ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘RRR’ ಸಿನಿಮಾದ ಬಜೆಟ್‌ 336 ಕೋಟಿ ರೂಪಾಯಿ ಎನ್ನುವುದು ಚಿತ್ರತಂಡದ ಅಧಿಕೃತ ಮಾಹಿತಿ. ಇದರಲ್ಲಿ GST, ಚಿತ್ರದ ತಾರೆಯರು ಹಾಗೂ ತಂತ್ರಜ್ಞರ ಸಂಭಾವನೆ ಸೇರ್ಪಡೆಯಾಗಿಲ್ಲ.

“RRR ಸಿನಿಮಾ ನಿರ್ಮಾಪಕರಿಂದ ನಮಗೆ ಅರ್ಜಿ ಬಂದಿದೆ. ನಮಗೆ ಬಂದ ಮಾಹಿತಿ ಪ್ರಕಾರ ಚಿತ್ರಕ್ಕೆ 336 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಇದರಲ್ಲಿ GST ಮತ್ತು ಕಲಾವಿದರು ಹಾಗೂ ತಂತ್ರಜ್ಞರ ಸಂಭಾವನೆ ಸೇರ್ಪಡೆಯಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಿನಿಮಾಗೆ ಟಿಕೆಟ್‌ ದರ ನಿಗದಿಪಡಿಸುತ್ತೇವೆ” ಎಂದು ಆಂಧ್ರಪ್ರದೇಶದ ಸಚಿವರಾದ ಪೆರ್ನಿ ನಾನಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗಾಗಿ ‘RRR’ ಸಿನಿಮಾದ ಅಧಿಕೃತ ಬಜೆಟ್‌ ಕುರಿತು ಮಾಹಿತಿ ಸಿಕ್ಕಂತಾಗಿದೆ. ರಾಜಮೌಳಿ ಅವರ ಈ ಹಿಂದಿನ ‘ಬಾಹುಬಲಿ’ ಸಿನಿಮಾದ ಬಜೆಟ್‌ಗಿಂತ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ಬಜೆಟ್‌ನಲ್ಲಿ ತಯಾರಾಗಿದೆ ‘RRR’.

ಆಂಧ್ರದಲ್ಲಿ ಸದ್ಯ ಚಿತ್ರರಂಗ ಮತ್ತು ಸರ್ಕಾರದ ಮಧ್ಯೆ ತಿಕ್ಕಾಟವಿದೆ. ಅಲ್ಲಿನ ಸರ್ಕಾರ ಅತಿ ಕಡಿಮೆ ಟಿಕೆಟ್‌ ದರ ನಿಗದಿ ಪಡಿಸಿರುವುದು ಸಿನಿಮಾ ತಯಾರಕರಿಗೆ ನುಂಗಲಾರದ ತುತ್ತಾಗಿದೆ. ಇತ್ತೀಚಿನ ದೊಡ್ಡ ತೆಲುಗು ಸಿನಿಮಾಗಳಾದ ‘ಪುಷ್ಪ’, ‘ಅಖಂಡ’, ‘ಭೀಮ್ಲಾ ನಾಯಕ್‌’ ಸೇರಿದಂತೆ ಮತ್ತಿತರೆ ಸಿನಿಮಾಗಳು ಟಿಕೆಟ್‌ ದರ ಸಮರದಲ್ಲಿ ಬಸವಳಿದವು. ಥಿಯೇಟರ್‌ ಹೌಸ್‌ಫುಲ್‌ ಆದರೂ ಕಲೆಕ್ಷನ್‌ ಮೊತ್ತದ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಒಂದು ತಿಂಗಳ ನಿರಂತರ ಮಾತುಕತೆಯ ನಂತರ ಸರ್ಕಾರ ಟಿಕೆಟ್‌ ದರವನ್ನು ಹೆಚ್ಚು ಮಾಡಿತು. ಈಗ ‘RRR’ ಬಿಡುಗಡೆ ಸಂದರ್ಭದಲ್ಲಿ ಮತ್ತೆ ಟಿಕೆಟ್‌ ದರದ ಕುರಿತು ಲೆಕ್ಕಾಚಾರ ಶುರುವಾಗಿದೆ.

‘RRR’ ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಗಳೇ ಮುಖ್ಯಭೂಮಿಕೆಯಲ್ಲಿದ್ದಾರೆ. ರಾಮ್‌ ಚರಣ್‌ ತೇಜಾ, ಜ್ಯೂನಿಯರ್‌ ಎನ್‌ಟಿಆರ್‌, ಅಲಿಯಾ ಭಟ್‌, ಅಜಯ್‌ ದೇವಗನ್‌ ಮತ್ತಿತರರು ಹಾಗೂ ತಂತ್ರಜ್ಞರ ಸಂಭಾವನೆಯೂ ಸೇರಿದಂತೆ ಚಿತ್ರದ ಬಜೆಟ್‌ 400 ಕೋಟಿ ರೂಪಾಯಿ ದಾಟುತ್ತದೆ. ಹಾಗಾಗಿ ಚಿತ್ರದ ಟಿಕೆಟ್‌ ದರವನ್ನು ಹೆಚ್ಚುವರಿ 75 ರೂಪಾಯಿಯಷ್ಟು ಹೆಚ್ಚು ಮಾಡುವಂತೆ ಸರ್ಕಾರ ಸೂಚಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸಿನಿಮಾ ಇದೇ 25ರಂದು ತೆರೆಕಾಣುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್‌ ಅವರ ಪ್ರೇರಣೆಯಿಂದ ಮುಖ್ಯಪಾತ್ರಗಳು ರೂಪುಗೊಂಡಿವೆ. ಚಿತ್ರಕ್ಕೆ ಭರ್ಜರಿ ಪ್ರಚಾರ ನಡೆದಿದ್ದು, ಸಿನಿಪ್ರೇಮಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

Previous articleಸ್ನೇಹದ ಕತೆಯ ಜೊತೆ ಮದರ್‌ ಸೆಂಟಿಮೆಂಟ್‌
Next article‘ಹೀರೋಪಂಥಿ 2’ ಟ್ರೈಲರ್‌ | ಟೈಗರ್‌ ಶ್ರಾಫ್‌ – ನವಾಜುದ್ದೀನ್‌ ಸಿದ್ದಿಕಿ ಆಕ್ಷನ್‌ ಸಿನಿಮಾ

LEAVE A REPLY

Connect with

Please enter your comment!
Please enter your name here