ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ‘ಕಬ್ಜ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಗ್ಯಾಂಗ್‌ಸ್ಟರ್‌ ಪ್ಯಾನ್‌ ಇಂಡಿಯಾ ಸಿನಿಮಾ ಎಂದಾಕ್ಷಣ ‘KGF’ ಸರಣಿ ಸಿನಿಮಾಗಳ ಮೇಕಿಂಗ್‌ಗೆ ಹೋಲಿಸುವುದು ಸಹಜ. ಉಪೇಂದ್ರ, ಸುದೀಪ್‌ ನಟನೆಯ ಸಿನಿಮಾದ ಟೀಸರ್‌ ಇದನ್ನು ಮೀರುವ ಪ್ರಯತ್ನ ನಡೆಸಿರುವಂತಿದೆ.

ಉಪೇಂದ್ರರ ‘ಕಬ್ಜ’ ಸಿನಿಮಾ ಸುದ್ದಿಯಾಗಿ ನಾಲ್ಕು ವರ್ಷಗಳೇ ಕಳೆದಿವೆ. ನಿರ್ದೇಶಕ ಆರ್‌.ಚಂದ್ರು ಅವರು, ‘ಇನ್ನೇನು ಸಿನಿಮಾದ ಶೂಟಿಂಗ್‌ ಮುಗಿಯಿತು’ ಎಂದು ಹೇಳುತ್ತಲೇ ಬರುತ್ತಿದ್ದರು. ಅಂತಿಮವಾಗಿ ಚಿತ್ರ ತೆರೆಗೆ ಸಿದ್ಧವಾಗಿದ್ದು, ಇಂದು ಟೀಸರ್‌ ಬಿಡುಗಡೆಯಾಗಿದೆ. ಗ್ಯಾಂಗ್‌ಸ್ಟರ್‌ ಸಿನಿಮಾ ಆದ್ದರಿಂದ ಮದ್ದು – ಗುಂಡುಗಳ ಮೊರೆತ ಜೋರಾಗಿಯೇ ಇದೆ. ರೆಟ್ರೋ ಲುಕ್‌ಗಳಲ್ಲಿ ಪಾತ್ರಗಳನ್ನು ಕಾಣಿಸಿದ್ದಾರೆ. ಉಪೇಂದ್ರ, ಸುದೀಪ್‌ ಪರಸ್ಪರ ಮುಖಾಮುಖಿಯಾಗುವ ಪಾತ್ರಗಳಲ್ಲಿ ಇರುವಂತಿದೆ. ‘KGF’ ಸರಣಿ ಸಿನಿಮಾಗಳ ನಂತರ ಪ್ಯಾನ್‌ ಇಂಡಿಯಾ ಗ್ಯಾಂಗ್‌ಸ್ಟರ್‌ ಸಿನಿಮಾಗಳನ್ನು ಅದೇ ಕಣ್ಣಿನಿಂದ ನೋಡುವುದು ರೂಢಿ. ನಾಯಕನಟನದ ಬಾಲ್ಯದ ನೆನಪಿನೊಂದಿಗೆ ಆರಂಭವಾಗುವ ‘ಕಬ್ಜ’ ಟೀಸರ್‌ ‘KGF’ ನೆನಪಿಸುವುದೇನೋ ಹೌದು. ಕತ್ತಲನ್ನು ಸೆರೆಹಿಡಿದಿರುವ ರೀತಿಯೂ ಯಶ್‌ ಚಿತ್ರವನ್ನು ನೆನಪಿಸಿದರೂ ನಂತರ ಇಲ್ಲಿ ಬೇರೆ ಕತೆ, ನಿರೂಪಣೆಯ ಹೊಳಹು ಸಿಗುತ್ತದೆ. ‘KGF’ ಸಿನಿಮಾದಲ್ಲಿ ಕೆಲಸ ಮಾಡಿದ್ದ ಸಂಗೀತ ಸಂಯೋಜಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್‌ ‘ಕಬ್ಜ’ಕ್ಕೂ ದುಡಿದಿದ್ದಾರೆ. ಚಿತ್ರದ ನಾಯಕಿ ಶ್ರಿಯಾ ಪಾತ್ರವೂ ಟೀಸರ್‌ನಲ್ಲಿ ರಿವೀಲ್‌ ಆಗಿದೆ. ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಸಿನಿಮಾ ತೆರೆಕಾಣುತ್ತಿದ್ದು, ಚಿತ್ರದ ಬಿಡುಗಡೆ ದಿನಾಂಕವಿನ್ನೂ ಘೋಷಣೆಯಾಗಿಲ್ಲ. ಬಹುಕೋಟಿ ವೆಚ್ಚದ ಸಿನಿಮಾದ ಟೀಸರ್‌ ಭರಪೂರ ನಿರೀಕ್ಷೆಯನ್ನಂತೂ ಮೂಡಿಸಿದೆ.

Previous article‘Troll’ ಲಿರಿಕಲ್‌ ವೀಡಿಯೋ ಸಾಂಗ್‌; ನವೆಂಬರ್‌ 4ಕ್ಕೆ ‘ಬನಾರಸ್‌’
Next articleವಿಷ್ಣುವರ್ಧನ್‌ ಜನ್ಮದಿನ; ಮೇರುನಟನ ನೆನಪು

LEAVE A REPLY

Connect with

Please enter your comment!
Please enter your name here