ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಬಹುನಿರೀಕ್ಷಿತ ‘ಅನಿಮಲ್’ ಹಿಂದಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ರಣಬೀರ್ ಕಪೂರ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬ್ಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೂಲ ಹಿಂದಿ ಸೇರಿದಂತೆ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 1, 2023ರಂದು ಸಿನಿಮಾ ತೆರೆಕಾಣಲಿದೆ.
ಅನಿಲ್ ಕಪೂರ್, ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಬಾಬ್ಬಿ ಡಿಯೋಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಅನಿಮಲ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರವನ್ನು ‘ಅರ್ಜುನ್ ರೆಡ್ಡಿ’ ಮತ್ತು ‘ಕಬೀರ್ ಸಿಂಗ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಚಿತ್ರವು ತಂದೆ – ಮಗನ ಬಾಂಧವ್ಯದ ಸುತ್ತ ಸುತ್ತುತ್ತದೆ. ಬಲ್ಬೀರ್ ಸಿಂಗ್ ಪಾತ್ರದಲ್ಲಿ ಅನಿಲ್ ಕಪೂರ್ ಹಾಗೂ ಆತನ ಮಗ ಅರ್ಜುನ್ ಸಿಂಗ್ ಆಗಿ ರಣಬೀರ್ ನಟಿಸಿದ್ದಾರೆ. ಚಿತ್ರಕಥೆಯಲ್ಲಿ ಭೂಗತ ಜಗತ್ತು, ತೀವ್ರ ರಕ್ತಪಾತದ ಹಿನ್ನೆಲೆಯೂ ಇದೆ. ತಂದೆ ಮೇಲೆ ಅಪಾರ ಪ್ರೀತಿ ಇರುವ ಮಗ, ತಂದೆ ಬೆದರಿಸಿದರೂ, ದ್ವೇಷಿಸಿದರೂ ಅವರಿಗಾಗಿ ಏನು ಬೇಕಾದರೂ ಮಾಡುವಷ್ಟು ಪ್ರೀತಿ. ಅವನ ತಂದೆಯ ಮೇಲೆ ದಾಳಿ ನಡೆದಾಗ ಆತ ಮೃಗದಂತೆ ತಿರುಗಿ ಬಿದ್ದರೆ ಏನಾಗುತ್ತದೆ ಎಂಬುದು ಟ್ರೇಲರ್‌ನಲ್ಲಿದೆ.
ಶಿಸ್ತು, ಕಟ್ಟುನಿಟ್ಟಿನ ತಂದೆಯ ಪೋಷಣೆಯಲ್ಲಿ ಬೆಳೆದ ಮಗ ಭೂಗತಲೋಕದ ಪಾಲಾಗುತ್ತಾನೆ. ಆದರೂ ತಂದೆಯ ಮೇಲಿನ ಅತಿಯಾದ ಮಮಕಾರದಿಂದ ಮಗ ಕ್ರೂರ ಮನಸ್ಥಿತಿಯವನಾಗಿದ್ದರೂ ಕರುಣೆ ತೋರಿಸುತ್ತಾನೆ. ಟ್ರೇಲರ್‌ನ ಪ್ರತಿ ಅಂಶವೂ ಕುತೂಹಲ ಮೂಡಿಸುತ್ತದೆ. ಕೆಲವು ಸನ್ನಿವೇಶಗಳಲ್ಲಿ ರಶ್ಮಿಕಾ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಅವತರಣಿಕೆಯಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಸಹ ಮಾಡಿದ್ದಾರೆ. ಚಿತ್ರವನ್ನು T-Series, A T-Series Films, St Film Ltd ಮತ್ತು Bhadrakali Pictures Production ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್, ಪ್ರಣಯ್ ರೆಡ್ಡಿ ವಂಗ, ಮುರಾದ ಖೇತಾನಿ, ಕೃಷ್ಣ ಕುಮಾರ್ ನಿರ್ಮಿಸಿದ್ದಾರೆ. ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪುರಾಣಿಕ್, ಜಾನಿ, ಆಶಿಮ್ ಕೆಮ್ಸನ್, ಹರ್ಷವರ್ಧನ್ ರಾಮೇಶ್ವರ್ ಮತ್ತು ಗುರಿಂದರ್ ಸೀಗಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ತೃಪ್ತಿ ಡಿಮ್ರಿ ಮತ್ತು ಶಕ್ತಿಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೂಲ ಹಿಂದಿ ಸೇರಿದಂತೆ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 1, 2023ರಂದು ಸಿನಿಮಾ ತೆರೆಕಾಣಲಿದೆ.