ಎಪ್ಪತ್ತರ ಕನ್ನಡ ಚಿತ್ರರಂಗ ತನ್ನ ಉಳಿವಿಗೆ ತಾರೆಯರ ತಲಾಶ್‌ನಲ್ಲಿರುವಾಗ ಸಿಕ್ಕವರೇ ವಿಷ್ಣುವರ್ಧನ್‌. ಏರಿಳಿತದ ಯಶಸ್ಸಿನಲ್ಲೂ ಹಲವಾರು ಅನಗತ್ಯ ವಿವಾದಗಳಿಗೆ ತುತ್ತಾದರೂ ರಾಮಾಚಾರಿಯ ಹಠ ಮತ್ತು ಧೈರ್ಯವನ್ನು ಮೈಗೂಡಿಸಿಕೊಂಡೇ ಅವರು ಬೆಳೆದು ಬಂದ ಪರಿ ಅಚ್ಚರಿ ಮೂಡಿಸುವಂಥದು. – ಡಾ.ಕೆ.ಪುಟ್ಟಸ್ವಾಮಿ ಅವರ ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಸಿನಿಮಾಯಾನ’ ಪುಸ್ತಕದಿಂದ ಆಯ್ದ ಬರಹ.

‘ನಾಗರಹಾವು’ ಚಿತ್ರದ ರಾಮಾಚಾರಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಿದ ವಿಷ್ಣುವರ್ಧನ್‌ರವರದು ಚಿತ್ರರಂಗಕ್ಕೆ ‘ಡ್ರೀಂ ಎಂಟ್ರಿ’. ರಾಮಾಚಾರಿ ಪಾತ್ರಕ್ಕಾಗಿ ಪುಟ್ಟಣ್ಣನವರು ನಡೆಸಿದ ಪರೀಕ್ಷೆಯಲ್ಲಿ ಗೆದ್ದ ಸಂಪತ್‌ಕುಮಾರ್‌ ಎಂಬ ವಿದ್ಯಾರ್ಥಿ, ನಟ ವಿಷ್ಣುವರ್ಧನನ ಹೆಸರು ಪಡೆದು ದಿನಬೆಳಗಾಗುವುದರೊಳಗೆ ತಾರೆಯಾದರು. ಕುಪಿತ ಯುವಕನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ವಿಷ್ಣು ಮೊದಲು ಕ್ಯಾಮೆರಾ ಎದುರಿಸಿದ್ದು ‘ವಂಶವೃಕ್ಷ’ ಚಿತ್ರದಲ್ಲಿ. (ಆದಕ್ಕೂ ಮೊದಲು ಬಾಲನಟನಾಗಿ) ಆ ಚಿತ್ರದ ಪೃಥ್ವಿ ಪಾತ್ರ ‘ನಾಗರಹಾವು’ ಚಿತ್ರದ ರಾಮಾಚಾರಿಯ ಪಾತ್ರಕ್ಕೆ ಪೂರಕವಾಗಿಯೇಇತ್ತು. ಸಂಶೋಧನೆಯ ಹುಚ್ಚಿನಲ್ಲಿ ಸಂಸಾರ ಮರೆತು ಎರಡನೇ ಮಾದುವೆ ಮಾಡಿಕೊಂಡು ಹೋಗುವ ತನ್ನ ತಂದೆಯ ವಿರುದ್ಧ ಸಿಟ್ಟು ಬೆಳೆಸಿಕೊಳ್ಳುವ ಪೃಥ್ವಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಅದೇ ಪಾತ್ರ ಮುಂದುವರೆದಂತಿದ್ದ ‘ನಾಗರಹಾವು’ ರಾಮಾಚಾರಿ ಅವರ ಅಭಿನಯದಲ್ಲಿ ಮತ್ತಷ್ಟು ಪ್ರಜ್ವಲಿಸಿತು. ಆ ಚಿತ್ರ ಒಬ್ಬ ಕಲಾವಿದನನ್ನು ಮಾತ್ರ ನೀಡಲಿಲ್ಲ. ಒಬ್ಬ ‘ತಾರೆ’ಯನ್ನೂ ಕೊಡುಗೆಯಾಗಿ ನೀಡಿತ್ತು.

ಎಪ್ಪತ್ತರ ಕನ್ನಡ ಚಿತ್ರರಂಗ ತನ್ನ ಉಳಿವಿಗೆ ತಾರೆಯರ ತಲಾಶ್‌ನಲ್ಲಿರುವಾಗ ಸಿಕ್ಕವರೇ ವಿಷ್ಣುವರ್ಧನ್‌. ಆದರೆ ಇಂಥ ಭರ್ಜರಿ ಪ್ರವೇಶ ಪಡೆದ ವಿಷ್ಣು ಎರಡನೇ ಚಿತ್ರ ‘ಸೀತೆಯಲ್ಲ ಸಾವಿತ್ರಿ’ ಚಿತ್ರದಲ್ಲಿ ಅಭಿನಯವನ್ನು ಮರೆತಂತೆ ನಟಿಸಿ ನಿರಾಶೆ ತಂದರು. ಆದರೆ ದೃಢಸಂಕಲ್ಪದಿಂದ ಅವರು ಚಿತ್ರರಂಗದಲ್ಲಿ ಅಭಿನಯಿಸುತ್ತಲೇ ಹೋದರು. ಏರಿಳಿತದ ಯಶಸ್ಸಿನಲ್ಲೂ ಹಲವಾರು ಅನಗತ್ಯ ವಿವಾದಗಳಿಗೆ ತುತ್ತಾದರೂ ರಾಮಾಚಾರಿಯ ಹಠ ಮತ್ತು ಧೈರ್ಯವನ್ನು ಮೈಗೂಡಿಸಿಕೊಂಡೇ ಅವರು ಬೆಳೆದು ಬಂದ ಪರಿ ಅಚ್ಚರಿ ಮೂಡಿಸುಂಥದು.

‘ಬೂತಯ್ಯನ ಮಗ ಅಯ್ಯು’ (ಫೋಟೊ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

ಎಪ್ಪತ್ತರ ದಶಕದಲ್ಲಿ ಹೊಡೆದಾಟದ ಚಿತ್ರಗಳು ಚಿತ್ರರಂಗದ ಪ್ರಧಾನ ಭೂಮಿಕೆಗೆ ಬರುತ್ತಿದ್ದ ಕಾಲದಲ್ಲಿ ‘ಸಾಹಸಸಿಂಹ’ ಇಮೇಜಿಗೆ ಸಿಕ್ಕಿಹಾಕಿಕೊಳ್ಳುವವರೆಗೂ ವಿಷ್ಣುವರ್ಧನರ ವೃತ್ತಿ ಬದುಕು ಅನೇಕ ಏರಿಳಿತ ಕಂಡಿತ್ತು. ‘ಬೂತಯ್ಯನ ಮಗ ಅಯ್ಯು’ ನಂತರ ಮತ್ತೆ ಮುಂಚೂಣಿಗೆ ಬಂದ ಅವರು ‘ಪ್ರೊಫೆಸರ್‌ ಹುಚ್ಚೂರಾಯ’, ‘ಅಣ್ಣ ಅತ್ತಿಗೆ’ಯಂಥ ಸಾಧಾರಣ ಯಶಸ್ಸಿನ ಚಿತ್ರಗಳಲ್ಲಿ ನಟಿಸಿದರು. ಬಳಿಕ ‘ದೇವರ ಗುಡಿ’ ಅವರನ್ನು ಮತ್ತೆ ಮುಖ್ಯವಾಹಿನಿಗೆ ತಂದಿತು. ‘ಕಳ್ಳ ಕುಳ್ಳ’ ಚಿತ್ರದಿಂದ ಹೆಚ್ಚು ಗ್ಲಾಮರಸ್‌ ಪಾತ್ರಗಳಲ್ಲಿ ಮಿಂಚತೊಡಗಿದ ಅವರು 1976ರಲ್ಲಿ ಕೇವಲ ಮೂರು ಸಾಧಾರಣ ಚಿತ್ರಗಳಲ್ಲಿ ಮಾತ್ರ ನಟಿಸಿದ್ದರು. ಬಳಿಕ 1977ರ ಮಧ್ಯಬಾಗದಲ್ಲಿ ಬಿಡುಗಡೆಯಾದ ‘ಸೊಸೆ ತಂದ ಸೌಭಾಗ್ಯ’ ಹಾಗೂ ರಾಜೇಂದ್ರಸಿಂಗ್‌ ಬಾಬುರವರ ‘ನಾಗರಹೊಳೆ’ಯ ಯಶಸ್ಸು, ಮರುಜನ್ಮ ನೀಡಿದರೂ ಅವಕಾಶಗಳು ಅವರ ಪಾಲಿಗೆ ಹರಿದು ಬರಲಿಲ್ಲ. ‘ಸಹೋದರರ ಸವಾಲ್‌’ (1977) ಯಶಸ್ವಿಯಾದರೂ ಅದರ ಪಾಲು ಸಹನಟ ರಜನೀಕಾಂತ್‌ರವರ ಪಾಲಾಯಿತು. 1978ರಲ್ಲಿ ಬಿಡುಗಡೆಯಾದ ‘ಹೊಂಬಿಸಿಲು’ ಅವರ ಅಭಿನಯದ ಇನ್ನೊಂದು ಮುಖವನ್ನು ತೋರಿದ ಚಿತ್ರ. ಆದರೂ ಅವರ ಚಿತ್ರಜೀವನ ನಿರೀಕ್ಷಿಸಿದ ಮಟ್ಟ ಏರಲೇ ಇಲ್ಲ. 1978ರಿಂದ 1983ರವರೆಗೆ ಆರು ವರ್ಷದ ಅವಧಿಯಲ್ಲಿ ನಲವತ್ತು ಚಿತ್ರಗಳಲ್ಲಿ ನಟಿಸಿದರೂ ಯಶಸ್ಸು ಕಂಡ ಚಿತ್ರಗಳೆಂದರೆ ‘ಹೊಂಬಿಸಿಲು’, ‘ವಸಂತಲಕ್ಷ್ಮಿ’, ‘ಸಿಂಗಾಪೂರದಲ್ಲಿ ರಾಜಾಕಳ್ಳ’ (1978), ‘ಕಾಳಿಂಗ’, ‘ಮಕ್ಕಳ ಸೈನ್ಯ’, ‘ಸಿಂಹಜೋಡಿ’, ‘ಬಂಗಾರದ ಜಿಂಕೆ’ (1980), ‘ಗುರುಶಿಷ್ಯರು’ (1981), ‘ಅವಳ ಹೆಜ್ಜೆ’, ‘ಸಾಹಸ ಸಿಂಹ’, ‘ಊರಿಗೆ ಉಪಕಾರಿ’ (1982) ಮಾತ್ರ.

‘ಮುತ್ತಿನ ಹಾರ’ (ಫೋಟೊ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

‘ಸಿಂಹಜೋಡಿ’ ಮೂಲಕ ವಿಷ್ಣುವರ್ಧನರ ಹೊಡೆದಾಟದ ಇಮೇಜನ್ನು ಸೃಷ್ಟಿಸಿದ ಜೋಸೈಮನ್‌ ‘ಸಾಹಸಸಿಂಹ’ (1982)ದಲ್ಲಿ ಭರ್ಜರಿ ಬೆಳೆ ತೆಗೆದರು. ‘ಒಂದೇ ಗುರಿ’, ‘ಖೈದಿ’, ‘ಸಿಡಿದೆದ್ದ ಸಹೋದರ’, ‘ಗಂಡುಗಲಿ ರಾಮ’ ಮುಂತಾದ ಚಿತ್ರಗಳಲ್ಲಿ ಸಾಹಸಸಿಂಹನ ಇಮೇಜು ತಡೆಯಿಲ್ಲದೆ ಮುಂದುವರೆಯಿತು. ಅದೇ ಸಮಯದಲ್ಲಿ ಬಿಡುಗಡೆಯಾದ ‘ಬಂಧನ’ (1984) ಅವರ ಸೂಕ್ಷ್ಮಾಭಿನಯದ ಮಗ್ಗುಲನ್ನು ಪರಿಚಯಿಸಿತು. ಅಲ್ಲಿಂದಾಚೆಗೆ ವಿಷ್ಣುವರ್ಧನ್‌ರವರು ಬಹುಬೇಡಿಕೆಯ ನಟರಾಗಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದರು. ಹೊಡೆದಾಟದ ಚಿತ್ರಗಳಿಗಿಂತಲೂ ಅವರು ತಮ್ಮ ಸೂಕ್ಷ್ಮ ಹಾಗೂ ನವಿರು ಅಭಿನಯದಿಂದ ಗೆದ್ದಿರುವುದೇ ಹೆಚ್ಚು. ‘ನಾಗರಹೊಳೆ’, ‘ದೇವರಗುಡಿ,’ಮಲಯಮಾರುತ’, ‘ಬಂಧನ’, ‘ಸುಪ್ರಭಾತ’ ,’ಮುತ್ತಿನಹಾರ’, ‘ಲಾಲಿ’, ‘ಹೊಂಬಿಸಿಲು’, ‘ಬಂದನ’, ‘ಲಯನ್‌ ಜಗಪತಿರಾವ್‌’, ‘ನಿಷ್ಕರ್ಷ’, ‘ವೀರಪ್ಪನಾಯಕ’, ‘ಯಜಮಾನ’, ‘ಆಪ್ತಮಿತ್ರ’, ‘ರಾಯರು ಬಂದರು ಮಾವನ ಮನೆಗೆ’ ಮುಂತಾದವು ಅವರ ಅಭಿನಯವನ್ನು ಹೊರಹಾಕಿರುವ ಚಿತ್ರಗಳು. ಆದರೆ ಅವರ ಅನೇಕ ಯಶಸ್ವಿ ಚಿತ್ರಗಳು ರೀಮೇಕು ಚಿತ್ರಗಳೇ ಆಗಿರುವುದರಿಂದ ಅವುಗಳನ್ನು ಹೊರತುಪಡಿಸಿದರೆ, ಇಷ್ಟು ಸುದೀರ್ಘ ಅವಧಿಯ ವೃತ್ತಿ ಜೀವನದಲ್ಲಿ ವಿಷ್ಣುವರ್ಧನ್‌ ಸವಾಲಿನ ಪಾತ್ರಗಳನ್ನು ನಿರ್ವಹಿಸಿರುವುದು ಬೆರಳೆಣಿಕೆಯಷ್ಟು ಮಾತ್ರ. ಹಾಗಾಗಿ ಅಪಾರ ಪ್ರತಿಭೆಯಿದ್ದರೂ ಕಲಾವಿದ ವಿಷ್ಣುವರ್ಧನ್‌ ಅವರಿಗೆ ನಿಜವಾದ ಪಾತ್ರಗಳು ದಕ್ಕಿದ್ದು ಕಡಿಮೆಯೇ!

ಡಾ.ರಾಜಕುಮಾರ್‌ ತರುವಾಯ ಅತ್ಯಂತ ಜನಪ್ರಿಯ ನಟ ವಿಷ್ಣುವರ್ಧನ್‌ ಎಂಬುದರಲ್ಲಿ ಅನುಮಾನವಿಲ್ಲ. ಅವರ ಪೀಳಿಗೆಯವರಾದ ಶ್ರೀನಾಥ್‌, ಅನಂತನಾಗ್‌, ಅಂಬರೀಶ್‌ ಅವರೊಡನೆ ಸ್ಪರ್ಧಿಸುತ್ತಾ ಮತ್ತು ತರುವಾಯದ ರವಿಚಂದ್ರನ್‌, ರಮೇಶ್‌, ಶಿವರಾಜಕುಮಾರ್‌, ಉಪೇಂದ್ರ ಮತ್ತು ಇತ್ತೀಚಿನ ಹೊಸ ತಲೆಮಾರಿನ ನಟನ ನಡುವೆಯೂ ಉಳಿದು ಬಂದ ಅವರ ಅಭಿನಯ ಸಾಮರ್ಥ್ಯ ಮತ್ತು ಜನಪ್ರಿಯತೆ ಬಗ್ಗೆ ಎರಡು ಮಾತಿಲ್ಲ.

‘ಲಾಲಿ’ (ಫೋಟೊ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

LEAVE A REPLY

Connect with

Please enter your comment!
Please enter your name here