ಚೆಂದದ ಹೆಸರಿನ ಕೌಸ್ತುಭ ಮಣಿ ಕನ್ನಡಿಗರಿಗೆ ಪರಿಚಿತರಾಗಿದ್ದು ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ. ಈ ಸರಣಿಯಲ್ಲಿ ‘ಇಂಚರಾ’ ಆಗಿ ಅವರು ಬಹುಬೇಗ ಎಲ್ಲರಿಗೂ ಇಷ್ಟವಾಗಿಬಿಟ್ಟರು. ಈ ಜನಪ್ರಿಯತೆ ಅವರನ್ನು ತೆಲುಗು ಕಿರುತೆರೆಗೆ ಕರೆದೊಯ್ದಿತು. ಅಲ್ಲಿಯೂ ಅವರು ಗೆದ್ದರು. ಮುಂದೆ ಸಿನಿಮಾ ಅವಕಾಶ ಒದಗಿ ಬಂದಿತು. ಇದೀಗ ಎರಡನೇ ಸಿನಿಮಾ ’45’ನಲ್ಲಿ ಶಿವರಾಜಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ಅವರಂತಹ ದೊಡ್ಡ ನಟರೊಂದಿಗೆ ಅಭಿನಯಿಸುತ್ತಿದ್ದಾರೆ. ಹಾಗೆ ನೋಡಿದರೆ ಕೌಸ್ತುಭ ಮಣಿ ನಟಿಯಾಗಬೇಕು ಎಂದು ಅಪೇಕ್ಷೆ ಪಟ್ಟವರೇನಲ್ಲ. ಆಕಸ್ಮಿಕವಾಗಿ ಒದಗಿಬಂದ ಅವಕಾಶಗಳು ಅವರಿಗೆ ಅದೃಷ್ಟ ತಂದುಕೊಟ್ಟವು. ಅದೃಷ್ಟದ ಜೊತೆ ಪ್ರತಿಭೆಯೂ ಸೇರಿಕೊಂಡು ಅವರ ನಟನಾ ಜರ್ನೀ ಸೊಗಸಾಗಿ ಸಾಗಿದೆ. ಬಬ್ಲೀ ಹುಡ್ಗಿ ಕೌಸ್ತುಭ ಮಣಿ ಅವರೊಂದಿಗಿನ ಮಾತುಕತೆ ಇಲ್ಲಿದೆ.

ಫಟ್‌ಫಟ್ ಅಂತ ಮಾತಾಡುವ, ಮುದ್ದಾದ ನಗುವಿನ ಅರಸಿ ಮತ್ಯಾರೂ ಅಲ್ಲ ಅವರೇ ‘ನನ್ನರಸಿ ರಾಧೆ’. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನನ್ನರಸಿ ರಾಧೆ’ ಧಾರಾವಾಹಿಯ ನಾಯಕಿ ಇಂಚರಾ ಎನ್ನುವ ಮಾತಿನ ಪಟಾಕಿಯ ಸದ್ದು ಇವತ್ತಿಗೂ ಕಿವಿಯಲ್ಲಿ ರಿಂಗಣಿಸುತ್ತದೆ. ಅದೊಂದು ನಗುಮುಖ ಕಣ್ಣೆದುರು ನಿಲ್ಲುವಷ್ಟು ಪ್ರೇಕ್ಷಕರ ಮನದಲ್ಲಿ ಉಳಿದು ಹೋಗಿದ್ದಾರೆ ಇಂಚರಾ ಪಾತ್ರಧಾರಿ ಕೌಸ್ತುಭ ಮಣಿ. ಹಾಗೆ ನೋಡಿದರೆ ನಟಿಯಾಗಬೇಕೆಂದು ಅವರು ಅಪೇಕ್ಷೆ ಪಟ್ಟವರಲ್ಲ. ಇದೀಗ ಸಿನಿಮಾ, ಕನ್ನಡ, ತೆಲುಗು ಕಿರುತೆರೆಯಲ್ಲಿ ಗಮನ ಸೆಳೆದಿದ್ದಾರೆ. ಕಿರುತೆರೆಯಿಂದ ಹಿರಿತೆರೆ ಜರ್ನಿ ಆರಂಭಿಸಿರುವ ಅವರೀಗ ಸಿನಿಮಾಗಳಲ್ಲಿ ಬಿಝಿ. ಸದ್ಯ ಅರ್ಜುನ್ ಜನ್ಯ ಅವರ ’45’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ’45’ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಇದೀಗ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿದೆ.

ಈಗಷ್ಟೇ ಸಿನಿ ಜರ್ನಿ ಆರಂಭಿಸಿರುವ ಕೌಸ್ತಭ ಮಣಿ ಅವರಿಗೆ ಸೂಪರ್‌ಸ್ಟಾರ್‌ಗಳ ಜತೆ ನಟಿಸುವ ಅವಕಾಶ ಹೇಗೆ ಸಿಕ್ಕಿತು ಎಂದರೆ ‘ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಿನಿಮಾಗೆ ಸಂಬಂಧಿಸಿದಂತೆ ಆಡಿಷನ್ ನಡೆಯುತ್ತಿದೆ ಅನ್ನುವ ವಿಷಯ ಗೊತ್ತಾದಾಗ ನನ್ನ ಫೋಟೊ ಕಳುಹಿಸಿದ್ದೆ. ಸಾವಿರಾರು ಜನರಲ್ಲಿ ನಾನು ಆಯ್ಕೆಯಾಗಿ ಈಗ ನಾಯಕಿಯಾಗಿದ್ದೇನೆ ಎಂಬುದೇ ಅಚ್ಚರಿ’ ಎನ್ನುತ್ತಾರೆ. ‘ಧಾರಾವಾಹಿ ನಟನೆಯ ಆರಂಭದ ದಿನಗಳಿಂದಲೂ ಸಿನಿಮಾದ ಸೆಳೆತ ಇದ್ದೇ ಇತ್ತು. ಅದಕ್ಕೆ ಪೂರಕವಾಗಿ ಉತ್ತಮ ಅವಕಾಶವೇ ಸಿಕ್ಕಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಇಂಥದ್ದೊಂದು ಸಿನಿಮಾದಲ್ಲಿ ಅಭಿನಯಿಸುವುದೇ ಅದೃಷ್ಟ ಎನ್ನುವ ಕೌಸ್ತುಭ ಮಣಿ ಅವರು ದೊಡ್ಡ ನಟರ ಜತೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದೇ ಒಂದು ಕಲಿಕಾ ಶಾಲೆ ಇದ್ದ ಹಾಗೆ’ ಎನ್ನುತ್ತಾರೆ.

’45’ ಸಿನಿಮಾದಲ್ಲಿ ನಾಯಕಿಯಾದ ಅನುಭವ ಹೇಗಿತ್ತು ಅಂದರೆ ಕೌಸ್ತುಭ ಮಣಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಈ ಸಿನಿಮಾ ಬಗ್ಗೆ ವಿಪರೀತ ಎಕ್ಸ್‌ಪೆಕ್ಟೇಷನ್‌ ಇದೆ ಎನ್ನುತ್ತಾರೆ. ಕೌಸ್ತುಭಮಣಿ ಅವರಿಗೆ ’45’ ಎರಡನೇ ಸಿನಿಮಾ. ಅವರ ಮೊದಲ ಸಿನಿಮಾ ‘ರಾಮಾಚಾರಿ 2.0’ . ತಮ್ಮ ಎರಡನೇ ಸಿನಿಮಾನೇ ಮಲ್ಟಿ ಸ್ಟಾರರ್‌ ಪ್ರಾಜೆಕ್ಟ್‌ ಸಿಕ್ಕಿರುವುದಕ್ಕೆ ಕೌಸ್ತುಭ ಮಣಿ ಖುಷಿಯಾಗಿದ್ದಾರೆ. ಇದರಲ್ಲಿ ಅವರದ್ದು ಹೋಮ್ಲಿಗರ್ಲ್ ಕ್ಯಾರೆಕ್ಟರ್.

ಕಿರುತೆರೆಯಿಂದ ಅವರು ದೂರ ಸರಿಯುತ್ತಾರಾ?
ಸಿನಿ ಜರ್ನಿ ಆರಂಭಿಸಿರುವ ಕೌಸ್ತುಭ ಮಣಿ ಕಿರುತೆರೆ ಪ್ರೇಕ್ಷಕರಿಂದ ದೂರ ಸರಿಯುತ್ತಿದ್ದಾರಾ? ಅಂತ ಕೇಳಿದರೆ ಇಲ್ಲ ಎನ್ನುತ್ತಾರೆ. ‘ಸದ್ಯಕ್ಕೆ ಸಿನಿಮಾ ಕಡೆ ಗಮನಹರಿಸಿದ್ದೇನೆ. ಬೇರೆ ಯಾವುದೇ ಧಾರಾವಾಹಿ ಒಪ್ಪಿಕೊಂಡಿಲ್ಲ. ಆದರೆ, ಒಳ್ಳೆಯ ಧಾರಾವಾಹಿ ಅವಕಾಶ ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ. ನಟನೆಗೆ ಕಿರುತೆರೆ ಬೆಳ್ಳಿತೆರೆ ಎಂಬ ಬೇಧವಿಲ್ಲ ಎನ್ನುವ ಅವರು ಕಿರುತೆರೆ ಅತೀ ಕಡಿಮೆ ಸಮಯದಲ್ಲೇ ಎಲ್ಲವನ್ನು ಕೊಟ್ಟಿದೆ ಎಂದು ಜನಪ್ರಿಯತೆ ತಂದುಕೊಟ್ಟ ಕಿರುತೆರೆ ಮೀಡಿಯಾಗೆ ಥ್ಯಾಂಕ್ಸ್‌ ಹೇಳುತ್ತಾರೆ.

ಬಣ್ಣದ ನಂಟು
ಕೌಸ್ತುಭ ಮಣಿ ಅವರಿಗೆ ನಟನೆಯ ನಂಟು ಕೌಟುಂಬಿಕವಾಗಿ ಇರಲಿಲ್ಲ. ಬಾಲ್ಯದಲ್ಲಿ ತಮ್ಮ ಪಾಡಿಗೆ ತಾವಿರುತ್ತಿದ್ದರಂತೆ. ಭಗವದ್ಗೀತೆ, ಲಲಿತಾ ಸಹಸ್ರನಾಮ ಓದುತ್ತಿದ್ದರು. ಸ್ನೇಹಿತರ ಜತೆ ಬೀದಿಯಲ್ಲಿ ಆಡಿದ್ದಂತೂ ಇಲ್ಲವೇ ಇಲ್ಲ ಎನ್ನುವ ಅವರು, ಅವರ ಪಾಡಿಗೆ ಅವರಿರುವ ತುಸು ಜಾಸ್ತಿಯೇ ಸೈಲೆಂಟ್ ಹುಡುಗಿ! ‘ಈಗ ಪೂರ್ತಿಯಾಗಿ ಬದಲಾಗಿದ್ದೇನೆ. ನನ್ನನ್ನು ನಾನು ಹಿಂದೊಮ್ಮೆ ತಿರುಗಿ ನೋಡಿಕೊಂಡರೆ ಇದು ನಾನೇನಾ ಎನಿಸುತ್ತದೆ’ ಎಂದು ಅಚ್ಚರಿ ಪಡುತ್ತಾರೆ. ಕುಟುಂಬವೇ ಅವರ ಬಿಗ್ಗೆಸ್ಟ್ ಸ್ಟ್ರೆಂಥ್‌. ಆದರೆ ಅವರು ಕೆಲವೊಮ್ಮೆ ಭಾವನೆಗಳ ತೊಳಲಾಟಕ್ಕೆ ಸಿಲುಕುತ್ತಾರಂತೆ. ಅದೇ ಅವರ ವೀಕ್‌ನೆಸ್.

ಬಾಲ್ಯ ಮುಗಿದು ಗಂಭೀರ ಓದಿನ ಹಂತಕ್ಕೆ ಬಂದಾಗ ಡಾಕ್ಟರ್, ಎಂಜಿನಿಯರ್ ಒಳಗೊಂಡ ಕುಟುಂಬದಲ್ಲಿ ಸಹಜವಾಗಿ ಅವರೂ ಅದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದು ಮನೆಯವರ ಇಚ್ಛೆ. ಆದರೆ ಇಂಥದ್ದೇ ಓದಬೇಕು ಅನ್ನುವ ಯೋಜನೆ ಇವರಿಗೆ ಇರಲಿಲ್ಲ. ಕಾಮರ್ಸ್ ತಗೊಂಡಿದ್ರಂತೆ. ಇವರ ಚಿತ್ತ ಸಿಎ, ಸಿಎಸ್‌ನತ್ತ ಇತ್ತು. ಮೊದಲು ಸಿಎಸ್ ಎನಿಸಿಕೊಂಡವರು ಆಮೇಲೆ ಸಿಎ ಬಗ್ಗೆ ಯೋಚಿಸುತ್ತಾ ಬಿಕಾಂ ಮುಗಿಸುವುದರೊಳಗೆ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಬ್ಯಾಂಕ್‌ವೊಂದರಲ್ಲಿ ಕೆಲಸ ಸಿಕ್ತು.

ಕೆಲಸಕ್ಕೆ ಸೇರಿದವರನ್ನು ಸೆಳೆದಿದ್ದು ಬ್ಯೂಟಿ ಕಾಂಟೆಸ್ಟ್‌. ಸಿಕ್ ಲಿವ್ ಹಾಕಿ ಸೌಂದರ್ಯ ಸ್ಫರ್ಧೆ ನಡೆಯುವ ಜಾಗಕ್ಕೆ ಹೋಗಿದ್ದರಂತೆ. ಅಲ್ಲಿ ಸಿಕ್ಕಿದ್ದು ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಮಾನ್ವಿತಾ ಹರೀಶ್. ಅವರು ಇವರನ್ನು ನೋಡಿ, ನಟನೆ ಬಗ್ಗೆ ಆಸಕ್ತಿ ಇದೆಯಾ ಅಂತ ಕೇಳಿದಾಗ ಮನಸು ಆ ಬಣ್ಣದ ಲೋಕದತ್ತ ಹೊರಳಿತ್ತು. ‘ನನ್ನರಸಿ ರಾಧೆ ಧಾರಾವಾಹಿಗೆ ನಾಯಕಿಯಾಗಿ ಸೆಲೆಕ್ಟ್ ಆದಾಗ ಕ್ಯಾಮೆರಾ ಎದುರಿಸುವುದು ಕೂಡ ಗೊತ್ತಿರಲಿಲ್ಲ. ಆ ಸಮಯದಲ್ಲಿ ನಿರ್ದೇಶಕರು ಹಾಗೂ ಕ್ಯಾಮೆರಾಮನ್ ಪ್ರತಿ ಹಂತದಲ್ಲೂ ಹೇಳಿಕೊಡುತ್ತಿದ್ದುದನ್ನು ಮರೆಯಲು ಸಾಧ್ಯವೇ ಇಲ್ಲ. ಅಲ್ಲಿಂದ ಶುರುವಾಯ್ತು ನಟನೆಯ ಜರ್ನಿ’ ಎನ್ನುವ ಅವರು ಧಾರಾವಾಹಿಯ ಮೂಲಕ ಮನೆ ಮಗಳಾದರು. ತೆಲುಗಿನ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದಾರೆ. ‘ಸಿಕ್ ಲಿವ್ ಹಾಗೂ ನಟಿ ಮಾನ್ವಿತಾ ಬಣ್ಣದ ಬದುಕಿನ ಟರ್ನಿಂಗ್ ಪಾಯಿಂಟ್!’ ಎನ್ನುತ್ತಾರೆ. ಏಕೆಂದರೆ ಇವರ ಬಣ್ಣದ ಬದುಕಿಗೆ ಕಾರಣಕರ್ತರಿವರು.

ಎಲ್ಲರ ಮೆಚ್ಚಿನ ‘ನನ್ನರಸಿ ರಾಧೆ’
‘ನನ್ನರಸಿ ರಾಧೆ’ ಇಂಚರಾ ಪಾತ್ರ ಮರೆಯಲೇಬಾರದ ತಮ್ಮ ಬಣ್ಣದ ಬದುಕಿನ ನಂಟಿಗೆ ಬಿಡಿಸಲಾರದ ನೆನಪಿನ ಅಂಟು ಎನ್ನುವ ಅವರು ಸಹ ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರಂತೆ. ಸಿಹಿಕಹಿ ಚಂದ್ರು, ವೈಜಯಂತಿ ಕಾಶಿ ಅವರಂತಹ ಮೇರು ಕಲಾವಿದರೊಂದಿಗೆ ನಟಿಸಿದ್ದೇ ತಮಗೆ ಸಿಕ್ಕ ಸೌಭಾಗ್ಯ ಎನ್ನುವ ಅವರು ಪ್ರೇಕ್ಷಕರೊಂದಿಗಿನ ಬಾಂಡಿಂಗ್ ಕೂಡ ಉತ್ತಮವಾಗಿತ್ತು ಎನ್ನುತ್ತಾರೆ. ಪ್ರೇಕ್ಷಕರು ತೆರೆಯ ಮೇಲಿನ ಇಂಚರಾಳನ್ನು ಎಷ್ಟು ಹಚ್ಚಿಕೊಂಡಿದ್ದರು ಎಂಬುದಕ್ಕೆ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುತ್ತಾರೆ. ಒಮ್ಮೆ ದೇವಸ್ಥಾನವೊಂದರಲ್ಲಿ ಹಿರಿಯ ದಂಪತಿ ಎದುರಾದರಂತೆ. ಇವರನ್ನು ನೋಡಿದ್ದೇ ಕಣ್ಣು ತುಂಬಿಕೊಂಡರಂತೆ. ಆ ಮಟ್ಟಿಗೆ ಮಗಳಂತಹ ತಮ್ಮ ನೆಚ್ಚಿನ ನಟಿ ಎದುರಾದ ಖುಷಿ ಅನುಭವಿಸಿದರಂತೆ. ಇನ್ನೊಬ್ಬ ಅಭಿಮಾನಿ ತಾವು ಪ್ರೀತಿಯಿಂದ ಸಾಕಿದ ನಾಯಿಗೆ ಇಂಚರಾ ಅಂತಲೇ ಹೆಸರಿಟ್ಟಿದ್ದಾರೆ! ಇಡೀ ಧಾರಾವಾಹಿ ತಂಡದೊಂದಿಗೆ ಕುಟುಂಬದಂತೆ ಇದ್ದ ಅವರು ಅವರನ್ನು ತಮ್ಮ ಮನೆಯ ಸದಸ್ಯರೆಂದೇ ಭಾವಿಸಿದ್ದಾರೆ.

ಇಂಚರಾ ಹೇಗೆ? ಕೌಸ್ತುಭ ಮಣಿ ಹೇಗೆ?
ಇಂಚರಾಗೂ, ಕೌಸ್ತುಭ ಮಣಿಗೂ ಹೋಲಿಕೆ ಇದೆಯೇ ಎಂದರೆ ಪೂರ್ತಿ ಭಿನ್ನ ಸ್ವಭಾವ ಎನ್ನುತ್ತಾರೆ. ಇಂಚರಾ ವಿಪರೀತ ಮಾತನಾಡುವಷ್ಟೇ ಜಗಳಗಂಟಿಯೂ ಹೌದು. ಆದರೆ ಕೌಸ್ತುಭ ಮಣಿ ವಿಪರೀತ ಸೈಲೆಂಟ್. ಜಗಳವಾಗುವ ಸಂದರ್ಭ ಬಂದರೆ ಅಲ್ಲಿಂದ ಜಾಗ ಖಾಲಿ ಮಾಡುವಷ್ಟು ತಮ್ಮ ಪಾಡು ಎಂದುಕೊಂಡ ವ್ಯಕ್ತಿತ್ವ ಅದು. ಆದರೆ ನಮ್ಮದಲ್ಲದ ವ್ಯಕ್ತಿತ್ವ ಪ್ರವೇಶಿಸುವ ಮೂಲಕ ನಮ್ಮನ್ನು ನಾನು ತೆರೆಯ ಮೇಲೆ ನೋಡಿಕೊಳ್ಳುವುದೇ ಒಂಥರಾ ಖುಷಿ ಎನ್ನುತ್ತಾರೆ ಅವರು. ‘ಇಂಚರಾಗೆ ಯಾರೇ ತೊಂದರೆ ಕೊಟ್ಟರೂ ಅವರು ಒಳ್ಳೆಯವರೇ, ಆದರೆ ಪರಿಸ್ಥಿತಿ ಹಾಗೆ ಮಾಡಿಸುತ್ತದೆ ಎನ್ನುವಷ್ಟು ಒಳ್ಳೆಯ ಬುದ್ಧಿ. ಆದರೆ ನಿಜ ಜೀವನದಲ್ಲಿ ಹಾಗೆಲ್ಲ ನಾನು ಸುಮ್ಮನಿರುವುದಿಲ್ಲ. ತಪ್ಪು ಅಂದರೆ ತಪ್ಪೇ’ ಎನ್ನುತ್ತಾರೆ.

ತೆಲುಗಿನ ಅನುಭವ
ಕನ್ನಡ ಧಾರಾವಾಹಿ ನಟನಟಿಯರು ತೆಲುಗಿನಲ್ಲಿ ಗುರುತಿಸಿಕೊಳ್ಳುವುದು ಸಹಜ. ಇಲ್ಲಿ ಒಂದು ಧಾರಾವಾಹಿ ಕೊಡುವ ಹಿಟ್ ಅವರಿಗೆ ಬೇರೆ ಭಾಷೆಗಳಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುತ್ತವೆ. ಕೌಸ್ತುಭ ಮಣಿ ಅವರಿಗೂ ತೆಲುಗಿನಿಂದ ಕರೆ ಬಂದಿತ್ತು. ಅವರು ತೆಲುಗಿನ ‘ಕೋಡಲು ಮೀಕು ಜೋಹರ್ಲು’ ಧಾರಾವಾಹಿ ಮೂಲಕ ಅಲ್ಲಿನ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕನ್ನಡದಲ್ಲಿ ಒಂದು ಧಾರಾವಾಹಿ ಹಿಟ್ ಆದ ತಕ್ಷಣ ಬಹುತೇಕ ಧಾರಾವಾಹಿ ನಟಿಯರು ತೆಲುಗಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಅಂತಹ ಸೆಳೆತ ಅಲ್ಲೇನು ಇದೆ ಎಂದರೆ ಈ ಬಗ್ಗೆ ಕೌಸ್ತುಭ ಮಣಿ ಹೇಳುವಂತೆ ಅಲ್ಲಿಯ ಪ್ಲಾನಿಂಗ್‌ನಿಂದ ಹಿಡಿದು ಮೇಕಿಂಗ್‌ನಿಂದ ಹಿಡಿದು ಪೂರ್ತಿ ಭಿನ್ನ ಅನುಭವ. ‘ಅಲ್ಲಿಯವರ ಭಾಷಾ ಅಭಿಮಾನ ಎಷ್ಟು ಅಂದರೆ ಪ್ರತಿಯೊಬ್ಬರೂ ತೆಲುಗನ್ನೇ ಮಾತನಾಡುತ್ತಾರೆ. ಅನ್ಯ ಭಾಷೆ ಬಳಸುವುದೇ ಇಲ್ಲ. ನಮಗೂ ತೆಲುಗಿನಲ್ಲೇ ಪ್ರತಿಕ್ರಿಯಿಸುತ್ತಾರೆ. ಹೀಗಾಗಿ ಅನಿವಾರ್ಯವಾಗಿ ನಾನು ತೆಲುಗು ಕಲಿಯಬೇಕಾಯ್ತು’ ಎನ್ನುತ್ತಾರೆ.

ಬಿಡುವಿದ್ದಾಗ ಕೌಸ್ತುಭ ಮಣಿ ಏನ್ಮಾಡ್ತಾರೆ?
ಸಾಮಾಜಿಕ ಜಾಲ ತಾಣಗಳಲ್ಲಿ ಕೌಸ್ತುಭ ಮಣಿ ಅವರು ಸಾಂಪ್ರದಾಯಿಕವಾಗಿಯೇ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾರೆ. ಲೆಹೆಂಗಾ, ಸೀರೆಗಳ ಮೂಲಕ ಮೋಡಿ ಮಾಡುವ ಇವರು ಇತ್ತೀಚೆಗೆ ಆಧುನಿಕ ಉಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ಫೋಟೊ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾ ಅಪ್‌ಡೇಟ್ ಮಾಡುವುದನ್ನು ಮರೆಯುವುದಿಲ್ಲ. ಕಾದಂಬರಿಗಳನ್ನು ಓದುವುದು ಅಂದರೆ ಅವರಿಗಿಷ್ಟ. ಸಂಗೀತ ಕೇಳುವುದು, ವರ್ಕೌಟ್ ಮಾಡುವುದು ಅವರಿಷ್ಟದ ಹವ್ಯಾಸ. ವಿಶೇಷ ಅಂದರೆ ಇವರಿಗೆ ಪೇಂಟಿಂಗ್ ಮಾಡುವ ಅಭ್ಯಾಸ ಇದೆ. ದಿಯಾ ಪೇಂಟಿಂಗ್‌ನಲ್ಲಿ ಇವರು ಎಕ್ಸ್‌ಪರ್ಟ್‌. ಬಿಡುವಿದ್ದಾಗ ಅಡುಗೆ ಮಾಡುವ ಅಭ್ಯಾಸವೂ ಇದೆ. ದಾಲ್ ಕಿಚಡಿ ಇವರು ಮಾಡುವ ಅದ್ಭುತ ರೆಸಿಪಿ.

ಜೀವನವನ್ನು ನಾವು ಹೇಗೆ ನೋಡುತ್ತೇವೆಯೋ ಹಾಗೆ ಅದು ಎದುರಾಗುತ್ತದೆ. ಧನಾತ್ಮಕವಾಗಿ ಜೀವನವನ್ನು ನೋಡಬೇಕು ಎನ್ನುವ ಅವರು ಮುಂದಿನ ದಿನಗಳಲ್ಲಿ ಸಿನಿಮಾಗಳತ್ತ ಹೆಚ್ಚೆಚ್ಚು ತಮ್ಮನ್ನು ತೊಡಗಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ.

LEAVE A REPLY

Connect with

Please enter your comment!
Please enter your name here