ಬುಚ್ಚಿ ಬಾಬು ನಿರ್ದೇಶನದಲ್ಲಿ ರಾಮ್ ಚರಣ್ ತೇಜಾ ನಟಿಸುತ್ತಿರುವ ನೂತನ ತೆಲುಗು ಸಿನಿಮಾ ಸೆಟ್ಟೇರಿದೆ. ಮ್ಯೂಸಿಕಲ್ ಸೆನ್ಸೇಷನ್ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿರುವ ಚಿತ್ರದ ನಾಯಕಿಯಾಗಿ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ನಟಿಸುತ್ತಿದ್ದಾರೆ.
ರಾಮ್ ಚರಣ್ ಮತ್ತು ಜಾಹ್ನವಿ ಜೋಡಿಯ ನೂತನ ತೆಲುಗು ಸಿನಿಮಾ ಸೆಟ್ಟೇರಿದೆ. ಬುಚ್ಚಿ ಬಾಬು ನಿರ್ದೇಶಿಸುತ್ತಿರುವ ಚಿತ್ರಕ್ಕೆ ತಾತ್ಕಾಲಿಕವಾಗಿ ‘RC 16’ ಎಂದು ನಾಮಕರಣ ಮಾಡಲಾಗಿದೆ. ನೂತನ ಚಿತ್ರದ ಮುಹೂರ್ತ ಹೈದರಾಬಾದ್‌ನಲ್ಲಿ ನೆರವೇರಿದೆ. ನಿರ್ಮಾಪಕ ಅಲ್ಲು ಅರವಿಂದ್ ಅವರು ಬೌಂಡ್ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಹಸ್ತಾಂತರಿಸಿದರು. ರಾಮ್ ಚರಣ್ ಅವರ ಗೇಮ್ ಚೇಂಜರ್ ಚಿತ್ರವನ್ನು ನಿರ್ದೇಶಿಸುತ್ತಿರುವ ಸ್ಟಾರ್ ನಿರ್ದೇಶಕ ಶಂಕರ್ ಕ್ಯಾಮೆರಾ ಚಾಲನೆ ಮಾಡಿದರು. ಹಿರಿಯ ತೆಲುಗು ನಟ ಚಿರಂಜೀವಿ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ಇದು ರಾಮ್‌ಚರಣ್ ನಟನೆಯ 16ನೇ ಸಿನಿಮಾ. ಬುಚ್ಚಿಬಾಬು ನಿರ್ದೇಶನದ ಇನ್ನೂ ಹೆಸರಿಡದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಎ ಆರ್ ರೆಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಆರ್ ರತ್ನವೇಲು ಛಾಯಾಗ್ರಹಣ, ಆಂಟೋನಿ ರುಬಿನ್ ಸಂಕಲನ ಚಿತ್ರಕ್ಕಿದೆ. ಚಂದ್ರಬೋಸ್, ಆನಂತಶ್ರೀರಾಮ್, ಬಾಲಾಜಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ RC16 ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿರುವ ಚಿತ್ರದ ವಿಶೇಷ ಪಾತ್ರದಲ್ಲಿ ನಟ ಶಿವರಾಜಕುಮಾರ್ ನಟಿಸಲಿದ್ದಾರೆ ಎನ್ನುವುದು ವಿಶೇಷ. ಸದ್ಯ ರಾಮ್ ಚರಣ್ ‘ಗೇಮ್ ಚೇಂಜರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ಈ ಸಿನಿಮಾ ಅಂತಿಮ ಹಂತದ ಚಿತ್ರೀಕರಣದಲ್ಲಿದೆ.