ವರ್ಷಗಳಿಂದ ಕಾಯುತ್ತಿದ್ದ ಸಿನಿಪ್ರಿಯರಿಗೆ ಕಡೆಗೂ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಸಿಹಿ ಸುದ್ದಿ ಕೊಟ್ಟಿದ್ದಾರೆ. ಬಹು ನಿರೀಕ್ಷಿತ ಸಿನಿಮಾ ‘ರಿಚರ್ಡ್ ಆಂಟನಿ’ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಚಿತ್ರದ ಕತೆ ಹಾಗೂ ಶೂಟಿಂಗ್ ಲೋಕೇಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸಿನಿಮಾ ‘ಉಳಿದವರು ಕಂಡಂತೆ’. ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲೊಂದು ಎನಿಸಿಕೊಂಡ ಚಿತ್ರವಿದು. ಬಾಕ್ಸಾಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ ಒಂದು ವರ್ಗದ ಪ್ರೇಕ್ಷಕರಿಗೆ ತುಂಬಾ ಇಷ್ಟವಾದ ಪ್ರಯೋಗವಿದು. ಈ ಚಿತ್ರದಲ್ಲಿ ಬರುವ ರಿಚರ್ಡ್ ಆಂಟನಿ ಪಾತ್ರವನ್ನು ಸಿನಿಪ್ರಿಯರು ಇಂದಿಗೂ ಮರೆತಿಲ್ಲ. ಇದೇ ಕಾರಣಕ್ಕೆ ‘ಉಳಿದವರು ಕಂಡಂತೆ’ ಚಿತ್ರದ ಪ್ರೀಕ್ವೆಲ್ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಹೀಗಾಗಿಯೇ 2 ವರ್ಷಗಳ ಹಿಂದೆಯೇ ಪುಟ್ಟ ಟೀಸರ್ ಮೂಲಕ ‘ರಿಚರ್ಡ್ ಆಂಟನಿ’ ಸಿನಿಮಾ ಅನೌನ್ಸ್ ಮಾಡಿದಾಗ ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು. ಆದರೆ ನಂತರದಲ್ಲಿ ಯಾವುದೇ ಅಪ್ಡೇಟ್ ಸಿಗದೆ ಬೇಸರ ಮಾಡಿಕೊಂಡಿದ್ದರು. ಈಗ ರಕ್ಷಿತ್ ಶೆಟ್ಟಿ ಕಳೆದ ಕೆಲ ಸಮಯದಿಂದ ಪರೋಕ್ಷವಾಗಿ ಸಿನಿಮಾ ಬಗ್ಗೆ ಸುಳಿವು ಕೊಡುತ್ತಲೇ ಬಂದಿದ್ದಾರೆ.
ಕಳೆದ ಮಾರ್ಚ್ 28ಕ್ಕೆ ‘ಉಳಿದವರು ಕಂಡಂತೆ’ ಸಿನಿಮಾ ತೆರೆಕಂಡು 10 ವರ್ಷ ಪೂರೈಸಿತ್ತು. ಆಗ ‘ರಿಚರ್ಡ್ ಆಂಟನಿ’ ಚಿತ್ರದ ಏನಾದರೂ ಹೊಸ ಸುದ್ದಿ ಸಿಗುತ್ತದೆ ಎಂದು ಕಾಯುತ್ತಿದ್ದವರಿಗೆ ಎದುರಾಗಿದ್ದು ನಿರಾಸೆ. ಆದರೆ, ಕಳೆದ ವಾರ ರಕ್ಷಿತ್ ಶೆಟ್ಟಿ ಮೆಲ್ಲನೆ ಒಂದೊಂದೇ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಆರಂಭಿಸಿದ್ದರು. 11 ವರ್ಷಗಳ ಹಿಂದೆ ‘ಉಳಿದವರು ಕಂಡಂತೆ’ ಸಿನಿಮಾ ಶುರು ಮಾಡುವ ಮೊದಲು ಮಾಡಿದ್ದ ಕೆಲವು ಟ್ವೀಟ್‌ಗಳನ್ನು ಮತ್ತೆ ರೀಪೋಸ್ಟ್ ಮಾಡಲು ಶುರು ಮಾಡಿದ್ದರು. ಅದರಲ್ಲೂ ಸಿನಿಮಾದ ಕಥೆ ಕೆಲಸ ಮುಗಿದಿದೆ ಎಂದು ಮಾಡಿದ್ದ ಪೋಸ್ಟ್ ಅನ್ನು ಮತ್ತೆ ಶೇರ್ ಮಾಡುವ ಮೂಲಕ ‘ರಿಚರ್ಡ್ ಆಂಟನಿ’ ಸಿನಿಮಾ ಸ್ಕ್ರಿಪ್ಟ್ ಬಗ್ಗೆ ಸುಳಿವು ನೀಡಿದ್ದರು. ಇನ್ನು ಈ ಸಿನಿಮಾದಲ್ಲಿ ‘ರಿಚರ್ಡ್ ಆಂಟನಿ’ ಯಾರು? ಹಿನ್ನೆಲೆ ಏನು? ಅಂತ ನಿರ್ದೇಶಕ ಹೇಳಲಿದ್ದಾರೆ.
ಈಗ ನಿನ್ನೆ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿರುವ ರಕ್ಷಿತ್ ಶೆಟ್ಟಿ, ‘ರಿಚರ್ಡ್ ಆಂಟನಿ’ ಸಿನಿಮಾ ಆರಂಭಿಸುವ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಈಗಾಗಲೇ ಸ್ಕ್ರಿಪ್ಟ್ ಡ್ರಾಫ್ಟ್ ಆಗಿದೆ. ಆದರೆ ಇನ್ನು ಚೂರೇ ಚೂರು ಬಾಕಿ ಇದೆ. 60 – 70ರ ದಶಕದ ಉಡುಪಿಯನ್ನು ರಿಕ್ರೀಯೇಟ್ ಮಾಡಬೇಕು. ಆದರೆ ಅದು ಸಾಧ್ಯವಿಲ್ಲ. ‘ಉಳಿದವರು ಕಂಡಂತೆ’ ಸಿನಿಮಾಗೆ ಸಿಕ್ಕ ಲೋಕೇಷನ್‌ಗಳು ಈಗ ಅದೇ ಸ್ಥಿತಿಯಲ್ಲಿ ಸಿಗಲು ಸಾಧ್ಯವಿಲ್ಲ. ಹೀಗಾಗಿಯೇ ಪಶ್ಚಿಮಘಟ್ಟಗಳು, ಉಡುಪಿ, ಗೋಕರ್ಣ ಹಾಗೂ ಕೇರಳ ಸೇರಿದಂತೆ ಉಡುಪಿಯ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳಲ್ಲಿ ಶೇ 60-70 ರಷ್ಟು ಚಿತ್ರೀಕರಣ ಮಾಡಲಾಗುವುದು. ಇನ್ನು ಈ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವಂತೆ ಬೆಂಗಳೂರು ಮೂಲದ ನಟ-ನಟಿಯರಿಂದ ಮನವಿಗಳು ಬರುತ್ತಿವೆ. ಆದರೆ, ನಮಗೆ ಉಡುಪಿ ಹಾಗೂ ಕರಾವಳಿ ಕನ್ನಡ ಮಾತನಾಡುವವರು ಮಾತ್ರ ಬೇಕು. ಆ ಸ್ಲ್ಯಾಂಗ್ ಎಲ್ಲರಿಗೂ ಬರೋದಿಲ್ಲ. ಹೇಳಿಕೊಟ್ಟು ಮಾತನಾಡಿಸಿದರೆ, ಅದು ಅನುಕರಣೆ ಮಾಡಿದಂತೆ ಕಾಣಿಸುತ್ತದೆ. ಹೀಗಾಗಿಯೇ ಕರಾವಳಿ ಕನ್ನಡ ಮಾತನಾಡುವ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಮೇ 1ರಿಂದ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ. ಮುಂದಿನ ವರ್ಷ ಸಿನಿಮಾ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆ ಇದೆ’ ಎಂದಿದ್ದಾರೆ.