ನಟ ರಜನೀಕಾಂತ್‌ ಅವರಿಗೆ 2019ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿತ್ತು. ಇಂದು ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಸೌತ್ ಇಂಡಿಯಾ ಸೂಪರ್‌ಸ್ಟಾರ್ ರಜಿನೀಕಾಂತ್ ಅವರಿಗೆ ಇಂದು ಎರಡೆರಡು ಖುಷಿಯ ಸಂಗತಿಗಳು. ಭಾರತ ಸರ್ಕಾರವು ಅವರಿಗೆ 2019ರ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿತ್ತು. ಕೋವಿಡ್‌ ನಿಂದಾಗಿ ಪ್ರಶಸ್ತಿ ಪ್ರದಾನ ಮಾಡುವುದು ವಿಳಂಬವಾಗಿತ್ತು. ಇಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಇದೇ ಸಮಯದಲ್ಲಿ ರಜಿನಿ ತಮ್ಮ ಮಗಲು ಸೌಂದರ್ಯ ಅವರ ಹೊಸ ಅಪ್ಲಿಕೇಶನ್‌ವೊಂದನ್ನು ಬಿಡುಗಡೆ ಮಾಡಲಿದ್ದಾರೆ. ರಜಿನಿಕಾಂತ್ ಸಾಮಾಜಿಕ ಜಾಲತಾಣದಲ್ಲಿ ಒಂದು ಪತ್ರವನ್ನು ಬರೆದು ಅದರಲ್ಲಿ ತಮ್ಮ ಈ ಡಬಲ್ ಖುಷಿಯನ್ನು ಹಂಚಿಕೊಂಡಿದ್ದಾರೆ. “ಎರಡು ವಿಶೇಷ ಹೆಗ್ಗುರುತುಗಳೊಂದಿಗೆ ನನಗೆ ಎರಡು ವಿಶೇಷಗಳಿರುವ ಮಹತ್ವದ ಸಂದರ್ಭವಾಗಿದೆ. ಒಂದು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಜನರ ಪ್ರೀತಿ ಮತ್ತು ಬೆಂಬಲದಿಂದಾಗಿ ಭಾರತ ಸರ್ಕಾರ ಈ ಪ್ರಶಸ್ತಿಯನ್ನು ನನಗೆ ನೀಡಿದೆ. ಇದರ ಜೊತೆಗೆ ನನ್ನ ಮಗಳು ಸೌಂದರ್ಯ HOOTE ಎಂಬ ಜನರಿಗೆ ಉಪಯುಕ್ತವಾದ ಅಪ್ಲಿಕೇಶನ್ ಅನ್ನು ಭಾರತದಿಂದ ಜಗತ್ತಿಗೆ ಪರಿಚಯಿಸಲಿದ್ದಾಳೆ” ಎಂದಿದ್ದಾರೆ ರಜಿನಿ.

ಜನರು ಈಗ ತಮ್ಮ ಆಲೋಚನೆಗಳು, ಶುಭಾಶಯಗಳು ಮತ್ತು ಆಲೋಚನೆಗಳನ್ನು ತಮ್ಮ ಆಯ್ಕೆಯ ಯಾವುದೇ ಭಾಷೆಯಲ್ಲಿ ಬರೆಯುವಂತೆ ವ್ಯಕ್ತಪಡಿಸಲು ಈ ಆಪ್ ಸಹಾಯ ಮಾಡುತ್ತದೆ. ಈ ವಿನೂತನವಾದ, ಉಪಯುಕ್ತವಾದ, ಈ ರೀತಿಯ ಮೊದಲ ಅಪ್ಲಿಕೇಶನ್ ಅನ್ನು ಘೋಷಣೆ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದಿದ್ದಾರೆ ‘ತಲೈವಾ’ ಎಂದೇ ತಮಿಳು ಜನರಿಂದ ಪ್ರೀತಿಯಿಂದ ಕರೆಯಲ್ಪಡುವ ರಜಿನಿಕಾಂತ್. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾಗಿದೆ. ಕನ್ನಡದ ಡಾ.ರಾಜಕುಮಾರ್ ಸೇರಿದಂತೆ, ಅಮಿತಾಭ್ ಬಚ್ಚನ್, ವಿನೋದ್ ಖನ್ನಾ, ಕೆ.ವಿಶ್ವನಾಥ್, ಮನೋಜ್ ಕುಮಾರ್, ಶಶಿ ಕಪೂರ್, ಗುಲ್ಜಾರ್, ಪ್ರಾಣ್ ಮತ್ತು ಇತರ ಕೆಲವರು ಇತ್ತೀಚಿನ ದಾದಾಸಾಹೇಬ್ ಪ್ರಶಸ್ತಿ ಪುರಸ್ಕೃತರು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಹೊರತಾಗಿ ರಜಿನಿಕಾಂತ್ ನಾಲ್ಕು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2000ರಲ್ಲಿ ಪ್ರತಿಷ್ಠಿತ ಪದ್ಮಭೂಷಣ, 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದರ ಜೊತೆಗೆ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 45ನೇ ಆವೃತ್ತಿಯಲ್ಲಿ ರಜಿನಿಕಾಂತ್ ಅವರಿಗೆ ಶತಮಾನೋತ್ಸವ ಪ್ರಶಸ್ತಿಯನ್ನು ಕೂಡಾ ನೀಡಲಾಗಿತ್ತು.

LEAVE A REPLY

Connect with

Please enter your comment!
Please enter your name here