ರಂಜನ್‌ ಮುಲ್ಲರಟ್‌ ಈ ಹಿಂದೆ ಕಲರಿಯಪಟ್ಟು ಮಾರ್ಷಿಯಲ್‌ ಆರ್ಟ್ಸ್‌ ಕುರಿತ ‘ದೇಹಿ’ ಸಿನಿಮಾ ನಿರ್ಮಿಸಿದ್ದರು. ಅವರೀಗ ಕಲರಿಯಪಟ್ಟು ಆಧರಿಸಿದ ಮತ್ತೊಂದು ಸಿನಿಮಾ ಸಿದ್ಧಪಡಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ.

ರಂಜನ್‌ ಮುಲ್ಲರಟ್‌ ನಿರ್ಮಿಸಿ, ನಿರ್ದೇಶಿಸುತ್ತಿರುವ ಕಲರಿಯಪಟ್ಟು ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ. ಈ ಬಹುಭಾಷಾ ಸಿನಿಮಾದ ಶೀರ್ಷಿಕೆ ‘LOOK BACK’ ಎಂದಿದ್ದು, ಭಾರತದ ಸಾಂಪ್ರದಾಯಿಕ ಯುದ್ಧಕಲೆ ಕಲರಿಯಪಟ್ಟು ಕುರಿತು ಚಿತ್ರ ಹೇಳಲಿದೆ. ಕೆಲ ನೈಜ ಘಟನೆಗಳನ್ನು ಆಧರಿಸಿ ರಂಜನ್‌ ಮುಲ್ಲರಟ್‌ ಕತೆ, ಚಿತ್ರಕಥೆ ರಚಿಸಿ ಸಿನಿಮಾ ನಿರ್ದೇಶಿಸಿದ್ದಾರೆ. ಕೇರಳ ಮೂಲದವರಾದ 80ರ ಹರೆಯದ ಕಲರಿಯಪಟ್ಟು ಶಿಕ್ಷಕಿ ಮೀನಾಕ್ಷಿಯಮ್ಮ ‘LOOK BACK’ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ರಂಜನ್‌ ಮುಲ್ಲರಟ್‌ ಮತ್ತು ಉಪಾಸನಾ ಪ್ರಮುಖ ಪಾತ್ರಗಳಲ್ಲಿ ಇರಲಿದ್ದು, ಬೆಂಗಳೂರಿನ ಕಲರಿ ಗುರುಕುಲಂನ ಹಲವಾರು ವಿದ್ಯಾರ್ಥಿಗಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ಮುಲ್ಲರಟ್‌, “ಜಗತ್ತಿನಾದ್ಯಂತ ಕರಾಟೆ, ಕುಂಗ್‌ಫು, Teakwondo ಸೇರಿದಂತೆ ಹಲವು ಮಾರ್ಷಿಯಲ್‌ ಆರ್ಟ್ಸ್‌ ಕಲೆಗಳು ಪ್ರಾಕ್ಟೀಸ್‌ನಲ್ಲಿವೆ. ಇತಿಹಾಸ ಹೇಳುವಂತೆ ಇವೆಲ್ಲವೂ ನಮ್ಮ ಕಲರಿಯಪಟ್ಟು ಆಧರಿಸಿದ ಸಮರ ಕಲೆಗಳು. ದುರದೃಷ್ಟವತಾಶ್‌ ಕಲರಿಯಪಟ್ಟು ಕುರಿತು ನಮ್ಮಲ್ಲಿ ಜಾಗೃತಿ ತೀರಾ ಕಡಿಮೆ. ಸಿನಿಮಾ ಮೂಲಕ ಹೆಮ್ಮೆಯ ಸಮರಕಲೆಯ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ. ಖ್ಯಾತ ಕಲರಿಯಪಟ್ಟು ಪಟು ಮೀನಾಕ್ಷಿಯಮ್ಮ ಅವರ ಪಾಲ್ಗೊಳ್ಳುವಿಕೆಯಿಂದಾಗಿ ನಮ್ಮ ಸಿನಿಮಾದ ಆಶಯ ಈಡೇರಲಿದೆ. ಇದು ಕಾಲ್ಪನಿಕ ಕತೆಯ ರಿಯಲಿಸ್ಟಿಕ್‌ ಅಪ್ರೋಚ್‌” ಎನ್ನುತ್ತಾರೆ. ಪದ್ಮಶ್ರೀ ಪುರಸ್ಕೃತ ಮೀನಾಕ್ಷಿಯಮ್ಮ ಅವರ ಕಲಿಕೆ, ಸಾಧನೆ ತಮಗೆ ಚಿತ್ರಕಥೆ ರಚನೆಗೆ ಪ್ರೇರಣೆಯಾಗಿದೆ ಎನ್ನುತ್ತಾರೆ ಮುಲ್ಲರಟ್‌.

ಈಗಾಗಲೇ ‘LOOK BACK’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಚಿಕ್ಕಮಗಳೂರು ಸುತ್ತಮುತ್ತ ದಟ್ಟ ಅರಣ್ಯದಲ್ಲಿ ಹಾಗೂ ಕೇರಳದ ಕೆಲವೆಡೆ ಚಿತ್ರೀಕರಣ ನಡೆಸಿದ್ದಾರೆ. ಮೀನಾಕ್ಷಿಯಮ್ಮ ಅವರ ಕಲರಿಯಪಟ್ಟು ಶಾಲೆಯಲ್ಲೂ ಚಿತ್ರೀಕರಣ ನಡೆದಿದೆ. ಸದ್ಯ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ಮುಂದಿನ ಒಂದೆರೆಡು ತಿಂಗಳಲ್ಲಿ ಪೂರ್ಣವಾಗಲಿದೆ. ಕೃಷ್ಣ ಛಾಯಾಗ್ರಹಣ ಮಾಡಿದ್ದು, ಅಮೆರಿಕ ಮೂಲದ ಸಂಗೀತ ನಿರ್ದೇಶಕರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಕನ್ನಡ, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಚಿತ್ರ ರೂಪುಗೊಳ್ಳಲಿದೆ. ಸಿನಿಮಾ ಪೂರ್ಣಗೊಂಡ ನಂತರ ಭಾರತ ಹಾಗೂ ಜಗತ್ತಿನ ಪ್ರಮುಖ ಚಿತ್ರೊತ್ಸವಗಳಲ್ಲಿ ಪ್ರದರ್ಶಿಸುವುದು ಚಿತ್ರತಂಡದ ಯೋಜನೆ.

ದೇಹಿ – ರಂಜನ್‌ ಮುಲ್ಲರಟ್‌ 2018ರಲ್ಲಿ ನಿರ್ಮಿಸಿದ ಸಿನಿಮಾ ಇದು. ಭಾರತದ ಮೊದಲ ಮಕ್ಕಳ ಮಾರ್ಷಿಯಲ್‌ ಆರ್ಟ್ಸ್‌ ಸಿನಿಮಾ. ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ‘ದೇಹಿ’ ತಯಾರಾಗಿತ್ತು. ಕಲರಿಯಪಟ್ಟು ಕಲಾವಿದರು ಮತ್ತು ಕಲರಿ ಗುರು ಸಾಧನೆ ಕುರಿತು ಹೇಳುವ ಚಿತ್ರವಿದು. ಕಲರಿಪಯಟ್ಟು ಸಮರ ಕಲೆ ಕುರಿತು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ತಯಾರಾದ ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹದಿನೇಳು ವರ್ಷದ ಯುವತಿ ದಿವ್ಯಾಳ ಸುತ್ತ ಹೆಣೆದ ಕತೆ. ಬಹುಭಾಷಾ ನಟ ಕಿಶೋರ್‌ ಮತ್ತು ಉಪಾಸನಾ ಗುರ್ಜರ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ರಂಜನ್‌ ಮುಲ್ಲರಟ್‌ ಆರ್ಟಿಸ್ಟಿಕ್‌ ಡೈರೆಕ್ಟರ್‌ ಮತ್ತು ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡಿದ್ದ ಈ ಚಿತ್ರವನ್ನು ಧನಶೇಖರ್‌ ನಿರ್ದೇಶಿಸಿದ್ದರು.

ರಂಜನ್‌ ಮುಲ್ಲರಟ್‌ ನಿರ್ಮಾಣದ ‘ದೇಹಿ’ (2018) ಸಿನಿಮಾ ಟ್ರೈಲರ್‌

LEAVE A REPLY

Connect with

Please enter your comment!
Please enter your name here