ಜನಪ್ರಿಯ ‘ರಾಮಾಯಣ’ ಹಿಂದಿ ಸರಣಿಯಲ್ಲಿ ರಾವಣನ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟ ಅರವಿಂದ್ ತ್ರಿವೇದಿ ಅಗಲಿದ್ದಾರೆ. ಪ್ರಧಾನಮಂತ್ರಿ ಹಾಗೂ ನಟ-ನಟಿಯರು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಹಿರಿಯ ನಟ ಅರವಿಂದ್ ತ್ರಿವೇದಿ (82 ವರ್ಷ) ನಿನ್ನೆ ತಡರಾತ್ರಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಜನಪ್ರಿಯ ಹಿಂದಿ ಸರಣಿ ‘ರಾಮಾಯಣ’ದಲ್ಲಿ ರಾವಣನ ಪಾತ್ರ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ತ್ರಿವೇದಿ ಅವರ ಸಂಬಂಧಿ ಕೌಸ್ತುಭ್‌, “ಕೆಲವು ಕಾಲದಿಂದ ಅರವಿಂದ್ ತ್ರಿವೇದಿ ವಯೋಸಹಜ ತೊಂದರೆಗಳಿಂದ ಬಳಲುತ್ತಿದ್ದರು. ಬಹುಅಂಗ ವೈಫಲ್ಯದಿಂದಾಗಿ ನಿನ್ನೆ ತಡರಾತ್ರಿ ಹೃದಯಾಘಾತದಿಂದ ಅಗಲಿದ್ದಾರೆ” ಎಂದಿದ್ದಾರೆ. ರಮಾನಂದ್‌ ಸಾಗರ್‌ ನಿರ್ದೇಶನದ ‘ರಾಮಾಯಣ’ ಸರಣಿ 1987ರಲ್ಲಿ ಮೊದಲ ಬಾರಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈ ಸರಣಿಯ ಜನಪ್ರಿಯತೆಯಿಂದ ತ್ರಿವೇದಿ ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಪಡೆದರು. ಹಿಂದಿ ಮತ್ತು ಗುಜರಾತಿ ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ಕಳೆದ ವರ್ಷ ಕೋವಿಡ್ ಲಾಕ್‌ಡೌನ್‌ ಅವಧಿಯಲ್ಲಿ ‘ರಾಮಾಯಣ’ ಮರುಪ್ರಸಾರವಾಗಿತ್ತು. ಆಗ ‘ಸೀತಾಹರಣ್‌’ ಸನ್ನಿವೇಶವನ್ನು ವೀಕ್ಷಿಸುತ್ತಿದ್ದ ಅರವಿಂದ್ ತ್ರಿವೇದಿ ಅವರ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರಧಾನಮಂತ್ರಿ ಹಾಗೂ ‘ರಾಮಾಯಣ’ದಲ್ಲಿ ರಾಮನ ಪಾತ್ರಧಾರಿ ಅರುಣ್ ಗೋವಿಲ್‌, ‘ಸೀತೆ’ಯಾಗಿದ್ದ ದೀಪಿಕಾ, ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ ಸುನೀಲ್ ಲಹ್ರಿ ಇತರರು ಸೋಷಿಯಲ್ ಮೀಡಿಯಾ ಮೂಲಕ ತ್ರಿವೇದಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. “ನಮ್ಮೆಲ್ಲರ ಪ್ರೀತಿಯ ಅರವಿಂದ್ ತ್ರಿವೇದಿ ಇನ್ನು ಮುಂದೆ ನಮ್ಮೊಂದಿಗೆ ಇರುವುದಿಲ್ಲ ಎನ್ನುವುದು ದುಃಖದ ಸಂಗತಿ. ತಂದೆ ಸಮಾನರಾದ ಅವರನ್ನು ಕಳೆದುಕೊಂಡಿದ್ದೇನೆ. ಅವರ ಅತ್ಮಕ್ಕೆ ಶಾಂತಿ ಸಿಗಲಿ” ಎಂದು ನಟ ಸುನೀಲ್ ಲಹ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಹಾಕಿದ್ದಾರೆ. “ಅರವಿಂದ್ ತ್ರಿವೇದಿ ಅವರು ನಟರಾಗಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ನಮಗೆ ನೆನಪಾಗುತ್ತಾರೆ. ‘ರಾಮಾಯಣ’ ಪಾತ್ರದ ಮೂಲಕ ಅವರು ಮುಂದಿನ ತಲೆಮಾರಿನ ಜನರ ಮನಸ್ಸಿನಲ್ಲೂ ಉಳಿಯಲಿದ್ದಾರೆ. ಅವರ ಕುಟುಂಬದವರಿಗೆ ಸಾಂತ್ವನ ಹೇಳುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here