ಪುನೀತ್‌ರ ಈ ಚಿತ್ರದಲ್ಲಿ 1973ರಲ್ಲಿ ಬಿಡುಗಡೆಯಾದ ರಾಜ್ ಅಭಿನಯದ ‘ಗಂಧದ ಗುಡಿ’ ಬಗ್ಗೆ ಉಲ್ಲೇಖವಿದೆ. ಪುನೀತ್ ಮತ್ತು ನಿರ್ದೇಶಕರು ತಮ್ಮ ಚಿತ್ರಕ್ಕೆ ಅದೇ ಹೆಸರನ್ನು ಉಳಿಸಿಕೊಳ್ಳಲು ನಿರ್ಧರಿಸುವ ಹಿನ್ನೆಲೆಯಲ್ಲಿಆ ಚಿತ್ರದ ಮಹತ್ವ ಚರ್ಚೆಯಾಗುತ್ತದೆ.

ಕರ್ನಾಟಕದ ನಿಸರ್ಗವನ್ನೇ ಪ್ರಧಾನ ಭೂಮಿಕೆಯಾಗಿರಿಸಿಕೊಂಡು ನಿರ್ಮಾಣಗೊಂಡ ಎರಡು ಚಿತ್ರಗಳ ಹೆಸರು ‘ಗಂಧದ ಗುಡಿ’. ಎರಡರ ನಿರ್ಮಾಣದ ನಡುವೆ ಐವತ್ತು ವರ್ಷಗಳ ಅಂತರ. ಆದರೆ ಎರಡೂ ಚಿತ್ರಗಳು ಕರ್ನಾಟಕದ ಪ್ರಕೃತಿಯ ಆರಾಧನೆಯ ಎರಡು ವಿಭಿನ್ನ ಪ್ರಯೋಗಗಳಾಗಿ ಗಮನ ಸೆಳೆಯುತ್ತವೆ. ಎರಡೂ ಚಿತ್ರಗಳು ನನ್ನ ನೆನಪು ಸರಿಯಿದ್ದರೆ ರಾಜ್ಯೋತ್ಸವಕ್ಕೆ ಮುನ್ನ ಬಿಡುಗಡೆಯಾಗಿ ಕನ್ನಡಾಭಿಮಾನವನ್ನು ಉದ್ದೀಪಿಸಿದ ಚಿತ್ರಗಳಾಗಿ ಮಹತ್ವ ಪಡೆದಿವೆ.

ಪುನೀತ್ ರಾಜ್‌ಕುಮಾರ್ ಅವರ ‘ಗಂಧದ ಗುಡಿ’, ಚಲನಚಿತ್ರರಂಗದಲ್ಲಿ ಒಂದು ವಿಶಿಷ್ಟ ಪ್ರಯೋಗ. ಪುನೀತ್ ಅವರ ಮಹತ್ವಾಕಾಂಕ್ಷೆಯ ಈ ಚಿತ್ರ ಅವರ ಅಕಾಲಿಕ ಮರಣದಿಂದ ಅವರು ಕನಸಿದ ರೀತಿಯಲ್ಲಿ ಇಲ್ಲದಿರಬಹುದು. ಆದರೆ ಆ ಪ್ರಯತ್ನದ ಹಿಂದಿನ ಕ್ರಿಯಾಶೀಲ ಮನಸ್ಸು ಅಭಿನಂದನಾರ್ಹ . ಅವರು ಯೋಜಿಸಿಕೊಂಡಿರಬಹುದಾದ ಚಿತ್ರದ ಹಂದರಕ್ಕೆ ಇನ್ನಷ್ಟು ಚಿತ್ರೀಕರಣ ಆಗುವುದು ಬಾಕಿಯಿತ್ತೆನಿಸುತ್ತದೆ. ಆ ಕೊರತೆ ಚಿತ್ರ ನೋಡಿದಾಗ ಭಾಸವಾಗುತ್ತದೆ. ಅವರು ಬದುಕಿರುವ ಸಮಯದಲ್ಲಿ ಚಿತ್ರೀಕರಿಸಿದ ಭಾಗಗಳನ್ನು ಸಂಯೋಜಿಸಿ ಚಿತ್ರವನ್ನು ರೂಪಿಸಿದ್ದಾರೆ.

ಕನ್ನಡ ನಾಡಿನ ಅರಣ್ಯ ವೈವಿಧ್ಯ, ವನ್ಯಜೀವಿ ಸಂಪತ್ತು, ಜನರ ಸಂಸ್ಕೃತಿ, ಪರಂಪರೆಯ ವೈಶಿಷ್ಟತೆಯನ್ನು ಒಂದು ಸಾಹಸದ ಪಯಣವಾಗಿ ನಿರೂಪಿಸುವ ಉದ್ದೇಶ ಈ ಚಿತ್ರದ್ದಾಗಿತ್ತು. ಆದರೆ ಅಂಥ ಒಂದು ಸಮಗ್ರ ಅನುಭವವು ಸಾಧ್ಯವಾಗದಿದ್ದರೂ ಕನ್ನಡ ನಾಡಿನ ಪ್ರಕೃತಿ ಮತ್ತು ದೇಸಿ ಸಂಸ್ಕೃತಿಯ ಸೀಳುನೋಟ ನೀಡುವಲ್ಲಿ ಚಿತ್ರ ಸಫಲವಾಗಿದೆ. ಮುಖ್ಯವಾಗಿ ಇಲ್ಲಿ ತೋರಿಸಿರುವ ಕಾಡುಗಳು , ಪ್ರಾಕೃತಿಕ ಪರಿಸರ, ವನ್ಯಜೀವಿಗಳ ದರ್ಶನ ಪ್ರೇಕ್ಷಕರನ್ನು ಸೆಳೆಯುತ್ತವೆ.

ಪ್ರೇಕ್ಷಕರೊಡನೆ ನೇರ ಸಂಭಾಷಣೆಗಿಳಿದಂತೆ ಸಹಜವಾಗಿರುವ ಪುನೀತ್ ಬಹುವಾಗಿ ಕಾಡುತ್ತಾರೆ. ನೇತ್ರಾಣಿಯಲ್ಲಿನ ಸ್ಕೂಬಾ ಡೈವಿಂಗ್, ಕಾಳಿನದಿಯ ದೋಣಿಯಾನ ಮತ್ತು ಬುಡಕಟ್ಟು ಜನರ ಹಳ್ಳಿಯ ಭೇಟಿ, ಬೇರೆ ಬೇರೆ ಜನಾಂಗದ ಪ್ರಕೃತಿ ಆರಾಧನೆ, ಗಾಜನೂರಿನ ಮನೆ ಮತ್ತು ರಾಜ್‌ಗೆ ಪ್ರಿಯವಾದ ಆಲದಮರದ ತಾಣ, ಆನೆ ಶಿಬಿರ, ಕಾಳಿಂಗ ಸರ್ಪದ ರಕ್ಷಣೆ, ತೋಳ ಮತ್ತು ಕುರುಬರ ನಡುವಿನ ಸಂಬಂಧ, ಆಂಟಿ ಪೋಚಿಂಗ್ ಶಿಬಿರದ ದೃಶ್ಯಗಳು ಚಿತ್ರದ ಆಕರ್ಷಣೀಯ ಭಾಗಗಳು.

ಚಿತ್ರದಲ್ಲಿ 1973ರಲ್ಲಿ ಬಿಡುಗಡೆಯಾದ ರಾಜ್ ಅಭಿನಯದ ‘ಗಂಧದ ಗುಡಿ’ ಚಿತ್ರದ ಬಗ್ಗೆ ಉಲ್ಲೇಖವಿದೆ. ಪುನೀತ್ ಮತ್ತು ನಿರ್ದೇಶಕರು ತಮ್ಮ ಚಿತ್ರಕ್ಕೆ ಅದೇ ಹೆಸರನ್ನು ಉಳಿಸಿಕೊಳ್ಳಲು ನಿರ್ಧರಿಸುವ ಹಿನ್ನೆಲೆಯಲ್ಲಿಆ ಚಿತ್ರದ ಮಹತ್ವ ಚರ್ಚೆಯಾಗುತ್ತದೆ. ಇನ್ನೂ ಪರಿಸರ ಕಾಳಜಿ ಒಂದು ಆಂದೋಲನವಾಗಿ ಬೆಳೆಯದಿದ್ದ ಕಾಲದಲ್ಲಿ ಕಾಡು ಮತ್ತು ವನ್ಯಜೀವಿ ಸಂರಕ್ಷಣೆ ಮತ್ತು ಕಾಡುಗಳ್ಳರ ವಿರುದ್ಧ ಹೋರಾಡುವ ಅರಣ್ಯಾಧಿಕಾರಿಗಳ ಸಾಹಸದ ಕಥೆಯ ಆ ಚಿತ್ರ ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಪ್ರಯೋಗ. ವನ್ಯಜೀವಿ ಸಂರಕ್ಷಣಾ ಬದ್ಧತೆ ಆ ಚಿತ್ರದಲ್ಲಿ ಎಷ್ಟು ಅತಿರೇಕಕ್ಕೆ ಹೋಗಿದೆಯೆಂದರೆ ಮೊಸಳೆಯೊಂದು ಹಿಡಿದ ಹೆಬ್ಬಾವನ್ನು ನಾಯಕ ರಕ್ಷಿಸುತ್ತಾನೆ!

ಆದರೂ ಆ ಚಿತ್ರದ ಆಶಯ ಕಾಡಿನ ಸಂರಕ್ಷಣೆಯ ಮಹತ್ವದ ಜೊತೆಗೆ ಕರ್ನಾಟಕದ ಶ್ರೀಮಂತ ಅರಣ್ಯಪರಂಪರೆಗೆ ಸಲ್ಲಿಸಿದ ಅರ್ಥಪೂರ್ಣ ಗೌರವವೂ ಆಗಿತ್ತು. ಕರ್ನಾಟಕ ಎಂದು ದೇವರಾಜ ಅರಸು ಅವರು ರಾಜ್ಯಕ್ಕೆ ಮರು ನಾಮಕರಣ ಘೋಷಿಸಿ, ಕನ್ನಡವನ್ನು ಆಡಳಿತ ಭಾಷೆಗಾಗಿ ಜಾರಿಗೊಳಿಸಿದ ಸಮಯದಲ್ಲೇ ‘ನಾವಾಡುವ ನುಡಿಯೇ ಕನ್ನಡ ನುಡಿ’ ಎಂದು ಹಾಡುತ್ತಾ ಕರ್ನಾಟಕದ ಅರಣ್ಯ ರಕ್ಷಣೆಯ ಆಶಯ ಕುರಿತ ಚಿತ್ರ ಬಿಡುಗಡೆಯಾಗಿ ಅಪಾರ ಯಶಸ್ಸು ಗಳಿಸಿದ್ದು ಆ ಕಾಲದ ಒಂದು ಸಾಂಸ್ಕೃತಿಕ ವಿದ್ಯಮಾನವೆನಿಸಿತ್ತು.

ಆ ಚಿತ್ರನಿರ್ಮಾಣವೂ ಒಂದು ದೊಡ್ಡ ಸಾಸಸವೇ! ಚಿತ್ರವನ್ನು ನಿರ್ಮಿಸಿದವರು ನಟ ನಿರ್ಮಾಪಕ ಎಂ.ಪಿ.ಶಂಕರ್. ತಮಿಳಿನ ಸ್ಯಾಂಡೋ ಚಿನ್ನಪ್ಪ ದೇವರ್ ಅವರಂತೆ ಶಂಕರ್ ಅವರಿಗೂ ವನ್ಯ ಪ್ರಾಣಿ ಮತ್ತು ಕಾಡಿನ ಕತೆಗಳ ಬಗ್ಗೆ ಒಲವು. ‘ಕಾಡಿನ ರಹಸ್ಯ’, ‘ನಾರಿ ಮುನಿದರೆ ಮಾರಿ’ ನಂತರ ಈ ದೊಡ್ಡ ಸಾಹಸಕ್ಕೆ ಕೈಹಾಕಿ ತಮ್ಮ ದುಡಿಮೆ, ಆಸ್ತಿಯನ್ನು ಪಣವಾಗಿಟ್ಟರು. ಆದರೆ ಚಿತ್ರೀಕರಣ ಶುರುವಾದ ನಂತರ ಕನ್ನಡದ ನಟ, ನಿರ್ಮಾಪಕ ಈಶ್ (‘ಮಣ್ಣಿನ ಮಗ’, ‘ಮೃತ್ಯುಪಂಜರದಲ್ಲಿ ಗೂಢಚಾರಿ’ ಇತ್ಯಾದಿ) ತಾವು ತಮಿಳಿನಲ್ಲಿ ತಯಾರಿಸುತ್ತಿರುವ ‘ಸಂದನ ಕಾಡು’ ಸಿನಿಮಾ ಕಥೆಯನ್ನು ಎಂ.ಪಿ.ಶಂಕರ್ ಕದ್ದು ‘ಗಂಧದ ಗುಡಿ’ ನಿರ್ಮಿಸುತ್ತಿದ್ದಾರೆಂದು ಆರೋಪಿಸಿ ಚಿತ್ರವನ್ನು ಕೈಬಿಡಲು ಸತ್ಯಾಗ್ರಹ ಬೆದರಿಕೆ ಒಡ್ಡಿದರು. ಎಂ.ಪಿ.ಶಂಕರ್ ಮಣಿಯಲಿಲ್ಲ. ರಾಜ್ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದು ಎರಡೂ ಬೇರೆ ಬೇರೆ ಕತೆಗಳೆನ್ನುವುದು ಬೆಳಕಿಗೆ ಬಂತು. ಪ್ರಕರಣ ಮುಕ್ತಾಯವಾಯ್ತು. ಆದರೆ ಈಶ್ ಅವರ ತಮಿಳು ಚಿತ್ರ ನಿಂತುಹೋಯಿತೆಂದು ನೆನಪು. ವಿಜಯ್ ನಿರ್ದೇಶನದಲ್ಲಿ ‘ಗಂಧದ ಗುಡಿ’ ಹೊಸ ಅಧ್ಯಾಯ ಬರೆಯಿತು. ಪುನೀತ್ ಅವರ ‘ಗಂಧದ ಗುಡಿ’ ಚಿತ್ರದಲ್ಲಿ ಐವತ್ತು ವರ್ಷದ ಹಿಂದಿನ ಆ ಸ್ಪೂರ್ತಿ ಚಿತ್ರಕ್ಕೆ ಗೌರವ ಸಲ್ಲಿಸಲಾಗಿದೆ. ಆದರೆ ಎಂ.ಪಿ.ಶಂಕರ್ – ವಿಜಯ್ ಅವರ ಹೆಸರು ಉಲ್ಲೇಖವಾಗಿದ್ದರೆ ಆ ಗೌರವ ಅರ್ಥಪೂರ್ಣವಾಗಿರುತ್ತಿತ್ತು.

LEAVE A REPLY

Connect with

Please enter your comment!
Please enter your name here