ದಕ್ಷಿಣ ಭಾರತದ ಜನಪ್ರಿಯ ನಾಯಕನಟಿ ಸಮಂತಾ ಬೆಳ್ಳಿತೆರೆ ಅಭಿಯಾನಕ್ಕೆ ಇಂದಿಗೆ ಹನ್ನೆರೆಡು ವರ್ಷ. 2010ರಲ್ಲಿ ಸಿನಿಮಾ ಪ್ರವೇಶಿಸಿದ ನಟಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಈ ಸಂದರ್ಭದಲ್ಲಿ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಸಿನಿಮಾಗೆ ಪರಿಚಯವಾಗಿ ಇಂದಿಗೆ ಹನ್ನೆರೆಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಟಿ ಸಮಂತಾ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. 2010ರಲ್ಲಿ ಗೌತಮ್‌ ವಾಸುದೇವ್‌ ಮೆನನ್‌ ನಿರ್ದೇಶನದ ‘ಯೇ ಮಾಯ ಚೇಸಾವೇ’ ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪರಿಚಯವಾಗಿದ್ದರು. ನಾಗಚೈತನ್ಯ ಹೀರೋ ಆಗಿದ್ದ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸುಂದರ ಫೋಟೊ ಹಂಚಿಕೊಂಡಿರುವ ಸಮಂತಾ, “ಬೆಳಗ್ಗೆ ಏಳುತ್ತಿದ್ದಂತೆಯೇ ನನ್ನ ಸಿನಿಮಾ ಬದುಕಿಗೆ ಹನ್ನೆರೆಡು ವರ್ಷಗಳು ಪೂರೈಸಿರುವುದು ಗಮನಕ್ಕೆ ಬಂತು. ಈ ಹನ್ನೆರೆಡು ವರ್ಷಗಳಲ್ಲಿ ಲೈಟ್ಸ್‌, ಕ್ಯಾಮೆರಾ, ಆಕ್ಷನ್‌ ಜೊತೆ ಅಪರೂಪದ ನೆನಪುಗಳು ಜೊತೆಯಾಗಿವೆ. ಈ ಸುಂದರ ಜರ್ನಿಯ ಸವಿನೆನಪಿನ ಸಂದರ್ಭದಲ್ಲಿ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದ ಹೇಳಲು ಅಪೇಕ್ಷಿಸುತ್ತೇನೆ. ಸಿನಿಮಾ ಜೊತೆಗಿನ ನನ್ನ ಲವ್‌ಸ್ಟೋರಿ ಹೀಗೇ ಮುಂದುವರೆಯಲಿದೆ” ಎನ್ನುವ ಸಂದೇಶ ಹಾಕಿದ್ದಾರೆ.

ಹನ್ನೆರೆಡು ವರ್ಷಗಳ ವೃತ್ತಿಬದುಕಿನಲ್ಲಿ ನಟಿ ಸಮಂತಾ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ, ಮಹಾನಟಿ, ಮೆರ್ಸಲ್‌, 24, ದೂಕುಡು, ರಂಗಸ್ಥಳಂ, ಸೂಪರ್‌ ಡಿಲಕ್ಸ್‌, Oh! Baby ಅವರ ಕೆಲವು ಪ್ರಮುಖ ಸಿನಿಮಾಗಳು. ಕಳೆದ ವರ್ಷ ‘ರಾಜ್‌’ ಮತ್ತು ‘ದಿ ಫ್ಯಾಮಿಲಿ ಮ್ಯಾನ್‌’ ಸರಣಿಗಳೊಂದಿಗೆ ಅವರು OTT ಜಗತ್ತಿಗೂ ಪರಿಚಯವಾಗಿದ್ದಾರೆ. ಮೊದಲ ಸಿನಿಮಾದಲ್ಲಿ ತಮ್ಮ ಜೋಡಿಯಾಗಿದ್ದ ನಾಗ ಚೈತನ್ಯ ಅವರನ್ನು 2017ರಲ್ಲಿ ವರಿಸಿದ್ದ ಸಮಂತಾ ಕಳೆದ ವರ್ಷದ ಕೊನೆಯಲ್ಲಿ ಪತಿಯಿಂದ ವಿಚ್ಛೇದನ ಪಡೆದದ್ದು ಸುದ್ದಿಯಾಗಿತ್ತು. ಇನ್ನು ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ‘ಪುಷ್ಪ’ ಸಿನಿಮಾದ ‘ಊ ಅಂಟಾವ’ ಸ್ಪೆಷಲ್‌ ಡ್ಯಾನ್ಸ್‌ ನಂಬರ್‌ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ವಿಘ್ನೇಶ್‌ ಶಿವನ್‌ ನಿರ್ದೇಶನದಲ್ಲಿ ವಿಜಯ್‌ ಸೇತುಪತಿ ಜೊತೆ ನಟಿಸುತ್ತಿರುವ ‘ಕಾಥುವಾಕುಲ ರೆಂಡು ಕಾದಲ್‌’ (ತಮಿಳು) ಮತ್ತು ಗುಣಶೇಖರ್‌ ನಿರ್ದೇಶನದ ‘ಶಾಕುಂತಲಂ’ (ತೆಲುಗು), ತೆರೆಗೆ ಸಿದ್ಧವಾಗುತ್ತಿರುವ ಸಮಂತಾರ ಸಿನಿಮಾಗಳು.

Previous articleವೀಡಿಯೋ ಸಾಂಗ್‌ | ಪ್ರಭಾಸ್‌ – ಪೂಜಾ ‘ಈ ರಾಥಲೆ’; ಮಾರ್ಚ್‌ 11ರಂದು ‘ರಾಧೆ ಶ್ಯಾಮ್‌’ ತೆರೆಗೆ
Next articleಸಿದ್ದು ಜೊನ್ನಲಗಡ್ಡ – ನೇಹಾ ಶೆಟ್ಟಿ ‘DJ Tillu’ ತೆಲುಗು ಸಿನಿಮಾ ‘aha’ ಓಟಿಟಿಗೆ

LEAVE A REPLY

Connect with

Please enter your comment!
Please enter your name here