ವೆಟ್ಟೈಯಾನ್’ ಸಿನಿಮಾ ಮೂಲಕ ಬೆಳ್ಳಿಪರದೆಗೆ ಲಗ್ಗೆಯಿಡಲು ರಜಿನಿಕಾಂತ್‌ ಸಜ್ಜಾಗುತ್ತಿದ್ದಾರೆ. ಜ್ಞಾನವೇಲ್‌ ನಿರ್ದೇಶನದ ತಮಿಳು ಚಿತ್ರವಿದು. ಟೀಸರ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಚಿತ್ರತಂಡ ಈಗ ಸಿನಿಮಾ ರಿಲೀಸ್‌ ಕುರಿತಾಗಿ ಅಪ್‌ಡೇಟ್‌ವೊಂದನ್ನು ಕೊಟ್ಟಿದೆ.

ನಟ ರಜಿನಿಕಾಂತ್ ಅಭಿನಯದ 170ನೇ ಸಿನಿಮಾ ‘ವೆಟ್ಟೈಯಾನ್’. ಟೈಟಲ್ ಹಾಗೂ ಟೀಸರ್ ಮೂಲಕವೇ ಸಿನಿಪ್ರಿಯರಲ್ಲಿ ಮಾತಾಗಿರುವ ಈ ತಮಿಳು ಸಿನಿಮಾದ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. ಇದೇ ವರ್ಷ ಅಕ್ಟೋಬರ್‌ನಲ್ಲಿ ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದೆ. ತಮಿಳಿನ ‘ಜೈ ಭೀಮ್’ ಸಿನಿಮಾ ಖ್ಯಾತಿಯ ಟಿ ಎಸ್ ಜ್ಞಾನವೇಲ್ ‘ವೆಟ್ಟೈಯಾನ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಚಿತ್ರದಲ್ಲಿ ದಿಗ್ಗಜರ ಸಂಗಮವಾಗಲಿದೆ. ಹೌದು, ಕಾಲಿವುಡ್‌ ಸೂಪರ್‌ ಸ್ಟಾರ್‌ ರಜಿನಿ ಹಾಗೂ ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್‌ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ಸ್‌ ಈ ಚಿತ್ರವನ್ನು ನಿರ್ಮಾಣ ಮಾಡಿದೆ. 33 ವರ್ಷಗಳ ನಂತರ ಅಭಿತಾಭ್‌ ಹಾಗೂ ರಜಿನಿ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. 1991ರಲ್ಲಿ ರಿಲೀಸ್‌ ಆಗಿದ್ದ ಸೂಪರ್‌ ಹಿಟ್‌ ಸಿನಿಮಾ ‘ಹಮ್‌’ನಲ್ಲಿ ಅಮಿತಾಭ್‌ ಹಾಗೂ ರಜಿನಿ ಜೋಡಿ ಯಶಸ್ಸು ಕಂಡಿತ್ತು.

‘ವೆಟ್ಟೈಯಾನ್’ ಚಿತ್ರದಲ್ಲಿ ರಜನಿಕಾಂತ್ ಅಮಿತಾಭ್ ಬಚ್ಚನ್ ಜೊತೆಗೆ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ನಟಿಸಿದ್ದಾರೆ. ‘ವೆಟ್ಟೈಯಾನ್’ ಸಿನಿಮಾಗೆ ರಾಕ್‌ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್ ಆರ್ ಕಥಿರ್ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನ ಇರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಸಿನಿಮಾದ ಚಿತ್ರೀಕರಣ‌ ನಡೆಸಲಾಗಿದೆ.

LEAVE A REPLY

Connect with

Please enter your comment!
Please enter your name here