ಗುರುಪ್ರಸಾದ್ – ಜಗ್ಗೇಶ್ ಜೋಡಿಯ ‘ರಂಗನಾಯಕ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ‘ಮಠ’, ‘ಎದ್ದೇಳು ಮಂಜುನಾಥ’ ಚಿತ್ರಗಳ ನಂತರ ಗುರುಪ್ರಸಾದ್ – ಜಗ್ಗೇಶ್ ಮತ್ತೆ ಜೊತೆಯಾಗಿರುವ ಚಿತ್ರವಿದು. ಇದೊಂದು ವಿಡಂಬನಾತ್ಮಕ ಸಿನಿಮಾ ಕೂಡ ಹೌದು ಎನ್ನುತ್ತಾರೆ ನಿರ್ದೇಶಕರು. ಇದೇ ವಾರ ಮಾರ್ಚ್ 8ರಂದು ಸಿನಿಮಾ ತೆರೆಕಾಣಲಿದೆ.
‘ಮಠ’ ಸಿನಿಮಾ ಖ್ಯಾತಿಯ ಗುರುಪ್ರಸಾದ್ ನಿರ್ದೇಶನದ ‘ರಂಗನಾಯಕ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ‘ಮಠ’, ‘ಎದ್ದೇಳು ಮಂಜುನಾಥ’ ಚಿತ್ರಗಳ ನಂತರ ಗುರುಪ್ರಸಾದ್ – ಜಗ್ಗೇಶ್ ಮತ್ತೆ ಜೊತೆಯಾಗಿರುವ ಚಿತ್ರವಿದು. ತಮ್ಮ ಸಿನಿಮಾ ಕುರಿತು ಮಾತನಾಡುವ ಜಗ್ಗೇಶ್, ‘ಇದು ಸಂಪೂರ್ಣವಾಗಿ ಗುರುಪ್ರಸಾದ್ ಸಿನಿಮಾ. ಇಲ್ಲಿ ನಾನೊಬ್ಬ ಕಲಾವಿದನಷ್ಟೆ. ಗುರುಪ್ರಸಾದ್ ತಮ್ಮ ಬುದ್ದಿಶಕ್ತಿ ಬಳಸಿಕೊಂಡು ಈ ಸಿನಿಮಾ ಮಾಡಿದ್ದಾರೆ. ನನ್ನ ಹಿಂದಿನ ಯಾವುದೇ ಸಿನಿಮಾದ ನೆರಳು ಈ ಸಿನಿಮಾದಲ್ಲಿಲ್ಲ. ನಿರ್ಮಾಪಕ ವಿಖ್ಯಾತ್ ನಮ್ಮನೆ ಅಂಗಳದಲ್ಲಿ ಬೆಳೆದ ಹುಡುಗ. ಈಗಿನ ಹುಡುಗರು ತಾನು ನಟನಾಗಬೇಕೆಂದು ಇಷ್ಟಪಡುತ್ತಾರೆ. ಆದರೆ ಈತ ನಿರ್ಮಾಪಕನಾಗಬೇಕೆಂದು ಬಂದಿದ್ದಾನೆ’ ಎಂದು ನಿರ್ಮಾಪಕರಿಗೆ ಶುಭ ಕೋರಿದರು.
ಗುರುಪ್ರಸಾದ್ ಅವರಿಗೆ ಇದು ಐದನೇ ನಿರ್ದೇಶನದ ಸಿನಿಮಾ. ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಅವರು ‘ಡೈರೆಕ್ಟರ್ಸ್ ಸ್ಪೆಷಲ್’ ಮತ್ತು ‘ಎರಡನೇ ಸಲ’ ಚಿತ್ರಗಳನ್ನು ಮಾಡಿದ್ದರು. ಈ ಎರಡು ಸಿನಿಮಾಗಳು ಯಶಸ್ವಿಯಾಗಲಿಲ್ಲ. ಇದೀಗ ‘ರಂಗನಾಯಕ’ ಚಿತ್ರದ ಬಗ್ಗೆ ಅವರಿಗೆ ಭಾರಿ ವಿಶ್ವಾಸವಿದೆ. ‘ತುಂಬಾ ಪ್ಲ್ಯಾನ್ ಮಾಡಿ ಈ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ನಾನೊಬ್ಬ ನಿರ್ದೇಶಕನಾಗಿಯೇ ಅಭಿನಯಿಸಿದ್ದೇನೆ. ಹತಾಶ ಪ್ರೇಕ್ಷಕನಾದವನು ಏನು ಹೇಳಬೇಕೆಂದಿರುವನೋ ಅದನ್ನೇ ನಾನಿಲ್ಲಿ ಹೇಳಿದ್ದೇನೆ. ಇದನ್ನು ವಿಡಂಬನೆಯ ಚಿತ್ರ ಅನ್ನಲೂಬಹುದು. ಒಂದು ಕಾಲಘಟ್ಟದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ವಿಶೇಷವಾದ ಸಿನಿಮಾ ಇದಾಗಲಿದೆ ಎಂಬ ವಿಶ್ವಾಸ ನನ್ನದು’ ಎನ್ನುತ್ತಾರೆ ಗುರುಪ್ರಸಾದ್. ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತವಿದೆ. ಇದೇ ವಾರ ಮಾರ್ಚ್ 8ರಂದು ಸಿನಿಮಾ ತೆರೆಕಾಣಲಿದೆ.