ಕನ್ನಡ ಸಿನಿಮಾ | ಕನ್ನಡಿಗ
ಯಾವುದೇ ಸಿನೆಮಾ ನೋಡಬೇಕು ಅನಿಸಲು ಏನೋ ಒಂದು ಕಾರಣವಿರುತ್ತದೆ. ಇಷ್ಟದ ನಟ, ನಟಿ, ನಿರ್ದೇಶಕ, ಕಥಾವಸ್ತು ಹೀಗೆ… ‘ಕನ್ನಡಿಗ’ ನೋಡಬೇಕು ಅನಿಸಲು ಕಾರಣ ಬಿ.ಎಂ.ಗಿರಿರಾಜ್ ಎಂಬ ನಿರ್ದೇಶಕ. ಏನೋ ಭಿನ್ನವಾಗಿ ಮಾಡಿರ್ತಾರೆ ಎಂಬ ನಂಬಿಕೆ. ಸಿನೆಮಾ ಮುಗಿದ ಮೇಲೆ ಆ ನಂಬಿಕೆ ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರಿಂಟಿಂಗ್ ತಂತ್ರಜ್ಞಾನ ಬರುವ ಮುಂಚೆ ಸಾಹಿತ್ಯವನ್ನು ತಮ್ಮ ಲಿಪಿಕಾರಿಕೆಯ ವೃತ್ತಿಯಿಂದ ಕಾಪಾಡುತ್ತಾ ಬಂದ ಗುಣಭದ್ರನ ವಂಶಸ್ಥರ ಕತೆ ಇದು. ಕನ್ನಡದ ಇತಿಹಾಸ ಕಡೆಗಣಿಸಿರುವ ರಾಣಿ ಚನ್ನಭೈರಾದೇವಿಯ ಕುರಿತು ಈಚೆಗೆ ಗಜಾನನ ಶರ್ಮ ಪುಸ್ತಕ ಬರೆದರು. ಈ ಸಿನೆಮಾ ಚನ್ನಬೈರಾದೇವಿಯ ದರ್ಶನ ಮಾಡಿಸಿ, ಅವಳ ಕನ್ನಡದ ಕುರಿತ ಕನಸನ್ನು ಪರಿಣಾಮಕಾರಿಯಾಗಿ ಹೇಳುತ್ತದೆ.
ಸೈನ್ಯದ ಮುಂಚೂಣಿಯಲ್ಲಿದ್ದ ಸಮಂತ ಭದ್ರನಿಗೆ ಚೆನ್ನಬೈರಾದೇವಿಯ ಒಂದು ದ್ವೀಪವನ್ನು ಉಂಬಳಿ ಕೊಟ್ಟು, ಇನ್ನು ನೀನು ಕತ್ತಿ ಕೆಳಗಿಟ್ಟು ಕನ್ನಡ ಕಟ್ಟು ಎಂದು ಆದೇಶಿಸುತ್ತಾಳೆ. ದುರದೃಷ್ಟವಶಾತ್ ಪೋರ್ಚುಗೀಸರು ಭೈರಾದೇವಿಯನ್ನು ಸೆರೆಹಿಡಿದು ಅಷ್ಟೂ ಸಾಮ್ರಾಜ್ಯ ವಶಪಡಿಸಿಕೊಳ್ಳುತ್ತಾರೆ. ಸಮಂತಭದ್ರ ರಾಣಿ ಕೊಟ್ಟ ದ್ವೀಪವನ್ನು ಸಾಲಮಾಡಿ ಬಿಡಿಸಿಕೊಳ್ಳುತ್ತಾನೆ. ಆ ಸಾಲ 300 ವರ್ಷದವರೆಗೂ ತೀರಿಸುತ್ತಲೇ ಇರುತ್ತಾರೆ. ಸಮಂತಭದ್ರದ ವಂಶಸ್ಥ ಗುಣಭದ್ರನ ಕಾಲದವರೆಗೂ. ಗುಣಭದ್ರ ಆ ಸಾಲ ಹೇಗೆ ತೀರಿಸಿ ಆ ಜಾಗ ಬಿಡಿಸಿಕೊಳ್ಳುತ್ತಾನೆ ಎಂಬುದೇ ಸಿನೆಮಾದ ಕತೆ.
ಆರಂಭದಲ್ಲಿ ಕುಂದಗನ್ನಡ, ಹಿನ್ನೆಲೆ ಧ್ವನಿಯ ವಿವರಗಳು, ರವಿಚಂದ್ರನ್‌ರನ್ನು ಗುಣಭದ್ರ ಅಂತ ಒಪ್ಪಿಕೊಳ್ಳುವ ಕಷ್ಟ. ಎಲ್ಲವೂ ನಮಗೂ ಸಿನೆಮಾಗೆ ಹೊಂದಿಕೊಳ್ಳಲು ಸಮಯ ಬೇಡುತ್ತದೆ. ನೋಡುತ್ತಾ, ನೋಡುತ್ತಾ ನಿರೂಪಣೆ ತನ್ನ ಡಾಕ್ಯುಮೆಂಟರಿ ಶೈಲಿಯಿಂದ ಅಸಲೀ ಸಿನೆಮಾ ಶೈಲಿಗೆ ಹೊರಳುತ್ತದೆ. ಒಂದೊಂದೇ ಪಾತ್ರಗಳು ಬರುತ್ತಾ, ಭಾವಗಳನ್ನು ಸೇರಿಸುತ್ತಾ ಒಂದು ರೀತಿ ಟೇಕಾಫ್ ಆಗುತ್ತಾ ಹೋಗುತ್ತದೆ. ಸಿನೆಮಾ ಮುಗಿಯುವ ಹೊತ್ತಿಗೆ ರವಿಚಂದ್ರನ್ ಗುಣಭದ್ರನೇ ಅಂತ ಒಪ್ಪಿಬಿಟ್ಟಿರುತ್ತೇವೆ. ಇದು ರವಿಚಂದ್ರನ್ ಕೂಡ ಆ ಪಾತ್ರಕ್ಕೆ ಹೊಕ್ಕ ಪ್ರಕ್ರಿಯೆ ಅನಿಸುತ್ತದೆ. ದ್ವಿತಿಯಾರ್ಧದಲ್ಲಿ ಗುಣಭದ್ರನಾಗಿ ಕನ್ನಡದ ಕಟ್ಟಾಳಾಗಿ, ರವಿಚಂದ್ರನ್‌ರನ್ನು ನೋಡುವುದೇ ಸಂಭ್ರಮ.
ಸಿನೆಮಾವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಮಾಜದ, ಇತಿಹಾಸದ ಸಂಕೀರ್ಣತೆಯನ್ನು ಅಚ್ಚುಕಟ್ಟಾಗಿ ಬಿಂಬಿಸುತ್ತದೆ. ಅಲ್ಲಿ ಧರ್ಮ ಸಾಮರಸ್ಯವಿದೆ. ಧರ್ಮಕ್ಕಾಗಿ ಜೀವ ತೆಗೆಯುವವರೂ ಇದ್ದಾರೆ. ಒಳಿತುಕೆಡುಕು ಧರ್ಮದಲ್ಲಿಲ್ಲ. ಅದು ಮನುಷ್ಯನ ಸ್ವಭಾವ ಎಂಬುದನ್ನು ಸಿನೆಮಾ ಪರೋಕ್ಷವಾಗಿ ಹೇಳುತ್ತದೆ. ಎಲ್ಲವನ್ನೂ ಮೀರಿ ಕನ್ನಡವೇ ಒಂದು ಧರ್ಮವಾಗುವುದು ಸಿನೆಮಾದ ಸಾರ್ಥಕತೆ ಮತ್ತು ಆಶಯವೂ. ರಾಣಿಯ ಕನ್ನಡ ವಿಶ್ವವಿದ್ಯಾಲಯದ ಕನಸು ನನಸಾಯಿತಾ? ಅಂತಾ ದ್ವೀಪ ಈಗಲೂ ಇದೆಯಾ? ಎಲ್ಲಿದೆ? ಕುತೂಹಲ ಉಳಿಯುತ್ತದೆ.
ಸಿನೆಮಾಟೋಗ್ರಫಿ (ಜಿ.ಎಸ್.ವಿ.ಸೀತಾರಾಂ) ನೋಡಿದಾಗ ಇದನ್ನು ಯಾಕೆ ದೊಡ್ಡ ತೆರೆಯ ಮೇಲೆ ತರಲಿಲ್ಲ ಎಂದು ಬೇಸರವಾಗುತ್ತದೆ. ಕೆಲವು ದೃಶ್ಯಗಳಂತೂ ಅಷ್ಟು ಅಮೋಘವಾಗಿವೆ. ಲಕ್ಷ್ಮಿಪಾತ್ರದ ಜಯಶ್ರೀ ಮತ್ತು ಅವಳ ಜೋಡಿ ಶೃಂಗ ಬಿ.ವಿ.ಮುದ್ದಾಗಿ ಅಭಿನಯಿಸಿದ್ದಾರೆ. ಮಳೆಯಲ್ಲಿ ನೇರಳೆ ಹಣ್ಣು ಕೊಡುತ್ತಾ ತಾನೇ ನಾಚುವ ಶೃಂಗ ಆ ದೃಶ್ಯದ ಹೈಲೈಟ್. ಗುಣಭದ್ರನ ತಮ್ಮ ಮಲ್ಲಿನಾಥನಾಗಿ ಬಾಲಾಜಿ ಮನೋಹರ್, ಅಚ್ಯುತ್ ಅವರದ್ದೂ ಉತ್ತಮ ಅಭಿನಯದ. ಬ್ರಹ್ಮಾಂಡ ಗುರೂಜಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬುಳ್ಳ,ಮಾತೇ ಆಡದ ಪಾತ್ರ ಹ್ಯಾನಾಳಾಗಿ ಜೀವಿಕಾ ಕಾಡುತ್ತಾರೆ. ಕಿಟ್ಟೆಲ್ ಪದಕೋಶ ಅಂತ ಶಾಲಾದಿನಗಳಿಂದಲೂ ಕೇಳಿದ್ದ ನಮಗೆ ಈ ಕಿಟೆಲ್ ಕತೆಯನ್ನು ಹೇಳಿದ್ದಾರೆ ಗಿರಿರಾಜ್. ಕಿಟ್ಟೆಲ್ ಆಗಿ ಜೇಮಿ ಆಲ್ಟರ್ ಸೊಗಸಾಗಿ ಅಭಿನಯಿಸಿದ್ದಾರೆ. ಜುಟ್ಟು ಕತ್ತರಿಸುವಾಗಿನ ಗುರುದತ್ ಮುಖಭಾವ ಕಿಚ್ಚು ಹೊತ್ತಿಸುತ್ತದೆ. ಸಂಗೀತ ಕೆಲವು ಕಡೆ ಮಾತನ್ನು ನುಂಗಿ ಹಾಕುತ್ತದೆ. ಪೋರ್ಚುಗೀಸರ ಮಾತು ಬರುವಾಗ ಸಬ್‌ಟೈಟಲ್ಸ್ ಬೇಕಿತ್ತು ಅನಿಸುತ್ತದೆ. ನೇತುಹಾಕಿದ್ದ ಮನೆಯಾಳು ಬುಳ್ಳನನ್ನು ಕೆಳಗಿಳಿಸಿ ತಮ್ಮನಿಗೆ ಯಾವುದು ನಿಯತ್ತು ಅಂತ ಬುದ್ದಿ ಹೇಳುವಾಗ, ಬುಳ್ಳನಿಗೆ ಪತ್ರ ಓದುವಾಗ ಈ ರವಿಚಂದ್ರನ್ ಇಷ್ಟು ವರ್ಷ ಹೊಕ್ಕಳಿಗೆ ದ್ರಾಕ್ಷಿ ಸುರಕೊಂಡು ಇದ್ದದ್ಯಾಕೆ ಅನಿಸುತ್ತದೆ. ಅಂತಾ ಸನ್ನಿವೇಶ. ಅಂತಾ ಅಭಿನಯ ಮನಸು ತುಂಬುತ್ತದೆ.
ಕನ್ನಡ ನಾಡಿನಲ್ಲಿ, ಕನ್ನಡ ಹೋರಾಟಗಾರರು ಸಂಘಟನೆಗಳು ಇರುವಲ್ಲಿ, ಕನ್ನಡದ ಕತೆ ಹೇಳುವ , ಕನ್ನಡ ಸಾಹಿತ್ಯ ಉಳಿಸಲು ತಲೆಮಾರುಗಳನ್ನೆ ಬಲಿಕೊಟ್ಟವರ ಕುರಿತ ಸಿನೆಮಾ ಥಿಯೇಟರ್‌ನಲ್ಲಿ ಬರದೇ ಹೋಗುವುದು ಯಾರ ಹೀನಾಯ ಸೋಲು? ನಿರ್ದೇಶಕ ಗಿರಿರಾಜ್ ಗೆದ್ದಿದ್ದಾರೆ. ಇಂತಾ ಸಿನೆಮಾ ಕನ್ನಡಿಗರು ನೋಡಲ್ಲ ಅನ್ನುವ ಸಂದೇಶ ಕೊಟ್ಟು ನಾವು ಸೋತಿದ್ದೇವೆ.
ನಿರ್ಮಾಣ : ಎನ್.ಎಸ್.ರಾಜಕುಮಾರ್ | ರಚನೆ – ನಿರ್ದೇಶನ : ಬಿ.ಎಂ.ಗಿರಿರಾಜ್ | ಸಂಗೀತ : ರವಿ ಬಸ್ರೂರು | ಛಾಯಾಗ್ರಹಣ : ಜಿ.ಎಸ್.ವಿ.ಸೀತಾರಾಂ | ಕಲೆ : ಹೊಸ್ಮನೆ ಮೂರ್ತಿ | ತಾರಾಬಗಳ : ರವಿಚಂದ್ರನ್, ಪಾವನ, ಜೀವಿಕಾ, ಜಿಮ್ಮಿ ಆಲ್ಟರ್, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಶೃಂಗ