ಕಳೆದ ವಾರ ತೆರೆಕಂಡ ‘ಶಾಖಾಹಾರಿ’ ಸಿನಿಮಾಗೆ ವಿಶ್ಲೇಷಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಜನರು ಥಿಯೇಟರ್‌ಗೆ ಬರುತ್ತಿಲ್ಲ ಎನ್ನುವುದು ಚಿತ್ರತಂಡದ ಅಳಲು. ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಕಲಾವಿದರು ಮತ್ತು ನಿರ್ದೇಶಕ ಸಂದೀಪ್‌ ಸುಂಕದ್‌ ಈ ಬಗ್ಗೆ ಮಾತನಾಡಿದ್ದಾರೆ.

ಸಂದೀಪ್‌ ಸುಂಕದ್‌ ನಿರ್ದೇಶನದ ‘ಶಾಖಾಹಾರಿ’ ಸಿನಿಮಾಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಥ್ರಿಲ್ಲರ್‌ ಕತೆಯಿದು. ಸಿನಿಮಾದ ಬಗ್ಗೆ ಮೆಚ್ಚುಗೆ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಜನರು ಥಿಯೇಟರ್‌ಗೆ ಬರುತ್ತಿಲ್ಲ ಎನ್ನುವುದು ಚಿತ್ರತಂಡದ ಅಳಲು. ಈ ಬಗ್ಗೆ ಮಾತನಾಡಿದ ಚಿತ್ರದ ನಟ ರಂಗಾಯಣ ರಘು, ‘ಚಿತ್ರರಂಗದವರು ಮತ್ತು ಸಿನಿಮಾ ನೋಡಿದವರೆಲ್ಲರೂ ಮೆಚ್ಚಿದ್ದಾರೆ. ಇದು ಕ್ಲಾಸ್ ಸಿನಿಮಾ ಎಂದು ನಾನು ಒಪ್ಪುವುದಿಲ್ಲ. ಒಳ್ಳೇ ಸಿನಿಮಾ ಎಂದು ಹೇಳುತ್ತೇನೆ. ಕ್ಲಾಸ್, ಮಾಸ್ ಹೋಗಿ ತುಂಬಾ ದಿನ ಆಗಿದೆ. ಈಗ ಏನಿದ್ರೂ ಒಳ್ಳೇ ಸಿನಿಮಾ, ಇಲ್ಲ ನೋಡದೇ ಇರುವ ಸಿನಿಮಾ ಅಷ್ಟೆ! ದೊಡ್ಡ ದೊಡ್ಡವರ ಸಿನಿಮಾ ಎಂದಾಗ ಕೋಟಿ ಕೋಟಿ ಹಾಕುವ ನಿರ್ಮಾಪಕರು ಇರುತ್ತಾರೆ. ಇವುಗಳ ಜೊತೆಗೆ ಸಣ್ಣ ಪ್ರಯೋಗಗಳೂ ಆಗಬೇಕಲ್ಲ… ಸಣ್ಣವರು ಮಾಡಿದಾಗ ಅದು ಸಮುದ್ರವಾಗುತ್ತದೆ. ನದಿಯ ಹರಿವೇ ಇಲ್ಲ ಅಂದರೆ ಸಮುದ್ರಕ್ಕೆ ಕಷ್ಟವಾಗುತ್ತೆ. ಥಿಯೇಟರ್‌ ಬಂದು ಸಿನಿಮಾ ನೋಡಿ. ಓಟಿಟಿಯಲ್ಲಿ ಬರೋವರೆಗೂ ಕಾಯಬೇಡಿ’ ಎಂದು ಮನವಿ ಮಾಡಿದರು.

ಸಾಕಷ್ಟು ಪ್ರಚಾರ ಮಡಿದರೂ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುವುದು ಚಿತ್ರದ ನಿರ್ದೇಶಕ ಸಂದೀಪ್‌ ಅವರ ಮಾತು. ‘ನಾವು ಕ್ಲಾಸ್ ಸಿನಿಮಾ ಎಂದುಕೊಂಡು ಒಂದಷ್ಟು ಸೀಮಿತ ಜನಕ್ಕೆ ನಮ್ಮದೇ ಆದ ಒಂದು ಟಾರ್ಗೆಟ್ ಆಡಿಯನ್ಸ್ ಮಾಡಿಕೊಂಡೆವು. ಅದು ರಿಲೀಸ್ ಆದ್ಮೇಲೆ ಅದು ತೆಗೆದುಕೊಂಡ ವಿಸ್ತಾರ, ಜನರಿಗೆ ರೀಚ್ ಆಗಿದ್ದು ಇರಬಹುದು. ಬಿಕೆಟಿ ಸೆಂಟರ್‌ಗಳಲ್ಲಿ ಜನ ತುಂಬಿ ಎಂಜಾಯ್ ಮಾಡಿದರು. ನಾವು ಅದನ್ನು ಮುಂಚೆಯಿಂದನೇ ಟಾರ್ಗೆಟ್ ಮಾಡಿಕೊಂಡು ಬಂದಿದ್ದರೆ ಬಹುಶಃ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎನಿಸಿತು. ನಮ್ಮ ಸುತ್ತ ವಲಯದಲ್ಲಿ ಹೆಚ್ಚು ರೀಚ್ ಆಗಿದೆ. ಅದು ಬಿಟ್ಟು ಹೋಗಿಲ್ಲ ಎಂಬ ಕೊರಗು ಇತ್ತು. ಈಗಲೂ 50 ರಿಂದ 60% ಆಕ್ಯೂಪೆನ್ಸಿ ಇದೆ. ಇನ್ನೂ ರೀಚ್‌ ಬೇಕಿದೆ’ ಎನ್ನುತ್ತಾರವರು. ಓಟಿಟಿ ಪ್ಲಾಟ್‌ಫಾರ್ಮ್‌ಗಳಿಂದ ಈ ಸಿನಿಮಾಗೆ ಉತ್ತಮ ಆಫರ್‌ಗಳು ಬರುತ್ತಿವೆ ಎನ್ನುವ ವಿಚಾರವನ್ನೂ ಅವರು ಬಹಿರಂಗಪಡಿಸಿದರು.

ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ರೋಚಕವಾದ ಕತೆಯಿದು. ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ ಭಟ್ಟ ರಂಗಾಯಣ ರಘು ಒಂದು ವೆಜಿಟೇರಿಯನ್ ಹೋಟೆಲ್ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಖಾಹಾರಿ ಹೋಟೆಲ್‌ನ ಇಮೇಜ್ ಬದಲಾಗುತ್ತದೆ. ಇಂತಹ ಒಗಟಿನಂತಹ ಟೈಟಲ್‌ ಹಿಂದಿರುವ ಕಥೆ ಏನು ಎಂಬುದು ಸಿನಿಮಾದ ತಿರುಳು. ಸಂದೀಪ್ ಸುಂಕದ್ ಅವರು ‘ಶಾಖಾಹಾರಿ’ ಚಿತ್ರಕ್ಕೆ ಕತೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ, ಶಶಾಂಕ್ ನಾರಾಯಣ್ ಸಂಕಲನ, ಮಯೂರ್ ಅಂಬೇಕಲ್ಲು ಸಂಗೀತ ಚಿತ್ರಕ್ಕಿದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ, ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು ಜೆ, ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು.

LEAVE A REPLY

Connect with

Please enter your comment!
Please enter your name here