ಐಪಿಎಲ್‌ ಭರಾಟೆಗೆ ಚಾಲನೆ ಸಿಕ್ಕಿದೆ. RCB ತಂಡಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಸಕ್ಕತ್‌ ಸ್ಟುಡಿಯೋ ವಿಶೇಷ ಹಾಡೊಂದನ್ನು ರೂಪಿಸಿದೆ. ಯುವ ತಾರೆಗಳಾದ ಶೈನ್ ಶೆಟ್ಟಿ, ಸಾನ್ಯಾ ಅಯ್ಯರ್, ಕಿಶನ್ ಬೆಳಗಲಿ, ದಿವ್ಯಾ ಉರುಡುಗ, ರಘು ಗೌಡ ಮತ್ತಿತರರು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಐಪಿಎಲ್‌ ಶುರುವಾಗಿದ್ದು, RCBಗೆ ಬಲ ತುಂಬಲು ಸಕ್ಕತ್‌ ಸ್ಟುಡಿಯೋ ಹಾಡೊಂದನ್ನು ರೂಪಿಸಿದೆ. ‘ಆರ್‌ಸಿಬಿ ಕಪ್ ಗೆಲ್ಬೇಕು ಮರ್ಯಾದೆ ಪ್ರಶ್ನೆ’ ಎನ್ನುವ ಪಲ್ಲವಿಯ ಹಾಡನ್ನು ಕೀರ್ತಿ ನಾರಾಯಣ್‌ ರಚಿಸಿದ್ದು, ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಯುವ ತಾರೆಗಳಾದ ಶೈನ್ ಶೆಟ್ಟಿ, ಸಾನ್ಯಾ ಅಯ್ಯರ್, ಕಿಶನ್ ಬೆಳಗಲಿ, ದಿವ್ಯಾ ಉರುಡುಗ, ರಘು ಗೌಡ ಮತ್ತಿತರರು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಾಡಿನ ಬಗ್ಗೆ ಮಾತನಾಡುವ ಶೈನ್‌ ಶೆಟ್ಟಿ, ‘ಕ್ರಿಕೆಟ್ ಕೇವಲ ಒಂದು ಆಟವಲ್ಲ. ಇದು ಲಕ್ಷಾಂತರ ಅಭಿಮಾನಿಗಳನ್ನು ಒಗ್ಗೂಡಿಸುವ ಭಾವನೆ. ನಮ್ಮ ಮಹಿಳಾ ತಂಡದ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾದ ನಂತರ, ಪುರುಷರ ತಂಡಕ್ಕೆ ಹೃತ್ಪೂರ್ವಕ ಬೆಂಬಲವನ್ನು ನೀಡುವ ಸಮಯ ಬಂದಿದೆ. ಈ ಹಾಡಿನ ಮೂಲಕ ನಾವು ಅವರಿಗೆ ಬಲ ತುಂಬುತ್ತಿದ್ದೇವೆ. ನಾವು ಹೆಮ್ಮೆ ಪಡುವಂತೆ ಆಟ ಆಡಲು ಅವರನ್ನು ಒತ್ತಾಯಿಸುತ್ತಿದ್ದೇವೆ’ ಎಂದಿದ್ದಾರೆ.

‘ಎಲ್ಲಾ ವರ್ಗದ ಜನರನ್ನು ಪ್ರೇರೇಪಿಸುವ ಮತ್ತು ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಇದೆ. ಕಲಾವಿದರಾಗಿ, ನಮ್ಮ ತಂಡಗಳಿಗೆ ಸಕಾರಾತ್ಮಕತೆಯನ್ನು ಹರಡಲು ಮತ್ತು ಹುರಿದುಂಬಿಸಲು ನಮ್ಮ ವೇದಿಕೆಗಳನ್ನು ಬಳಸುವುದು ನಮ್ಮ ಜವಾಬ್ದಾರಿಯಾಗಿದೆ. ಬೆಂಗಳೂರು ಪುರುಷರ ಕ್ರಿಕೆಟ್ ತಂಡವು ಗೆಲ್ಲುವುದು ಎಂಬ ನಿರೀಕ್ಷೆಯಿದೆ’ ಎನ್ನುವುದು ಯುವ ನಟಿ ಸಾನ್ಯಾ ಅಯ್ಯರ್‌ ಮಾತು. ಸೋಷಿಯಲ್ ಮೀಡಿಯಾ ಸ್ಟಾರ್ ರಘು ಗೌಡ ಅವರಿಗೆ ಹಾಡಿನಲ್ಲಿ ಪಾಲ್ಗೊಂಡಿರುವುದು ಹೆಮ್ಮೆ ತಂದಿದೆ. ‘ಕ್ರೀಡೆಗಳು ಸಮುದಾಯಗಳನ್ನು ಹೇಗೆ ಒಗ್ಗೂಡಿಸುತ್ತವೆ ಎಂಬುದನ್ನು ನೋಡುವುದು ನಂಬಲಾಗದ ಸಂಗತಿ. ಈ ಹಾಡು ಸ್ಯಾಂಡಲ್ ವುಡ್ ಮತ್ತು ಕ್ರಿಕೆಟ್ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಮತ್ತು ಇದು ಬೆಂಗಳೂರು ತಂಡದ ಹಿಂದೆ ಇನ್ನೂ ಹೆಚ್ಚಿನ ಉತ್ಸಾಹದಿಂದ ನಿಲ್ಲಲು ಅಭಿಮಾನಿಗಳನ್ನು ಪ್ರೇರೇಪಿಸುತ್ತದೆ ಎಂದು ನಾನು ನಂಬುತ್ತೇನೆ’ ಎನ್ನುತ್ತಾರೆ ರಘು. ಈ ಹಾಡಿಗೆ ಸುಚಿನ್‌ ನೃತ್ಯ ಸಂಯೋಜಿಸಿದ್ದಾರೆ. ಸದ್ಯ ‘ಮರ್ಯಾದೆ ಪಶ್ನೆ’ ಚಿತ್ರ ನಿರ್ಮಿಸುತ್ತಿರುವ ಸಕ್ಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಿಸಿದೆ. ‘ಈ ಹಾಡಿಗೂ, ಸಿನಿಮಾಗೂ ಸಂಬಂಧವಿಲ್ಲ. ಆದರೆ ಸಿನಿಮಾ ಶೀರ್ಷಿಕೆ ಇದರಲ್ಲಿ ಬಳಕೆಯಾಗಿದೆ, ಸಿನಿಮಾ ಪ್ರಚಾರಕ್ಕಿಂತ ನಮ್ಮ ಬೆಂಗಳೂರು ತಂಡ ಗೆಲ್ಲಲ್ಲಿ ಎಂಬುದು ಚಿತ್ರತಂಡದ ಆಶಯ’ ಎನ್ನುತ್ತಾರೆ ಸಕ್ಕತ್‌ ಸ್ಟುಡಿಯೋದ ಆರ್‌ಜೆ ಪ್ರದೀಪ್‌.

LEAVE A REPLY

Connect with

Please enter your comment!
Please enter your name here