ತಮ್ಮ ಪುತ್ರ ಇಬ್ರಾಹಿಂ, ನಿರ್ದೇಶಕ ಕರಣ್ ಜೋಹರ್‌ ಸಿನಿಮಾದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾನೆ ಎಂದು ನಟ ಸೈಫ್ ಅಲಿ ಖಾನ್‌ ಬಹಿರಂಗಪಡಿಸಿದ್ದಾರೆ. ಆದರೆ, ಇದು ಯಾವ ಸಿನಿಮಾ ಎನ್ನುವುದರ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ.

ಸೈಫ್ ಅಲಿ ಖಾನ್ ಬಾಲಿವುಡ್‌ನ ದೊಡ್ಡ ಹೆಸರು. ಅವರ ಪುತ್ರಿ ಸಾರಾ ಅಲಿ ಖಾನ್ ಈಗಾಗಲೇ ನಾಯಕಿಯಾಗಿ ಹೆಸರು ಮಾಡುತ್ತಿದ್ದಾರೆ. ಈಗ ಮಗ ಇಬ್ರಾಹಿಂ ಸರದಿ. ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಇಬ್ಬರೂ ಸೈಫ್ ಅಲಿ ಖಾನ್ ಅವರ ಮೊದಲ ದಾಂಪತ್ಯಕ್ಕೆ (ನಟಿ ಅಮೃತಾ ಸಿಂಗ್‌) ಜನಿಸಿದ ಮಕ್ಕಳು. ಟೀವಿ ಹೋಸ್ಟ್ ಮತ್ತು ಪ್ರೆಸೆಂಟರ್ ಸಿದ್ಧಾರ್ಥ್ ಕಣ್ಣನ್ ಅವರ ಯೂಟ್ಯೂಬ್ ಚಾನೆಲ್‌ಗೆ ಮಾತನಾಡುತ್ತಿರುವಾಗ, ಸೈಫ್ ಅವರನ್ನು ಮಕ್ಕಳೊಂದಿಗಿನ ಅವರ ಸಂಬಂಧ – ಕೆರಿಯರ್‌ ಬಗ್ಗೆ ಕೇಳಲಾಯಿತು. ಆಗ ಸೈಫ್, “ನನ್ನ ಇಬ್ಬರೂ ಮಕ್ಕಳೂ ಅವರದೇ ರೀತಿಯಲ್ಲಿ ವಿಭಿನ್ನರು. ಇಬ್ರಾಹಿಂ ಈಗ ಕರಣ್ ಜೋಹರ್ ಚಿತ್ರಕ್ಕೆ ಸಹಾಯ ಮಾಡುತ್ತಿದ್ದಾನೆ ಮತ್ತು ಅವನ ಆಲೋಚನೆಗಳು ಮತ್ತು ಕನಸುಗಳ ಬಗ್ಗೆ ನನ್ನೊಡನೆ ಮಾತನಾಡುತ್ತಿರುತ್ತಾನೆ” ಎಂದಿದ್ದಾರೆ.

ಇನ್ನು ಪುತ್ರಿ ಸಾರಾ ಬಗ್ಗೆ ಸೈಫ್‌ಗೆ ಅಪಾರ ಪ್ರೀತಿ, ಮೆಚ್ಚುಗೆ ಇದೆ. “ಅವಳು ಈಗಾಗಲೇ ಸಿನಿಮಾರಂಗದಲ್ಲಿ ತಳವೂರಿದ್ದಾಳೆ. 2018ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೊತೆ ‘ಕೇದಾರನಾಥ್’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಆಕೆಯ ಕೈಯಲ್ಲಿ ಅನೇಕ ಚಿತ್ರಗಳಿವೆ” ಎಂದು ಅವರು ಹೆಮ್ಮೆ ಪಡುತ್ತಾರೆ. ತಮ್ಮ ಮಕ್ಕಳಿಗೆ ಸಲಹೆ ನೀಡುತ್ತಾ ಸೈಫ್ ಹೇಳಿದ್ದು ಹೀಗೆ – “ನಿಮ್ಮ ಸುತ್ತಲೂ ತುಂಬಾ ಜನರಿದ್ದಾರೆ. ದೊಡ್ಡ ಸ್ಟಾರ್‌ಗಳು ಮತ್ತು ಶ್ರೇಷ್ಠ ನಟರು. ಅವರೆಲ್ಲರಿಂದ ಕಲಿಯಿರಿ. ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಯತ್ನಿಸಿ. ತಪ್ಪುಗಳನ್ನು ಮಾಡಿದರೂ ಅವನ್ನು ತಿದ್ದಿಕೊಳ್ಳಿ. ನಾವು ಬದುಕುತ್ತಿರುವ ಜಗತ್ತಿಗೆ ಏನಾದರೂ ಕೊಡುಗೆ ನೀಡಿ  ಮತ್ತು ನಮ್ಮ ಕೈಲಿ ಸಾಧ್ಯ ಆಗುವುದು ಮನರಂಜನೆ. ಅದನ್ನೇ ಕೊಡೋಣ”

LEAVE A REPLY

Connect with

Please enter your comment!
Please enter your name here