ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ತೆಲುಗು ಸಿನಿಮಾ ತಂಡಕ್ಕೆ ನಟಿ ಸಮಂತಾ ಸೇರ್ಪಡೆಗೊಂಡಿದ್ದಾರೆ. ಚಿತ್ರತಂಡ ಈ ಸುದ್ದಿಯನ್ನು ಟ್ವೀಟ್ ಮಾಡಿದ್ದು, ಸಮಂತಾ ಅವರು ಅಲ್ಲು ಅರ್ಜುನ್ ಜೊತೆ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ.

ತಮ್ಮ ಚಿತ್ರತಂಡಕ್ಕೆ ನಟಿ ಸಮಂತಾ ಸೇರ್ಪಡೆಗೊಳ್ಳುತ್ತಿರುವ ವಿಷಯವನ್ನು ‘ಪುಷ್ಪ’ ಸಿನಿಮಾ ತಂಡ ಟ್ವಿಟ್ ಮಾಡಿದೆ. ಈ ಸ್ಪೆಷಲ್ ಡ್ಯಾನ್ಸ್‌ ನಂಬರ್‌ನಲ್ಲಿ ನಟಿ ಸಮಂತಾ ಅವರು ಹೀರೋ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಲಿದ್ದಾರೆ. ಈ ಹಿಂದೆ ಅವರು ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಿದ್ದರು. “ಪುಷ್ಪ ಚಿತ್ರದ ಐದನೇ ಹಾಡು ಸ್ಪೆಷಲ್ ನಂಬರ್ ಆಗಲಿದೆ. ಇದಕ್ಕೆ ವಿಶೇಷ ವ್ಯಕ್ತಿಯೊಬ್ಬರು ಬೇಕಿತ್ತು! ಸಮಂತಾ ಸಂತೋಷದಿಂದ ಚಿತ್ರದ ಭಾಗವಾಗಲು ಒಪ್ಪಿದರು. ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಲಿರುವ ವಿಷಯ ಹಂಚಿಕೊಳ್ಳುತ್ತಿರುವುದು ನಮಗೆ ಖುಷಿ ತಂದಿದೆ. ಇದೊಂದು ವಿಶೇಷ ಹಾಡಾಗಿ ದಾಖಲಾಗಲಿದೆ” ಎಂದು ಚಿತ್ರತಂಡ ಸಮಂತಾರ ಫೋಟೋ ಹಾಕಿ ಟ್ವೀಟ್ ಮಾಡಿದೆ.

‘ಪುಷ್ಪ’ ಚಿತ್ರದೊಂದಿಗೆ ನಿರ್ದೇಶಕ ಸುಕುಮಾರ್ ಮತ್ತು ನಟ ಅಲ್ಲು ಅರ್ಜುನ್ ಮೂರನೇ ಬಾರಿ ಜೊತೆಯಾಗುತ್ತಿದ್ದಾರೆ. ಈ ಹಿಂದೆ ಸುಕುಮಾರ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ರ ‘ಆರ್ಯ’ ಮತ್ತು ‘ಆರ್ಯ 2’ ತೆರೆಕಂಡಿದ್ದವು. ಮೈತ್ರಿ ಮೂವೀ ಮೇಕರ್ಸ್‌ ಮತ್ತು ಮುತ್ತಮ್ ಸೆಟ್ಟಿ ಮೀಡಿಯಾ ನಿರ್ಮಾಣದಲ್ಲಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಾವ್ ರಮೇಶ್‌, ಅಜಯ್ ಘೋಷ್‌, ಅನಸೂಯ ಭಾರದ್ವಾಜ್‌ ನಟಿಸಿದ್ದಾರೆ. ಸಂಗೀತ ಸಂಯೋಜನೆ ದೇವಿಶ್ರೀಪ್ರಸಾದ್. ಡಿಸೆಂಬರ್‌ 17ರಂದು ಚಿತ್ರ ತೆರೆಕಾಣಲಿದೆ. ಮೂಲ ತೆಲುಗು ಜೊತೆಗೆ ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲೂ ಡಬ್ಬಿಂಗ್ ಅವತರಣಿಕೆಗಳು ಬಿಡುಗಡೆಯಾಗಲಿವೆ.

LEAVE A REPLY

Connect with

Please enter your comment!
Please enter your name here