ. ತಂದೆ ಮಕ್ಕಳ ನಡುವೆ ನಡೆಯುವ ಕಥೆಯಿದು. ಅಪ್ಪ, ಮಕ್ಕಳನ್ನು ಹೇಗೆಲ್ಲಾ ಪೋಷಣೆ ಮಾಡ್ತಾರೆ? ಮಕ್ಕಳು ತಮ್ಮ ಪೋಷಕರನ್ನು ಹೇಗೆ ನೋಡಿಕೊಳ್ತಾರೆ ಅನ್ನೋದು ಚಿತ್ರದ ಕಂಟೆಂಟ್’ ಎನ್ನುತ್ತಾರೆ. ನಾಯಕಿ ಅಮೃತಾ ಅವರಿಗೆ ಇದು ಮೂರನೇ ಸಿನಿಮಾ. ಚಿತ್ರದಲ್ಲಿ ಅವರು ಅಹಂಕಾರಿ ಹೆಣ್ಣುಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರ್ ಡಿ ನಾಗಾರ್ಜುನ ಛಾಯಾಗ್ರಹಣ, ಎಂ ಎಸ್ ತ್ಯಾಗರಾಜ್ ಸಂಗೀತ, ಮಾಸ್ ಮಾದ, ಟೈಗರ್ ಶಿವು ಸಾಹಸ ಚಿತ್ರಕ್ಕೆ ಇರಲಿದೆ.