ಗಣೇಶ್ ಮತ್ತು ಸುನಿ ಕಾಂಬಿನೇಷನ್‌ನ ‘ಸಖತ್’ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ನವೆಂಬರ್ 12ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಕೊಟ್ಟಿದೆ.

“ಕವಚ’ ಆಯ್ತು, ಈಗ ‘ಅಂಧಾಧುನ್’ ಮನೋಡ್ತಾ ಇದ್ದೀನಿ…” ಗಣೇಶ್ ‘ಸಖತ್’ ಸಿನಿಮಾದಲ್ಲಿ ಅಂಧನ ಪಾತ್ರ ಮಾಡ್ತಾ ಇದ್ದಾರೆ ಎಂದಾಗ ಎಲ್ಲರೂ ಇದು ‘ಕವಚ’ ಥರ ಸಿನಿಮಾನಾ ಅಥವಾ ಹಿಂದಿಯ ‘ಅಂಧಾಧುನ್’ ಚಿತ್ರದ ರಿಮೇಕಾ ಎಂದೆಲ್ಲ ಅನುಮಾನ ಹೊರಹಾಕಿದ್ದರು. ಈಗ ಅದಕ್ಕೆ ಗಣೇಶ್ ಅವರ ಬಾಯಲ್ಲೇ ಕ್ಲಾರಿಫಿಕೇಶನ್ ಕೊಡಿಸಿದ್ದಾರೆ ನಿರ್ದೇಶಕ ಸುನಿ. ಇದು ಅವರ ಸ್ಟೈಲ್‌ ಕೂಡಾ. ಪ್ರೇಕ್ಷಕನ ಮನದಲ್ಲೇನಿದೆ ಅಂತ ಮೊದಲೇ ತಿಳಿದುಕೊಂಡು ಅವನು ಪ್ರಶ್ನೆ ಕೇಳುವ ಮೊದಲೇ ಉತ್ತರ ಹೇಳೋದು ನಿರ್ದೇಶಕ ಸುನಿ ಅವರ ಸ್ಟೈಲ್. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್‌ ಸಿನಿಮಾ ‘ಸಖತ್’.

ಪೋಸ್ಟರ್ ಹಾಗೂ ಸಾಂಗ್ ಮೂಲಕವೇ ಹೊಸತನ ತೆರೆದಿಟ್ಟಿರೋ ‘ಸಖತ್’ ಸಿನಿಮಾದ ಟೀಸರ್ ಈಗ ರಿಲೀಸ್ ಆಗಿದೆ. ಗಣೇಶ್ ಸ್ಟೈಲಿಶ್ ಲುಕ್, ಸುನಿ ಡೈಲಾಗ್ ಕಿಕ್, ಜೂಡಾ ಸ್ಯಾಂಡಿ ಸಂಗೀತ, ಸಂತೋಷ್ ಕ್ಯಾಮೆರಾ ವರ್ಕ್, ನಿಶ್ವಿಕಾ ನಾಯ್ಡು ಅವರ ಸೌಂದರ್ಯ ಎಲ್ಲವೂ ಸೇರಿ ಟೀಸರ್ ಸಂಪೂರ್ಣ ಮನರಂಜನಾತ್ಮಕವಾಗಿದೆ. ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಗಣೇಶ್ ನಟಿಸಿದ್ದು, ಸದಾ ಡಿಫರೆಂಟ್ ಡೈಲಾಗ್ ಕೊಡೋ ಸುನಿ ಡೈಲಾಗ್ಸ್ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಸಾಕಷ್ಟು ಪಂಚಿಂಗ್ ಡೈಲಾಗ್‌ಗಳಿಂದ ಸಖತ್ ಟೀಸರ್ ನೋಡುಗರನ್ನು ಬಿದ್ದು ಬಿದ್ದು ನಗಿಸುವಂತಿದೆ. ರಿಲೀಸ್ ಆದ ಕೆಲ ಗಂಟೆಗಳಲ್ಲಿಯೇ ಸಖತ್ ವೈರಲ್ ಆಗ್ತಿರೋ ಸಖತ್ ಟೀಸರ್, ಈ ವರ್ಷದ ಬೆಸ್ಟ್ ಕಾಮಿಡಿ ಸಿನಿಮಾ ಆಗೋ ಎಲ್ಲ ಲಕ್ಷಣ ಹೊಂದಿದೆ.

ಸಿಂಪಲ್ ಸುನಿ ಓಂಕಾರ ಹಾಕಿರುವ ಸಖತ್ ಸಿನಿಮಾದಲ್ಲಿ ಮಳೆ ಹುಡುಗ ಗಣೇಶ್ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಗಣೇಶ್‌ಗೆ ಜೋಡಿಯಾಗಿ ಬೊಗಸೆ ಕಣ್ಗಳ ಚೆಲುವೆ ನಿಶ್ವಿಕಾ ನಾಯ್ಡು ಬಣ್ಣ ಹಚ್ಚಿದ್ದಾರೆ. ಇದೊಂದು ಕಾಮಿಡಿ ಕಂ ಕ್ರೈಮ್ ಥಿಲ್ಲರ್  ಶೈಲಿಯ ಸಿನಿಮಾ. ಟಿವಿ ರಿಯಾಲಿಟಿ ಶೋ, ಮರ್ಡರ್ ಹಾಗೂ ಕೋರ್ಟ್ ಕೇಸ್ ಸುತ್ತ ಇಡೀ ಸಿನಿಮಾವನ್ನು ಎಣೆಯಲಾಗಿದೆ. ಕೆ.ವಿ.ಎನ್ ಪ್ರೊಡಕ್ಷನ್ ಬ್ಯಾನರ್‌ನಡಿ ತಯಾರಾಗಿರುವ ‘ಸಖತ್’ ಸಿನಿಮಾಕ್ಕೆ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ವರ್ಕ್, ಶಾಂತ ಕುಮಾರ್ ಸಂಕಲನ, ಜ್ಯೂಡಾ ಸ್ಯಾಂಡಿ ಸಂಗೀತ ಸಿನಿಮಾಕ್ಕಿದೆ. ಈಗಾಗಲೇ ಸೆನ್ಸಾರ್ ಮುಗಿಸಿರುವ ಸಿನಿಮಾ ನವೆಂಬರ್ 12ರಂದು ಥಿಯೇಟರ್ ಅಂಗಳ ಪ್ರವೇಶಿಸಲಿದೆ.

LEAVE A REPLY

Connect with

Please enter your comment!
Please enter your name here