ಇಂತಹ ನಿಜ ಜೀವನದ ಕ್ರೈಂ ಆಧರಿತ ಕತೆಗಳನ್ನು ಸಿನಿಮಾ ಮಾಡುವಾಗ ವೀಕ್ಷಕರಿಗೆ ಥ್ರಿಲ್ ನೀಡುವಂತೆ ರೋಮಾಂಚಕಾರಿಯಾಗಿ ನಿರೂಪಿಸಲಾಗುತ್ತದೆ, ಆದರೆ, ‘ದಿ ಗುಡ್ ನರ್ಸ್’ ಗೊತ್ತಿರುವ ಕತೆಯನ್ನು ರಂಜಿತವಾಗಿ ಹೇಳ ಹೋಗುವುದಿಲ್ಲ. ‘ದಿ ಗುಡ್ ನರ್ಸ್’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ತೊಂಬತ್ತರ ದಶಕದಲ್ಲಿ ಅಮೆರಿಕಾದ ನ್ಯೂಜೆರ್ಸಿಯ ಹಲವಾರು ಆಸ್ಪತ್ರೆಗಳಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದ ಚಾರ್ಲ್ಸ್ ಕಲ್ಲನ್ ಕಾಲಿಟ್ಟ ಕಡೆಯೆಲ್ಲಾ ರೋಗಿಗಳ ಅಹಸಜವೆನಿಸುವಂತಹ ಸಾವಿನ ಸಂಖ್ಯೆ ಹೆಚ್ಚಾಗುತ್ತಿತ್ತು. ಆಸ್ಪತ್ರೆಗಳು ಏನಾದರೊಂದು ಕಾರಣ ನೀಡಿ ಅವನನ್ನು ಕೆಲಸದಿಂದ ವಜಾ ಮಾಡುತ್ತಿದ್ದವು. ಆತ ಕೆಲಸ ಮಾಡುತ್ತಿದ್ದ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದ್ದ ಸಾವಿನ ಸಂಖ್ಯೆಗೆ ಚಾರ್ಲ್ಸ್ ಕಾಲ್ಗುಣ ಕಾರಣ ಇರಬೇಕೆಂಬ ಶಂಕೆಯೇನೂ ಆತನ ವಜಾಕ್ಕೆ ಕಾರಣವಲ್ಲ. ಈ ಸಾವುಗಳ ಹಿಂದೆ ಕಲ್ಲನ್ ಕೈವಾಡವಿದೆ ಎಂಬ ಬಲವಾದ ಶಂಕೆ ಕಾರಣವಾಗಿತ್ತು. ಜೊತೆಗೆ ಚಾರ್ಲ್ಸ್‌ಗೆ ತೀವ್ರವಾದ ಮಾನಸಿಕ ಸಮಸ್ಯೆಯೂ ಇದ್ದು, ಆತ ಅದಕ್ಕಾಗಿ ಹಲವು ಬಾರಿ ಚಿಕಿತ್ಸೆ ಪಡೆದಿದ್ದ. ಹೀಗಿದ್ದೂ, ಚಾರ್ಲ್ಸ್‌ ಕೆಲಸ ಸಿಗುವುದು ಕಷ್ಟವಾಗುತ್ತಿರಲಿಲ್ಲ ಮತ್ತು 1988ರಿಂದ ಆರಂಭಗೊಂಡು ಹದಿನಾರು ವರ್ಷಗಳ ಕಾಲ ಅವನು ರೋಗಿಗಳ ಪ್ರಾಣಕ್ಕೆ ಎರವಾಗುವ ಔಷಧಗಳನ್ನು ಇಂಜೆಕ್ಟ್ ಮಾಡುವ ಮೂಲಕ ಸರಣಿ ಕೊಲೆಗಳನ್ನು ಮಾಡುತ್ತಲೇ ಹೋದ.

ಟೊಬಾಯಸ್ ಲಿಂಡಾಮ್ ನಿರ್ದೇಶನದ ‘ದಿ ಗುಡ್ ನರ್ಸ್’, ಚಾರ್ಲ್ಸ್ ಕಲ್ಲನ್ ನಡೆಸಿದ ಈ ಸರಣಿ ಕೊಲೆಗಳನ್ನು ಆಧರಿಸಿದ ಸಿನಿಮಾ. ನೈಜ ಘಟನೆ ಆಧರಿತವಾದ್ದರಿಂದ, ಸಹಜವಾಗಿಯೇ ಇದನ್ನು ಹೂ ಡನ್ ಇಟ್ ಶೈಲಿಯಲ್ಲಿ ನಿರೂಪಿಸಿಲ್ಲ, ಬಹುತೇಕ ಮೊದಲ ದೃಶ್ಯದಲ್ಲೇ ಸಾವುಗಳ ಹಿಂದಿರುವ ವ್ಯಕ್ತಿಯ ಒಂದು ನೋಟ ದೊರಕಿಬಿಡುತ್ತದೆ. ಆದರೆ, ಮೆಡಿಕಲ್ ಥ್ರಿಲ್ಲರ್ ವಿಭಾಗಕ್ಕೆ ಸೇರಿದರೂ, ಕುತೂಹಲಭರಿತ, ಸಸ್ಪೆನ್ಸ್ ಅಂಶಗಳನ್ನು ತುಂಬುವ ಕಡೆ ನಿರ್ದೇಶಕ ಹೆಚ್ಚು ಗಮನ ಹರಿಸಿಲ್ಲ ಎಂಬುದು ಮಾತ್ರ ವಿಶೇಷ. ಬದಲಾಗಿ ಈ ಚಿತ್ರವನ್ನು ಒಂದು ಸಾಮಾಜಿಕ ವಿಮರ್ಶೆಯ ಚಿತ್ರದಂತೆ ರೂಪಿಸುವ ಮೂಲಕ ನಿರ್ದೇಶಕರು ಹಲವು ಪ್ರಶ್ನೆಗಳನ್ನು ಎತ್ತುತ್ತಾರೆ.

ಚಾರ್ಲ್ಸ್‌ ಅನ್ನು ಕೊನೆಗೆ ಪೊಲೀಸರಿಗೆ ಹಿಡಿದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ನರ್ಸ್ ಏಮಿ ಲ್ಹಾರೆನ್ ಪಾತ್ರದ ಮೂಲಕ ಚಿತ್ರ ಮುಖ್ಯವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಗಂಡನ ಜೊತೆಯಿಲ್ಲದೆ, ಇಬ್ಬರು ಮಕ್ಕಳೊಂದಿಗೆ ಬದುಕು ನಡೆಸುತ್ತಿರುವ ಏಮಿಗೆ ಹೃದಯ ಕಾಯಿಲೆ. ಆ ವಿಷಯ ಬಹಿರಂಗವಾದರೆ ಆಸ್ಪತ್ರೆಯ ಕೆಲಸ ಹೋಗುವ ಭಯದಿಂದ, ತನಗೆ ಆರೋಗ್ಯ ವಿಮೆ ದೊರೆಯುವವರೆಗೂ ತನ್ನ ತೊಂದರೆ ಮುಚ್ಚಿಟ್ಟೇ ಕೆಲಸ ಮಾಡಬೇಕಾದ ಅನಿವಾರ್ಯತೆ ಅವಳದ್ದು, ಏಮಿಯ ಈ ಹೋರಾಟದ ಬದುಕಿಗೆ ಬೆಂಬಲವಾಗಿ ನಿಲ್ಲುವವನು ಅದೇ ಆಸ್ಪತ್ರೆಗೆ ಹೊಸದಾಗಿ ಬರುವ ಚಾರ್ಲ್ಸ್, ಅವಳ ರೋಗದ ಬಗ್ಗೆ ಅರಿತು ಆಸ್ಪತ್ರೆ ಮತ್ತು ಮನೆ ಎರಡೂ ಕಡೆ ಅವಳ ನೆರವಿಗೆ ನಿಲ್ಲುವ ಚಾರ್ಲ್ಸ್ ಕೆಲವೇ ದಿನಗಳಲ್ಲಿ ಅವಳ ಅತ್ಯುತ್ತಮ ಸ್ನೇಹಿತನಾಗುತ್ತಾನೆ.

ಇಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತಿರುವಂತೆ ಆಸ್ಪತ್ರೆಯಲ್ಲಿ ಅಸಹಜ ಸಾವುಗಳ ಸಂಖ್ಯೆಯೂ ಬೆಳೆಯುತ್ತದೆ. ತನಿಖೆಯ ಸಂದರ್ಭದಲ್ಲಿ ಪೊಲೀಸರು ಎದುರಿಸುವ ಸವಾಲುಗಳು, ಏಮಿಯ ತೊಳಲಾಟ, ಈ ಸರಣಿ ಕೊಲೆಗಳಿಗೆ ಅಂತ್ಯ ಹಾಡುವಲ್ಲಿ ಆಕೆ ನೀಡುವ ನೆರವನ್ನು ಚಿತ್ರ ಯಾವುದೇ ಅವಸರವಿಲ್ಲದೆ, ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆರೆದಿಡುತ್ತಾ ನಿರೂಪಿಸುತ್ತಾ ಹೋಗುತ್ತದೆ.

ಇಡೀ ಚಿತ್ರವನ್ನು ತೆಳುವಾದ ಮ್ಲಾನತೆಯೊಂದು ಆವರಿಸಿದೆ. ಕತೆ, ಪರಿಸರ, ಪಾತ್ರಗಳು, ಸನ್ನಿವೇಶಗಳು, ಚಿತ್ರದುದ್ದಕ್ಕೂ ಬಳಕೆಯಾಗಿರುವ ಮಂದ ಬೆಳಕು, ಕ್ಯಾಮರಾದ ಕೋನಗಳು ಎಲ್ಲವೂ ಈ ಮ್ಲಾನತೆಗೆ ಪೂರಕವಾಗಿವೆ. ಹಾಗೇ ನೋಡಿದರೆ, ಚಿತ್ರ ತೀರಾ ಸಹಜವಾದ ಪರಿಸರದಲ್ಲಿರುವಂತೆ ಕಾಣುವುದೇ ಇಲ್ಲ. ಉದಾಹರಣೆಗೆ ಅಗತ್ಯವಿರುವ ಪಾತ್ರಗಳು ಮಾತ್ರವೇ ತೆರೆಯ ಮೇಲಿರುತ್ತವೆ. ಅಂದರೆ, ಆಸ್ಪತ್ರೆಯಲ್ಲಿ ಕತೆಗೆ ಬೇಕಿರುವ ಪಾತ್ರಗಳನ್ನು ಹೊರತು ಪಡಿಸಿ ಆ ಪರಿಸರದಲ್ಲಿ ಇರಬಹುದಾದ ಇತರ ಮನುಷ್ಯರು ಕಾಣಸಿಗುವುದಿಲ್ಲ. ಆದರೆ, ಈ ಅಸಹಜ ಕನಿಷ್ಟತಮತೆ ಚಿತ್ರದ ಶಕ್ತಿಶಾಲಿ ಅಂಶವಾಗಿರುವುದು ವಿಶೇಷ. ಏಕೆಂದರೆ, ಇಂತಹ ನಿಜ ಜೀವನದ ಕ್ರೈಂ ಆಧರಿತ ಕತೆಗಳನ್ನು ಸಿನಿಮಾ ಮಾಡುವಾಗ ವೀಕ್ಷಕರಿಗೆ ಥ್ರಿಲ್ ನೀಡುವಂತೆ ರೋಮಾಂಚಕಾರಿಯಾಗಿ ನಿರೂಪಿಸಲಾಗುತ್ತದೆ, ಆದರೆ, ‘ದಿ ಗುಡ್ ನರ್ಸ್’ ಗೊತ್ತಿರುವ ಕತೆಯನ್ನು ರಂಜಿತವಾಗಿ ಹೇಳ ಹೋಗುವುದಿಲ್ಲ, ಎಷ್ಟರಮಟ್ಚಿಗೆಂದರೆ, ಚಾರ್ಲ್ಸ್ ಹೇಗೆ ಮತ್ತು ಏಕೆ ಈ ಕೊಲೆಗಳನ್ನು ಮಾಡಿದ ಎಂಬುದನ್ನಾಗಲೀ, ಆತನ ಮನಸ್ಥಿತಿಯ ಬಗ್ಗೆಯಾಗಲೀ ಏನೂ ಹೇಳುವುದಿಲ್ಲ. ಅದು ಚಾರ್ಲ್ಸ್ ಮತ್ತು ಮುಖ್ಯವಾಗಿ ಏಮಿಯ ಮೂಲಕ ಅಮೇರಿಕಾದ ಆರೋಗ್ಯ ಕ್ಷೇತ್ರದ ದುರಂತ ಸ್ಥಿತಿಯನ್ನು ಹೇಳುತ್ತದೆ.

ನರ್ಸ್ ಆಗಿದ್ದುಕೊಂಡೂ ಪ್ರಾಣಾಂತಿಕವಾಗಿರುವ ತನ್ನ ರೋಗಕ್ಕೆ ಬೇಕಾದ ಚಿಕಿತ್ಸೆ ಪಡೆಯಲಾರದ ಸ್ಥಿತಿಯಲ್ಲಿರುವ, ಆರೋಗ್ಯ ವಿಮೆ ಇಲ್ಲದ ಏಮಿ, ಅತಿ ದುಬಾರಿಯಾದ ವೈದ್ಯಕೀಯ ವ್ಯವಸ್ಥೆಯ ಬಲಿಪಶು. ಹದಿನಾರು ವರ್ಷಗಳ ಕಾಲ ಚಾರ್ಲ್ಸ್ ನಿರಂತರವಾಗಿ ಕೊಲೆಗಳನ್ನು ಮಾಡುತ್ತಲೇ ಹೋಗಲು ಕಾರಣ, ಚಾರ್ಲ್ಸೇ ಅಪರಾಧಿ ಎಂಬುದು ಬಹುತೇಕ ಖಚಿತವಾದರೂ ಆತನ ವಿರುದ್ಧ ದೂರು ಕೊಟ್ಟು ತೊಂದರೆ ಸಿಕ್ಕಿಕೊಳ್ಳುವುದೇಕೆ ಎಂದು, ಆತನನ್ನು ವಜಾ ಮಾಡಿ ಕೈ ತೊಳೆದುಕೊಳ್ಳುವ ಆಸ್ಪತ್ರೆಗಳ ಅಘಾತಕಾರಿ ಮನಸ್ಥಿತಿ. ಒಂದು ಲೆಕ್ಕಕ್ಕೆ ಆ ಆಸ್ಪತ್ರೆಗಳೆಲ್ಲಾ ಈ ಸರಣಿ ಕೊಲೆಯಲ್ಲಿ ಪಾಲುದಾರರೆನಿಸುತ್ತವೆ. ಕೊನೆಗೆ ಏಮಿ ಚಾರ್ಲ್ಸ್‌ನನ್ನು, ‘ಏಕೆ ಕೊಲೆ ಮಾಡಿದೆ?’ ಎಂದು ಕೇಳುವಾಗ ಆತ ಹೇಳುವುದೂ ಅದೇ – ‘ಯಾರೂ ನನ್ನನ್ನು ತಡೆಯಲಿಲ್ಲ’!

ಮಿನಿಮಲಿಸ್ಚಿಕ್ ಶೈಲಿಯ ಈ ಚಿತ್ರಕ್ಕೆ ಏಮಿಯಾಗಿ ಜೆಸ್ಸಿಕಾ ಚೆಸ್ಟಿನ್ ಮತ್ತು ಚಾರ್ಲ್ಸ್ ಆಗಿ ಎಡಿ ರೆಡ್ಮೇನ್ ಜೀವ ತುಂಬಿದ್ದಾರೆ. ತಡೆಹಿಡಿದಿಟ್ಟಂತಹ ನಟನೆಯ ಮೂಲಕ ಚಿತ್ರದ ಟೋನ್ ಅನ್ನು ಮತ್ತಷ್ಟು ಗಾಢವಾಗಿಸಿದ್ದಾರೆ. ಟೊರಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿದ್ದ ‘ದಿ ಗುಡ್ ನರ್ಸ್’ ಈಗ ನೆಟ್ ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here